ಕರ್ಮ ಅಕರ್ಮ ವಿಕರ್ಮಗಳನ್ನು ಅರಿತುಕೋ…

ಕರ್ಮ ಅಕರ್ಮ ವಿಕರ್ಮಗಳನ್ನು ಅರಿತುಕೋ

ಶ್ರೀಕೃಷ್ಣನು ಹೇಳುತ್ತಾನೆ; ‘ಕರ್ಮ, ಅಕರ್ಮ ಹಾಗೂ ವಿಕರ್ಮಗಳ ಬಗ್ಗೆ ಅರಿತುಕೊಳ್ಳಬೇಕು. ಏಕೆಂದರೆ ಕರ್ಮದ ಗತಿಯು ಗಹನವಾದದ್ದು’. ಕರ್ಮವೆಂದರೆ, ಹೊರಗೆ ಕಾಣುವ ‘ಚಟುವಟಿಕೆ ಮಾತ್ರ’ವೇ ಅಲ್ಲ. ದೇಹದ ಮೂಲಕವಷ್ಟೇ ಅಲ್ಲದೆ, ಕರ್ಮವು ನಮ್ಮ ಬುದ್ಧಿ-ಮನಸ್ಸುಗಳ ಸ್ಥೂಲ-ಸೂಕ್ಷ್ಮ ಪ್ರಕ್ರಿಯೆಗಳಲ್ಲೂ ಅವಿರತವೂ ನಡೆಯುತ್ತಲೇ ಇರುತ್ತದೆ. ಕೃಷ್ಣ ಹೇಳುತ್ತಿದ್ದಾನೆ; ‘ಕರ್ಮದಲ್ಲಿ ಮೂರು ಬಗೆ. ಕರ್ಮ, ಅಕರ್ಮ ಮತ್ತು ವಿಕರ್ಮ’ ಎಂದು.

  1. ಕರ್ಮ : ಕರ್ಮ ಎಂದರೆ ಕರ್ತವ್ಯಕರ್ಮ ಎಂದರ್ಥ ಮಾಡಿಕೊಳ್ಳಬೇಕು. ಎಲ್ಲರೂ ಅವರವರ ವಿಹಿತಕರ್ಮಗಳನ್ನರಿತು, ವಿಧಿಯುತವಾಗಿ ಮಾಡಿದರೆ, ಭೂಮಿಯ ಮೇಲಿನ ಶೇ. 90ರಷ್ಟು ಸಮಸ್ಯೆಗಳು ಏಳುವುದೇ ಇಲ್ಲ!
  2. ಅಕರ್ಮ: ಅ) ಮಾಡಬೇಕಾದ ಕರ್ತವ್ಯಗಳನ್ನು ಮಾಡದೆ ಇರುವುದು ಅಕರ್ಮ. ‘ನನಗೆ ಇಷ್ಟವಿಲ್ಲ, ನನ್ನ ಇಷ್ಟ’ ಎನ್ನುವ ಧೋರಣೆಯಿಂದ ಕರ್ತವ್ಯವನ್ನು ಕೈಬಿಟ್ಟರೆ ವ್ಯಕ್ತಿಗೂ ಆತನ ಪರಿವಾರಕ್ಕೂ ಸಮಾಜಕ್ಕೂ ನಷ್ಟಕಷ್ಟಗಳು ಉಂಟಾಗುತ್ತವೆ. ತಾಯ್ತಂದೆಯರೂ ಶಿಕ್ಷಕರೂ ಕರ್ತವ್ಯಭ್ರಷ್ಟರಾದರೆ ಮಕ್ಕಳ ಬೆಳವಣಿಗೆಗೆ ಹಾನಿ. ನಾಯಕರು ಅಧಿಕಾರದ ಐಷಾರಾಮಿಯಲ್ಲಿ ಕರ್ತವ್ಯವನ್ನು ಮರೆತರೆ ದೇಶಕ್ಕೇ ಹಾನಿ. ಹೀಗೆ, ಯಾರೇ ತಮ್ಮ ಕರ್ತವ್ಯಕರ್ಮಗಳನ್ನು ಕೈಬಿಟ್ಟರೂ ಅದರ ದುಷ್ಪರಿಣಾಮ ಅವರ ಜೀವನದ ಗುಣಮಟ್ಟದ ಮೇಲೂ ಸಮಾಜದ ಮೇಲೂ ಆಗುತ್ತದೆ.

