N S Shankar

N S Shankar

ಬರಹಗಾರ, ಚಿಂತಕ, ಪತ್ರಕರ್ತ, ಚಿತ್ರ ನಿರ್ದೇಶಕ ಎನ್.ಎಸ್. ಶಂಕರ್ ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ. ತಂದೆ ತಾಯಿ ಇಬ್ಬರೂ ಸ್ವಾತಂತ್ರ್ಯ ಹೋರಾಟದಲ್ಲಿ ಜೈಲು ಕಂಡವರು. ಮಂಡ್ಯ ಜಿಲ್ಲೆಯ ಪಾಂಡವಪುರ ನಂತರ ಮೈಸೂರು, ಬೆಂಗಳೂರುಗಳಲ್ಲಿ ವ್ಯಾಸಂಗ. 79 ರಿಂದ ಜನವಾಣಿ, ಪ್ರಜಾವಾಣಿ, ಲಂಕೇಶ್ ಪತ್ರಿಕೆ ಮುಂತಾಗಿ ಹಲವು ಸಂಸ್ಥೆಗಳಲ್ಲಿ ಪತ್ರಕರ್ತನಾಗಿ ದುಡಿಮೆ. ಮುಂಗಾರು ದಿನಪತ್ರಿಕೆ ಹಾಗೂ ಸುದ್ದಿ ಸಂಗಾತಿ ವಾರಪತ್ರಿಕೆಗಳ ಸಂಸ್ಥಾಪಕರಲ್ಲೊಬ್ಬರು. ಸಮಯ ಟಿವಿ ಆರಂಭಿಕ ದಿನಗಳಲ್ಲಿ ವಾಹಿನಿಯ ಸಲಹೆಗಾರರಾಗಿ, ನಂತರ ಎರಡು ವರ್ಷ ಸುದ್ದಿ ಟಿವಿಯ ಸಂಪಾದಕೀಯ ಸಲಹೆಗಾರರಾಗಿ ಕೂಡ ಅನುಭವ. 

ಲಂಕೇಶರ ಸಣ್ಣಕತೆ ಆಧಾರಿತ ಮುಟ್ಟಿಸಿಕೊಂಡವರು ಕಿರುಚಿತ್ರದ ಮೂಲಕ ಬರಹಗಾರ, ನಿರ್ಮಾಪಕ, ನಿರ್ದೇಶಕನಾಗಿ ದೃಶ್ಯಮಾಧ್ಯಮಕ್ಕೆ ಪ್ರವೇಶ (1990). ನಾಲ್ಕು ಧಾರಾವಾಹಿಗಳು (ಬದುಕು ಜಟಕಾ ಬಂಡಿ, ಶೋಧ, ಪರಿಸರ, ಕ್ಷಮಯಾ ಧರಿತ್ರಿ); ಸುಮಾರು ಒಂದು ನೂರು ಸಾಕ್ಷ್ಯಚಿತ್ರ, ಕಿರುಚಿತ್ರ, ಟೆಲಿಚಿತ್ರ, ಜಾಹೀರಾತು ಚಿತ್ರಗಳು. ಎರಡು ರಾಜ್ಯಪ್ರಶಸ್ತಿಗಳೂ ಸೇರಿದಂತೆ ಹಲವು ಪುರಸ್ಕಾರಗಳನ್ನೂ, ಅಪಾರ ಜನಪ್ರೀತಿಯನ್ನೂ ಪಡೆದ ಉಲ್ಟಾ ಪಲ್ಟಾ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪದಾರ್ಪಣೆ (1997). ಮುಂದಕ್ಕೆ ರಾಂಗ್ ನಂಬರ್ (2003) ಮತ್ತು ಜೂಟಾಟ (2005) ಚಿತ್ರಗಳ ನಿರ್ದೇಶನ. ಸಾಕ್ಷ್ಯಚಿತ್ರಗಳ ಪೈಕಿ ಕರ್ನಾಟಕದ ಐತಿಹಾಸಿಕ ದೇವಾಲಯ ವಾಸ್ತುವೈಭವವನ್ನು- ಖ್ಯಾತ ವಿದುಷಿ ಕಲಾಮಂಡಲಂ ಉಷಾ ದಾತಾರ್ ಮತ್ತು ಅವರ ತಂಡದ ನೃತ್ಯರೂಪಕಗಳೊಂದಿಗೆ ಪ್ರಸ್ತುತಪಡಿಸಿದ ಮಾನಸೋಲ್ಲಾಸ ಪ್ರತಿಷ್ಠಿತ ಮುಂಬಯಿ ಅಂತರಾಷ್ಟ್ರೀಯ (ಕಿರುಚಿತ್ರ/ ಸಾಕ್ಷ್ಯಚಿತ್ರ) ಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನ (1996).

