ಸತ್ಯದ ಹುಡುಕಾಟದ ಎರಡು ಮಾದರಿಗಳು

ಸತ್ಯದ ಹುಡುಕಾಟದ ಎರಡು ಮಾದರಿಗಳು
ಡಾ. ಬಿ.ವಿ. ವಸಂತಕುಮಾರ

ಸತ್ಯ ಎಂಬುದೊಂದು ಇದೆ. ಅಂತೆಯೆ ಸುಳ್ಳು ಎಂಬುದೊಂದು ಇದೆಯೇ? ಅಥವಾ ಇಲ್ಲದೇ ಇರುವುದನ್ನು ಇದೆ ಎಂದು ಭಾವಿಸುವ ಭ್ರಮಾತ್ಮಕ ಮನಃಸ್ಥಿತಿಯೇ ? ಸತ್ಯ ಮತ್ತು ಸುಳ್ಳು ಒಟ್ಟಿಗೆ ಇರುತ್ತವೆಯೇ? ಅವುಗಳನ್ನು ಅರಿಯುವುದು ಹೇಗೆ? ಒಂದರೊಡನೊಂದನ್ನು ಬೇರ್ಪಡಿಸಿ ನೋಡಬೇಕೆ? ಅಥವಾ ಒಂದರೊಡನೊಂದು ಬೇರೆಸಿ ನೋಡಬೇಕೆ? ಅದು ದ್ವೈತ ಮಾರ್ಗದಿಂದ ದಕ್ಕುತ್ತದೆಯೋ? ಅದ್ವೈತ ಮಾರ್ಗದಿಂದ ದಕ್ಕುತ್ತದೆಯೋ? ಈ ಚರ್ಚೆ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪುರಾತನ ಕಾಲದಿಂದಲೂ ನಡೆಯುತ್ತಾ ಬಂದಿದೆ. ಇದು ಲೌಕಿಕದ ಬದುಕಿನ ಹಿತಕ್ಕೊ ಅಥವಾ ಆಧ್ಯಾತ್ಮಿಕ ಅಥವಾ ಅಲೌಕಿಕ ಬದುಕಿನ ಹಿತಕ್ಕೊ ಎಂಬ ಎರಡು ಪ್ರಶ್ನೆಗಳು ತಳಕು ಹಾಕಿಕೊಳ್ಳುತ್ತವೆ. ಅಂತೆಯೇ ಲೌಕಿಕ-ಅಲೌಕಿಕ ಜೀವನಗಳು ಎರಡು ಬೇರೆ ಬೇರೆಯೇ? ಅಥವಾ ಒಂದೇ ಬದುಕಿನ ವಿಕಸಿತ ಸ್ಥಿತಿಯ ಎರಡು ಅವಸ್ತೆಗಳೇ? ಎಂಬ ಪ್ರಶ್ನೆಗಳೂ ಎದುರಾಗುತ್ತವೆ.
ಈ ಮೇಲಿನ ಹಲವು ಪ್ರಶ್ನೆಗಳಿಗೆ ವೇದ ಉಪನಿಷತ್ತುಗಳಿಂದ ಹಿಡಿದು ಜನಪದ ಗಾದೆ, ಜನಪದ ಮಹಾಕಾವ್ಯಗಳವರೆಗೂ ಉತ್ತರಗಳನ್ನು ಹುಡುಕಿವೆ. ಅದನ್ನು ‘ದರ್ಶನ’ ಎಂದು ಕರದಿದ್ದೇವೆ. “ಸತ್ಯಂ-ಶಿವಂ-ಸುಂದರಂ” ಹಾಗೂ ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯ” ಎಂಬ ಮಾತುಗಳು ಮಂತ್ರಗಳಾಗಿ ನಮ್ಮ ಅರಿವಿನ ಲೋಕವನ್ನು ವಿಸ್ತರಿಸಿವೆ. ಈ ಭಾರತೀಯ ಸಂಸ್ಕೃತಿಯ ಸಮಗ್ರತೆಯನ್ನು ಅರಿತು ಅನುಭವಿಸಿರುವ ಶ್ರೀ ರಾಮಕೃಷ್ಣ ಪರಮಹಂಸರು ಹಾಗೂ ಸ್ವಾಮಿ ವಿವೇಕಾನಂದರು ಆಧುನಿಕ ವಿಶ್ವಕ್ಕೆ ಈ ಸನಾತನ ದರ್ಶನವನ್ನು ಕರತಲಾಮಲಕ ದ್ರಾಕ್ಷಕಲ್ಪವನ್ನಾಗಿಸಿ ನೀಡಿದ್ದಾರೆ.
