ಬದುಕಿನ ಅನುಭವಗಳು ಅಥವಾ ಘಟನೆಗಳ ದಾಖಲೆ ಕೇವಲ ಚಾರಿತ್ರಿಕ ಅಥವ ಅಕಡೆಮಿಕ್ ಮಹತ್ವದ್ದು ಮಾತ್ರ ಆಗಿರುವುದಿಲ್ಲ. ವ್ಯಕ್ತಿಯ ಜೀವನದ ದಾಖಲೆಗಳು, ಅನಿವಾರ್ಯವಾಗಿ ಅವನು ಬದುಕಿದ್ದ ಕಾಲ ಮತ್ತು ಸಮಾಜದ ಆತ್ಮಕಥೆಯನ್ನು ಒಂದು ನಿಟ್ಟಿನಿಂದ ನೋಡುವ ಬಗೆಯೂ ಹೌದು. ಹೀಗಾಗಿ ಘಟನೆಗಳ ಸಂಪೂರ್ಣ ಮಗ್ನತೆಯಲ್ಲಿ ಕಳೆದು ಹೋಗುವ ಕ್ಷಣಗಳಲ್ಲಿಯೂ ಅವುಗಳನ್ನು ಒಂದು ಅಂತರದಿಂದ ಅನುಮಾನಿಸಿ ನೋಡುವ ಅಗತ್ಯವೂ ಹುಟ್ಟಿಕೊಳ್ಳುತ್ತದೆ.ಕೆಲವು ಘಟನೆಗಳು ಜರುಗಿದ ಕಾಲಾವಧಿ ಒಂದಾಗಿದ್ದು, ಅದರಿಂದ ಬೆಳವಣಿಗೆಯಾದ ಮತ್ಯಾವುದೋ ಘಟನೆ ಮತ್ತೊಂದು ಕಾಲಾವಧಿಗೆ ಸೇರಿದ್ದ ಉದಾಹರಣೆಗಳು ಕೃತಿಯ ಕೆಲಸದುದ್ದಕ್ಕೂ ನನಗೆ ಎದುರಾದವು. ಎರಡನ್ನೂ ಒಟ್ಟಿಗೆ ದಾಖಲಿಸುವುದು ಕಾಲಾವಧಿಯ ಕ್ರಮದಲ್ಲಿ ಕೆಲವು ಸಮಸ್ಯೆಗಳನ್ನು ಒಡ್ಡಿತು. ಒಂದನ್ನು ದಾಖಲಿಸಿ ಮತ್ತೊಂದನ್ನು ಬಿಡುವುದು ಸರಿಯೂ ಸಾಧುವೂ ಅಲ್ಲವಾದ್ದರಿಂದ ಕೆಲವು ಕಡೆಗಳಲ್ಲಿ ಒಂದೇ ಅನುಭವವನ್ನು ಎರಡನೆ ಬಾರಿ ಹೇಳುವಾಗ ಸಂಕ್ಷಿಪ್ತಗೊಳಿಸಿ ಮುಂದಿನ ಬೆಳವಣಿಗೆಯನ್ನು ವಿವರವಾಗಿ ದಾಖಲಿಸಿದ್ದೇನೆ, ಕೆಲವೊಮ್ಮೆ, ಸಂದರ್ಭದ ಬೇಡಿಕೆಯಂತೆ ವಿವರವಾಗಿ ದಾಖಲಿಸುವುದು ಅನಿವಾರ್ಯವೆನಿಸಿದಾಗ ಅದೇ ಅನುಭವವನ್ನು ಇನ್ನೊಂದೆಡೆ ದಾಖಲಿಸಿರುವುದೂ ಇದೆ.ಮಲ್ಲಿಗೆ ಹೂವನ್ನು ಬಳ್ಳಿಯಿಂದ ಬಿಡಿಸುವ ಕ್ರಮ ಕನಕಾಂಬರವನ್ನು ಬಿಡಿಸುವ ಕ್ರಮದಿಂದ ಪೂರ್ಣ ಬೇರೆಯಾದದ್ದು, ಕನಕಾಂಬರ ಸ್ಪಟಿಕದಿಂದ ಬೇರೆ ಎನ್ನುವಂತಹದ್ದು ನನಗೆ ಅನುಭವದಿಂದ ದಕ್ಕಿರುವ ಅರಿವು, ಹಾಗೇ ಅವುಗಳನ್ನು ಕಟ್ಟುವ ಕ್ರಮ ಕೂಡ. ಮೊಗ್ಗುಗಳನ್ನು ಅರಳಿದ ಹೂವಿಂದ ಬೇರ್ಪಸುವುದು, ತೊಟ್ಟು ಮುರಿದದ್ದನ್ನು, ನಜ್ಜುಗುಜ್ಜಾದದ್ದನ್ನು ಬೇರೆಯಿಟ್ಟು ಒಂದಕ್ಕಿನ್ನೊಂದನ್ನು ಜೋಡಿ ಮಾಡಿ ದಂಡೆ ಕಟ್ಟುವ ಕಾಯಕವೆ ಈ ಕೃತಿಯನ್ನು ರೂಪಗೊಳಿಸುವಾಗ ನನ್ನ ಕಣ್ಣ ಮುಂದಿದ್ದ ಪ್ರತಿಮೆ. ಇದರ ಅಂತರಂಗ ಅನಂತಮೂರ್ತಿಯವರದ್ದು, ಬಹಿರಂಗದ ಕಟ್ಟಡ ನಮ್ಮಿಬ್ಬರ ದುಡಿಮೆಯ ಫಲ. ಅಪರೂಪವಾದ ಇಂತಹ ಜವಾಬ್ದಾರಿ ಸಿಕ್ಕಿದ್ದು ನನಗೆ ಸಂತೋಷವನ್ನು ಕೊಟ್ಟಿದೆ, ಸವಾಲನ್ನೂ ಒಡ್ಡಿದೆ.

Additional information

Category

Book Format

Ebook

Author

Language

Kannada

Publisher

Reviews

There are no reviews yet.

Only logged in customers who have purchased this product may leave a review.