Your Cart

Need help? Call +91 9535015489

📖 Print books shipping available only in India. ✈ Flat rate shipping

“ಸ್ತಂಭ ದೇಗುಲ”,

ಬೃಹದಾಕಾರವಾದ ದೇಗುಲ. ಭಕ್ತಿಯೊಂದಿಗೆ ಒಳಗಡೆ ಅಡಿ ಇಟ್ಟರೆ, ಕನ್ನಡಿಯಂತೆ ಹೊಳೆಯುವ ಸಾಲು ಸಾಲು ಕಂಬಗಳು ಕಾಣುತ್ತವೆ. ಇವುಗಳ ನಡುವೆಯೇ ಚಾವಣಿಯ ಕಿಂಡಿಗಳಿಂದ ತೂರಿಬರುವ ತಂಗಾಳಿ, ಸಣ್ಣನೆಯ ಬಿಸಿಲು ಕೋಲುಗಳು, ತಂಪು ಸೂಸುವ ಕಲ್ಲಿನ ಸೂರು, ಹೊರಗಿರುವ ಬಿರು ಬಿಸಿಲನ್ನೂ ಮರೆಸುತ್ತದೆ! ಧಾರಾವಾಡ ಜಿಲ್ಲೆ ಕುಂದಗೋಳ ಪಟ್ಟಣದ ಶಿವಾಜಿನಗರದಲ್ಲಿರುವ 11ನೇ ಶತಮಾನದ ಐತಿಹಾಸಿಕ ಶಂಭುಲಿಂಗೇಶ್ವರ ದೇಗುಲದ ವಾಸ್ತುಶಿಲ್ಪದ ವರ್ಣನೆ ಇದು. ಈ ದೇವಾಲಯವನ್ನು ಕದಂಬರು ನಿರ್ಮಿಸಿದ ನಂತರ ಚಾಲುಕ್ಯರು ನವೀಕರಿಸಿದ್ದಾರೆ.ಇದು ಚಾಲುಕ್ಯರು ನಿರ್ಮಿಸಿದ ದೊಡ್ಡ ಏಕೈಕ ಶಿವ ದೇವಾಲಯ ಎನ್ನುತ್ತದೆ ದಾಖಲೆಗಳು. ಕುಂದಗೋಳ ಪಟ್ಟಣ ಮೊದಲು ಚಾಲುಕ್ಯರ ಸಾಮ್ರಾಜ್ಯದ ಪ್ರಮುಖ ಪ್ರದೇಶದ ಒಳ ಭಾಗದಲ್ಲಿತ್ತು. 1948ಕ್ಕೆ ಮುಂಚಿತವಾಗಿ ಕುಂದಗೋಳ ಜಮಖಂಡಿ ರಾಜರ ಮನೆತನದ ಆಡಳಿತದ ಭಾಗವಾಗಿತ್ತು.ವಿಶಿಷ್ಟ ಶೈಲಿಯ ವಿನ್ಯಾಸ ಪೂರ್ವಾಭಿ­ಮುಖ­ವಾಗಿರುವ ದೇವ­ಸ್ಥಾನಕ್ಕೆ ನಾಲ್ಕು ದಿಕ್ಕುಗಳಿಂದಲೂ ಬಾಗಿಲುಗಳಿವೆ. ಈ ಬಾಗಿಲುಗಳು ಮೆಟ್ಟಿಲಿನ ಬದಿಯಲ್ಲಿ ಸಿಂಹದ ಕೆತ್ತನೆ ಇದೆ. ಸಾಮಾನ್ಯವಾಗಿ ಶಿವಲಿಂಗಗಳು ಬೂದು ಇಲ್ಲವೇ ಕಪ್ಪು ಬಣ್ಣದ್ದಾಗಿರುತ್ತದೆ. ಆದರೆ ಈ ದೇವಾಲಯದ ಗರ್ಭ ಗುಡಿಯ ಒಳಭಾಗದಲ್ಲಿ ಶಿವಲಿಂಗವೂ ದಟ್ಟ ಕಂದು ಬಣ್ಣದಲ್ಲಿದೆ. ಶಿವ­ಲಿಂಗದ ಎದುರು ನಂದಿ ವಿಗ್ರಹವಿದೆ. ಗರ್ಭಗುಡಿಯ ಅಕ್ಕ­ಪಕ್ಕದ ಗೋಡೆಗಳ ಮೇಲೆ ಪಾರ್ವತಿ ಹಾಗೂ ಗಣೇಶ ವಿಗ್ರಹಗಳಿವೆ.