ಹಗಲಿನ ತಾಯಿ ಕತ್ತಲು!

ಹಗಲಿನ ತಾಯಿ ಕತ್ತಲು!
ಮೊನ್ನೆ ದೀಪಾವಳಿ ಹಬ್ಬ ತುಂಬಾ ವಿಜ್ರಂಭಣೆಯಿಂದ ಆಚರಿಸಿದೆವು. ಇದೇನು, ದೀಪಾವಳಿ ಮುಗಿದು ಒಂದು ಮಾಸವೇ ಕಳೆಯಿತು. ಈಗ ದೀಪಾವಳಿಯ ಬಗ್ಗೆ, ಏನಿದು? ಎಂದು ಹೇಳ್ತಿರಬಹುದು ಓದುಗರು. ಹೌದು, ದೀಪಾವಳಿ ಮತ್ತೆ ಮತ್ತೆ ಪ್ರತಿವರ್ಷದಂತೆ ಬಂದೇ ಬರುತ್ತೆ. ಈ ಬಾರಿ ದೀಪಾವಳಿ ನನಗೆ ಒಂದು ವಿಶೇಷ. ಯಾಕಂತೀರ ಆ ದಿನ ಸಂಜೆ ಸಮಯದಲ್ಲಿ ಸ್ವಲ್ಪ ಇರುಳು ಬಂದಮೇಲೆ ಎಲ್ಲರೂ ಮನೆಯ ಮುಂದೆಲ್ಲಾ ದೀಪ ಹಚ್ಚಿಟ್ಟು ಅಲಂಕಾರ ಮಾಡುತ್ತಾರೆ. ಎಲ್ಲರ ಮನೆಯ ಅಂಗಳ, ಗೋಡೆ, ಕಿಟಕಿ ಎಲ್ಲೆಡೆ ದೀಪ ಮಿಣಿಮಿಣಿ ಮಿಂಚುತ್ತಾ ಕಂಗೊಳಿಸುತ್ತಿದ್ದವು. ನನಗೆ ತುಂಬಾ ಸಂತಸದ ಹಬ್ಬ ಇದು. ಏಕೆಂದ್ರೆ ಕತ್ತಲಲ್ಲಿ ಬೆಳಕು ತರುತ್ತದಲ್ಲ ಅದಕ್ಕೆ. ಹಾಗೇ ಆಲೋಚನೆಗೆ ಜಾರಿದಾಗ ಅತ್ಯಂತ ಗಂಭೀರ ವಿಚಾರ ಮಂಥನಕ್ಕೆ ಮೆದುಳನ್ನು ಹರಿಯಬಿಟ್ಟೆ.
ವಿಷಯ ವಿಶಾಲವಾಗಿ ಆಲೋಚನೆಗೆ ಬಿದ್ದಾಗ, ಕತ್ತಲಲ್ಲಿ ಹಚ್ಚಿದ ದೀಪಕ್ಕೆ ಬರುವಷ್ಟು ಸೌಂದರ್ಯ, ಶೋಭೆ ಬೆಳಕಲ್ಲಿ ಬರುವುದಿಲ್ಲವಲ್ಲ. ಬೆಳಗಿನ ಮುಂಜಾನೆಯೂ ಎಲ್ಲರೂ ಪಣತಿ ಹಚ್ಚಿಟ್ಟಿದ್ದರು. ಆಗ ಅಷ್ಟು ಪ್ರಖರತೆ, ಆಕರ್ಷಣೆ ಇರಲಿಲ್ಲ. ಇರುಳಲ್ಲಿ ಇಷ್ಟೊಂದು ಸೌಂದರ್ಯ ಸುಂದರತೆ ಬಂದಿದೆ. ಹಾಗಾದರೆ ಕತ್ತಲೆಯೇ ಅದಕ್ಕೆ ಕಾರಣ ಎನಿಸಿತು! ಇದೇನು ಹುಚ್ಚು ವಿಚಾರ ಎನ್ನಬೇಡಿ ಇದು ನನ್ನ ಆ ಕ್ಷಣದ ಆಲೋಚನೆ ಮುಂದೆ ಓದುತ್ತಾ ನೀವೂ ಈ ವಿಚಾರವಾಗಿ ಚಿಂತನೆಗೆ ಒಳಪಡಿಸಿಕೊಳ್ಳಿ.
