ಶ್ರೀ ಗುರುಭ್ಯೋ ನಮಃ ಹರಿಃ ಓಂ
ಮಹಾಭಾರತದ ಪ್ರತಿಯೊಂದು ಶ್ಲೋಕˌ ಪ್ರತಿಯೊಂದು ಪದˌ ಪ್ರತಿಯೊಂದು ಅಕ್ಷರ ಎಲ್ಲರಿಗಿಂತ ಎತ್ತರದಲ್ಲಿರುವ ಭಗವಂತನ ಬಗ್ಗೆ ಹೇಳುತ್ತವೆ. ಭಾರತದಲ್ಲಿ 100000 ಶ್ಲೋಕಗಳಿವೆ. ಅಂದರೆ ಒಟ್ಟಿಗೆ 31ಲಕ್ಷ ಅಕ್ಷರಗಳಿವೆ. ಪ್ರತಿಯೊಂದು ಅಕ್ಷರ ಭಗವಂತನ ನಾಮವಾಗಿವೆ. ಈ ರೀತಿ ಭಗವಂತನ ಗುಣಗಾನ ಮಾಡುವ ಪದಪುಂಜ.
ಸಾಮಾನ್ಯ ಜನರಿಗೆ 100000 ಶ್ಲೋಕಗಳನ್ನು ತಿಳಿಯಲು ಕಷ್ಟವಾಗಬಹುದು ಎಂದು ಮಹಾಭಾರತದಿಂದ ಅಮೂಲ್ಯವಾದ ರಸಗಳನ್ನು ವೇದವ್ಯಾಸರು ನಮ್ಮ ಮುಂದೆ ಇಟ್ಟಿದ್ದಾರೆ. ಅವೇ ಭಗವದ್ಗೀತೆ ಮತ್ತು ವಿಷ್ಣು ಸಹಸ್ರನಾಮ. ವೇದಗಳಿಗೆ ಕನಿಷ್ಠ ಮೂರು ಅರ್ಥಗಳಿವೆ. ಮಹಾಭಾರತಕ್ಕೆ ಹತ್ತು ಅರ್ಥಗಳಿವೆ. ವಿಷ್ಣುಸಹಸ್ರನಾಮದ ಪ್ರತಿ ನಾಮಕ್ಕೂ ನೂರು ಅರ್ಥಗಳಿವೆ. ಈ ಕಾರಣಕ್ಕಾಗಿಯೇ ಪ್ರಾಚೀನರು ಭಗವದ್ಗೀತೆ ಮತ್ತು ವಿಷ್ಣು ಸಹಸ್ರನಾಮವನ್ನು ಅತ್ಯಮೂಲ್ಯ ಗ್ರಂಥಗಳಲ್ಲಿ ಪರಿಗಣಿಸಿದ್ದಾರೆ ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ನಾವು ಬೃಹತೀಸಹಸ್ರ 72 ಸಾವಿರ ಅಕ್ಷರ ಅಕ್ಷರಗಳನ್ನು ಜಪಿಸಿದಂತಾಗುತ್ತದೆ. ಇದರಿಂದ ನಮ್ಮ 72 ಸಾವಿರ ನಾಡಿಗಳಲ್ಲಿ ಪೂರ್ಣಪ್ರಮಾಣದ ರಕ್ತ ಸಂಚಾರವಾಗುತ್ತದೆ. ಆದ್ದರಿಂದ ವಿಷ್ಣು ಸಹಸ್ರನಾಮ ಭವರೋಗ ಪರಿಹಾರಕ. ಅದರ ಅರ್ಥ ತಿಳಿದು ಹೃದಯ ತುಂಬಿ ಭಕ್ತಿಯಿಂದ ಪಾರಾಯಣ ಮಾಡುವುದು ಮುಖ್ಯ. ವಿಷ್ಣು ಸಹಸ್ರನಾಮ ವೇದವ್ಯಾಸರು ಮನುಷ್ಯನಿಗೆ ಕೊಟ್ಟ ಅಮೂಲ್ಯ ಕಾಣಿಕೆ. ಇದನ್ನು ಗಂಡು-ಹೆಣ್ಣುˌ ಜಾತಿ—ಮತದ ಭೇದವಿಲ್ಲದೆ ಎಲ್ಲರೂ ಎಲ್ಲ ಕಾಲದಲ್ಲೂ ಪಠಿಸಬಹುದು. ಬೆಳಗ್ಗೆ ಸ್ನಾನದ ಮೊದಲುˌ ಸ್ನಾನದ ನಂತರˌ ಸಂಜೆˌ ರಾತ್ರಿ ಯಾವಾಗ ಬೇಕಾದರೂ ಪಠಿಸಬಹುದು. ಅಲ್ಪಪ್ರಾಣ-ಮಹಾಪ್ರಾಣವನ್ನು ಸ್ಪಷ್ಟವಾಗಿˌ ಗೌರವಪೂರ್ವಕವಾಗಿˌ ನಂಬಿಕೆಯಿಂದˌ ಪರಿಶುದ್ಧ ಮನಸ್ಸಿನಿಂದ ಪಠಿಸುವುದು ಅತ್ಯಗತ್ಯ. ವಿಷ್ಣು ಸಹಸ್ರನಾಮದಲ್ಲಿ ನಮಗೆ ತಿಳಿಯದೆ ಆಗುವ ಉಚ್ಛಾರ ದೋಷಕ್ಕೆ ಕ್ಷಮೆ ಇದೆ. ಸರ್ವಶಬ್ದ ವಾಚ್ಯನಾದ ಭಗವಂತ ನಾವು ತಿಳಿಯದೆ ಮಾಡಿದ ತಪ್ಪನ್ನು ಕ್ಷಮಿಸುತ್ತಾನೆ.
(ಮುಂದುವರಿಯುವದು)