ಮಿನುಗು ದೀಪ
ಬದುಕಿನ ಶುಷ್ಕ ವಸ್ತುಗಳನ್ನು ಕಾವ್ಯರಸದಲ್ಲಿ ಅದ್ದಿ ಚಪ್ಪರಿಸಿ ಸವಿಯುವಂತೆ ಮಾಡುವ ಕಾವ್ಯ ಪಾಕ ಪ್ರವೀಣೆ ಇವರು. ನಮ್ಮ ಮುಂದಿರುವ ಪ್ರಕೃತ ಹನಿಗವನ ಸಂಕಲನದಲ್ಲಿ ‘ಮುಕ್ತಕಗೀತೆ’, ಮತ್ತು ‘ಚುಟುಕ’ಗಳ ಬಗೆಯವು. ಇಲ್ಲಿಯ ವಿಷಯಗಳ ಹರವು ಅಣುರೇಣುತೃಣದಿಂದ ಬ್ರಹ್ಮ ಬ್ರಹ್ಮಾಂಡ ಪರ್ಯಂತವಾದವು. ಅಡಿಗೆ ಮನೆ ಸೌಟಿನಿಂದ ಹಿಡಿದು, ಚಪ್ಪಲಿ, ಕುಂಚ, ಕಲ, ಬಲ, ಬೆಟ್ಟ, ಕಡಲು, ಗಗನ, ಅಳು- ನಗು, ಸೂರ್ಯ- ಚಂದ್ರ, ಗಂಡ- ಹೆಂಡತಿ, ಇರುವೆ- ಅನೆ, ನಾಯಿ- ನರಿ, ವಸ್ತುಗಳನ್ನು ಒಮ್ಮೆ ಚಕಮಕಿಯ ಬೆಳಕಾಗಿ ಮಿಂಚಾಗಿ , ಒಮ್ಮೆ ರಸಾರ್ದ್ರ ನುಡಿಯಾಗಿ , ಕಿಡಿಯಾಗಿ, ಲೇವಡಿಯಾಗಿ, ಉಪಹಸ್ಯವಾಗಿ, ಹಂಗಿಸಿ, ಭಂಗಿಸಿ, ನೇರವಾಗಿ , ವಕ್ರವಾಗಿ, ತಿರುಚಿ, ಮಣಿಸಿ, ಖಂಡಿಸಿ, ಮಂಡಿಸಿ, ಸಿಹಿಯಾಗಿ, ಒಗರಾಗಿ, ಖಾರವಾಗಿ, ಕಹಿಯಾಗಿ, ನಾನಾ ಕಲ್ಲಹರಳುಗಳನ್ನು ಎಸೆಯುತ್ತ, ಬಾಣಬಿರುಸು ಬಿಡುತ್ತ, ಪಟಾಕಿ – ಚಟಾಕಿಗಳನ್ನು ಹಾರಿಸುತ್ತ , ಕಾವ್ಯ ದಿಗಂತವನ್ನು ವಿಸ್ತರಿಸುತ್ತಾ ನಡೆದಿದ್ದಾರೆ.