ತಮಿಳುನಾಡಿನ ಕ್ರಾಂತಿಸಿಂಹ ವಾಂಚಿನಾಥನ್ ಅಯ್ಯರ್

ತಮಿಳುನಾಡಿನ ಕ್ರಾಂತಿಸಿಂಹ ವಾಂಚಿನಾಥನ್ ಅಯ್ಯರ್

ವಾಂಚಿನಾಥನ್ ಅಯ್ಯರ್ : ತಮಿಳುನಾಡಿನ ರಾಷ್ಟ್ರಭಕ್ತ ಕ್ರಾಂತಿಕಾರಿ, ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೆಡ್ಡುಹೊಡೆದು ಪ್ರಾಣಾರ್ಪಣೆ ಮಾಡಿದ ಹುತಾತ್ಮ ವಾಂಚಿನಾಥನ್ ಅಯ್ಯರ್. ಜನರಿಂದ ‘ವಂಚಿ’ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಈ 25 ರ ದೇಶಭಕ್ತ ತರುಣ ತಿರುನಲ್ವೇಲಿಯ ಕಲೆಕ್ಟರ್ ರಾಬರ್ಟ್ಆಶ್ ನನ್ನು ಹಾಡಹಗಲೇ ಗುಂಡಿಕ್ಕಿ ತಾನೂ ಆತ್ಮಾರ್ಪಣೆ ಮಾಡಿದ. ತಿರುನಲ್ವೇಲಿ ಜಿಲ್ಲೆಯ ಸೆಂಗೊತ್ತೈ ಎಂಬ ಊರಿನಲ್ಲಿ ಜನಿಸಿದ ವಾಂಚಿನಾಥನ್ ಪ್ರಾಥಮಿಕ ಶಿಕ್ಷಣವನ್ನು ತನ್ನೂರಿನಲ್ಲೇ ಮುಗಿಸಿ, ಎಂ.ಎ ಪದವಿಯನ್ನು ತಿರುವನಂತಪುರದ ಕಾಲೇಜಿನಲ್ಲಿ ಪಡೆದಿದ್ದ. ಕಾಲೇಜಿನಲ್ಲಿ ಓದುವಾಗಲೇ ಮದುವೆಯೂ ಆಗಿತ್ತು. ಸರಕಾರಿ ಹುದ್ದೆಯಲ್ಲಿ ನೌಕರಿ ಮಾಡುತ್ತಿದ್ದ. ಅದೇ ಹೊತ್ತಿಗೆ ತಮಿಳುನಾಡಿನಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ಜೋರಾಗಿತ್ತು. ಸ್ವದೇಶೀ ನೇವಿಗೇಷನ್ ಕಂಪನಿ ಹುಟ್ಟುಹಾಕಿ ಬ್ರಿಟಿಷರಿಗೆ ಸೆಡ್ಡು ಹೊಡೆದ ರಾಷ್ಟ್ರಭಕ್ತ ಚಿದಂಬರಂ ಪಿಳ್ಳೈ ಹಾಗೂ ‘ಭಾರತಮಾತಾ ಅಸೋಸಿಯೇಷನ್’ ಕಟ್ಟಿ ಕ್ರಾಂತಿಕಾರಿಗಳನ್ನು ತಯಾರು ಮಾಡುತ್ತಿದ್ದ ನೀಲಕಂಠ ಬ್ರಹ್ಮಚಾರಿ ಅವರ ಹೋರಾಟಗಳಿಂದ ವಾಂಚಿ ಸ್ವಾತಂತ್ರ್ಯ ಸಮರದೆಡೆಗೆ ಆಕರ್ಷಿತನಾದ. ದಕ್ಷಿಣ ಭಾರತದ ಕೆಲವೇ ಕೆಲವು ಕ್ರಾಂತಿಕಾರಿ ಸಂಘಟನೆಗಳಲ್ಲಿ ಒಂದಾದ, ನೀಲಕಂಠನಿಂದ ಬ್ರಹ್ಮಚಾರಿಯವರ ‘ಭಾರತಮಾತಾ ಅಸೋಸಿಯೇಷನ್’ ಸಶಸ್ತ್ರ ಕ್ರಾಂತಿಗಾಗಿ ಯುವಕರನ್ನುತರಬೇತಿಗೊಳಿಸುತ್ತಿತ್ತು. 