ಬದಲಾಗುತ್ತಿರುವ ಅತ್ತೆಸೊಸೆಯರ ಸಂಬಂಧ

ಬದಲಾಗುತ್ತಿರುವ ಅತ್ತೆಸೊಸೆಯರ ಸಂಬಂಧ
ಈಗ್ಯೆ ಕೆಲವಾರು ದಿನಗಳ ಹಿಂದೆ ನಮ್ಮ ಗೆಳತಿಯ ಮನೆಗೆ ಹೋಗಿದ್ದೆ. ಮೇಲಿನ ಮಹಡಿಯಲ್ಲಿ ಸೊಸೆ ಸಂಗೀತಾಭ್ಯಾಸ ಮಾಡುತ್ತಿದ್ದಳು. ಸೊಸೆಗೆ ಅತ್ತೆ ಕಾಫಿ ಮಾಡಿ ಮೇಲೆಯೇ ಒಯ್ದು ಕೊಟ್ಟಳು. ಹಾಗೂ ಸಂಗೀತ ಕ್ಲಾಸಿನ ಸಮಯ ಆಯ್ತು, ನೀನು ಯಾವಾಗ ಹೋಗುವಿ’, ಎಂದು ಅತ್ಯಂತ ಮೃದುವಾಗಿ ಕೇಳಿದಳು, ಆಗ ಸೊಸೆ, ‘ಅಮ್ಮಾ ಇನ್ನೊಂದು ಹತ್ತು ಮಿನಿಟ್ ನಲ್ಲಿ ಬಿಡುವೆ ನಿಮಗೆಲ್ಲಾದರೂ ಬಿಡಬೇಕೇನು? ‘ಹೌದು ಸುಷ್ಮಾ, ನಾನು, ನನ್ನ ಗೆಳತಿ ಇಬ್ಬರಿಗೂ ಲೈಬ್ರರಿ ಹತ್ತಿರ ಬಿಡು, ನಂತರ ಮಂಡಳ ಮೀಟಿಂಗೂ ಮುಗಿಸಿಯೇ ಬರ್ತೀನಿ’ ‘ಸರಿ’ ಎಂದ ಸೊಸೆ ಗ್ಯಾರೇಜಿನಿಂದ ಕಾರನ್ನು ಹೊರತೆಗೆದು ನಮ್ಮಿಬ್ಬರನ್ನೂ ಕಾರಿನಲ್ಲಿ ಕೂಡಿಸಿಕೊಂಡು ಲೈಬ್ರರಿಗೆ ಬಿಟ್ಟು ‘ಬೈ ಅಮ್ಮಾ’ ಎಂದೆನ್ನುತ್ತಾ ನಡದೇಬಿಟ್ಟಳು. ನನಗೆ ಆಶ್ಚರ್ಯವೋ ಆಶ್ಚರ್ಯ. ಒಂದು ಕ್ಷಣ ಇವರಿಬ್ಬರೂ ಸ್ವಂತ ಅಮ್ಮ-ಮಗಳೇನೋ ಎನ್ನಿಸಿದ್ದು ಸುಳ್ಳಲ್ಲ. ಒಂದು ಸಲ ಎಪ್ಪತ್ತರ ದಶಕದ ಅತ್ತೆ ಕಣ್ಣುಮುಂದೆ ಸುಳಿದು ಮರೆಯಾದಳು. ಹೊಳೆಯುತ್ತಿರುವ ರೇಷ್ಮೆಯ ಭರ್ಜರಿ ಸೀರೆ ತಲೆಯ ಮೇಲೆ ಸೆರಗನ್ನು ಹೊದ್ದುಕೊಂಡು ಯಾವಾಗಲೂ ಸಿಟ್ಟಿನಿಂದ ಕಂಗೊಳಿಸುತ್ತಿರುವ ಕಣ್ಣುಗಳು, ಧಮುಗುಡುತ್ತಿರುವ ಮುಖ, ಮಾತುಗಳಂತೂ ಯಾವಾಗಲೂ ವಕ್ರವೇ, ಒಂದೊಂದು ಶಬ್ದವೂ ಸೊಸೆಗೆ ಆಜ್ಞೆಯ ಥರವೇ. ಅಕ್ಕಪಕ್ಕದವರ ಸೊಸೆಯರ ಬಗ್ಗೆ ಆಡಿಕೊಳ್ಳುವುದು, ಅವರೊಂದಿಗೆ ತನ್ನ ಸೊಸೆಯನ್ನು ತುಲನೆ ಮಾಡುವುದು. ಅವಳ ಸೊಸೆ ಯಾವತ್ತಿದ್ದರೂ ಆಕೆಯ ಕೈಕೆಳಗಿನ ಕೆಲಸದವಳೇ ಹೊರತು ಮುಖ್ಯವಾಗಲು ಬಿಡುತ್ತಲೆ ಇರಲಿಲ್ಲ. ಅವಳೆಷ್ಟೇ ನೀಟಾಗಿ ಕೆಲಸಮಾಡಿದರೂ ಕೂಡ ತಪ್ಪುಗಳನ್ನು ಹುಡುಕಿ ತೆಗೆಯುವುದರಲ್ಲಿ ನಿಸ್ಸೀಮಳು.
