ಸಮಕಾಲೀನ ಭಾರತೀಯ ಲೇಖಕಿಯರಲ್ಲೇ ತುಂಬ ವಿಶಿಷ್ಟರೆಂದೂ, ಮಹತ್ವದವರೆಂದೂ ಮನ್ನಣೆ ಪಡೆದಿರುವ ಲೇಖಕಿ ವೈದೇಹಿ. ೧೯೭೯ರಲ್ಲಿ ತಮ್ಮ ಮೊದಲ ಕಥಾಸಂಕಲನವನ್ನು ಪ್ರಕಟಿಸಿದ ವೈದೇಹಿ ಕಳೆದ ಮೂರು ದಶಕಗಳಲ್ಲಿ ಬೆಳೆದಿರುವ ಪರಿ ಒಂದು ಸಂತಸಭರಿತ ಅಚ್ಚರಿ. ಈ ಅವಧಿಯಲ್ಲಿ ಅವರ ಕಥನಕೌಶಲ ಮತ್ತು ಕಾವ್ಯ ಪ್ರತಿಭೆಗಳು ಹೊಸ ಎತ್ತರಗಳಿಗೆ ಏರಿರುವಂತೆ ಅವರ ಲೋಕಗ್ರಹಿಕೆ ಮತ್ತು ಲೋಕದೃಷ್ಟಿಗಳೂ ಹೆಚ್ಚು ಹೆಚ್ಚು ಸೂಕ್ಷ್ಮವಾಗುತ್ತ, ಪ್ರಬುದ್ಧವಾಗುತ್ತ ಬಂದಿವೆ. ಅಷ್ಟೇ ಅಲ್ಲ, ಈ ಅವಧಿಯಲ್ಲಿ ಅವರ ಸಾಹಿತ್ಯವು ಸಾಧಿಸಿಕೊಂಡಿರುವ ಪ್ರಕಾರವೈವಿಧ್ಯವೂ ಗಮನಾರ್ಹವಾಗಿದೆ. ಸಣ್ಣಕತೆಯಿಂದ ಆರಂಭವಾಗಿ ಕಾವ್ಯ, ಕಾದಂಬರಿ, ಪ್ರಬಂಧ, ಮಕ್ಕಳ ನಾಟಕ, ಅಂಕಣಬರಹಗಳಂಥ ವಿವಿಧ ಪ್ರಕಾರಗಳಲ್ಲಿ ವಿಸ್ತರಿಸಿಕೊಂಡಿರುವ ಅವರ ಪ್ರಯೋಗಶೀಲತೆ ಮತ್ತು ಸಾಧನೆ ಎದ್ದುಕಾಣುವಂತಿವೆ. ವೈದೇಹಿ ಬರಹಗಳ ಕೇಂದ್ರ ಹೆಣ್ಣು. ಈ ಹೆಣ್ಣು ವಿವಿಧ ಜಾತಿ, ವಯಸ್ಸು, ಅಂತಸ್ತು, ಸಂವೇದನೆಗಳಲ್ಲಿ ಕಾಣಿಸಿಕೊಳ್ಳುತ್ತಾಳೆ. ವೈದೇಹಿ ಹೆಣ್ಣಿನ ಸಿದ್ಧ ಮಾದರಿಯೊಂದನ್ನು ನಮ್ಮ ಮುಂದೆ ಇಡುತ್ತಿಲ್ಲ. ತೀರಾ ಸಂಪ್ರದಾಯಸ್ಥರಿಂದ ತೀರಾ ಆಧುನಿಕರವರೆಗೆ, ಅವಿವಾಹಿತೆಯರಿಂದ ವಿಧವೆಯರವರೆಗೆ, ಗೃಹಿಣಿಯರಿಂದ ವೇಶ್ಯೆಯರವರೆಗೆ ಈ ಪ್ರಪಂಚ ಹರಡಿಕೊಳ್ಳುತ್ತದೆ. ಇಲ್ಲಿ ವಿದ್ಯಾವಂತರು, ಅವಿದ್ಯಾವಂತರು, ಕಳ್ಳರು, ಹುಚ್ಚರು ಇದ್ದಾರೆ; ಶೋಷಿಸುವವರು, ಶೋಷಣೆಗೆ ಒಳಗಾದವರು