ಸ್ವಾಮಿ ವಿವೇಕಾನಂದರು ಪಾಶ್ಚಾತ್ಯ ಹಾಗೂ ಪ್ರಾಚ್ಯ ಸಂಸ್ಕೃತಿಗಳಲ್ಲಿ ಕಂಡುಬರುವ ಸತ್ಯದ ಹುಡುಕಾಟದ ಎರಡು ಮಾದರಿಗಳನ್ನು ಚರ್ಚಿಸಿದ್ದಾರೆ. ಅವರ ಪ್ರಕಾರ ಪಾಶ್ಚಾತ್ಯರು “ಬ್ರಹ್ಮಾಂಡ”ವನ್ನು ಹುಡುಕುತ್ತಾ ಸಾಗಿದರು. ಅವರ ಅರಿವಿನ ಮೂಲ ಗ್ರೀಕ್ ದೇಶದಲ್ಲಿದೆ. ಪ್ರಾಚ್ಯ ಅಥವಾ ಪೌರಾತ್ಯ ಸಂಸ್ಕೃತಿಯು “ಪಿಂಡಾಂಡ”ವನ್ನು ಹುಡುಕುತ್ತಾ ಸಾಗಿತು. ಪೌರಾತ್ಯರ ಅರಿವಿನ ಮೂಲ ಭಾರತ ದೇಶದಲ್ಲಿದೆ ಎಂದು ಗುರುತಿಸಿದ್ದಾರೆ. ಪಾಶ್ಚಾತ್ಯರು “ವಿಭಜಿಸುವ” ಮಾದರಿಯ ಮಾರ್ಗದಲ್ಲಿದ್ದಾರೆ. ಪೌರಾತ್ಯರು “ಕೂಡಿಸುವ” ಮಾದರಿಯ ಮಾರ್ಗದಲ್ಲಿದ್ದಾರೆ. ವಿಭಜಿಸಿ, ವಿಂಗಡಿಸಿ ನೋಡುವ ಮಾರ್ಗದಲ್ಲಿ ಒಂದನ್ನು ಸರಿ ಎಂದೂ ಮತ್ತೊಂದನ್ನು ತಪ್ಪು ಎಂದು ಪರಿಗಣಿಸಿ ಹೋರಾಡುವ ಕಿಚ್ಚಿದೆ. ಹಾಗಾಗಿ ಅಲ್ಲಿನ ಸೆಮಿಬಿಕ್ ಮತಗಳಾದ ಇಸ್ಲಾಂ ಮತ್ತು ಕ್ರಿಶ್ಚಿಯನ್‍ಗಳು ತಮ್ಮ ದೇವರು – ಧರ್ಮಗ್ರಂಥ – ಪೂಜಾ ಪದ್ಧತಿಯನ್ನು ಒಪ್ಪದವರನ್ನು ತಮ್ಮವರೆಂದು ಒಪ್ಪಿಕೊಳ್ಳುವುದಿಲ್ಲ ತಮ್ಮ ವೈರಿಗಳೆಂದು ಪರಿಗಣಿಸುತ್ತಾರೆ. ಅವರು “ಸತ್ಯದ ವೈರಿಗಳೆಂದು ಪ್ರತಿಪಾದಿಸುತ್ತಾರೆ ಅದರಿಂದಾಗಿ ಪ್ರಪಂಚದ ಬಹುದೊಡ್ಡ ನೆಲ ನೆತ್ತರಿನಿಂದ ತೊಯ್ದು ಹೋಗಿರುವ ಇತಿಹಾಸವನ್ನು ಸ್ವಾಮಿ ವಿವೇಕಾನಂದರು ವಿವರಿಸಿದ್ದಾರೆ”. ಮನುಷ್ಯನನ್ನು ‘ಪಾಪಿ’ ಎಂದು ಕರೆಯುವುದೇ “ಮಹಾಪಾಪ” ಎಂದಿದ್ದಾರೆ. ಬದಲಿಗೆ ಭಾರತವು ಮನುಷ್ಯನನ್ನು “ಅಮೃತಪುತ್ರ” “ಅಮೃತಪುತ್ರಿ” ಎಂದು ಸಾರಿರುವುದನ್ನು ವಿಶ್ವದ ಮುಂದೆ ಮಂಡಿಸಿದ್ದಾರೆ. ಇದು ಸತ್ಯದ ಹುಡುಕಾಟದ ಪರಿಣಾಮದ ಎರಡು ಅರಿವಿನ ಆಂದೋಲನಗಳು.