ರೈತರ ಆತ್ಮಹತ್ಯೆ ಹಾಗೂ ಗ್ರಾಮೀಣ ಬಿಕ್ಕಟ್ಟುಗಳ ಅಧ್ಯಯನದ ಫಲವಾಗಿ ರೂಪುಗೊಂಡ- ಭಾರತೀಯ ಸುದ್ದಿ ವಾಹಿನಿಗಳ ಇತಿಹಾಸದಲ್ಲೇ ಅಪೂರ್ವ ಪ್ರಯೋಗವೆನಿಸಿದ ರೈತಬಲಿ- 23 ಭಾಗಗಳ ಸಾಕ್ಷ್ಯಚಿತ್ರ ಸರಣಿ- ಸುದ್ದಿ ಟಿವಿಯಲ್ಲಿ ಪ್ರಸಾರ. ಪತ್ರಿಕಾ ವೃತ್ತಿಯಲ್ಲಿ ಮೂರೂವರೆ ದಶಕಕ್ಕೂ ಹೆಚ್ಚು ಕಾಲ ದುಡಿದ ಅನುಭವಕ್ಕಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪುರಸ್ಕಾರದ ಮನ್ನಣೆ (2015). ಕಿರಂ ಪುರಸ್ಕಾರ (2017).

ಕಿರುಚಿತ್ರ/ ಸಾಕ್ಷ್ಯಚಿತ್ರಗಳ ರಾಷ್ಟ್ರಪ್ರಶಸ್ತಿ ತೀರ್ಪುಗಾರ ಮಂಡಳಿ ಸದಸ್ಯರಾಗಿ (2004), ಕರ್ನಾಟಕ ರಾಜ್ಯ ಗುಣಮಟ್ಟದ ಚಿತ್ರಗಳ ಸಹಾಯಧನ ಸಮಿತಿ ಸದಸ್ಯರಾಗಿ (2007), ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿ (2018) ಅನುಭವ. 2019ರ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ಚಿತ್ರಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ, ಜೊತೆಗೆ ಆಸ್ಟ್ರೇಲಿಯಾದ ವಿಕ್ಟೋರಿಯಾ ಸರ್ಕಾರದ ಸಹಯೋಗದಲ್ಲಿ ನಡೆದ ಎರಡು ದಿನಗಳ ಚಿತ್ರಕಥಾ ಕಾರ್ಯಾಗಾರದ ಸಂಚಾಲಕನ ಜವಾಬ್ದಾರಿ. ವ್ಯಂಗ್ಯಚಿತ್ರ ರಚನೆಗೆ ಎರಡು ಬಾರಿ (1986 ಮತ್ತು 87) ಹಿಂದೂಸ್ತಾನ್ ಟೈಮ್ಸ್ ಪ್ರಶಸ್ತಿ. ಬೆಂಗಳೂರು ವಿಶ್ವವಿದ್ಯಾಲಯದ ಇ- ಮಾಧ್ಯಮ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಚಿತ್ರಕಥೆ ಹಾಗೂ ಸಾಕ್ಷ್ಯಚಿತ್ರ ಕುರಿತು ನಾಲ್ಕು ವರ್ಷ ಅತಿಥಿ ಉಪನ್ಯಾಸಕನಾಗಿ ಬೋಧನೆ.

ಈವರೆಗಿನ ಪ್ರಕಟಣೆಗಳು: 

ಚಂಚಲೆ, ಮಾಯಾಬಜ಼ಾರ್, ಮೇಲೋಗರ, ಆವರಣ ಅನಾವರಣ, ಫೂಲನ್ ದೇವಿ (ಜೀವನ ಕಥನ), ಗೋಹತ್ಯೆ ಪಾಪವೇ?, ಈಗ ಅಳುವವರೂ ಇಲ್ಲ (ದಲಿತ ರೈತ ಚಳವಳಿಗಳು: ಒಂದು ಮೆಲುಕು), ಹುಡುಕಾಟ (ಸಮಕಾಲೀನ ಬರಹಗಳು), ರೂಢಿ ಮತ್ತಿತರ ಕತೆಗಳು, ಲಂಕೇಶ್- ಇಂತಿ ಕೆಲ ಪ್ರಶ್ನೆಗಳು (ವಿಮರ್ಶೆ), ಅರಸು ಯುಗ (ದೇವರಾಜ ಅರಸು ಜೀವನ ಚರಿತ್ರೆ), ಚಿತ್ರಕಥೆ- ಹಾಗೆಂದರೇನು? ಮತ್ತು ಉಸಾಬರಿ- ಮತ್ತಷ್ಟು ಸಮಕಾಲೀನ ಬರಹಗಳು.

ಅರಸು ಯುಗ- ಎಂಟು ಭಾಷೆಗಳಿಗೆ (ಇಂಗ್ಲಿಷ್, ಹಿಂದಿ, ಉರ್ದು, ತಮಿಳು, ತೆಲುಗು, ಮಲಯಾಳಂ, ಮರಾಠಿ ಮತ್ತು ಬಂಗಾಳಿ) ಅನುವಾದವಾಗಿದೆ. 

ಅನುವಾದ: 

ಅಂಬೇಡ್ಕರ್ ಕೃತಿಗಳು: ರಾಮ ಕೃಷ್ಣ, ಮತಾಂತರ ಯಾಕೆ? ಮತ್ತು ಬ್ರಾಹ್ಮಣಧರ್ಮದ ದಿಗ್ವಿಜಯ.  

ರಾಜಮೋಹನ ಗಾಂಧಿಯವರ ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ (ಅಂಬೇಡ್ಕರ್ ಗಾಂಧಿ ವಾಗ್ವಾದ: ಒಂದು ಗ್ರಹಿಕೆ)- ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಜಯಶ್ರೀ ದತ್ತಿ ಪುರಸ್ಕಾರ ಪಡೆದ ಕೃತಿ.

Books By N S Shankar