1910 ಡಿಸೆಂಬರ್ ನಲ್ಲಿ ಪ್ಯಾರಿಸ್ ನಿಂದ ಬಂದ ಮತ್ತೊಬ್ಬ ಕ್ರಾಂತಿಕಾರಿ ವಿ.ವಿ.ಎಸ್.ಅಯ್ಯರ್ ಯುವಕರಿಗೆ ಗುಂಡು ಹೊಡೆಯುವ ತರಬೇತಿ ನೀಡಿದರು. ವಾಂಚಿ ವಿ.ವಿ.ಎಸ್.ಅಯ್ಯರ್ ರ ಗರಡಿಯಲ್ಲಿ ಪಳಗಿದ. ಅದೇ ಸಮಯದಲ್ಲಿ ತಿರುನಲ್ವೇಲಿಯ ಕಲೆಕ್ಟರ್ ರಾಬರ್ಟ್ ಆಶ್ ನ ದೌರ್ಜನ್ಯ ಮಿತಿಮೀರಿತ್ತು. ಸ್ಥಳೀಯ ಕೈಗಾರಿಕೆಗಳನ್ನು ಮುಚ್ಚಿಸುವ, ಇಂಗ್ಲೆಂಡಿನಿಂದ ಬರುವ ವಸ್ತುಗಳನ್ನೇ ಎಲ್ಲರೂ ಬಳಸುವಂತೆ ಮಾಡುವ ಮೂಲಕ ಆತ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದ. ಅದರಿಂದ ನಿರುದ್ಯೋಗ ಸಮಸ್ಯೆ ತೀವ್ರವಾಗಿತ್ತು. ಸಮುದ್ರ ವ್ಯಾಪಾರ – ಪ್ರಯಾಣ ದಲ್ಲಿ ಬ್ರಿಟಿಷರ ದೌರ್ಜನ್ಯ ವಿರೋಧಿಸಿ ಚಿದಂಬರಂ ಪಿಳ್ಳೈ ಸ್ವದೇಶಿ ನೇವಿಗೇಷನ್ ಕಂಪನಿ ಹುಟ್ಟುಹಾಕಿ ಬ್ರಿಟಿಷರಿಗೆ ಬಹಳ ದೊಡ್ಡ ನಷ್ಟವುಂಟುಮಾಡಿದರು. ಇದನ್ನು ಸಹಿಸದ ಆಶ್ ಅವರ ಮೇಲೆ ಇಲ್ಲಸಲ್ಲದ ಆರೋಪಹೊರಿಸಿ ಅವರನ್ನು ಜೈಲಿಗೆ ಕಳಿಸಿದ್ದ. ಅಲ್ಲದೆ ದೇಶಾಭಿಮಾನಿಗಳ ಹೆಮ್ಮೆಯ ಪ್ರತೀಕವಾಗಿದ್ದ ಸ್ವದೇಶೀ ನೇವಿಗೇಷನ್ ಕಂಪನಿ ದಿವಾಳಿಯಾಗುವಂತೆ ಮಾಡಿದ. ಇದು ದೇಶಭಕ್ತ ನೀಲಕಂಠಬ್ರಹ್ಮಚಾರಿ ಹಾಗೂ ವಾಂಚಿನಾಥ ಮುಂತಾದ ತಮಿಳುನಾಡಿನ ರಾಷ್ಟ್ರಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಅವರು ನಿಶ್ಚಯಿಸಿದರು. 