“ಸತ್ಯ” ಎಂಬುದು ಯಾವ ಮಾದರಿಗೆ ದಕ್ಕುತ್ತದೆ? ಹಾಗೂ ಯಾವ ಮಾದರಿಯ ಮಾರ್ಗವು ಮನುಷ್ಯನ ಮನಸ್ಸು-ಬದುಕಿನ ಮೇಲೆ ವಿಶ್ವದ ಮನಸ್ಸು- ಬದುಕಿನ ಮೇಲೆ ಎಂಥ ಪರಿಣಾಮವನ್ನು ಬಿರುತ್ತದೆ? ಎಂಬುದರ ಆಧಾರದ ಮೇಲೆ ‘ಸತ್ಯ’ ಎಷ್ಟು ಮುಖ್ಯವೋ ಅದನ್ನು ಹುಡುಕುವ ಪಡೆಯುವ ಮಾದರಿಯ ಮಾರ್ಗವು ಅಷ್ಟೆ ಮುಖ್ಯ ಎಂಬುದು ಮನದಟ್ಟಾಗುತ್ತದೆ. ‘ವಿಘಟಣೆ’ಯ ಮಾರ್ಗ ದುಃಖಕ್ಕೆ ಕಾರಣವಾದರೆ ಸಂಘಟನೆಯ ಮಾರ್ಗವು ಸಂತೋಷಕ್ಕೆ ಕಾರಣವಾಗುತ್ತದೆ. “ಕೂಡಿ ಬಾಳಿದರೆ ಸ್ವರ್ಗಸುಖ” “ಮನಸ್ಸು ಮನಸ್ಸು ಒಂದಾಗಿದ್ದರೆ ಹುಣಸೆ ಎಲೆ ಮೇಲೆ ಸಂಸಾರ ಮಾಡಬಹುದು” ಎಂಬ ಜನಪದರ ಮಾತುಗಳು ಭಾರತೀಯ ಸಂಸ್ಕೃತಿಯ “ಸತ್ಯದರ್ಶನ”ದ ಪ್ರತೀಕಗಳಾಗಿವೆ. ಈ ಮಾತುಗಳು ಗಂಡ ಹೆಂಡತಿಯರಿಗೆ ಅನ್ವಯಿಸಿದರೆ ಕುಟುಂಬಕ್ಕೂ, ಒಂದು ದೇಶದ ಪ್ರಜೆಗಳಿಗೆ ಅನ್ವಯಿಸಿದರೆ ಸಮಾಜಕ್ಕೂ, ಎರಡು ದೇಶಗಳ ಪ್ರಜೆಗಳು ಹಾಗೂ ನೇತಾರರು, ಸಂವಿಧಾನಗಳಿಗೆ ಅನ್ವಯಿಸಿದರೆ ಅಂತರಾಷ್ಟ್ರೀಯ ಸಂಬಂಧಗಳಿಗೂ ಅವುಗಳ ಅವಿನಾಭಾವ ಸಂಬಂಧ – ಶಾಂತಿ – ಸಮೃದ್ಧಿಗೆ ಕಾರಣವಾಗುತ್ತದೆ. ಆ ಹಿನ್ನಲೆಯಲ್ಲಿ ವಿಶ್ವಸಂಸ್ಥೆಗೆ ಭಾರತ ನೀಡಿರುವಂಥ ‘ಅಲೀಪ್ತ ನೀತಿ’ ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಮಾಡಿರುವ ಭಾಷಣದ ಸಾರವು “ಸತ್ಯದರ್ಶನ”ದ ಭಾರತೀಯ ಮಾದರಿಯ ಮಹಾ ಮಾರ್ಗಗಳಾಗಿವೆ.