ದೊಡ್ಡದೊಡ್ಡ ಕಲ್ಲಿನ ಚಪ್ಪಡಿ­ಗಳಿಂದ ಚಾವಣಿ ನಿರ್ಮಿಸ­ಲಾ ಗಿದೆ. ದೇವಸ್ಥಾನದ ಒಳ­ಭಾಗ­ದ ಗೋಡೆಯ ಮೇಲೆ ಹನ್ನೊಂದು ಶಿಲಾ ಶಾಸನಗಳಿವೆ. ಶಾಸನದ ಮೇಲಿರುವ ಅಕ್ಷರಗಳು ಸ್ಪಷ್ಟವಾಗಿ ಕಾಣದೇ ಇರುವುದರಿಂದ ಓದಲು ಸಾಧ್ಯವಾ­ಗುತ್ತಿಲ್ಲ. ಸುಮಾರು 70 ಅಡಿ ಉದ್ದ ಹಾಗೂ 50 ಅಡಿ ಅಗಲ ಇರುವ ದೇವ­ಸ್ಥಾನದ ಒಳಗೆ ಬೃಹದಾಕಾರದ 68 ಕಲ್ಲಿನ ಕಂಬಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಹೊರಭಾಗದಲ್ಲಿ ಸುಂದರವಾದ ದೇವರ ಕಲಾಕೃತಿಗಳನ್ನು ಕೆತ್ತನೆ ಮಾಡಲಾಗಿದೆ.ಚಾವಣಿಯ ಕಲ್ಲಿನ ಚಪ್ಪಡಿಗಳಲ್ಲೇ ಗಾಳಿ ಮತ್ತು ಬೆಳಕು ನುಸುಳಲು ಬಿಡಲಾದ ಬೆಳಕಿನ ಕಿಂಡಿಗಳಿಂದ ತಂಪಾದ ಗಾಳಿ ಬರುತ್ತದೆ. ಪ್ರತಿ ವರ್ಷ ಬೇಸಿಗೆಯಲ್ಲಿ ದೇವಸ್ಥಾನದ ಸುತ್ತಲಿನ ಬಹುತೇಕರು ಮಧ್ಯಾಹ್ನದ ವೇಳೆಯಲ್ಲಿ ಈ ದೇವಸ್ಥಾನದಲ್ಲಿಯೇ ಬಿಡಾರ ಹೂಡುತ್ತಾರೆ. ಐದು ತಲೆಮಾ­ರು­­ಗಳಿಂದ ಈ ದೇವಸ್ಥಾನದ ಉಸ್ತು­ವಾರಿ­­ಯನ್ನು ಪಟ್ಟಣ­ದ ಹಂಪಿಹೊಳಿ ಕುಟುಂಬ ನೋಡಿ­ಕೊಳ್ಳುತ್ತಾ ಬಂದಿದ್ದಾರೆ.ಶಿವ-ಪಾರ್ವತಿ ದೇಗುಲಈ ದೇವಸ್ಥಾನ ಶಿವ ಮತ್ತು ಪಾರ್ವತಿಗೆ ಅರ್ಪಿತ ವಾಗಿದೆ. ಇದು ಬಂಕಾಪುರ ಕೋಟೆಯಲ್ಲಿರುವ 60 ಕಂಬಗಳ ದೇವಾಲಯದ ಮಾದರಿಯಲ್ಲಿದೆ. ಈ ದೇವಾಲಯದ ಮೂಲ ಗುಡಿಯ ಸಭಾಮಂಟಪ ಮತ್ತು ಗರ್ಭಗುಡಿಗಳು ಮಾತ್ರ ಉಳಿದಿವೆ. ಸಭಾ ಮಂಟಪದ ವೃತ್ತದಲ್ಲಿ ಅಷ್ಟ ದಿಕ್ಪಾಲಕರನ್ನು ಕೆತ್ತಲಾಗಿದೆ. ಹೊರಬದಿಯಲ್ಲಿ ಕೀರ್ತಿ ಮುಖಗಳಿವೆ.