ಆ) ಅಕರ್ಮ: ಎಂದರೆ ‘ಮಾಡಬಾರದ ಕರ್ಮ’ ಎಂಬ ಮತ್ತೊಂದು ಅರ್ಥವಿದೆ. ಮಾತಿನಿಂದಲೋ ಕೃತಿಯಿಂದಲೋ ಭಾವನೆಯಿಂದಲೋ ಗೈಯ್ಯುವ ಪರಹಿಂಸೆ, ಲೋಭ, ಕಾಮ, ಮೋಹ, ಮಾತ್ಸರ್ಯ ಇವೆಲ್ಲ ಅಪಾಯಕಾರಿ ಮನೋವಿಕಾರಗಳು. ಇವು ನಮ್ಮಿಂದ ಅಕರ್ಮಗಳನ್ನು ಮಾಡಿಸಿಬಿಡುತ್ತವೆ.

ಇ) ಅಕರ್ಮ: ಎಂದರೆ ‘ಕರ್ಮವನ್ನು ಮಾಡಿಯೂ ಮಾಡದೆ ಇರುವ ಅಕರ್ತಾ ಸ್ಥಿತಿ’ ಎಂದೂ ಅರ್ಥೈಸಬಹುದು. ಇದರ ಬಗ್ಗೆ ಈ ಹಿಂದೆಯಷ್ಟೆ ರ್ಚಚಿಸಿದ್ದೇವೆ.

  1. ಅ) ವಿಕರ್ಮ = ಎಂದರೆ ‘ಕರ್ಮವನ್ನು ಮಾಡಿ ಮುಗಿಸಿದ ಕೃತಕೃತ್ಯ ಸ್ಥಿತಿ’ (ಅಕರ್ತಾಸ್ಥಿತಿ). ಇದು ‘ಕರ್ಮಭ್ರಷ್ಟತೆ’ಯಲ್ಲ, ‘ಕರ್ವತೀತ ಸ್ಥಿತಿ’. ಈ ಹಿಂದೆ ರ್ಚಚಿಸಿರುವ ವಿಷಯವೇ. ‘ಹಾವು-ಏಣಿ ಆಟದಲ್ಲಿ ತಾನು ಘಟ್ಟವನ್ನು ಮುಟ್ಟಿ ಗೆದ್ದಮೇಲೂ, ಅಲ್ಲೇ ಕುಳಿತು ಇತರರ ಆಟವನ್ನು ನೋಡುತ್ತ ಆಸ್ವಾದಿಸುವ ಆಟಗಾರನಂತೆ ಈ ಅಕರ್ತಾ’ ಎನ್ನುತ್ತಾರೆ ಶ್ರೀ ರಾಮಕೃಷ್ಣರು. ತಾನು ಆಟ ಆಡಿದರೂ ಆಡದಿದ್ದರೂ ಅವನಿಗೆ ಲಾಭನಷ್ಟಗಳಿಲ್ಲ. ಆದರೆ ಅವನು ಆಟವನ್ನು ಆಸ್ವಾದಿಸಬಲ್ಲ, ಇತರ ಆಟಗಾರರಿಗೆ ಪ್ರೇರಣೆ ನೀಡಬಲ್ಲ. ಇದೇ ‘ವಿಕರ್ಮ’ದ ಸ್ಥಿತಿ.

