ಹೀಗಿದ್ದರು ನಮ್ಮ ಅಕ್ಕೋರು

ಹೀಗಿದ್ದರು ನಮ್ಮ ಅಕ್ಕೋರು

ಗುರುಬ್ರಹ್ಮ ಗುರು ವಿಷ್ಣು
ಗುರುದೇವೋ ಮಹೇಶ್ವರಾ
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮಃ
ಜೀವನದಲ್ಲಿ ಒಂದು ಅಕ್ಷರವನ್ನು ಕಲಿಸಿದವನೂ ಕೂಡ ಗುರುವಾಗುತ್ತಾನೆ. ಹುಟ್ಟಿದಾರಭ್ಯ ಮಾತನಾಡಲು ಕಲಿಸಿದವಳು ತಾಯಿ. ನಂತರ ತಂದೆ, ಮನೆಯ ಪರಿಸರ, ಸಹಪಾಠಿಗಳೂ ಕೂಡ ಗುರುವಿನ ಸ್ಥಾನವನ್ನು ಅಲಂಕರಿಸುತ್ತಾರೆ. ಆದರೆ ಶಾಲೆಯಲ್ಲಿಯೇ ಗುರುಗಳು ಯಾವಾಗಲೂ ವಿಶೇಷವಾಗಿ ಪ್ರಾಥಮಿಕ ಶಾಲೆಯ ಶಿಕ್ಷಕರು ನೆನಪಿನಾಳದಿಂದ ಕದಲುವುದೇ ಇಲ್ಲ. ನಮ್ಮ ನಡೆನುಡಿಗಳನ್ನು ತಿದ್ದುವಲ್ಲಿ ಅವರದು ಪ್ರಮುಖ ಪಾತ್ರವೆಂದೇ ಹೇಳಬಹುದು. ಒಂದು ಮಣ್ಣಿನ ಮುದ್ದೆಯಾಕಾರದಲ್ಲಿ ಆಗ ನಾವಿರುತ್ತೇವೆ. ಆಗ ವಿವೇಚನಾ ಶಕ್ತಿ ಇರುವುದಿಲ್ಲ. ವಿಚಾರ ಮಾಡುವ ಶಕ್ತಿ ಇರುವುದಿಲ್ಲ. ಬೇಕು ಬೇಡವೆಂಬುದು ಮಾತ್ರ ತಿಳಿಯುತ್ತಿರುತ್ತದೆ. ಆಗ ನಮ್ಮ ಜೊತೆಗೆ ತಾವೂ ಮಕ್ಕಳಾಗಿ ಮಣ್ಣಿನ ಮುದ್ದೆಗೆ ಕಣ್ಣು, ಮೂಗು ಬಾಯಿ ಮೂಡುವಂತೆ ಮಾಡಿ ನಮಗೆ ಒಂದಕ್ಷರವೂ ಬರದೇ ಇದ್ದಾಗ ಪುಸ್ತಕವನ್ನೇ ಓದಲು ಕಲಿಸುವಂಥ ಈ ಶಿಕ್ಷಕರಿಗೆ ಮನದುಂಬಿ ನಮಸ್ಕಾರಗಳು. ಕಾಲೇಜು ಶಿಕ್ಷಕರಿಗಿಂತಲೂ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಕರದು ತುಂಬ ಜವಾಬ್ದಾರಿಯ ಕೆಲಸ, ಪ್ರಾಥಮಿಕ ಶಿಕ್ಷಕರು ತಮ್ಮ ಸಹನೆಯಿಂದ ನಮ್ಮನ್ನು ಒಂದು ಹಾದಿಗೆ ಎಳೆದು ತರುತ್ತಾರೆ ಎಂಬುದರಲ್ಲಿ ಉತ್ಪ್ರೇಕ್ಷೆಯೇನಿಲ್ಲ. ಮಾಧ್ಯಮಿಕ ಶಿಕ್ಷಕರು ಹುಡುಗ ಅಥವಾ ಹುಡುಗಿ ಹದಿಹರೆಯಕ್ಕೆ ಹೆಜ್ಜೆ ಇಡುವ ಸಂದರ್ಭದಲ್ಲಿ ಅವರ ಮಾನಸಿಕ ಒತ್ತಡವನ್ನು ಶಮನಗೊಳಿಸಿ ಅವರಲ್ಲಿ ಸೃಜನಾತ್ಮಕತೆಯನ್ನೋ, ಕಲಾತ್ಮಕತೆಯನ್ನೋ, ಆಟದಲ್ಲಿ ಸ್ಫೂರ್ತಿಯನ್ನೋ ತುಂಬಿ ಅವರಲ್ಲಿ ಆತ್ಮವಿಶ್ವಾಸದ ಬೀಜ ಬಿತ್ತಿ ಬೆಳೆಸುವವರು. ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿ ಕೊಡುವವರು. ಹೀಗಾಗಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಕರ ಪಾತ್ರ ಹಿರಿದಾದದ್ದು. ನಿಜವಾಗಿಯೂ ಕಾಲೇಜು ಶಿಕ್ಷಕರಿಗೆ ನೀಡುವ ಸಂಬಳದ ಎರಡುಪಟ್ಟನ್ನು ಇವರಿಗೇ ನೀಡಿದರೆ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಕರಾಗಲು ಉನ್ನತ ಶಿಕ್ಷಣ ಪಡೆದವರೂ ಕೂಡ ಮುಂದೆ ಬರುತ್ತಾರೆ. ಹೀಗಾಗಿ ಮಕ್ಕಳ ಬಾಲ್ಯದಲ್ಲಿಯ ಕಲಿಕೆ ಹಾಗೂ ಹದಿಹರೆಯದಲ್ಲಿಯ ಕಲಿಕೆ ಸುಧಾರಣೆ ಕಂಡು ಇನ್ನೂ ಮೂಲದಲ್ಲಿಯೇ ಜಾಣ ವಿದ್ಯಾರ್ಥಿಗಳನ್ನಾಗಿಸಬಹುದು. ತರ್ಕಬದ್ಧ ಕಲಿಕೆಯಿಂದ ವಿದ್ಯಾರ್ಥಿಗಳೂ ಮುಂದಿನ ದಿನಗಳಲ್ಲಿ ಉನ್ನತ ಸಮಾಜವನ್ನು ನಿರ್ಮಿಸಬಲ್ಲರು.
ನನ್ನ ಪ್ರಾಥಮಿಕ ಶಾಲೆಯಲ್ಲಿ “ಕಟ್ಟಿ ಅಕ್ಕೋರು” ಎನ್ನುವ ಟೀಚರ್ ಇದ್ದರು. ನೋಡಲು ಕುಳ್ಳಗೆ, ಕಪ್ಪಾಗಿದ್ದರೂ ಆಕರ್ಷಣೀಯವಾಗಿದ್ದರು. ಯಾವಾಗಲೂ ಒಂಭತ್ತು ವಾರೆಯ ಕಚ್ಚೆ ಸೀರೆ, ತುರುಬು, ಆ ತುರುಬಿನ ತುದಿಯಲ್ಲಿ ಒಂದು ದುಂಡುಮಲ್ಲಿಗೆ, ಕೈಯಲ್ಲಿ ಒಂದು ಕೈಚೀಲ, ಅವರ ಕಲಿಸುವಿಕೆಯಲ್ಲಿಯ ತನ್ಮಯತೆ, ಪ್ರಕೃತಿ ಪ್ರೇಮ ಇಂದಿಗೂ ಮರೆಯಲಾಗುವುದಿಲ್ಲ. ಆದರೆ ಅವರ ಧ್ವನಿ ಮಾತ್ರ ತುಪ್ಪ ಕುಡಿದ ಹಾಗೆ ಗಂಟಲೊಳಗೆ ಹುಗಿದಂತೆ! ಆದರೇನಂತೆ ಕಲಿಸುವಲ್ಲಿ ಯಾವತ್ತಿಗೂ ಹಿಂದೆ ಬಿದ್ದಿರಲಿಲ್ಲ. ನಾಲ್ಕು ಗೋಡೆಯ ಮಧ್ಯ ಕಲಿಸಲು ಅವರಿಗೇಕೋ ಸೇರುತ್ತಿರಲಿಲ್ಲ. ನಮ್ಮ ಶಾಲೆಯ ಗ್ರೌಂಡಿನಲ್ಲಿಯೇ ಇದ್ದ ದೊಡ್ಡ ಮರದ ಕೆಳಗೇ ಕೂಡ್ರಿಸಿ ಕಲಿಸಲು ಅವರಿಗೆ ಯಾಕೋ ಆಪ್ಯಾಯತೆ, ಅವರು ಕಲಿಸುವದನ್ನು ಇನ್ನೊಂದು ಕ್ಲಾಸಿನವರೂ ಬಗ್ಗಿ ಬಗ್ಗಿ ನೋಡುತ್ತಿದ್ದುಂಟು. ಅವರು ಹೇಳಿಕೊಡುತ್ತಿದ್ದ ಲೆಕ್ಕಗಳು, ಪದ್ಯಗಳು ಇಂದಿಗೂ ಮನಃಪಟಲದಲ್ಲಿ ಅಚ್ಚೊತ್ತಿರುವಂತಿವೆ.