ಆದರೆ ಇಂದಿನ ಪರಿಸ್ಥಿತಿ ನೋಡಿದಾಗ ಅತ್ತೆ ಸೊಸೆಯರ equation ಬದಲಾಗಿದೆ ಎಂದು ಹೇಳಬಹುದು. ಹೊಸಯುಗದ ಅತ್ತೆ ಬುದ್ಧಿಮತ್ತಿಯಲ್ಲಿ ಜಾಣೆ, ಕಲಿತವಳು, ಹೃದಯವಂತಳು ಹಾಗೂ ಗೆಳತಿಯಂತೆ ಜೊತೆಗಾತಿ. ತನ್ನ ಮಗನ ಹೆಂಡತಿಯನ್ನು ಸೊಸೆಗಿಂತ ಹೆಚ್ಚು ಗೆಳತಿಯಾಗಿ ಪರಿವರ್ತಿಸಿಕೊಂಡಿದ್ದಾಳೆ.
ಇಂದಿನ ಎಷ್ಟೊಂದು ಅತ್ತೆಯರನ್ನು ಕಂಡಾಗ ಅವರ ಗಂಡು ಮಕ್ಕಳೆಲ್ಲ ಅಮೇರಿಕಾನೋ, ಇಂಗ್ಲೆಂಡೋ, ಆಸ್ಟ್ರೇಲಿಯಾನೋ ಎಂದು ಬೇರೆ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಆಗ ಅವರ ಅನುವು ಆಪತ್ತಿನಲ್ಲಿ ಅತ್ತೆಯಾದವಳು ಬೇರೆ ದೇಶಕ್ಕೆ ತೆರಳಿ ಅವರ ಬಾಣಂತನವೋ, ಮತ್ತೊಂದೋ ಮಾಡಿ ಬರುತ್ತಾಳೆ. ಅಲ್ಲದೇ ಇಂಟರ್ ನೆಟ್ ನಲ್ಲಿ ಚಾಟಿಂಗ್ ಮಾಡಬಹುದು. email ಕಳಿಸಿ ಉತ್ತರಕ್ಕೆ ಕಾಯುತ್ತಿರುತ್ತಾಳೆ. ತಾನು ಮನೆಯಲ್ಲಿ ಮಾಡಿದ ತಿಂಡಿಗಳನ್ನೆಲ್ಲ ಕ್ಲಿಕ್ಕಿಸಿ ಫೋಟೋಗಳನ್ನು upload ಮಾಡುತ್ತಿರುತ್ತಾಳೆ. ಏನೇ ವಿಷಯವನ್ನು ಸೊಸೆಯೊಂದಿಗೆ ಚರ್ಚಿಸುತ್ತಾಳೆ. ಅಲ್ಲದೇ ಅವಳು ತನ್ನ ಮೊಮ್ಮಕ್ಕಳೊಂದಿಗೆ MTV ಹಚ್ಚಿಕೊಂಡು ಆ ಹಾಡಿಗೆ ತಕ್ಕ ಹಾಗೆ dance ಕೂಡ ಮಾಡುತ್ತಿರಬಹುದು. ಅಥವಾ ಸೊಸೆಯ ಫೆವರೇಟ್ ಸೀರಿಯಲ್ ಗಳಿದ್ದರೆ ಅವಳೊಂದಿಗೆ ಸರಿರಾತ್ರಿಯಾದರೂ ನೋಡುತ್ತಾ ತನ್ನ ಕಮೆಂಟ್ ಮಾಡುತ್ತ ಆಕೆಯ ಕಮೆಂಟಿಗೆ ನಗುತ್ತಾ ಕಳಿಯಬಹುದು. ಅವಳೀಗ ಕುರೂಪಿ ಸ್ವರೂಪದ ಲಲಿತಾ ಪವಾರಳಾಗದೇ, ಸುಂದರ, ಸುಶಿಕ್ಷಿತ ಹೇಮಾಮಾಲಿನಿಯಂತಹ ಅತ್ತೆಯಾಗಿದ್ದಾಳೆ.
