ಗುಲಾಬಿ ಹೂವಿನಂತಿರಬೇಕು‌ ನಮ್ಮ ಜೀವನ

ಗುಲಾಬಿ ಹೂವಿನಂತಿರಬೇಕು‌ ನಮ್ಮ ಜೀವನ

ಪ್ರಕೃತಿ ಮತ್ತು ಮನುಷ್ಯನಿಗೆ ಒಂದು ಸಂಬಂಧವಿದೆ. ಪ್ರಕೃತಿ ಬಿಟ್ಟು ಮನುಷ್ಯ ಬದಕಲು ಸಾಧ್ಯವಿಲ್ಲ. ಸೃಷ್ಟಿಯಲ್ಲಿ ಕಾಣುವ ಪ್ರತಿ ನೋಟದಲ್ಲಿ  ಸೌಂದರ್ಯ ತುಂಬಿ ತುಳುಕುತ್ತದೆ. ಪ್ರಕೃತಿಯು ಮನಸ್ಸಿಗೆ ಮುದ, ಉಲ್ಲಾಸ ನೀಡುತ್ತದೆ. ಪ್ರಕೃತಿಯಲ್ಲಿ ಬಿಡುವ ಹೂಗಳು ಬಹಳ ಇವೆ. ಆದರೆ ಹೂಗಳಲ್ಲಿ ಅತೀ ಶ್ರೇಷ್ಟವೆನಿಸಿದ ಹೂ ಅಂದರೆ, “ಗುಲಾಬಿ”.

ಗುಲಾಬಿ ಹೂ ಎಲ್ಲರಿಗೂ ಇಷ್ಟವಾದ ಹೂ. ಜಗದ ಎಲ್ಲ  ಕಾರ್ಯಗಳಿಗೂ ಇದು ಅವಶ್ಯ. ಈ ಗುಲಾಬಿ ಹೂ ನೋಡಿದಾಗ ಎಲ್ಲರ ಮನಸ್ಸೂರೆಗೊಳ್ಳುತ್ತದೆ. ಆ ಗುಲಾಬಿ  ಮುಳ್ಳಿನ ಕಂಟಿಯಲ್ಲಿಯೇ ಬೆಳೆಯುತ್ತದೆ. ಆದರೂ ಆ ಹೂವನ್ನು ಎಲ್ಲರೂ ಇಷ್ಟ‌ಪಡುತ್ತಾರೆ. ಹಾಗೇ ಮನೆಮನೆಗಳಲ್ಲೂ ಇದನ್ನು ಬೆಳೆಸುತ್ತಾರೆ , ಪ್ರೀತಿಸುತ್ತಾರೆ.

ಗುಲಾಬಿ ಮೊಗ್ಗಾಗಿ, ಹೂವಾಗಿ ಅರಳುವ ಹಾಗೇ ನಮ್ಮ ಜೀವನ ಅರಳುತ್ತದೆ. ಮಗುವಾಗಿ‌ ಹುಟ್ಟಿ ಬೆಳೆದು ಒಬ್ಬ ಸಾಮಾಜಿಕ ವ್ಯಕ್ತಿಯಾಗುತ್ತೇವೆ.  ” ಆಗ ನಮ್ಮ ಜೀವನದಲ್ಲಿ ಗುಲಾಬಿಯಂತೆ ಸದಾ ನಗುತಿರಬೇಕು; ಇದರ ಗುಣಧರ್ಮ ಕೆಲವೇ ಗಂಟೆಗಳಲ್ಲಿ ಬಾಡುತ್ತದೆ, ಆದರೆ ಎಲ್ಲರ ಮನ ಗೆದ್ದಿರುತ್ತದೆ ಹಾಗೇ ಸಂತೋಷ ತಂದಿರುತ್ತದೆ. ನಾವುಗಳು  ನಮ್ಮ‌ ಜೀವನದಲ್ಲಿ  ಪ್ರತಿಯೊಬ್ಬರ ಜೊತೆ ಒಳ್ಳೆಯ ಸಂಭಂಧ ಇಟ್ಟುಕೊಂಡು, ಪ್ರೀತಿಯಿಂದ ಇರಬೇಕು.ಗುಲಾಬಿ ಸುತ್ತಲೂ ಮುಳ್ಳಿನ ಕಂಟಿ ಇರುವ ಹಾಗೇ, ನಮ್ಮ ಜೀವನದಲ್ಲೂ ಕೆಲವೊಂದಿಷ್ಟು ಜನ  ಕುಮನದ ವ್ಯಕ್ತಿತ್ವಗಳು ಇರುತ್ತವೆ. ಅವರ ನಡುವೆಯೇ ನಾವು ಬಾಳ ಬೇಕಾಗುತ್ತದೆ. ಇಂತಹವರು ನಾವು ಮಾಡುವ ಪ್ರತಿ ಕೆಲಸ ಮಾಡುವಾಗ ನಕಾರಾತ್ಮ ಮಾತುಗಳು ಅಥವಾ ವ್ಯಂಗ ಮಾತುಗಳಿರಲಿ ನಾವುಗಳು ಶಾಂತ ಮನಸ್ಕರಾಗಿ ಕೇಳಬೇಕು ಹಾಗೇ ಒಂದು ಕಿವಿಯಿಂದ ಕೇಳಿ ಬಿಡಬೇಕು. ಇಂಥಹವರಲ್ಲಿ ನಾವು ಎಚ್ಚರದಿಂದ ಇರಬೇಕು, ಹಾಗೂ ಇಂತಹ ಮಾತುಗಳನ್ನು ಸಾಧನೆಯ ಮೆಟ್ಟಿಲಗಳನ್ನಾಗಿ ಮಾಡಿಕೊಳ್ಳಬೇಕು.

ಭಗವದ್ಗೀತೆಯ ಅಧ್ಯಾಯ 6, ಶ್ಲೋಕ 6 ರಲ್ಲಿ, ಶ್ರೀಕೃಷ್ಣ ಮನಸ್ಸಿನ ಬಗ್ಗೆ ಈ ಕೆಳಗಿನ ಹೇಳಿಕೆಯನ್ನು ಹೇಳುತ್ತಾನೆ.
“ಮನಸ್ಸನ್ನು ಗೆದ್ದವನಿಗೆ ಮನಸ್ಸೇ ಉತ್ತಮ ಮಿತ್ರ; ಆದರೆ  ಹಾಗೆ ಮಾಡಲು ವಿಫಲನಾದವನಿಗೆ ಅವನ ಮನಸ್ಸು ದೊಡ್ಡ ಶತ್ರುವಾಗಿ ಉಳಿಯುತ್ತದೆ.

ನಮ್ಮ ಹಿಡಿತದಲ್ಲಿ ಮನಸ್ಸು ಹಿಡಿದಿರಬೇಕು, ಮನಸ್ಸಿನ ಹಿಡಿತದಲ್ಲಿ ನಾವಿರಬಾರದು. ನಮ್ಮ ಮನಸ್ಸು ನಮ್ಮ ಹಿಡಿತದಲ್ಲಿದ್ದರೆ ನಿಗ್ರಹವುಳ್ಳವರಾಗಿ ವಿವೇಕದಿಂದ ನಡೆಯಲು ತಿಳಿದಿರುತ್ತದೆ. ಆದರೆ ಮನಸ್ಸಿನ ಹಿಡಿತದಲ್ಲಿ ನಾವಿದ್ದರೆ “ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ ”

ಹೀಗಾಗಿ ಹೂ ಕೆಲವೇ ಹೊತ್ತಿನಲ್ಲಿ ಮುದುಡಿದರೂ ,ಇರುವಷ್ಟು ಸಮಯ ಎಲ್ಲರ ಮನ ಸಂತೋಷ ಪಡಿಸುವ ಈ ದೊಡ್ಡ ಗುಣ ಹೊಂದಿರುತ್ತದೆ. ಹಾಗೇ ನಾವುಗಳು ನಮ್ಮ ಜೀವನದಲ್ಲಿ ಹೂವಿನಂತೆ ಮನಸ್ಸನು ಅಳವಡಿಸಿಕೊಳ್ಳೋಣ. ಜೀವನದಲ್ಲಿ ನಮ್ಮ ಪಾತ್ರ ಯಾವಾಗ ಮುಗಿಯುತ್ತೋ,ಗೊತ್ತಿಲ್ಲ! ಹೀಗಾಗಿ ಪ್ರೀತಿಯಿಂದ ಇರೋಣ, ಪ್ರೀತಿಯಿಂದ ಎಲ್ಲರನ್ನು ಗೆಲ್ಲೋಣ.

Leave a Reply