ಎಚ್ಚರದಲ್ಲಿ ನಡಿ ಮನವೇ

ಪುರಂದರದಾಸರ ಸಾಹಿತ್ಯ “ಎಚ್ಚರದಲ್ಲಿ ನಡಿ ಮನವೇ……… ಅವಲೋಕನದ ಪದಪುಷ್ಪ ಮಾಲೆ

ಪುರಂದರದಾಸರು ನಾರದರ ಅವತಾರ. ವ್ಯಾಸರಾಯರ ಶಿಷ್ಯರಾಗಿದ್ದರು. ಪೂರ್ವಾಶ್ರಮದ ಹೆಸರು ‘ಶ್ರೀನಿವಾಸ ನಾಯಕ’ ವರದಪ್ಪನ ಮಗನಾಗಿ ಹುಟ್ಟಿ ತಂದೆಯಂತೆ ಇವರೂ ‘ನವಕೋಟಿ ನಾರಾಯಣ’ ರೆನಿಸಿ ಶ್ರೀಮಂತರಾಗಿದ್ದರು.ಇವರ ಹೆಂಡತಿ ‘ಸರಸ್ವತಿ ಬಾಯಿಯು’ ದೈವ ಭಕ್ತಿಯ ಪ್ರಭಾವದಿಂದ ಜ್ಞಾನೋದಯ ಪಡೆದು ಸಕಲ ಸಂಪತ್ತನ್ನು ದಾನಮಾಡಿ ವ್ಯಾಸರಾಯರಿಂದ ದಾಸದೀಕ್ಷೆಯನ್ನು ಪಡೆದು ಹರಿಭಕ್ತರಾದರು.”ಪುರಂದರ ವಿಠಲ ಎಂಬ ಅಂಕಿತದಲ್ಲಿ ಕೃತಿಗಳನ್ನು ರಚಿಸಿದರು. ಇವರ ಕೈಂಕರ್ಯ ಮತ್ತು ಸಾಧನೆಯನ್ನು ಮೆಚ್ಚಿಕೊಂಡ ಗುರು ವ್ಯಾಸರಾಯರೇ “ದಾಸರೆಂದರೆ ಪುರಂದರದಾಸರಯ್ಯ” ಎಂದು ಹೊಗಳಿದ್ದಾರೆ. ಅವರು ಬರೆದ ಕೀರ್ತನೆಗಳನ್ನು ‘ಪುರಂದರೋಪನಿಷತ್ತು’ ಎಂದು ಕರೆದರು.ನಾಲ್ಕು ಲಕ್ಷದ ಎಪ್ಪತ್ತೈದು ಸಾವಿರ ಕೀರ್ತನೆಗಳನ್ನು ರಚಿಸಿದ್ದಾರೆ.ಈಗ ಸಿಕ್ಕಿರುವ ಕೀರ್ತನೆಗಳ ಸಂಖ್ಯೆ ಒಂದು ಸಾವಿರಕ್ಕೂ ಅಧಿಕವೆಂದು ಹೇಳಬಹುದಾಗಿದೆ.
‘ದಾಸರೆಂದರೆ ಪುರಂದರ ದಾಸರಯ್ಯ’ ಎಂದು ತಮ್ಮ ಗುರುವಿನಿಂದಲೇ ಹೊಗಳಿಸಿಕೊಂಡ ಪುರಂದದಾಸರು ತಮ್ಮ ‘ಸರಳ ಶೈಲಿಯಿಂದ’ ಸಂಗೀತ ಮಾಧುರ್ಯದಿಂದ, ವಸ್ತುವಿನ ವೈವಿಧ್ಯತೆಯಿಂದ, ಜನಮನವನ್ನು ಸೊರೆಗೊಂಡ ದಾಸ ಶ್ರೇಷ್ಠರು. ಪುರಂದರದಾಸರ ರಚನೆಗಳಲ್ಲಿ ಸಂಗೀತದ ಶೈಲಿಯು ಇದೆ. ಸಾಹಿತ್ಯದಲ್ಲಿ ಸ್ವಾರಸ್ಯ ಮತ್ತು ಧರ್ಮಮತ್ತು ಸಾಮಾಜಿಕ ಸಂದೇಶವು, ಬೀರುವಂತಹದಾಗಿವೆ. ‘ಕರ್ನಾಟಕದ ಸಂಗೀತ ಪಿತಾಮಹ’ ಎಂದು ಕರೆಯುತ್ತಾರೆ.