ಗರ್ವಿಷ್ಠ, ಅಹಂಕಾರಭರಿತ, ತನ್ನದೇ ನಡೆಸುವ ಅತ್ತೆಯರ ಕಾಲ ಈಗ ಮುಗಿದುಹೋಗುತ್ತಿದೆ. ಈಗಿನ ಅತ್ತೆಯರು ಸೊಸೆಯಂದಿರು ಹೊರಗೆ ದುಡಿಯುತ್ತಿರುವುದರಿಂದ ಮನೆಯ ಜವಾಬ್ದಾರಿ ಜೊತೆಗೇ ಮೊಮ್ಮಕ್ಕಳ ಲಾಲನೆ ಪಾಲನೆಯ ಜವಾಬ್ದಾರಿಯನ್ನೂ ಅತ್ಯಂತ ಸಹನೆಯಿಂದ ನಿರ್ವಹಿಸುತ್ತಿರುತ್ತಾರೆ.ಸೊಸೆ ಹಾಗೂ ಅತ್ತೆ ಇಬ್ಬರಿಗೂ ತಮ್ಮ ಸಲುವಾಗಿಯೇ ಸ್ವಲ್ಪ ಸ್ಪೇಸ್ ಬೇಕಾಗುತ್ತದೆ. ಒಟ್ಟು ಕುಟುಂಬ ಉಳಿಸಲು ಸೊಸೆಯದೂ ಪಾಲಿರುತ್ತದೆ. ಈಗೇನು ಹಿಂದಿನ ಕಾಲದಂತೆ ಮನೆಯ ತುಂಬ ಮಕ್ಕಳಿರುವುದಿಲ್ಲ. ಅಸೂಯೆಪಡಲು ಓರಗಿತ್ತಿಯವರು ಇರುವುದೂ ವಿರಳ. ಒಂದೋ ಎರಡೋ ಮಕ್ಕಳಿರುವ ಚಿಕ್ಕ ಕುಟುಂಬ. ಹೀಗಾಗಿ ಅತ್ತೆಯ ಜೊತೆಗೆ ಸೊಸೆಯ ಪ್ರೀತಿಯ ಬಂಧ ಗಾಢವಾದದ್ದೇ ಆದರೆ ಇಬ್ಬರೂ ಒಂದೇ ನೆಲೆಯಲ್ಲಿ ಕೊನೆಯವರೆಗೂ ಇರುವುದು ಸಾಧ್ಯವಾಗುತ್ತದೆ ಎಂದು ಹೇಳಬಹುದು.
ರಜನಿ ದುಡಿಯುತ್ತಿರುವ ಮಹಿಳೆ. ಆಕೆ ತನ್ನ ಅತ್ತೆಯ ಕುರಿತಾಗಿ, ನಮ್ಮ ಅತ್ತೆ ಎನ್ನುವುದಕ್ಕಿಂತ ಅಮ್ಮ ಎನ್ನುವುದೇ ವಾಸಿಯೇನೋ, ಅಮ್ಮ ಕೂಡ ಪ್ರೈವೇಟ್ ಫರ್ಮಿನಲ್ಲಿ ಕೆಲಸ ನಿರ್ವಹಿಸುತ್ತಿರುವುದರಿಂದ ಆಕೆಗೆ ಹೊರಗಿನ ಕಷ್ಟಕೋಟಲೆಗಳ ಅರಿವಿದೆ. ಅದಕ್ಕಾಗಿ ಆಕೆ ತನ್ನ ಕಷ್ಟವನ್ನು ಬೇಗನೇ ಅರಿಯುತ್ತಾಳೆ. ನಾವಿಬ್ಬರೂ ಕೂಡಿಯೇ ಪಾರ್ಟಿಗೆ ಹೋಗುತ್ತೇವೆ. ಆಕೆ ಅತ್ಯಂತ ಸ್ನೇಹಮಯಿ ಹಾಗೂ ಹೃದಯವಂತಳು, ಹೀಗಾಗಿ ನನ್ನ ಗೆಳತಿಯರೆಲ್ಲ ನನ್ನ ಕುಂಡಲಿ ಗಂಡನಕ್ಕಿಂತ ಅತ್ತೆಯ ಜೊತೆಗೇ ಕೂಡಿದೆ ಎಂದು ಛೇಡಿಸುತ್ತಿರುತ್ತಾರೆ. ಅವರಿಗೆಲ್ಲ ಅಮ್ಮ ಪ್ರಿಯ ವ್ಯಕ್ತಿಯಾಗಿದ್ದಾಳೆ ಎಂದು ಹೇಳಬಹುದು,’ ಎನ್ನುತ್ತಾಳೆ ರಜನಿ.