ನಮಗೆ ಒಂದನೇ ಇಯತ್ತೆಯಿಂದಲೂ ಅವರು ಕ್ಲಾಸ್ ಟೀಚರು ಎಲ್ಲ ವಿಷಯಗಳನ್ನು ಅವರೊಬ್ಬರೇ ಕಲಿಸುತ್ತಿದ್ದರು. ನನ್ನ ಕಪಿಚೇಷ್ಟೆಗಳನ್ನೆಲ್ಲ ಸಹಿಸಿಕೊಂಡು ನನ್ನನ್ನು ತಿದ್ದಿದವರು. ಯಾವತ್ತಿಗೂ ಶಾಲೆ ಎಂದರೆ ನನಗೆ ಅಲರ್ಜಿ. ಮನೆಯಲ್ಲಿ ಸದಾ ತುಂಬಿ ತುಳುಕುತ್ತಿದ್ದ ನೆಂಟರಿಷ್ಟರು, ಅವರ ಮಾತು ಹರಟೆಯ ನಡುವೆಯೇ ಕಳೆದುಹೋಗುವ ಆಸೆ, ನಾನು ಶಾಲೆ ತಪ್ಪಿಸುವುದು ವಿಪರೀತವಾದಾಗ ನನ್ನನ್ನೇ ‘ಮಾನಿಟರ್’ ಮಾಡಿದರು. ಆಗ ಪೇಚಿಗೆ ಸಿಕ್ಕಂತಾಗಿ ಶಾಲೆ ಕಡೆಗೆ ಹೆಜ್ಜೆ ಮೂಡಲಾರಂಭಿಸಿದವು. ಆದರೆ ಯಾವಾಗ? ಶಾಲೆಯ ಗಂಟೆ ಬಾರಿಸಿ ಪ್ರಾರ್ಥನೆ ಮುಗಿದು ಕನ್ನಡ ಪದ್ಯಗಳನ್ನೆಲ್ಲ ಅಂದು ಮುಗಿಸಿದ ಮೇಲೆ ನನ್ನ ಎಂಟ್ರಿ! ಒಂದಿನ ಸಹನೆಯ ಪ್ರತಿರೂಪವಾದ ಕಟ್ಟಿ ಅಕ್ಕೋರಿಗೂ ಕೂಡ ನನ್ನ ಮೇಲೆ ವಿಪರೀತ ಎನ್ನುವಷ್ಟು ಸಿಟ್ಟು ಬಂದು ತಡವಾಗಿ ಬಂದ ನನ್ನ ಕೈಗಳನ್ನು ಕಿಟಕಿಯ ಸರಳುಗಳಿಗೆ ಸುತ್ತಳಿಯಿಂದ ಕಟ್ಟಿ ಕೂಡಿಸಿಬಿಟ್ಟರು. ಎಲ್ಲ ಮಕ್ಕಳೂ ನಗಾಡತೊಡಗಿದರು. ಅಪಮಾನದಿಂದ ಕೈಗಳನ್ನು ಕೊಸರುತ್ತಾ ಕೈ ಬಿಡಿಸಿಕೊಂಡೆ. [ಅವರೇನು ಅಂಥ ಬಿಗಿಯಾಗಿ ಕಟ್ಟಿರದೇ ನನ್ನನ್ನು ಹೆದರಿಸಲು ಸುಮ್ಮನೇ ಎರಡು ಸುತ್ತು ಸುತ್ತಿದ್ದರು.]