ಸಾಹಿತ್ಯ ಅವಲೋಕನ

ಇಂದು ಅವರ ಒಂದು ಸಾಹಿತ್ಯದ ಬಗ್ಗೆ ಹೇಳುತ್ತಿರುವೆ. ಈ ಕೆಳಗೆ ಸಂಪೂರ್ಣ ಸಾಹಿತ್ಯವಿದೆ.
ಈ ಸಾಹಿತ್ಯವನ್ನು ಅವಲೋಕಿಸಿದಾಗ ಮನಸ್ಸಿನಲ್ಲಿ ಒಂದೇ ಚಿತ್ರಣ ಮೂಡಿತು, ಅದೇನೆಂದರೆ ಬಾಲಕತನದಲ್ಲಿರುವ ಮುಗ್ಧ ಪ್ರೀತಿ, ಭಾವನೆ, ಭಕ್ತಿ, ತನ್ಮಯತೆ ಬೆಳೆದ ಹಾಗೇ ಎಲ್ಲವೂ ಮಾಯವಾಗಿ
ಅರಿಷಡ್ ವ್ಯಾಮೋಹಗಳಿಗೆ ಬಲಿಯಾಗಿ ಇಲ್ಲಸಲ್ಲದ ವಿಷಯ ವಸ್ತುಗಳಿಗೆ ಒಳಗಾಗಿ ತೋಳಲಾಡುತ್ತೇವೆ.

ಲೋಕದ ನೀತಿಗೆ ಕಾನೂನು ಹೇಗೆ ಇದೆಯೋ ಹಾಗೇ ಭಗವಂತನ ಮನೆಯಲ್ಲಿಯೂ ಒಂದು ಕಾನೂನು ಇದೆ. ಜೀವನದಲ್ಲಿ ಒಳ್ಳೆಯ ನಿಸ್ಕಲ್ಮಷ ಕರ್ಮ, ಮತ್ತು ಭಾವನೆಯಿಂದ ಮಾಡುವ ಕರ್ಮಕ್ಕೆ ಇಹಪರ ಸುಖವಿದೆ. ಆದರೆ ದುರ್ದೈವವಶಾತ ತೋರಿಕೆಗೆ ಒಳ್ಳೆಯವರಂತೆ ನಟಿಸಿ ವಾವ್! ಹೊಗಳಿಸಿಕೊಂಡರು ನಮ್ಮ ಮರಣದ ನಂತರ ಅವನ ಮನೆಯಲ್ಲಿ ಯಾವರೀತಿಯಿಂದ ನಾವು ಅಲ್ಲಿ ಭೋಗಿಸಬೇಕಾಗುತ್ತದೆ ಎಂದು ಈ ಸಾಹಿತ್ಯದಲ್ಲಿ ಹೇಳಿದ್ದಾರೆ.

ಅಂದರೆ ಪ್ರತಿಯೊಬ್ಬ ವ್ಯಕ್ತಿಗೂ ಆರು ಜನ ಶತ್ರುಗಳು ಷಡ್ರಿಪುಗಳು ಇವೆ.ಆ ಶತ್ರುಗಳು ನಮ್ಮ ಹೊರಗಡೆ ಇಲ್ಲ. ನಮ್ಮೊಳಗೇ ಇವೆ. ಅವು ಯಾವುವು ಎಂದರೆ, ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ. ಇವೇ ಮನುಷ್ಯನಲ್ಲಿರುವ ಆರು ವೈರಿಗಳು : ಇದು ಮಾನವನ ಮನಸ್ಸಿನ ನಿಷ್ಕೃಷ್ಟವಾದ ಎಲ್ಲ ತೊಂದರೆಗಳಿಗೂ ಕಾರಣ ಈ ಶತ್ರುಗಳೇ.

ಮನ ಎಂಬ ಮರ್ಕಟ ಕುಣಿಯುತ್ತದೆ, ಜಿಗಿದಾಡುತ್ತದೆ, ಮಾಡುವ ಕರ್ಮ ಹಿತವೋ ಅಥವಾ ಅಹಿತವೋ ನೋಡದೆ ಮಾಡುತ್ತೇವೆ.
ಹಾಗೇ ಢಾ೦ಭಿಕತನದಿಂದ ಕೂಡಿರುತ್ತದೆ.

ಈ ಕೆಳಗೆ ಹೇಳಿರುವ ಸಾಹಿತ್ಯ ಸರಳ ರೀತಿಯಲ್ಲಿ ಎಲ್ಲರಿಗೂ ಅರ್ಥವಾಗುತ್ತದೆ. ಈ ಸಾಹಿತ್ಯದಲ್ಲಿ ಬರುವ ಎಲ್ಲ ಸನ್ನಿವೇಶಗಳು ಎಲ್ಲ ವಯೋಮಾನದ ಜನರು ಒಳಗಾಗಿರುತ್ತಾರೆ ಹಾಗೇ ಸಂಬಂಧ ಪಟ್ಟಿದೆ.
ಹೀಗಾಗಿ ಸಾಹಿತ್ಯ ಮತ್ತೇ ನಮಗೆಲ್ಲರಿಗೂ ಒಳ್ಳೆಯ ಸಾಧನಾ ಪಥದಲ್ಲಿ ನಡೆಯುತ್ತ ಸಹಕಾರವಾಗಿ ಸನ್ಮಾರ್ಗವಾಗಿ ಸಹಾಯವಾಗುತ್ತದೆ ಅಂತ ಇಂದು ಈ ಸಾಹಿತ್ಯ ಮತಿಗೆ ತಿಳಿದಷ್ಟು ಮಾತುಗಳನ್ನು ಪದಗಳಲ್ಲಿ ಬರಿದಿದ್ದೇನೆ.