ಯುಗಾದಿಯ ಪ್ರತಿಪದಿ­ಯಂದು ಸೂರ್ಯೋದ ಯದ ಪ್ರಥಮ ಸೂರ್ಯನ ಕಿರಣಗಳು ನೇರವಾಗಿ ದೇವಸ್ಥಾನದೊಳಗಿರುವ ಶಿವಲಿಂಗದ ಮೇಲೆ ಬೀಳುತ್ತವೆ. ಈ ಅಪರೂಪದ ದೃಶ್ಯ ನೋಡಲು ಕುಂದಗೋಳ ಸೇರಿ ಸುತ್ತಮುತ್ತಲಿನ ನೂರಾರು ಜನರು ಬೆಳಗಿನ ಸಮಯ­ದಲ್ಲಿಯೇ ಕಾಯುತ್ತಾ ನಿಲ್ಲುತ್ತಾರೆ.ಹಾನಿಗೊಳಗಾದ ಕಂಬಗಳು ಈ ದೇವಾಲಯದ ಸುಮಾರು 4 ಮತ್ತು 5 ಕಂಬಗಳು ಹಾನಿಗೊಳಗಾಗಿವೆ. ಕೆಲವು ವರ್ಷಗಳ ಹಿಂದೆ ಸಿಡಿಲು ಬಡಿದು ಹೀಗೆ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ. ಮಳೆಗಾಲದಲ್ಲಿ ದೇವಸ್ಥಾನದ ಕೆಲವು ಭಾಗಗಳಲ್ಲಿ ಮಳೆ ನೀರು ಸೋರುತ್ತದೆ. ದೇವಸ್ಥಾನದ ಹೊರ ಭಾಗದಲ್ಲಿ ಕೆತ್ತಲಾಗಿದ್ದ ಸುಂದರ ವಿವಿಧ ಚಿತ್ರಣಗಳು ಉದುರಿ ಬೀಳುತ್ತಿವೆ. ದೇವಾಲಯದ ಹೊರ ಭಾಗದಲ್ಲೂ ಹಾನಿಗೊಳಗಾಗಿದೆ. ಇದು ಹತ್ತಿರದಿಂದ ನೋಡಿದರೆ ಮಾತ್ರ ಕಂಡು ಬರುತ್ತದೆ. ಸಂಬಂಧಪಟ್ಟ ಇಲಾಖೆಯವರು ದೇವಾಸ್ಥಾನದ ಜೀರ್ಣೋದ್ಧಾರ ಕುರಿತು ಕಾಳಜಿ ತೋರಿಸುವ ಅಗತ್ಯವಿದೆ.ಆ ಕಾಲದಲ್ಲೇ ಅದ್ಭುತ ವಾಸ್ತುಶಿಲ್ಪದೊಂದಿಗೆ ಇಂಥ ದೇವಾಲಯ ನಿರ್ಮಾಣವಾಗಿದೆ. ಅದನ್ನು ಉಳಿಸಿಕೊಂಡು ಹೋಗಬೇಕಾದದ್ದು ಸರ್ಕಾರದ ಕೆಲಸ ಎನ್ನುತ್ತಾರೆ ಇಲ್ಲಿನ ನಿವಾಸಿ ಅರವಿಂದಪ್ಪ ಕಟಗಿ.

courtsey:prajavani.net

“author”: “ಅಶೋಕ ಘೋರ್ಪಡೆ”,

https://www.prajavani.net/artculture/art/pillar-temple-648012.html

Leave a Reply