ಆಹಾ ಆ ಬಾಲ್ಯವೆಷ್ಟು ಚೆನ್ನ! ಪ್ರಕೃತಿಯ ನಿಯಮದಂತೆ ಬಾಲ್ಯ ಯೌವನ ಹಾಗೂ ಮುಪ್ಪು ಪ್ರತಿಯೊಬ್ಬರ ಬಾಳಿನಲ್ಲೂ ಅನಿವಾರ್ಯ. ಅದರಲ್ಲಿ ಬಾಲ್ಯದ ನೆನಹುಗಳು ಸವಿಯಾಗಿದ್ದರಂತೂ ತೀರಿತು ಅದು ಹಾಗೇ ಉಳಿಯಬೇಕೆನ್ನುವ ಅಪೇಕ್ಷೆ ಎಲ್ಲರದು. ಚಿಕ್ಕಂದಿನಲ್ಲಿ ಸ್ವಲ್ಪ ಜಾಣರ ಪಟ್ಟಿಯಲ್ಲಿ ನಾನೂ ಒಬ್ಬಳಿದ್ದೆ, ಜಮಖಂಡಿಯ ಪಿ.ಬಿ. ಹಾಯಸ್ಕೂಲಿನಲ್ಲಿ ಆರನೇ ಇಯತ್ತೆ ಇರಬಹುದು. ಶಾಲೆ ವಿವಿಧ ಕ್ರೀಡೆ, ಭಾಷಣ ನಿಬಂಧ ಸ್ಪರ್ಧೆಗಳಲ್ಲೆಲ್ಲ ನಾನೇ ಮೊದಲಿಗಳಾಗಿದ್ದೆ ಎಂದರೆ ಅತಿಶಯೋಕ್ತಿಯೇನಲ್ಲ. ಅವತ್ತು ಬಹುಮಾನದ ವಿತರಣೆಯ ಸಮಾರಂಭವಿತ್ತು. ಮುಖ್ಯ ಅತಿಥಿಗಳಾಗಿ ರಾಮತೀರ್ಥ ರಾಜನ ಮೊಮ್ಮಗ ಬರುವವನಿದ್ದ. […]