ಈ ಸಾಹಿತ್ಯದಲ್ಲಿ “ಇಹ” ದಲ್ಲಿ ಏನೇ ಕೆಲಸ ಮಾಡಿದರು, ಏನೇ ಭುದ್ದಿ ಹೊಂದಿದ್ದರು, ಸರಿಯಾದ ಲೆಕ್ಕ ಭಗವಂತನಲ್ಲಿ ಇರುತ್ತದೆ. ಇದು ನಾವುಗಳು ಮನದಟ್ಟು ಮಾಡಿಕೊಳ್ಳಬೇಕು.
ಅಲ್ಲಿ ಅಂದರೆ ಪರದಲ್ಲಿಯು ಸುಖದುಃಖಗಳ ಭೋಗ ಅನುಭವಿಸುತ್ತೇವೆ.

ಸಾಹಿತ್ಯ

ಎಚ್ಚರದಲಿ ನಡೆ ಮನವೆ – ನಡೆಮನವೆ – ಮುದ್ದು
ಅಚ್ಯುತನ ದಾಸರ ಒಡಗೂಡಿ ಬರುವೆ /ಪ.

ಧರ್ಮವ ಮಾಡುವುದಿಲ್ಲಿ – ಇನ್ನು
ಬ್ರಹ್ಮನ ಸಭೆಯ ತೋರುವರು ಮುಂದಲ್ಲಿ
ಕರ್ಮಯೋಜನೆಗಳು ಇಲ್ಲಿ – ಬೆನ್ನ
ಚರ್ಮವ ಸುಲಿಸಿ ತಿನ್ನಿಸುವರು ಅಲ್ಲಿ /1

ಅನ್ನದಾನವ ಮಾಳ್ಪುದಿಲ್ಲಿ – ಮೃ
ಷ್ಟಾನ್ನವ ತಂದು ಮುಂದಿಡುವರು ಅಲ್ಲಿ
ಅನ್ಯಾಯ ನುಡಿಯುವುದಿಲ್ಲಿ – ಭಿನ್ನ
ಭಿನ್ನವ ಮಾಡಿ ತಿನ್ನಿಸುವರು ಅಲ್ಲಿ 2

ಮೋಸವ ಮಾಡುವದಿಲ್ಲಿ – ಸೀಸ
ಕಾಸಿ ಬಾಯೊಳಗೆ ಹೊಯ್ಯುವರಲ್ಲಿ
ದಾಸರ ಪೂಜಿಪುದಿಲ್ಲಿ – ಉ
ರ್ವೀಶಾಧಿಪತಿ ಬಂದನೆಂಬರು ಅಲ್ಲಿ 3

ವಂಚನೆ ಮಾಡುವದಿಲ್ಲಿ – ಕಾದ
ಹಂಚಿನ ಪುಡಿಯ ತಿನ್ನಿಸುವರು ಅಲ್ಲಿ
ಪಂಚಾಮೃತದ ಪೂಜೆ ಇಲ್ಲಿ ನಿನಗೆ
ಕಂಚು – ಕಾಳಾಂಜಿಯ ಪಿಡಿದಿಹರಲ್ಲಿ 4

ಚಾಡಿಯ ನುಕಿವುದು ಇಲ್ಲಿ ಅದ –
ನಾಡಿದ ನಾಲಗೆ ಸೀಳುವರಲ್ಲಿ
ಬೇಡಬಂದರೆ ಬಯ್ವುದಿಲ್ಲಿ ನಿನ್ನ –
ಓಡಾಡುವ ಕಾಲು ಕತ್ತರಿಪರಲ್ಲಿ 5

ಮದ್ದಿಕ್ಕಿ ಕೊಲ್ಲುವುದಿಲ್ಲಿ ಒದ್ದು –
ಹದ್ದು ಕಾಗೆಗಳಿಗೆ ಈಯುವರಲ್ಲಿ
ಕ್ಷುದ್ರ ಬುದ್ಧಿಯ ನಡೆಪುದಿಲ್ಲಿ ದೊಡ್ಡ –
ಗುದ್ದಲಿ ಬೆನ್ನೊಳು ಎಳೆಯುವರಲ್ಲಿ 6