1911 ರ ಜೂನ್ 17ರಂದು ಕ್ರೂರಿ ರಾಬರ್ಟ್ ಆಶ್ ರೈಲಿನಲ್ಲಿ ಸಂಚರಿಸುತ್ತಿದ್ದ. ಆಶ್ ಕುಳಿತಿದ್ದ ರೈಲಿನ ಬೋಗಿಗೆ ದಿಢೀರನೆ ನುಗ್ಗಿದ ವಾಂಚಿನಾಥನ್ ಸೊಂಟದಲ್ಲಿ ಸಿಕ್ಕಿಸಿಕೊಂಡಿದ್ದ ಪಿಸ್ತೂಲನ್ನು ತೆಗೆದು ಆಶ್ ಗೆ ಹಣೆಗೆ ಗುರಿಯಿಟ್ಟು ಗುಂಡು ಹೊಡೆದ. ಆಶ್ ಸತ್ತದ್ದು ಖಚಿತವಾದ ಮೇಲೆ ನಿರ್ಭೀತನಾಗಿ ಬೋಗಿಯಿಂದ ಕೆಳಗಿಳಿದು ನಿಲ್ದಾಣದ ಶೌಚಾಲಯಕ್ಕೆ ಹೋಗಿ ತನ್ನದೇ ಪಿಸ್ತೂಲಿನಿಂದ ತನ್ನ ಬಾಯಿಯಲ್ಲಿ ತಾನೇ ಗುಂಡು ಹೊಡೆದುಕೊಂಡು ಹುತಾತ್ಮನಾದ. ವಾಂಚಿನಾಥನ ಶವದ ಬಳಿ ಪತ್ರವೊಂದು ಸಿಕ್ಕಿತು ಹಾಗೂ ಅದರಲ್ಲಿ ‘ನಮ್ಮೀ ಭಾರತ ದೇಶಕ್ಕೆ ಶತ್ರುಗಳಾದ ಆಂಗ್ಲರನ್ನು ಹೊರಗೋಡಿಸಿ, ಮತ್ತೆ ಸ್ವರಾಜ್ಯವನ್ನು ಸ್ಥಾಪಿಸಲು ಹಾಗೂ ಸನಾತನ ಧರ್ಮವನ್ನು ಉಳಿಸಲು ಪ್ರತಿಯೊಬ್ಬ ಭಾರತೀಯನೂ ಹೋರಾಡುತ್ತಿದ್ದಾನೆ. ಅದಕ್ಕಾಗಿ ಸುಮಾರು 3000 ಮದ್ರಾಸಿಗರು ಶಪಥ ಮಾಡಿದ್ದಾರೆ. ಅದನ್ನು ಎಲ್ಲರಿಗೂ ತಿಳಿಸಲೆಂದೇ ನಾನು ಈ ಕಾರ್ಯವನ್ನು ಮಾಡಿದ್ದೇನೆ. ಇದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ” ಎಂದು ಬರೆದಿತ್ತು. ಆಶ್ ಹತ್ಯೆ ಬಹಳ ದೊಡ್ಡಸುದ್ದಿಯಾಗಿ ಬ್ರಿಟಿಷರ ಎದೆನಡುಗಿಸಿತು. ಆಶ್ ಹತ್ಯೆಗೈದು ದೇಶಪ್ರೇಮಿಗಳ ಪರವಾಗಿ ಸೇಡುತೀರಿಸಿಕೊಂಡ ವಾಂಚಿನಾಥನ್ ತಾನೇ ಗುಂಡು ಹೊಡೆದುಕೊಂಡು ಹುತಾತ್ಮನಾದರೆ ಇದರ ರೂವಾರಿ ಎಂಬ ಆರೋಪದ ಮೇಲೆ ನೀಲಕಂಠ ಬ್ರಹ್ಮಚಾರಿಗೆ ಏಳು ವರ್ಷಗಳ ಕಠಿಣ ಶಿಕ್ಷೆ ಪ್ರಾಪ್ತವಾಯಿತು.

ಭಾರತ ಸ್ವತಂತ್ರವಾದ ನಂತರ ವಾಂಚಿ ಆಶ್ ನ ಹತ್ಯೆಗೈದ ರೈಲ್ವೆ ನಿಲ್ದಾಣಕ್ಕೆ ದೇಶಭಕ್ತವಾಂಚಿನಾಥನ್ ಅಯ್ಯರ್ ನ ಹೆಸರಿಟ್ಟು ಗೌರವ ಸಮರ್ಪಿಸಲಾಯಿತು.

Leave a Reply