ಸಂಗೀತದ ಕುರಿತು ಮಾತನಾಡುವುದು ನನಗಿಷ್ಟ. ಎಷ್ಟೋ ಮಂದಿಗೆ ಸಂಗೀತ ಕೇಳುವುದು ಇಷ್ಟ. ಮಾತಾಡುವುದಲ್ಲ. ಕೆಲವರಿಗೆ ಸಂಗೀತ ನಿರ್ಮಾಣ ಇಷ್ಟ. ಆದರೆ ನನಗೆ ಕೇಳುವುದು, ನಿರ್ಮಿಸುವುದು – ಅಂದರೆ ನನ್ನ ವಾದ್ಯವನ್ನು ನುಡಿಸುವುದು ಮತ್ತು ಸಂಯೋಜನೆ – ಜೊತೆಗೆ ಸಂಗೀತದ ಕುರಿತು ಮಾತಾಡುವುದು, ಈ ಮೂರೂ ಇಷ್ಟ. ಮಾತಾಡುವುದು ಯಾಕೆ ಇಷ್ಟವೆಂದರೆ ಆ ಹೊತ್ತಿನಲ್ಲಿ ನಾನು ವಿಶೇಷವಾಗಿ ಸಂಗೀತದ ಕುರಿತೇ ಚಿಂತಿಸುತ್ತ ಇರುತ್ತೇನಲ್ಲ – ಅದಕ್ಕಾಗಿ.
ಸಂಗೀತದ ಕುರಿತೂ ಚಿಂತಿಸಲು ಸಾಧ್ಯ ಎಂಬುದನ್ನು ನಾವಿಲ್ಲಿ ಮುಖ್ಯವಾಗಿ ತಿಳಿದುಕೊಳ್ಳಬೇಕು. ಪೂರ್ವಿಕರು ಶಾಶ್ವತ ಬಳುವಳಿಯಾಗಿ ಬಿಟ್ಟು ಹೋಗಿರುವ ನೂರಾರು ಕಲಾಪ್ರಕಾರಗಳಿವೆ. ಪವಾಡ ಸದೃಶ ಮಾನವ ಸೃಷ್ಟಿಗಳಿವೆ. ಆದರೆ ಸಂಗೀತ ಕಲೆ ಅವೆಲ್ಲಕ್ಕಿಂತ ಭಿನ್ನ. ಅದು ಭೌತ ಬಂಧನಕ್ಕೆ ಮೀರಿದ್ದು. ಸ್ಪರ್ಶಕ್ಕೆ, ನೋಟಕ್ಕೆ, ರಸನಕ್ಕೆ ನಿಲುಕದ್ದು. ಕ್ಷಣಿಕವೆಂದು ಭಾಸ ಮೂಡಿಸುವ ಅದರ ಪ್ರಕೃತಿಯೇ ಅಮೂರ್ತ. ಎಂತಲೇ ಸಂಗೀತಚಿಂತನೆ ಹೆಚ್ಚು ಸಂಕೀರ್ಣ. ಚಿತ್ರಕಲೆ, ವಾಸ್ತುಕಲೆ ಮುಂತಾದ ಮಹಾನ್ ಕಲೆಗಳ ಬಗ್ಗೆ ನಾವು ಯೋಚಿಸುವಷ್ಟು ಗಂಭೀರವಾಗಿ ಸಂಗೀತದ ಬಗ್ಗೆ ಯೋಚಿಸಬೇಕಾಗಿಲ್ಲ ಎಂಬ ಮನೋಭಾವವೂ ಈ ಸಂಕೀರ್ಣತೆಗೆ ಹೆದರಿಯೇ ಹುಟ್ಟಿಕೊಂಡಿರಬಹುದು.
ಮನುಷ್ಯ ಎಲ್ಲಿಯೇ ಇರಲಿ, ಎಂತಹ ಸ್ಥಿತಿಯಲ್ಲಿಯೇ ಇರಲಿ, ಅತಿ ಶೀತ ಪ್ರದೇಶದಿಂದ ಅತ್ಯುಷ್ಣ ಪ್ರದೇಶದವರೆಗೂ, ಸಮೃದ್ಧಿಯಲ್ಲಿರಲಿ, ಅರೆಹೊಟ್ಟೆಯಲ್ಲಿರಲಿ, ಮರುಭೂಮಿ ಗಿರಿಸಾಗರಗಳಲ್ಲಿ ಬೇಕಾದರೆ ಏಗಿಕೊಂಡಿರಲಿ, ತನ್ನದೇ ಆದೊಂದು ಸಂಗೀತವನ್ನು ಸೃಜಿಸಿಕೊಂಡೇ ಇರುತ್ತಾನೆ. ಸ್ವಂತ ಸಂಗೀತವಿಲ್ಲದ ಮಾನವ ಸಮಾಜವೇ ಇಲ್ಲ. ಯಾವುದೇ ಸಮುದಾಯದ ಅವಿಭಾಜ್ಯ ಅಂಗವದು. ಮಾನವನ ಸೃಜನಶೀಲ ಸಾಮರ್ಥ್ಯದ ಪರಾಕಾಷ್ಠೆಯ ಸಂಕೇತ, ಕ್ರಿಯಾಶೀಲ ಚಟುವಟಿಕೆಯ ಅತ್ಯುನ್ನತ ಸ್ಥಿತಿಗಳಲ್ಲಿ ಒಂದು, ಒಂದು ಮಹೋನ್ನತ ಪರಂಪರೆ – ಅಂತೆಲ್ಲ ಅನಿಸಿಕೊಂಡಿರುವ ಸಂಗೀತ ಕಲೆಯ ಕುರಿತ ಚಿಂತನೆ ಹಾಗೆ ನೋಡಿದರೆ ಇನ್ನಷ್ಟು ಗಂಭೀರವಾಗಬೇಕು. ಈ ಐದು ದಿನಗಳ ಕಾಲ ಇಂತಹ ಒಂದು ಕಲೆಯ ಬಗ್ಗೆ ನಾವು ಚಿಂತಿಸೋಣ.

Additional information

Category

Translator

Vaidehi

Book Format

Ebook

Language

Kannada

Publisher

Reviews

There are no reviews yet.

Only logged in customers who have purchased this product may leave a review.