ಸ್ವಾಮಿ ವಿವೇಕಾನಂದರು ಪಾಶ್ಚಾತ್ಯರ ವಿಜ್ಞಾನ ಪೌರಾತ್ಯರ ಆಧ್ಯಾತ್ಮ ಎರಡು ಐಕ್ಯಗೊಂಡು “ಸತ್ಯ” ದರ್ಶನ ಪಡೆಯಬೇಕಾಗಿದೆ ಲೌಕಿಕ ಅಲೌಕಿಕ ಎರಡು ಒಂದೊಂದೊರಳಗೊಂದು “ಮಿಲನಗೊಳ್ಳುವ” ಅಲ್ಲ ಒಳಗಿನಿಂದ ಹೊರಗೆ “ಹೊರಹೊಮ್ಮುವ” “ಅಂತರಂಗಶುದ್ಧಿ” “ಅಂತರಂಗದ” ಅನಾವರಣ; ಅಂತರಂಗ-ಬಹಿರಂಗಗಳು ಬೇರೆ ಬೇರೆಯಲ್ಲದ ಅರಿವಿನ ಅನುಭಾವವೇ ಸತ್ಯ-ಸಚ್ಚಿದಾನಂದ! ಎಂಬುದನ್ನು ನಮ್ಮ ಮುಂದಿಟ್ಟಿದ್ದಾರೆ.
ಇಂದು ಜಗತ್ತು ಒಂದಾಗುತ್ತಿದೆ. ಆದರೆ ಮನುಷ್ಯನ ಮನಸ್ಸು ತುಂಡಾಗುತ್ತಿದೆ. ಮನೆಗಳು ತುಂಡಾಗುತ್ತಿವೆ. ದೇಶಗಳು ತುಂಡಾಗುತ್ತಿವೆ. ಜಗತ್ತು ಭಯೋತ್ಪಾದನೆಯ ಬೇಗುದಿಯಲ್ಲಿ ಬೇಯ್ಯುತ್ತಿದೆ. “ಸತ್ಯ” ನರಳುತ್ತಿದೆ. ನದಿಗಳು ಬತ್ತುತ್ತಿವೆ. ಅರಣ್ಯಗಳು ಕಣ್ಮರೆಯಾಗುತ್ತಿವೆ. ಜೀವರಾಶಿಗಳು ಮರಣಶಯ್ಯೆಯ ಮೇಲೆ ಮಲಗುತ್ತಿವೆ. “ಗ್ಲೋಬ್ ವಾರ್ಮಿಂಗ್” ಅಂದರೆ ನಮ್ಮನ್ನೆಲ್ಲ ಹೆತ್ತ ಹೊತ್ತ ಭೂಮಿತಾಯಿ ‘ಬೆಂಕಿ’ಗೆ ಆಹುತಿ ಆಗುತ್ತಿದ್ದಾಳೆ. ಹಿಮಾಲಯ ಕರಗುತ್ತಿದೆ. ಸಮುದ್ರಗಳು ಎಲ್ಲೆ ಮೀರುತ್ತಿವೆ. “ಪ್ರೀತಿ”ಯೇ ಸುಳ್ಳು ದ್ವೇಷವೇ ಸತ್ಯ ಎಂಬ ಅರಿವು ಬಲಗೊಳ್ಳುತ್ತಿದೆ. ನಂಬಿಕೆಯೇ ಸುಳ್ಳು ಅಪನಂಬಿಕೆಯೇ ಸತ್ಯ ಎಂಬುದನ್ನು ನಂಬುತ್ತಿದ್ದೇವೆ. ಬದುಕು ಅಹಿತವೆನಿಸಿ ಸಾವು ಹಿತವೆನಿಸುತ್ತಿದೆ. ಎಲ್ಲ ಭೋಗದ ನಡುವೆಯು ಜಗತ್ತು ಆತ್ಮಹತ್ಯೆಯ ಕಡೆಗೆ ಮುಖಮಾಡಿದೆ. ಆತ್ಮಹತ್ಯೆಯ ಹೊಸ್ತಿಲಲ್ಲಿ ನಿಂತವರು ಮತ್ತೆ ಯೋಗದ “ಅಮೃತಪುತ್ರತ್ವ”ದ ಕಡೆಗೆ ಮುಖ ಮಾಡಿದ್ದಾರೆ. “ಸತಿ-ಪತಿಗಳೊಂದಾದ ಭಕ್ತಿ ಹಿತವೊಪ್ಪುದು ಶಿವಂಗೆ” ಎಂಬ ಸತ್ಯ ರೋಧನೆಯ ಮಾದರಿಯ ಮಾರ್ಗ ಕೈಬಿಸಿ ಕರೆಯುತ್ತಿದೆ. ನಾವು ಕಣ್ತೆರೆಯಬೇಕಾಗಿದೆ!

Leave a Reply