ಬೋರ್ಡಿನತ್ತ ಮುಖ ಮಾಡಿ ಕಲಿಸುತ್ತಿದ್ದ ಅವರಿಗೆ ನಾನು ಕೈ ಬಿಡಿಸಿಕೊಂಡಿದ್ದು ಕಾಣಿಸಲಿಲ್ಲ. ನಾನೂ ಅಷ್ಟೇ ಆತುರತೆಯಿಂದ ಅವರು ಉಟ್ಟಿದ್ದ ಸೀರೆಯ ಕಚ್ಚೆಯನ್ನು ಜಗ್ಗಿ ಕ್ಲಾಸಿನಿಂದ ಓಡಿಬಿಟ್ಟೆ, ಅವರೂ ವಿಪರೀತ ಕುಪಿತರಾಗಿ ಕಲಿಸುವುದನ್ನು ಬಿಟ್ಟು ನನ್ನ ಬೆಂಬತ್ತಿದರು. ಅವರಾದರೋ ನಾಲ್ವತ್ತರ ಮೇಲಿನವರು. ನಾನು ಬೇಕಾಬಿಟ್ಟಿ ಓಡಾಡಿದರೆ ಅವರು ನನ್ನ ಹಿಂದೆ ಬಿದ್ದು ಓಡಾಡಿ ಸುಸ್ತಾದರು. ಕೊನೆಯ ಅಸ್ತ್ರವಾಗಿ, “ಮನೆಗೆ ಬಂದು ನಿಮ್ಮ ತಂದೆಯ ಮುಂದೆ ಹೇಳ್ತೀನಿ” ಎಂದಾಗ ಅಂಜಿ ಅವರ ಹತ್ತಿರ ನಡೆದೆ. ಆಗ ಅವರೇನು ಮಾಡಿದರು? ತಾವು ಸ್ವತಃ ತೇಕುತ್ತಿದ್ದರೂ ನನ್ನನ್ನು ಪಕ್ಕದಲ್ಲಿ ಕೂಡಿಸಿಕೊಂಡು ತಲೆ ನೇವರಿಸಿದರು! ಅವರ ಕಣ್ಣಲ್ಲಿ ನೀರು, ಮುಗಿಯಿತು, ಅವತ್ತೇ ಕೊನೆ ನನ್ನ ತುಂಟಾಟಕ್ಕೆ ತೆರೆಬಿತ್ತು. ಅವತ್ತಿನಿಂದ ಅವರ ಜೊತೆಗೆ ನನ್ನ ಆತ್ಮೀಯತೆ ಬೆಳೆಯಿತು. ಅವರ ಕ್ಲಾಸನ್ನು ಎಂದೂ ತಪ್ಪಿಸಲಿಲ್ಲ. ವೇಳೆಗೆ ಸರಿಯಾಗಿ ಬರುವುದನ್ನು ರೂಢಿಯಾಗಿಸಿಕೊಂಡೆ. ಶಾಲೆ ಮುಗಿದಾದ ಮೇಲೆ ನನ್ನ ಕೈಹಿಡಿದು ಮನೆಯ ಕೊರಕಲುವರೆಗೂ ಬಿಟ್ಟು ತಮ್ಮ ಮನೆಗೆ ಹೋಗುತ್ತಿದ್ದರು. ಎಂದಿಗೂ ಯಾವುದೇ ಬಂಧನ ಅಂತ ಮಾಡಲಿಲ್ಲ. ಶಾಲೆಯಿಂದ ಬರುವಾಗಲೂ ಯಾವುದೇ ವಿಚಾರವನ್ನು ತಿಳಿಸಿ ಹೇಳುತ್ತಲೇ ಬರುತ್ತಿದ್ದರು.
ನಮ್ಮ ಕಡೆಗೆ ಬಿಸಿಲು ಎಂದರೆ ಡೈರೆಕ್ಟ್ ಸೂರ್ಯನೇ ಸಮೀಪ ಬಂದು ಕೂತಿದ್ದಾನೆಯೋ ಏನೋ ಎನ್ನುವಂಥದ್ದು. ಆಗ ನಮ್ಮ ಅಕ್ಕೋರು, “ಮಕ್ಕಳೇ, ಇವತ್ತ ಹೊರಗ ಪಾಠಾ ಮಾಡ್ತಿನಿ” ಎಂದೆನ್ನುತ್ತಾ ಹಕ್ಕಿಪಕ್ಷಿಗಳ ಇನಿದನಿಯ ಕನಸು, ಭೂಗೋಳ ಇತಿಹಾಸದ ಪಾಠಗಳು, ಮರೆಯುವಂತೆಯೇ ಇಲ್ಲ.
