ಎಲ್ಲವೂ ನಾವೇ

ಎಲ್ಲವೂ ನಾವೇ

ಗುಬ್ಬಿಗಳು ನಾವು ಮಿಂಚುಳ್ಳಿಗಳು
ಹಾರುತಿರುವ ಬೆಳ್ಳಕ್ಕಿಗಳು
ಬೆಳ್ಳಕ್ಕಿಗಳು
ಹಾರುತಿರುವ ಹಕ್ಕಿಗಳು…..

ಕಣ್ಮನ ಸೆಳೆಯುವ ಚಿತ್ತಾರದ ಮೂರ್ತಿಗಳು
ಪಾತರಗಿತ್ತಿಯ ಚೆಲುವು ನಮ್ಮದು
ಮುಟ್ಟಲು ಸುಯ್ಯನೆ ಹಾರುವೆವು
ಚಿಟ್ಟೆಗಳು ನಾವ್ ಚಿಟ್ಟೆಗಳು

ಭೇದ ಭಾವದ ಮಾತೇ ಅರಿಯದ
ಮನದಲಿ ಕಹಿ ಭಾವವೇ ಇಲ್ಲದ
ಮಕರಂದವ ಹೀರುವ ಜೇನುಗಳು
ಸಿಹಿ ಜೇನುಗಳು ನಾವ್ ಜೇನುಗಳು

ಸ್ವಚ್ಚ ಸರೋವರದಿ
ಬಿಳಿ ಕೆಂದಾವರೆ ಅಂದದಿ
ಕಣ್ಣಿಗೆ ತಂಪೆರಗುವ ಪುಷ್ಪಗಳು
ಹೂವುಗಳು ನಾವ್ ಹೂವುಗಳು

ಗಗನಕು ಜಿಗಿದು ಚಂದ್ರನ ಹಿಡಿದು
ನಕ್ಷತ್ರದಂತೆ ಮಿನುಗಿ ಮಿನುಗಿ
ಭವಿಷ್ಯಕೆ ಬೆಳಕಾಗುವೆವು
ತಾರೆಗಳು ನಾವ್ ತಾರೆಗಳು

ಕೇಳುವಿರಾದರೆ ನಮ್ಮಯ ಪಾಠ
ನಾವೇ ನಿಮ್ಮಯ ನಿಜ ಶಿಕ್ಷಕರು
ನಿಮ್ಮನೂ ಮೀರಿದ ಜ್ಞಾನಿಗಳು
ಗುರುಗಳು ನಾವ್ ಗುರುಗಳು

ಕೊಡುವಿರೋ ಹೇಳಿ ನಿಜ ಅವಕಾಶವ
ನಾವೇ ಮುಂದಿನ ಬೇಂದ್ರೆ ಕುವೆಂಪು
ನಾವೇ ಮುಂದಿನ ಮಾಸ್ತಿ
ನಾವೇ ನಿಮ್ಮಯ ನಿಜ ಆಸ್ತಿ.
ಹಕ್ಕಿಗಳು ನಾವ್ ಹಕ್ಕಿಗಳು.

Leave a Reply