ಇಬ್ಬರೂ ಕಲಿತವರಾಗಿರುವುದರಿಂದ ಪರಸ್ಪರ ಗೌರವಯುತವಾದ ನಡವಳಿಕೆ ಹೊಂದಿದವರಾಗಿರುತ್ತಾರೆ. ಯಾವಾಗಲೂ ಇನ್ನೊಬ್ಬರಿಗೆ ಉಪದೇಶ ಕೊಡುವುದಾಗಲೀ, ಯಾವುದೇ ವಿಧದ ಹೇರಿಕೆ ಅಲ್ಲಿರುವುದಿಲ್ಲ. ಯಾಕೆಂದರೆ ಈಗಿನ ಕಾಲದಲ್ಲಿ ಅತ್ತೆಯರು ಕಲಿತವರ ಮಧ್ಯೆ ಹೋಗಬೇಕಾಗುತ್ತದೆ. ಆಕೆಯ ಸ್ವಂತ ಮಕ್ಕಳೇ ತಾಯಿಯ ಅಜ್ಞಾನವನ್ನು ಎತ್ತಿ ತೋರಿಸಿ, ಆ ಚಿಕ್ಕ ಮಕ್ಕಳೇ ಅವಳನ್ನು ಗೈಡ್ ಮಾಡುತ್ತಾರೆ. ಹೀಗಾಗಿ ಅತ್ತೆಯರು ಕೆಟ್ಟದಾಗಿ ಬ್ರ್ಯಾಂಡ್ ಆಗಲು ಸಿದ್ಧರಿರುವುದಿಲ್ಲ.
ಜೊತೆಗೆ ಕೂಡಿ ಇರುವುದಷ್ಟೇ ಅಲ್ಲದೇ ಈಗೀಗ ಪರಸ್ಪರ ಒಬ್ಬರಿಗೊಬ್ಬರು ಒತ್ತಾಸೆಯಾಗಿ ನಿಲ್ಲುವುದು ಕೂಡ ಈಗಿನ ಅತ್ತೆ ಸೊಸೆಯರ ನಡುವೆ ಬೆಳೆದು ಬಂದಿದೆ. ಇಂಥ ಬದಲಾಗುತ್ತಿರುವ ಸ್ಥಿತಿ ಕೇವಲ ಮಧ್ಯಮ ಅಥವಾ ಮೇಲ್ಮಧ್ಯಮ ಕುಟುಂಬದಲ್ಲಿ ಮಾತ್ರ ಕಾಣುತ್ತಿಲ್ಲ. ನಮ್ಮ ಮನೆ ಕೆಲಸದವಳು ಏಳೆಂಟು ಮನೆಗಳಲ್ಲಿ ಕಸ ಮುಸುರೆ ಮಾಡುತ್ತಿರುವಳು. ಈಗೀಗ ಆಕೆ ತನ್ನ ಜೊತೆಗೆ ಸೊಸೆಯನ್ನು ಕರೆದುಕೊಂಡು ಬರುತ್ತಾಳೆ. ಅಲ್ಲದೇ ಹೇಳುತ್ತಾಳೆ. ‘ಅಲ್ರೀ ಅವ್ವಾರ, ನಾನು ಮನ್ಯಾಗ ಕೂತ್ಗೊಂಡು ಆಕೀನ್ನಷ್ಟ ದುಡ್ಯಾಕ ಕಳಿಸ್ಬಹುದ್ರಿ, ಆದ್ರ ಮನ್ಯಾಗ ಒಬ್ಬಾಕೀನ ಕೂತ ಏನ್ಮಾಡ್ಲೀ? ನಾವಿಬ್ರೂ ಕೂಡಿ ಅರ್ಧ ಅರ್ಧ ಹಂಚ್ಕೊಂಡು ಕೆಲ್ಸಾ ಮಾಡಿದ್ರ, ದೌಡನ ಮನೀಗೆ ಹೋಗಾಕ್ಕಾಕೈತಿ, ಇಬ್ಬರೂ ಮಧ್ಯಾಹ್ನ ಟಿವಿ ನೋಡ್ಕೋತ ಆರಾಮ ತೋಗೋಬಹುದು’ ಎಂದೆನ್ನುತ್ತಾಳೆ. ಅಂಥ ಒಂದು ವಿಶಾಲತೆ ಅವಳಲ್ಲಿ. ಇಂಥ ಒಳ್ಳೆಯ ಸುದ್ದಿಗಳು ಎಲ್ಲೆಡೆ ಹರಡುವುದಿಲ್ಲ. ಅಥವಾ ಪಸರಿಸಿಲ್ಲ. ಇನ್ನೂ ಕೆಲವು ಕಡೆ ವರದಕ್ಷಿಣೆ ಸಾವುಗಳು, ಮನೆಯಲ್ಲಿ ಹಿಂಸೆಗಳು ಸುದ್ದಿಪತ್ರಿಕೆಯಲ್ಲಿ ಪ್ರಕಟವಾಗುತ್ತಿರುತ್ತವೆ. ಕಲಿತವರೆಲ್ಲ ಕಿರುಕುಳ ಕೊಡುವುದಿಲ್ಲ ಅಂತೇನಿಲ್ಲ. ಆದರೆ ನ್ಯಾಯಾಲಯ ಕೂಡ ಇದಕ್ಕೆ ಕಾರಣ ಇರಬಹುದು. ಅದಕ್ಕಾಗಿ ತಮಗಾದ ತೊಂದರೆ, ಹಿಂಸೆ, ಕಿರುಕುಳಗಳು ತಮ್ಮ ಮಕ್ಕಳಿಗೆ ಸೊಸೆಯರಿಗೆ ಆಗದಂತೆ ನೋಡಿಕೊಳ್ಳಬೇಕಾಗಿರುವುದು ಈಗಿನ ಅತ್ತೆಮಾವನ, ತಾಯಿ ತಂದೆಗಳ ಕರ್ತವ್ಯವೂ ಹೌದು. ಜವಾಬ್ದಾರಿಯೂ ಹೌದು. ಅಂದರೆ ಸುಖೀ ಜೀವನಕ್ಕೆ ಸೋಪಾನವಾಗಬಲ್ಲದು.
ಸೊಸೆಯಂದಿರೂ ಹೊರಗೆ ದುಡಿಯುತ್ತಿರುವುದನ್ನು ಅವಳಿಗೂ ಮನೆಯಲ್ಲಿ ಒಬ್ಬರು ಹಿರಿಯರು ಮ್ಯಾನೇಜ್ ಮಾಡುವವರು ಇದ್ದರೆ ಒಳೀತೇನೋ ಎನ್ನಿಸುವುದು ಸಹಜ. ಏನೇ ದುಡ್ಡು ಕೊಟ್ಟು ಕೆಲಸದವರನ್ನಿಟ್ಟುಕೊಂಡರೂ ಪ್ರೀತಿ-ಅಂತಃಕರಣಪೂರ್ವಕವಾಗಿ ಮನೆಮಂದಿ ಮಕ್ಕಳನ್ನು ನೋಡುವಂತೆ ಕೆಲಸದವರು ನೋಡಿಕೊಳ್ಳುವುದು ಅಸಾಧ್ಯ ಎನ್ನುವುದು ಮನವರಿಕೆಯಾಗಿರಬಹುದು. ಮನೆಯಲ್ಲಿ ಹಿರಿಯರಿರುವುದರಿಂದ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಅರಳಲು ಸಹಾಯವಾಗಬಹುದು. ಮುಂದಿನ ಭವಿಷ್ಯ ಉಜ್ವಲವಾಗಲೂಬಹುದು. ನೈತಿಕ ಮೌಲ್ಯಗಳಿಂದ, ಭಯಭಕ್ತಿಯಿಂದ ಚಟಗಳ ದಾಸನಾಗದಿರಲೂಬಹುದು. ಇದನ್ನೆಲ್ಲ ಅರಿತುಕೊಂಡ ಇಂದಿನ ಜಾಣ, ಕಲಿತ ಸೊಸೆಯಂದಿರು ಸಾಕಷ್ಟು ಖರ್ಚುಮಾಡಿ ಕೆಲಸದವರನ್ನಿಟ್ಟುಕೊಂಡರೂ ಕೂಡ ಮನೆಯಲ್ಲಿ ಹಿರಿಯರಿರಲು ಬಯಸುತ್ತಾರೆ.

Leave a Reply