ಸರಿ ಈಗ ನನ್ನ ಚಿಂತನೆ ಹಲವಾರು ಆಯಾಮಗಳಲ್ಲಿ ವಿಹರಿಸಲು ಪ್ರಾರಂಭಿಸಿತು. ಬೆಳಕು, ಜ್ಯೋತಿ, ಹಗಲು ಜ್ಞಾನದ ಸಂಕೇತ ಎಂದೇ ಕೇಳಿರುವ ನಮಗೆ ಕತ್ತಲಿನಲ್ಲಿಯ ಕಲಿಕೆ, ತ್ಯಾಗ, ಧೈರ್ಯ ಅರಿವಿಗೆ ಬಂದಿರಲಿಕ್ಕೂ ಇಲ್ಲ. ಹಾಗೇ ಮನಸ್ಸನ್ನು ಕಲ್ಪನಾಲೋಕದಲ್ಲಿ ವಿಹರಿಸಲು ಬಿಟ್ಟೆ, ಭೂಮಂಡಲದಲ್ಲಿ ಕೇವಲ ಬೆಳಕೇ ಆವರಿಸಿದ್ದರೆ ಹೇಗಿರುತ್ತಿತ್ತು? ಹಗಲಿಡೀ ದುಡಿಯುವುದೆ? ಮಲಗುವುದು ಯಾವಾಗ? ಜಗತ್ತು ಈಗಿರುವುದಕ್ಕಿಂತ ತೀರಾ ಭಿನ್ನವಾಗಿ ಇರಬಹುದಿತ್ತಾ? ದುಡಿಮೆಯೆ ದುಡ್ಡಿನ ತಾಯಿ, ‘ಸರ್ವಂ ಕಾಂಚಾಣಮಯಂ’ ಎಂದು ಗಳಿಕೆಯ ಬೆನ್ನಹತ್ತಿ ಬಿಟ್ಟಿರುತ್ತಿದ್ದನೋ ಏನೋ. ಹಗಲಿನ ಗದ್ದಲ, ಮಾಲಿನ್ಯದಲ್ಲಿ ಬಳಲಿದ ಭೂಮಿತಾಯಿ ಇರುಳಿನಲ್ಲಿ ಶಾಂತಳಾಗಿ ನಿಟ್ಟುಸಿರುಬಿಟ್ಟು ಉಸಿರಾಡುತ್ತಾಳೆ. ಹಾಗೇ, ಕತ್ತಲೆಯೇ ಭೂಮಂಡಲವನ್ನು ಆವರಿಸಿದ್ದರೆ, ಅದೂ ಹೀಗೆಯೇ ತೀರಾ ಭಿನ್ನವಾಗಿ ಪ್ರಶ್ನೆಗಳು ಏಳುತ್ತಿದ್ದವು. ನನಗನಿಸಿದ್ದು ಇಷ್ಟೆ ಕತ್ತಲು ಬೆಳಕಿಗೆ ಸಮಾನ ಪ್ರಾತಿನಿಧ್ಯ, ಪ್ರಾಧಾನ್ಯತೆ ನೀಡುವುದು.
