ಧ್ವಜದ ಗೌರವ ರಕ್ಷಣೆಗಾಗಿ ಪ್ರಾಣವಿತ್ತ ವೀರವನಿತೆಯರು: ಕನಕಲತಾ ಬರುವಾ, ಭೋಗೇಶ್ವರಿ ಫು೦ಖನಾನಿ

ಧ್ವಜದ ಗೌರವ ರಕ್ಷಣೆಗಾಗಿ ಪ್ರಾಣವಿತ್ತ ವೀರವನಿತೆಯರು: ಕನಕಲತಾ ಬರುವಾ, ಭೋಗೇಶ್ವರಿ ಫು೦ಖನಾನಿ

ಕನಕಲತಾ ಬರುವಾ ಮತ್ತು ಭೋಗೇಶ್ವರಿ ಫು೦ಖನಾನಿ: ರಾಷ್ಟ್ರಧ್ವಜದ ಗೌರವ ರಕ್ಷಣೆಗಾಗಿ ಬ್ರಿಟಿಷರ ಗುಂಡಿಗೆ ಎದೆಯೊಡ್ಡಿ ಬಲಿದಾನಗೈದ ಅಸ್ಸಾಮಿನ ವೀರವನಿತೆಯರು ಕನಕಲತಾ ಬರುವಾ ಮತ್ತು ಭೋಗೇಶ್ವರಿ ಫು೦ಖನಾನಿ. ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರದ ಭೂಪಟ, ವಂದೇಮಾತರಂ ಎಲ್ಲವೂ ದೇಶಾಭಿಮಾನದ ಅಭಿವ್ಯಕ್ತಿಯ ಸಂಕೇತಗಳಾದರೂ ಅವು ನಮ್ಮಲ್ಲಿ ಸೃಷ್ಟಿಸುವ ಭಾವ ವರ್ಣನಾತೀತ. ಸೈನಿಕನೊಬ್ಬ ಯುದ್ಧ ಗೆದ್ದಾಗ, ಕ್ರೀಡಾಳುವೊಬ್ಬ ಆಟದಲ್ಲಿ ಗೆದ್ದಾಗ ತ್ರಿವರ್ಣ ಧ್ವಜಹಿಡಿದು ಕುಣಿದು ಕುಪ್ಪಳಿಸುವುದು ಕಾಣುತ್ತೇವೆ. ಯುದ್ಧಕ್ಕೆ ಹೊರಟ ಯೋಧನೊಬ್ಬ ಗೆದ್ದರೆ ಧ್ವಜಹಿಡಿದು ಬರುವೆ, ಸತ್ತರೆ ತ್ರಿವರ್ಣಧ್ವಜ ವನ್ನು ಸುತ್ತಿಕೊಂಡು ಬರುವೆ ಎಂದು ಹೇಳಿದ್ದು ಈ ಎಲ್ಲ ಸಂಕೇತಗಳ ಕುರಿತು ನಮಗಿರುವ ಹೆಮ್ಮೆ ಅಭಿಮಾನದ ಪ್ರತೀಕ. ರಾಷ್ಟ್ರಧ್ವಜವೆಂದರೆ ಕೇವಲ ಅದು ಬಟ್ಟೆಯಲ್ಲ. ಅದು ನಮ್ಮ ಹೆಮ್ಮೆ, ದೇಶದ ಕುರಿತ ಪ್ರೀತಿಯ ಸಂಕೇತ, ಅದು ನಮ್ಮ ಆತ್ಮಾಭಿಮಾನದ ಸಂಕೇತ. ರಾಷ್ಟ್ರಧ್ವಜದ ಪೂಜ್ಯತೆ ಹಾಗೂ ಗೌರವದ ರಕ್ಷಣೆಗಾಗಿ 17 ರ ತರುಣಿ ಕನಕಲತಾರಿಂದ ಹಿಡಿದು 73 ರ ವೃದ್ಧೆ ಮಾತಂಗಿನಿ ಹಜ್ರಾರವರೆಗೆ ಸ್ವಾತಂತ್ರ್ಯ ಸಮರದ ಉದ್ದಕ್ಕೂ ಸಾವಿರಾರುಮಂದಿ ಬಲಿದಾನ ಮಾಡಿದ್ದಾರೆ. 1942 – ಭಾರತ ಬಿಟ್ಟು ತೊಲಗಿ ಚಳುವಳಿ ಉಚ್ಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ. ಅಸ್ಸಾಂ ರಾಜ್ಯ ಕೂಡಾ ಚಳುವಳಿಯ ಅಗ್ನಿಕುಂಡವಾಗಿತ್ತು. ಮಹಿಳೆ ಮಕ್ಕಳೆನ್ನದೆ ಸಾವಿರಾರುಜನ ಸ್ವಯಂಪ್ರೇರಿತರಾಗಿ ಬ್ರಿಟಿಷರನ್ನು ಓಡಿಸಲು ಬೀದಿಗಿಳಿದಿದ್ದರು. 1942 ರ ಸೆಪ್ಟೆ೦ಬರ್ 20ರ೦ದು ಅಸ್ಸಾಮಿನ ಗೋಪ್ವಾರದ ಪೊಲೀಸ್ ಠಾಣೆಯ ಮೇಲೆ ತ್ರಿವಣ೯ಧ್ವಜ ನೆಡುವ ನಿರ್ಧಾರವನ್ನು ಹೋರಾಟಗಾರರು ಮಾಡಿದರು. 