ಆ) ‘ವಿಕರ್ಮ’ ಎನ್ನುವ ಪದಕ್ಕೂ ‘ಕುತ್ಸಿತ ಕರ್ಮ’ (ಮಾಡಬಾರದ ಕರ್ಮ) ಎಂಬರ್ಥವನ್ನು ಕಾಣಬಹುದು. ಆದರೆ ಇಲ್ಲಿ ಕರ್ಮವೆಂದರೆ ‘ಕರ್ತವ್ಯಕರ್ಮ’ವೆಂದೂ, ಅಕರ್ಮವೆಂದರೆ ‘ನಿಷಿದ್ಧ ಕರ್ಮ’ವೆಂದೂ, ವಿಕರ್ಮವೆಂದರೆ ‘ಕರ್ವತೀತ ಸ್ಥಿತಿ’ಯೆಂದೂ ಸಾಂರ್ದಭಿಕವಾಗಿ ಅರ್ಥಮಾಡಿಕೊಳ್ಳಬೇಕು.

ಕರ್ಮದ ಗತಿಯು ಧರ್ಮಸೂಕ್ಷ್ಮಗಳಿಂದ ಕೂಡಿದ್ದು. ಧರ್ಮದ ಸ್ವರೂಪವನ್ನು ಅಂತರೀಕ್ಷಣೆಯಿಂದ ತಿಳಿಯುವುದೇ ‘ಋತ’. ಋತದ ನೆಲೆಯಲ್ಲಿ ಧರ್ಮದ ಸ್ವರೂಪವು ಸಾಕ್ಷಾತ್ಕಾರವಾದರೆ ಮಾತ್ರ, ಮಾತಿನಲ್ಲಿ ಸತ್ಯವಾಗಿಯೂ, ಕೃತಿಯಲ್ಲಿ ಧರ್ಮವಾಗಿಯೂ ಅದು ವ್ಯಕ್ತವಾಗಲು ಸಾಧ್ಯ. ಇಲ್ಲದಿದ್ದಲ್ಲಿ ಎಷ್ಟೇ ನಿಯಮಾವಳಿಗಳನ್ನು ಹೇರಿದರೂ, ಮನುಷ್ಯನ ಮತಿಯು ಕಾಮಕ್ರೋಧಾದಿಗಳ ವಶವಾಗಿ ಕರ್ಮಭ್ರಷ್ಟವೂ ಧರ್ಮಭ್ರಷ್ಟವೂ ಆಗುತ್ತಲೇ ಇರುತ್ತದೆ. ಆದ್ದರಿಂದಲೇ ‘ಕರ್ಮದ ಗತಿಯು ಗಹನ, ಹಾಗಾಗಿ ಕರ್ಮ, ಅಕರ್ಮ ಮತ್ತು ವಿಕರ್ಮಗಳ ಸ್ವರೂಪಗಳ ಬಗ್ಗೆ ಸೂಕ್ಷ್ಮವಾದ ಅರಿವನ್ನು ಬೆಳೆಸಿಕೋ’ ಎಂದು ಸೂಚಿಸುತ್ತಿದ್ದಾನೆ ಕೃಷ್ಣ. ‘ನೀನಾಗಿ ಋತದ ಧ್ಯಾನದಲ್ಲಿ ಧರ್ಮ ಮತ್ತು ಕರ್ಮಗಳ ಪರಿಯನ್ನು ತಿಳಿದು ಪಾಲಿಸು’ ಎಂದು ಹೇಳುವುದರ ಮೂಲಕ ಅರ್ಜುನನ ಅಂತರಂಗವನ್ನು ಅರಳಿಸುತ್ತಿರುವ ಶ್ರೇಷ್ಠತಮ ಗುರು ಶ್ರೀಕೃಷ್ಣ.

ಡಾ. ಆರತೀ ವಿ. ಬಿ.

ಕೃಪೆ: ವಿಜಯವಾಣಿ

Leave a Reply