ಕತ್ತಲು ತ್ಯಾಗಮಯಿ ಎಂಬ ಶಬ್ದ ಬಳಸಿದೆ. ಅದು ಹೇಗೆ? ಎಂದು ಯೋಚನೆಗಳು ಬರದೇ ಇರಲಾರದು. ಒಮ್ಮೆ ಬೆಳಗಿನ ಸೂರ್ಯೋದಯವನ್ನು ಕಣ್ಮುಂದೆ ನೆನಪಿಸಿಕೊಳ್ಳಿ. ಆಹಾ! ಎಂಥ ಅದ್ಭುತ, ರಮಣೀಯ ದೃಶ್ಯ. ಆ ನೇಸರನ ರಂಗುರಂಗಿನ ಓಕುಳಿಯಾಟ, ಬಂಗಾರದ ಕಳಸವಿಟ್ಟಂಥ ಆತನ ವೈಭವ, ಆ ಸಮಯದ ಮೇಘಗಳ ಚದುರಂಗದಾಟ, ನಿರ್ಮಲ ಪ್ರಶಾಂತ ವಾತಾವರಣ, ಆ ನಿಶ್ಯಬ್ದ ಮೌನದಲ್ಲೆ ನೇಸರನು ಆಗಮಿಸಿ ತನ್ನ ಬಾಲ್ಯಲೀಲೆಯನ್ನು ಪ್ರದರ್ಶಿಸುತ್ತಿರುವಾಗಲೇ ಸ್ವಾಗತ ಎಂಬಂತೆ ಚಿಲಿಪಿಲಿ ಕಲರವದಿಂದ ಸುತ್ತಲಿನ ಪರಿಸರವನ್ನು ಕೋಮಲ ಸ್ವರದಿಂದ ಸುಪ್ರಭಾತ ಹೇಳುವ ಹಕ್ಕಿಪಿಕ್ಕಿಗಳು. ಅದ್ಭುತ! ಇರುಳು ತಾನು ತನ್ನ ಸ್ಥಳದಿಂದ ಸರಿಯುತ್ತಾ ಹೋದಂತೆ ಈ ಅದ್ಭುತ ರಮಣೀಯ, ಮನಮೋಹಕ ದೃಶ್ಯ ನೋಡಲು ಸಿಗುತ್ತದೆ. ಹಗಲೆಲ್ಲಾ ಆಯಾಸದಿಂದ ಬಳಲಿದವರಿಗೆ ಕತ್ತಲು ದೇಹಕ್ಕೆ ವಿಶ್ರಾಂತಿ ನೀಡಿ ಮತ್ತೆ ಚೇತನ ಶಕ್ತಿ ತುಂಬುತ್ತದೆ.
ಕತ್ತಲು ಅಜ್ಞಾನ, ಅಂಧಕಾರ, ಕೆಟ್ಟ ವಿಚಾರ ಎಂದು ಹೇಳುವ ನಾವು ಇದರಿಂದ ಪಡೆದ ಅನುಭವ, ಕತ್ತಲೆಯ ದಿನಗಳಿಂದ ಕಲಿತ ಮೌಲ್ಯಗಳನ್ನು ಸ್ಮರಿಸಬೇಕು. ಕತ್ತಲು ತನ್ನ ಎದೆಯನ್ನು ವಿಶಾಲವಾಗಿ ಬಿಚ್ಚಿಟ್ಟಿದ್ದರಿಂದಲೇ ಗಗನದಲ್ಲಿ ನಕ್ಷತ್ರಗಳು ಮಿಂಚುತ್ತದಲ್ಲಾ! ಆ ಅದ್ಭುತ ನೋಟ ನೋಡಿ ಉಲ್ಲಾಸಪಡದವರಾರಿದ್ದಾರೆ? ಬೆಳಕಿನ ಪ್ರಖರತೆ, ಸೌಂದರ್ಯದ ಅರಿವು ಕತ್ತಲಲ್ಲಿ ಕಂಡಾಗ ಹೆಚ್ಚು ಭಾವೋದ್ವೇಗಕ್ಕೆ ಕಾರಣವಾಗುತ್ತದಲ್ಲಾ! ಕತ್ತಲಲ್ಲಿ ಸ್ವರ್ಗವನ್ನೆ ಧರೆಗಿಳಿಸುವ ಮಿಂಚು ಹುಳುಗಳು ಹಗಲಿನಲ್ಲಿ ಕಾಣಸಿಗುವುದೇ ಇಲ್ಲಾ. ಹಾಗೇ, ಎಷ್ಟೋ ಮಹಾನ್ ಕವಿಗಳು ಚಂದ್ರನನ್ನು ಕುರಿತು ಕಾವ್ಯಗಳಲ್ಲಿ ವರ್ಣಿಸಿದ್ದಾರೆ. ಚಂದ್ರನಕಾಂತಿ, ಪೂರ್ಣಚಂದ್ರನ ತೇಜಸ್ಸು ಕಾಣದವರಿಲ್ಲ. ತಾಯಿ ಮಗುವನ್ನು ಎತ್ತಿ ಚಂದಮಾಮಾ ಎಂದು ತೋರಿಸುತ್ತಾ ಮಗುವಿಗೆ ಉಣಬಡಿಸುತ್ತಾಳೆ. ಕತ್ತಲತಾಯಿ ಆವರಿಸಿ ಎತ್ತಿ ಹಿಡಿದಾಗ ಮಾತ್ರ ಚಂದಪ್ಪ ಕಾಣುತ್ತಾನೆ. ಹಗಲಲ್ಲಿ ಆತ ಕಾಣುವುದೇ ಇಲ್ಲ. ಈ ಆಕರ್ಷಕ ದೃಶ್ಯಾವಳಿಗಳಿಗೆ ಕತ್ತಲು ಬೇಕು. ಆದರೆ, ಬದುಕಿನ ದುರಂತಗಳಿಗೆ ಕತ್ತಲೆಂಬ ಶೀರ್ಷಿಕೆ ಏಕೆ? ಈ ವಿಷಯವಾಗಿ ಕತ್ತಲೂ ಬೇಸರಪಟ್ಟುಕೊಂಡಿರಲೂ ಸಾಕು.
ಹೀಗೆ ಪದವಿ ಶಿಕ್ಷಣ ಕಲಿಯುವಾಗ ನಾವು ಕೊಡಗು ಪ್ರವಾಸ ಹೋಗಿದ್ದು ನನಗೆ ಚೆನ್ನಾಗಿ ನೆನಪಿದೆ. ಕತ್ತಲು ನಿಧಾನವಾಗಿ ಸರಿಯುತ್ತಾ ಸರಿಯುತ್ತಾ ಹೋದಂತೆ ಸೂರ್ಯನ ಎಳೆಯ ಕಿರಣಗಳು ಪೃಥ್ವಿಯನ್ನು ಸ್ಪರ್ಷಿಸುವ ತವಕದಲ್ಲಿ ನಿಧಾನವಾಗಿ ಇಳಿಯುತ್ತಿತ್ತು. ಆ ಸಂದರ್ಭ ನನಗೆ ಒಬ್ಬ ತಾಯಿ ಮಗುವಿಗೆ ಜನ್ಮನೀಡುತ್ತಿರುವಂತೆಯೂ, ಭಾಸ್ಕರ ಮತ್ತೆ ಜನ್ಮವೆತ್ತಂತೆಯೂ ಭಾಸವಾಯಿತು. ಹಾಗಾದರೆ ಭಾಸ್ಕರನ ತಾಯಿ ಇರುಳು ಮಾತೆಯೇ? ಒಟ್ಟಾರೆ ಎರಡೂ ಇರುವುದೂ ಭಾಸ್ಕರನಲ್ಲಿಯೇ ಈ ಮನುಜ ಅವುಗಳಿಗೆ ವಿಶೇಷತೆಗಳನ್ನು ನೀಡಿದ್ದಾನೆ. ಹಾಂ! ಅದೇನೇ ಇರಲಿ ಈ ದೀಪಾವಳಿ ಇಷ್ಟೆಲ್ಲಾ ಚಿಂತನೆಗೆ ಹಾದಿಯಾಯಿತು. ಅದೂ, ಕತ್ತಲಲ್ಲಿಯ ಪ್ರಣತಿ ನೋಡಿದಾಗ. ಕತ್ತಲು ನನ್ನಲ್ಲಿ ಜ್ಞಾನಕ್ಕೆ ನನ್ನ ಈ ಬರವಣಿಗೆಯ ಜನುಮಕ್ಕೆ ನಾಂದಿಯಾಯಿತು.

Leave a Reply