ಇದ್ದಾರೆ. ಅಂದರೆ ವೈದೇಹಿ ಕತೆಗಳಲ್ಲಿ ಹೆಣ್ಣು ವಿವಿಧ ಆಕೃತಿಗಳಲ್ಲಿ, ಭಾವಸ್ಥಿತಿಗಳಲ್ಲಿ ಕಾಣಿಸಿಕೊಳ್ಳುತ್ತಾಳೆ. ಈ ವೈವಿಧ್ಯವೇ, ಬಹುರೂಪತೆ-ಬಹುಧ್ವನಿಗಳೇ ವೈದೇಹಿಯವರನ್ನು ನಮ್ಮ ಕಾಲದ ಬಹು ಮುಖ್ಯ ಬರಹಗಾರ್ತಿಯರಲ್ಲಿ ಒಬ್ಬರನ್ನಾಗಿ ಮಾಡಿರುವುದು. ಜೀವನವೆನ್ನುವುದು ಅಸಂಖ್ಯ ಬಣ್ಣ, ಚಹರೆ, ವಾಸನೆಗಳಿಂದ ಕೂಡಿರುವಂಥದ್ದು ಎಂಬ ಸಂಕೀರ್ಣಗ್ರಹಿಕೆಯೂ, ಒಂದು ಮಾನವೀಯ ಸನ್ನಿವೇಶದ ಹಿಂದೆ ಹಲವು ಬಗೆಯ ಒತ್ತಡಗಳಿರುತ್ತವೆ ಎಂಬ ಗಾಢ ತಿಳುವಳಿಕೆಯೂ ಇಲ್ಲಿ ಕೆಲಸ ಮಾಡಿದೆ. ಅವರು ಬದುಕನ್ನು ಹೆಣ್ಣಿನ ದೃಷ್ಟಿಕೋನದಿಂದ ಗಮನಿಸುತ್ತಾರೆ. ಆದರೆ ಅದು ಸರಳವಾದ ‘ಸ್ತ್ರೀಪರ’, ‘ಪುರುಷವಿರೋಧಿ’ ತೀರ್ಮಾನಗಳಲ್ಲಿ ಪರ್ಯವಸಾನಗೊಳ್ಳುವುದಿಲ್ಲ. ಲಿಂಗ ಅಸಮಾನತೆಯ ಪ್ರಶ್ನೆಗಳನ್ನು ಅವರು ತುಂಬ ಪ್ರಬುದ್ಧವಾಗಿ ನಿರ್ವಹಿಸಿದ್ದಾರೆ. ತೀರಾ ಸರಳವಾದ ಪುರುಷವಿರೋಧಿ ಇಲ್ಲವೆ ಸ್ತ್ರೀಪರ ಘೋಷಣೆ ಇವರ ಕತೆಗಳಲ್ಲಿ ಕಾಣುವುದಿಲ್ಲ. ವೈದೇಹಿ ಹೆಣ್ಣಿನ ದೃಷ್ಟಿಕೋನದಿಂದ ಬದುಕನ್ನು ನೋಡುತ್ತಾರೆ ಎಂದಾಗ ಅವರು ಹೆಣ್ಣನ್ನು ಏಕಮುಖವಾಗಿ ಎತ್ತಿ ಹಿಡಿಯುತ್ತಾರೆ ಎಂದಲ್ಲ. ಯಾವುದೇ ಜೀವಿಯ ಅಥವಾ ವರ್ಗದ ಜೀವನ ಸಾಫಲ್ಯದ ಪ್ರಶ್ನೆಯು ಎಲ್ಲಾ ಜೀವಿಗಳ ಮತ್ತು ವರ್ಗಗಳೊಂದಿಗಿನ ಒಟ್ಟಾರೆ ಸಂಬಂಧದ ಪ್ರಶ್ನೆಯೇ ಆಗಿರುತ್ತದೆ ಎಂಬ ಎಚ್ಚರದಲ್ಲಿ ವೈದೇಹಿ ತಮ್ಮ ಸಹಜೀವಿಗಳ ಜೀವನ ಸಂದರ್ಭಗಳನ್ನು ಪರಿಶೀಲಿಸುತ್ತಾರೆ. ಹಾಗೆಂದು ಅವರ ಕಥನಗಳು ತೆಳು ಭಾವುಕ ಅನುಕಂಪದಲ್ಲಿ ಇಲ್ಲವೇ ಸರಳ ಉದಾರವಾದಿ ನಿಲುವುಗಳಲ್ಲಿ ಅಳ್ಳಕಗೊಳ್ಳುವುದಿಲ್ಲ. ಹೆಣ್ಣನ್ನು ಹಲವು ಮನುಷ್ಯ ಸಂದರ್ಭಗಳಲ್ಲಿ ಇಟ್ಟು ನೋಡುವಾಗಲೂ ಒಂದು ಲಿಂಗವಾಗಿ ಹೆಣ್ಣಿನ ಅನನ್ಯ, ವಿಶಿಷ್ಟ ಸ್ಥಿತಿ ಅವರ ಅವಲೋಕನವನ್ನು ತಪ್ಪಿಸಿಕೊಳ್ಳುವುದಿಲ್ಲ. ಈ ದೃಷ್ಟಿಯಿಂದ ‘ನಮ್ಮ ಲೋಕದ ಗೀತೆ’ ಎಂಬ ಪ್ರಬಂಧವನ್ನು ಒಂದು ಟಿಪಿಕಲ್ ವೈದೇಹಿ ಬರಹವೆಂದು ಭಾವಿಸಬಹುದು. ‘ನಮ್ಮ ಲೋಕದ ಗೀತೆ’ ಎಂಬ ಪ್ರಬಂಧದಲ್ಲಿ ವೈದೇಹಿ ಬರೆಯುತ್ತಾರೆ: ‘ಪುರುಷರ ಬಗ್ಗೆ ಯೋಚಿಸುವಾಗ ಎಷ್ಟೋ ಸಲ ಮರುಕವುಂಟಾಗುತ್ತದೆ. ಬದುಕಿನ ಎಷ್ಟೋ ದಿವ್ಯ ಅನುಭವಗಳ ಮೃದುಸ್ಪರ್ಶದಿಂದ ಇವರೆಲ್ಲ ವಂಚಿತರಾಗಿದ್ದಾರೆಂದು. ಅಂತಹ ಅನುಭವಗಳನ್ನು ತಮ್ಮ ಯಾವ ಪೌರುಷದಿಂದಲೂ ಕೂಡ ಎಂದಿಗೂ ಗಳಿಸಿಕೊಳ್ಳಲಾರರಲ್ಲ. ಈ ಸಿಟ್ಟಿಗೇ ಇರಬಹುದೇ ಇವರೆಲ್ಲ ಪ್ರಪಂಚದ ಬೀಗದ ಕೈಯನ್ನು ತಮ್ಮಲ್ಲಿಟ್ಟುಕೊಂಡು ನಮ್ಮನ್ನು ಸತಾಯಿಸುತ್ತಿರುವುದು? ಎಲ್ಲಿ ಹೋದರೂ ತಮ್ಮ ಸಾಮ್ರಾಜ್ಯ ಬಿಚ್ಚಿಕೊಂಡು ನಾವು ಉಸಿರೆತ್ತದಂತೆ ಮಾಡಿರುವುದು? ಹ್ಞಾಂ, ಇದಕ್ಕಾಗಿ ನಾವು ರೊಚ್ಚಿಗೆದ್ದು ನಮಗೆ ಪ್ರಾಕೃತಿಕವಾಗಿ ದಕ್ಕಿದ ಮತ್ತು ಅವರು ನಮ್ಮಿಂದ ಎಂದೂ ಕಸಿಯಲಾರದ ಕೆಲ ಅನರ್ಘ್ಯಗಳನ್ನು ಧಿಕ್ಕರಿಸಿ ಅವರಿಗೆ ಸಮನಾಗಲು ಯತ್ನಿಸುವುದು ಎಂದಿಗೂ ಬುದ್ಧಿವಂತಿಕೆಯಲ್ಲ.’ ಈ ಪ್ರಬಂಧದ ಮುಂದಿನ ಪುಟಗಳಲ್ಲಿ ವೈದೇಹಿ ತಾವು ತಮ್ಮ ಮಗಳಿಗೆ ಜನ್ಮ ಕೊಟ್ಟ ಅನುಭವವನ್ನು ಸೂಕ್ಷ್ಮವಾದ ವಿವರಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಅದನ್ನು ಓದಿದ ಮೇಲೆ ಅವರ ಮಾತುಗಳು ಎಷ್ಟು ನಿಜ ಎಂದು ಯಾರಿಗಾದರೂ ಅನ್ನಿಸದಿರದು: ‘ನನ್ನಲ್ಲಿ ಮೃದುತ್ವ ಮೈದುಂಬಿ ಸಂಚಾರ ಮಾಡುತ್ತಿತ್ತು. ಮಗು ಹೊರಬರಲು ಒದ್ದಾಡುತ್ತಿತ್ತು. ನನ್ನ ಇಡೀ ದೇಹವನ್ನೇ ಆ ಪುಟ್ಟ ಮಗು ಜಗ್ಗಾಡುತ್ತಿದೆ ಎಂಬಂತಹ ಅನುಭವ. ಎಂತಹ ನೋವು! ಆದರೆ ಅದು ವೇದನೆಯಾಗಿರಲಿಲ್ಲ. ಮೈ ಪೂರ್ತಿ ಬೆವೆತು ಮುದ್ದೆಯಾದರೂ ಅದು ಬೇಸಗೆಯ ಖಾಲಿ ಸೆಕೆಯಾಗಿರಲಿಲ್ಲ. ಮಿಡ್ ವೈಫಿನ ಸಹಾಯಕಿ ಜತ್ತೂಬಾಯಿ ನನಗೆ ಗಾಳಿ ಬೀಸುವ ನೆವದಿಂದ ತನಗೇ ಬೀಸಿಕೊಳ್ಳುತ್ತಿದ್ದಳು. ನೊಣ ಎಡಗೈ ಮೇಲೆ ಬಂದು ಕುಳಿತರೆ ಬಲಗೈಯನ್ನು ಪಟ್ಟೆಂದು ಹೊಡೆದುಕೊಳ್ಳುವ ಜಾತಿ ಅವಳು. ಅವಳನ್ನು ಕಂಡರೇ ನಗೆ ಎಲ್ಲರಿಗೂ. ನೋವಲ್ಲಿಯೂ ‘ಜತ್ತೂ, ಬೇನೆ ಯಾರಿಗೆ? ನಂಗಾ ನಿಂಗಾ?’ ಎಂದು ಕೇಳಿ ನಕ್ಕ ನೆನಪು. ಮಧ್ಯೆ ಮಧ್ಯೆ ಅವಳು ನನ್ನನ್ನು ಕಂಡು ‘ಅಬ್ಬ, ಎಂತದಾದರೂ ಬೇಕು, ಈ ಹೆಣ್ಣು ಜನ್ಮ ಬೇಡ’ ಎನ್ನುತ್ತಿದ್ದಳು. ಆದರೆ ನಾನು ಜನ್ಮಗಳು ಇರುವುದು ಹೌದಾದರೆ ಎಲ್ಲ ಜನ್ಮಗಳಲ್ಲಿಯೂ ನಾನು ಹೆಣ್ಣೇ ಆಗಬೇಕು ಎಂದು ಪ್ರಾರ್ಥಿಸುತ್ತಿದ್ದುದು ಆಕೆಗೆ ಕೇಳುವಂತಿರಲಿಲ್ಲ’. ಮಗು ಹೊರಬಂದು, ಹೊಕ್ಕಳುಬಳ್ಳಿ ಕತ್ತರಿಸಿಕೊಂಡು, ಪಕ್ಕದಲ್ಲಿ ಮಲಗಿತ್ತು: ‘ನೋಳಿನೊಪ್ಪಟೆಯಾಗಿ ಜಾರುವ ಮಗು. ಸಾಬೂನಿನ ಮೂಲಕ ಪ್ರಥಮತಃ ಒಂದು ಕೃತಕಕ್ಕೆ ಎದುರಾಗುತ್ತಿತ್ತು. ಹೀಗೆ ನೋಳಿನೊಪ್ಪಟೆಯಿಂದ ಜಾರುವ ಕರುವನ್ನು ತಾಯಿದನ ಪ್ರೀತಿಯಿಂದ ನೆಕ್ಕಿನೆಕ್ಕಿ ಚೊಕ್ಕಮಾಡುವುದು ನೆನಪಾಯಿತು. ಇದರರ್ಥ ನಾನು ಅದಕ್ಕೆ ಸಿದ್ಧಳಿದ್ದೆ ಅಂತಲ್ಲ! ಬದಲು ಅದು ಪ್ರೀತಿ ಪರಾಕಾಷ್ಠೆಯ ಬಗೆಗಿನ ಅಪಾರ ಮೆಚ್ಚುಗೆ ಇರಬಹುದು’. ಕೊಳಕು ಅಸಹ್ಯ ಎಲ್ಲವನ್ನೂ ಮೀರಬಲ್ಲ ಶಕ್ತಿಯಾದ ನಿಸರ್ಗ ಸಹಜವಾದ ಪ್ರೀತಿಯೆಂಬುದಕ್ಕೆ ಹೊಡೆದ ಸಲಾಮು ಇರಬಹುದು’. ಈ ಪ್ರಬಂಧದ ಕೊನೆಯಲ್ಲಿ ಲೇಖಕಿಯ ವಿಚಾರಗಳು ಘನೀಕರಿಸುತ್ತವೆ: ‘ಪುರುಷರಿಗೆ ನಾವು ಎಂದಿಗೂ ಸಮರಲ್ಲ. ಅದಕ್ಕಿಂತ ಮುಖ್ಯವಾಗಿ ನಮ್ಮ ಸಮಕ್ಕೆ ಪುರುಷರು ಎಂದೂ ಬಂದು ನಿಲ್ಲಲಾರರು. ಎಲ್ಲಿ ಸಮಾನ ಅವಕಾಶಗಳನ್ನು ಪಡೆಯಲಾರವೋ ಅಲ್ಲಿ ಹೋರಾಡಿಯಾದರೂ ಒಂದಲ್ಲ ಒಂದು ದಿನ ಸಮಾನ ಅವಕಾಶ ಗಳಿಸಿಕೊಂಡೇವು. ಆದರೆ ತಂತಾನೇ ಲಭ್ಯವಾಗುವ ನಮ್ಮದೇ ಆದ ಅನುಭವಗಳನ್ನು ಗುರುತಿಸುತ್ತ ಗೌರವಿಸುವುದನ್ನು ಬಿಟ್ಟು ಧಿಕ್ಕರಿಸುವುದರಲ್ಲಿ ಹೀಯಾಳಿಸುವುದರಲ್ಲಿ ಏನು ಬಂತು? ನಾವೇಕೆ ಪುರುಷ ದನಿಯಲ್ಲಿ ಮಾತಾಡಬೇಕು? ನಾವು ನಮ್ಮ ಕಂಠದಲ್ಲಿ ಹಾಡೋಣ. ಅದು ಜೋ ರಾಗವಿರಲಿ, ಪ್ರೇಮರಾಗವಿರಲಿ, ಇನ್ಯಾವ ಬಗೆಯ ರಾಗ-ವಿರಾಗಗಳೇ ಇರಲಿ. ನಮ್ಮದೇ ದನಿ ಅಲ್ಲಿರಲಿ’.

Additional information

Author

Publisher

Book Format

Ebook

Language

Kannada

Category

Reviews

There are no reviews yet.

Only logged in customers who have purchased this product may leave a review.