17ರ ಬಾಲೆ ಕನಕಲತಾ ಬಹುದೊಡ್ಡ ಗು೦ಪಿನೊ೦ದಿಗೆ ಎಲ್ಲರಿಗಿ೦ತ ಮು೦ಭಾಗದಲ್ಲಿ ತ್ರಿವಣ೯ ಧ್ವಜವನ್ನು ಹಿಡಿದು ಮುನ್ನುಗ್ಗುತ್ತಿದ್ದಳು. ಗು೦ಪನ್ನು ಚದುರಿಸಲುಪೊಲೀಸರು ನೀಡಿದ ಎಚ್ಚರಿಕೆಗೆ ಕವಡೆ ಕಾಸಿನ ಬೆಲೆಯನ್ನೂ ನೀಡದೆ ಸಾವಿಗೂ ಅ೦ಜದೆ ಧ್ವಜಧಾರಿಗಳು ಮು೦ದುವರಿದರು. ಪೊಲೀಸರು ಗು೦ಡು ಹಾರಿಸಿದರು. ಕನಕಲತಾ ದೇಶಪ್ರೇಮಿಗಳು ನಿಶ್ಚಯಿಸಿದ್ದ ‘ಮೃತ್ಯುವಾಹಿನಿ’ಯ ತಂಡದಲ್ಲಿದ್ದಳು, ಅದೇನೇ ಬಂದರೂ ಧ್ವಜಹಾರಿಸಲೇಬೇಕೆಂಬ ನಿಶ್ಚಯ ಅವರದಾಗಿತ್ತು. ಪೋಲೀಸರ ಗುಂಡಿಗೆ ಎದೆಯೊಡ್ಡಿದ ಕನಕಲತಾ ಗು೦ಡೇಟು ತಿ೦ದು ಕೆಳಗೆ ಬಿದ್ದರೂ ಧ್ವಜ ನೆಲಕ್ಕೆ ಬೀಳದ೦ತೆ ಆ ತೀವ್ರ ನೋವಿನಲ್ಲೂ ನಿಲ್ಲಿಸಿ ಹಿಡಿದಿದ್ದಳು. ಕೆಲ ಹೊತ್ತಿನ ನ೦ತರ ಮುಕು೦ದ ಕಾಕತಿ ಎ೦ಬ ತರುಣ ಮು೦ದೆ ಬ೦ದು ಆಕೆಯಿ೦ದ ಧ್ವಜವನ್ನೆತ್ತಿಕೊ೦ಡಾಗಲೇ ಆಕೆ ನಿರಾಳವಾಗಿ ಪ್ರಾಣ ತ್ಯಜಿಸಿದ್ದು. ಮುಂದೆ ಮುಕುಂದ ಕಾಕತಿ ಕೂಡಾ ಬಲಿದಾನ ಮಾಡಿದ. ಸಾವನ್ನೂ ಲೆಕ್ಕಿಸದೆ ಈ ತರುಣಪಡೆ ನಿರ್ಧರಿಸಿದಂತೆ ಪೊಲೀಸ್ ಠಾಣೆಯಮೇಲೆ ಧ್ವಜ ಹಾರಿಸುವಲ್ಲಿ ಯಶಸ್ವಿಯಾಯಿತು. ಈ ವೀರತರುಣಿ ಕನಕಲತಾ ಧ್ವಜದ ರಕ್ಷಣೆಗಾಗಿಜೀವ ನೀಡಿದಳು. ಅದೇ ದಿನ ನಾಗಾಂವ್ ಜಿಲ್ಲೆಯ ಬರ್ಹಾಮಪುರದಲ್ಲಿ ಮತ್ತೊಬ್ಬ ವೀರನಾರಿ ಭೋಗೇಶ್ವರಿ ಫು೦ಖನಾನಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಬ್ರಿಟಿಷ್ ಅಧಿಕಾರಿ ಕ್ಯಾಪ್ಟನ್ ಫಿನಿಷ್ನ ಮೇಲೆ ನುಗ್ಗಿ ದಾಳಿಮಾಡಿ ಧ್ವಜವನ್ನು ಎತ್ತಿಹಿಡಿದು ಪೊಲೀಸ್ ಗುಂಡಿಗೆ ಎದೆಯೊಡ್ಡಿ ಹುತಾತ್ಮಳಾದಳು. ಇಂತಹ ವೀರನಾರಿಯರ ಸ್ಮರಣೆ ಈ ದೇಶಕ್ಕೆ ಸದಾ ಶಕ್ತಿ ಸ್ಫೂರ್ತಿ ತುಂಬುವಂತದ್ದು. ಈ ಹುತಾತ್ಮರ, ಅಪ್ರತಿಮ ದೇಶಭಕ್ತರ ಸ್ಮರಣೆ ನಮ್ಮನ್ನು ಮತ್ತಷ್ಟು ದೇಶವನ್ನುಪ್ರೀತಿಸುವಂತೆ ಮಾಡಲಿ. ದೇಶಾಭಿಮಾನಿಗಳನ್ನಾಗಿ ಮಾಡಲಿ. ನಮಗೆ ಸಿಕ್ಕ ಸ್ವಾತಂತ್ರ್ಯ ಅದೆಷ್ಟು ಅಮೂಲ್ಯವಾದುದು, ಅದರ ಹಿಂದೆ ಅದೆಂತಹ ತ್ಯಾಗ ಬಲಿದಾನಗಳ ಕಥೆಯಿದೆ ಎಂಬುದು ನಮಗೆ ಅರಿವಾಗಲಿ. ಸುಮ್ಮನೇ ಬರಲಿಲ್ಲ ಸ್ವಾತಂತ್ರ್ಯ ಎಂಬುದು ನಮಗೆ ಅರ್ಥವಾಗಲಿ.

Leave a Reply