ಕೊಟ್ಟಭಾಷೆಗೆ ತಪ್ಪುವುದಿಲ್ಲಿ ಕೈಯ –
ಕಟ್ಟಿ ಈಟಿಯಿಂದ ಇರಿಯುವರಲ್ಲಿ
ಕೊಟ್ಟ ಧರ್ಮವ ನಡೆಸುವುದಿಲ್ಲಿ ಬಲು
ಶ್ರೇಷ್ಠ ನೀನೆಂದು ಕೊಂಡಾಡುವರಲ್ಲಿ 7

ಆಲಯದಾನವು ಇಲ್ಲಿ ವಿ –
ಶಾಲ ವೈಕುಂಠನ ಮಂದಿರವಲ್ಲಿ
ಆಲಯ ಮುರಿಯುವುದಿಲ್ಲಿ ನಿನ್ನ –
ಶೂಲದ ಮೇಲೇರಿಸಿ ಕೊಲುವರಲ್ಲಿ 8

ತಂದೆ ಮಾತನು ಮೀರುವುದಿಲ್ಲಿ ಹುಲ್ಲು –
ದೊಂದೆಯ ಕಟ್ಟಿ ಸುಡಿಸುವರಲ್ಲಿ
ತಂದೆ ತಾಯ್ಗಳ ಪೂಜೆ ಇಲ್ಲಿ ದೇ –
ವೇಂದ್ರನ ಸಭೆಯ ತೋರುವರು ಮುಂದಲ್ಲಿ 9

ಗಂಡನ ಬೈಯ್ಯುವುದಿಲ್ಲಿ ಬೆಂಕೆ
ಕೆಂಡವ ತಂದು ಬಾಯಲಿ ತುಂಬುವರಲ್ಲಿ
ಕೊಂಡೆಯ ನಡಿಸುವುದಿಲ್ಲಿ ಬೆಂಕೆ
ಕುಂಡವ ತಂದು ತಲೆಯಲಿಡುವರಲ್ಲಿ 10

ಹೊನ್ನು ಹೆಣ್ಣನು ಬಯಸುವುದಿಲ್ಲಿ ನಿನ್ನ
ಕಣ್ಣಿಗೆ ಸುಣ್ಣವ ತುಂಬುವರಲ್ಲಿ
ಕನ್ಯಾದಾನವ ಮಾಳ್ಪುದಿಲ್ಲಿ ನಮ್ಮ
ಚಿನ್ನ ಪುರಂದರ ವಿಠಲನೊಲಿವನು ಅಲ್ಲಿ 11

ಹರಿಯು ಭಕ್ತರನ್ನು ಕಾಯುವ ಬಗೆಯನ್ನು ಸರ್ಪದ ದೃಷ್ಟಾಂತದೊಂದಿಗೆ ತಿಳಿಸುವರು.

ಹರಿಕಥಾಮೃತ ಸಾರದ ಕರುಣಾ ಸಂಧಿಯಲ್ಲಿ ಹೇಳಿದ್ದಾರೆ.
“ಧನವ ಸಂರಕ್ಷಿಸುವ ಫಣಿ ತಾನುಣದೆ ಮತ್ತೊಬ್ಬರಿಗೆ ಕೊಡದನು ದಿನದಿ ನೋಡುತ ಸುಖಿಸುವಂದದಿ ಲಕುಮಿವಲ್ಲಭನು ॥ ಪ್ರಣತರನ್ನು ಕಾಯ್ದಿಹನು ನಿಷ್ಕಾಮನದಿ ನಿತ್ಯಾನಂದಮಯ”

ಭೂಮಿಯಲ್ಲಿನ ಧನಕನಕವನ್ನು ಶೇಷನಾಗನು ಅದರ ಹಕ್ಕುದಾರ ಬರುವರಿಗೂ ಹೇಗ್ ಕಾಯ್ದು ಅವರಿಗೆ ಕೊಡುವನೋ ಹಾಗೇ ಭಗವಂತ ನಾವು ಮಾಡಿದ ಕರ್ಮಗಳನ್ನು ಕಾಲಾನುಸಾರ ನಾವೇ ಭೋಗ ಮಾಡಲು ಕೊಡುವನು. ಮತ್ತು ಒಳ್ಳೆಯವರಿಗೆ ಜೊತೆಯಾಗಿರುವನು ಹೇಳಿರುವರು.

ಹೀಗಾಗಿ ಅರಿಷಡ್ವರ್ಗಕ್ಕೆ ಒಳಗಾಗದೆ ಸದ್ ಚಿಂತನೆ ಯಿಂದ ಹರಿಷಡ್ವರ್ಗವಾಗಿ ಮಾಡಿಕೊಂಡು ಇಹಪರದಲ್ಲಿ ಸುಖಅನುಭವಿಸಬೇಕು.

Leave a Reply