ಪರೀಕ್ಷೆ ಸಮೀಪಿಸಿದಾಗ ಯಾರಿಗೂ ಯಾವುದೇ ಫೀಜನ್ನು ತೆಗೆದುಕೊಳ್ಳದೇ ಸ್ಪೆಷಲ್ ಕ್ಲಾಸನ್ನು ಮನೆಯಲ್ಲೇ ತೆಗೆದುಕೊಳ್ಳುತ್ತಿದ್ದರು. ಈಗಿನ ಮಕ್ಕಳ ಸ್ಪೆಷಲ್ ಕ್ಲಾಸಿನ ರೂಪ ನೋಡಿದರೆ ನಮ್ಮ ಟೀಚರು ಎಂಥ ದೇವತೆಯಪ್ಪ ಎನಿಸದೇ ಇರುವುದಿಲ್ಲ. ಅವರು ಹೇಳುವ ಪಟಗಳನ್ನು ಮಾಡಲು ನಮಗೆ ಕಠಿಣವಾದರೆ ಅವರ ಮಗನ ಕಡೆಯಿಂದಲೇ ಮಾಡಿಸಿ ಕೊಡುತ್ತಿದ್ದರು. ಯಾವತ್ತಿಗೂ ತನ್ನ ಕ್ಲಾಸಿನ ಮಕ್ಕಳು ಹಿಂದೆ ಬೀಳಬಾರದೆಂಬ ಇಚ್ಛೆ ಅವರದು. ಇನ್ವೆಸ್ಟಿಗೇಷನ್ನಿಗೆ ಬಂದ ಬೇರೆ ಶಾಲೆಯ ಟೀಚರು ಹೆಡ್ ಮಿಸ್ಟ್ರೆಸ್ಸು ಅಗಾಧತೆಯನ್ನು ವ್ಯಕ್ತಪಡಿಸುತ್ತಿದ್ದರು. ಮಕ್ಕಳಲ್ಲಿಯ ಟ್ಯಾಲೆಂಟನ್ನು ಹೊರತೋರ್ಪಡಿಸಿ ಮಕ್ಕಳಿಗೂ ತಮಗೂ ಭೇಷ್ ಎನ್ನಿಸಿಕೊಳ್ಳುತ್ತಿದ್ದರು.
ನನ್ನ ಮೇಲಂತೂ ಅವರ ಮಮತೆ, ಪ್ರೀತಿ, ವಾತ್ಸಲ್ಯ ವಿಶೇಷವಾದದ್ದು, ಕ್ಲಾಸೆಲ್ಲ ಮುಗಿದ ಮೇಲೆ ತುಪ್ಪ ಮೆಂಥ್ಯ ಹಿಟ್ಟು ಹಾಕಿ ಹಚ್ಚಿದ ಅವಲಕ್ಕಿ, ಕಾಫಿ, ನನಗಷ್ಟೇ ಮೀಸಲು! ಎಲ್ಲರೂ ಹೋದ ಮೇಲೆ ನನಗೆ ಕುಳಿತುಕೊಳ್ಳಲು ಹೇಳಿ ತಿನ್ನಲು ಕೊಡುತ್ತಿದ್ದರು. ತಮ್ಮ ಮನೆಯಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ನನಗೆ ಊಟಕ್ಕೆ ಆಮಂತ್ರಣವಿದ್ದೇ ಇರುವುದು. ಉಳಿದ ಗೆಳತಿಯರೆಲ್ಲ ನನಗೆ ‘ಕಟ್ಟೀ ಅಕ್ಕೋರ ದತ್ತಕ ಪುತ್ರಿ’ ಎಂದು ಛೇಡಿಸುತ್ತಿದ್ದರು. ಅದು ನನಗೆ ಅಪ್ಯಾಯಮಾನವೆನಿಸುವುದು. ಅವರ ಒಂದು ವಿಶೇಷವೇನೆಂದರೆ ಮಕ್ಕಳ ಮುಂದೆ ಎಂದಿಗೂ ದೊಡ್ಡಸ್ಥನ ತೋರಿಸುತ್ತಿರಲಿಲ್ಲ. ಅಲ್ಲಿ ಕೇವಲ ಪ್ರೀತಿ, ಅಂತಃಕರುಣೆ ಮಾತ್ರವಿರುತ್ತಿತ್ತು. ಮಕ್ಕಳು ವಿದ್ಯೆ ಕಲಿತು ಮೇರು ಪರ್ವತವನ್ನೇರಲಿ, ಕೀರ್ತಿ ಶಿಖರವನ್ನೇರಲಿ ಎಂಬ ಆಶಯ, ಹಾರೈಕೆ ಇರುತ್ತಿತ್ತು. ಇಂಥ ನಿಸ್ವಾರ್ಥದ, ಅತ್ಯಂತ ಪ್ರೇಮ ಸ್ವರೂಪಿಯಾದ ಟೀಚರು ಎಲ್ಲರಿಗೂ ದೊರಕುವಂತಾದರೆ ಎಂಥ ಕಿಡಿಗೇಡಿಯೇ ಆಗಲಿ ಸುಧಾರಿಸುವಲ್ಲಿ ತಡವಾಗಲಾರದು.
ಕೆಲವಾರು ವರ್ಷಗಳ ಹಿಂದೆ ಪತಿಯೊಂದಿಗೆ ತವರು ಮನೆಗೆ ಹೋದಾಗ ದಾರಿಯಲ್ಲಿ ‘ಕಟ್ಟೀ ಅಕ್ಕೋರು’ ಸಿಕ್ಕರು. ನನ್ನನ್ನು ನೋಡಿ ಗುರ್ತು ಹಿಡಿದು ನನ್ನ ಪ್ರತಾಪಗಳನ್ನೆಲ್ಲ ಇವರ ಮುಂದೆ ಅರುಹಿದರು. ಅಷ್ಟೇ ಅಲ್ಲದೇ ನಮ್ಮನ್ನು ಮನೆಗೂ ಕರೆದುಕೊಂಡು ಹೋಗಿ ತಮ್ಮ ಮಕ್ಕಳನ್ನೆಲ್ಲ ಕರೆದು, ‘ಏ ಗೀತಾ’, ಸುಮತೀ ಬರ್ರಿ ಇಲ್ಲೇ ಯಾರು ಬಂದಾರ ನೋಡು, ಸುಜಾತಾ ಕುಲಕರ್ಣಿ ಬಂದಾಳ ಎಂದು ಎರಡೆರಡು ಸಲ ಕೂಗಿ ಹೇಳುತ್ತಿದ್ದರೆ ನನ್ನ ಕಣ್ಣಿನಲ್ಲಿ ನೀರು ಬರುತ್ತಿತ್ತು. ಎಂಥ ಪ್ರೀತಿ, ವಿಶ್ವಾಸ ಅವರದು. ಆತ್ಮೀಯತೆಯ ಆಗರ ಅವರು. ಇಂಥ ಪ್ರೇಮಮಯಿ ಅಕ್ಕೋರು ತೀರಿಕೊಂಡ ಸುದ್ದಿ ಕೆಲವು ತಿಂಗಳ ಹಿಂದೆ ತಿಳಿದಾಗ ನನಗೆ ದುಃಖ ಉಕ್ಕಿ ಬಂದು ಮಾತೇ ಹೊರಡಲಿಲ್ಲ. ಎರಡು ದಿನಗಳಾದರೂ ಆ ದುಃಖದಿಂದ ಹೊರಬರಲಿಕ್ಕೇ ಆಗಲಿಲ್ಲ. ಈಗ ಎಲ್ಲಿಯಾದರೂ ದ.ರಾ.ಬೇಂದ್ರೆಯವರ ಕವನಗಳು, ಕುವೆಂಪು ಅವರ ಪದ್ಯಗಳನ್ನು ಕೇಳಿದಾಗ ಮನದ ತುಂಬೆಲ್ಲ ‘ಕಟ್ಟೀ ಅಕ್ಕೋರೇ ರಾರಾಜಿಸುತ್ತಾರೆ.’

 

Leave a Reply