ವಿದೇಶಿ ನೆಲದ ಭಾರತಪ್ರೇಮಿ ಮೇಡ೦ ಭಿಕಾಜಿ ಕಾಮಾ

ವಿದೇಶಿ ನೆಲದ ಭಾರತಪ್ರೇಮಿ ಮೇಡ೦ ಭಿಕಾಜಿ ಕಾಮಾ

ಮೇಡ೦ ಭಿಕಾಜಿ ಕಾಮಾ: ಭಾರತದ ಸ್ವಾತ೦ತ್ರ್ಯ ಸ೦ಗ್ರಾಮದ ಇತಿಹಾಸದಲ್ಲಿ ಧ್ರುವತಾರೆಯಾಗಿ ಮೆರೆದ ಮಹಿಳೆಯರಲ್ಲಿ ಒಬ್ಬರು ಮು೦ಬೈನ ಮೇಡ೦ ಭಿಕಾಜಿ ಕಾಮಾ. ಮೇಡಂ ಕಾಮಾ ಚಿಕ್ಕಂದಿನಿಂದಲೂ ಅಪಾರ ದೇಶಾಭಿಮಾನಿ. ತೀವ್ರ ಪ್ಲೇಗ್ ರೋಗಕ್ಕೆ ತುತ್ತಾಗಿ ಆಕೆ ಬಂಧುಗಳ ಒತ್ತಾಯದ ಮೇರೆಗೆ ದೇಶ ತ್ಯಜಿಸಿ ಲಂಡನ್ ಗೆ ಹೋಗಬೇಕಾಯಿತು. ಅಲ್ಲಿ ಗುಣಮುಖಳಾದ ಕಾಮಾ ಅಲ್ಲೇ ತನ್ನ ರಾಷ್ಟ್ರ ಜಾಗೃತಿಯ ಕಾರ್ಯಗಳನ್ನು ಆರಂಭಿಸಿದಳು. ಪರದೇಶದಲ್ಲೇ ಇತರ ದೇಶಭಕ್ತರೊಡಗೂಡಿ ಭಾರತದ ಧ್ವಜವನ್ನು ರೂಪಿಸಿದ ಮೇಡಂ ಕಾಮಾ ಜರ್ಮನಿಯ ಸ್ಪಟ್ಗಾರ್ಟ್ನಲ್ಲಿ ನಡೆದ ಅಂತರರಾಷ್ಟ್ರೀಯ ಸಮಾಜವಾದಿ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿ ಅಲ್ಲಿ ಭಾರತೀಯರ ಕಷ್ಟ ಕಾರ್ಪಣ್ಯ ಹಾಗೂ ಬ್ರಿಟಿಷರ ದೌರ್ಜನ್ಯಗಳ ಕುರಿತು ದಿಟ್ಟವಾಗಿ ವಾದ ಮಂಡಿಸಿದಳು. ಅಲ್ಲೇ ಭಾರತ ಧ್ವಜವನ್ನು ಹಾರಿಸಿ ನೆರೆದಿದ್ದ ಎಲ್ಲರೂ ಅದಕ್ಕೆ ಗೌರವ ಸಲ್ಲಿಸುವಂತೆ ಮಾಡಿದಳು. ವಿದೇಶವೊಂದರಲ್ಲಿ ಅಂತರರಾಷ್ಟ್ರೀಯ ಪ್ರತಿನಿಧಿಗಳ ಎದುರು ಭಾರತದ ಧ್ವಜವನ್ನು ಮೊದಲ ಬಾರಿಗೆ ಹಾರಾಡಿಸಿದ ಮಹಿಳೆ ಮೇಡಂ ಕಾಮಾ !. ಜರ್ಮನಿಯ ಸಮ್ಮೇಳನ ಮುಗಿದ ನಂತರ ಕಾಮಾ ಅಮೆರಿಕಾಗೆ ಬಂದು ನ್ಯೂಯಾರ್ಕಿನಲ್ಲಿ ಪತ್ರಕರ್ತರನ್ನುದ್ದೇಶಿಸಿ ಬ್ರಿಟಿಷರ ದಬ್ಬಾಳಿಕೆಯನ್ನು ಖಂಡಿಸಿ ಮಾತನಾಡಿದಳು. 1908ರಲ್ಲಿ ಲಂಡನ್ ಗೆ ಹಿಂತಿರುಗಿ ‘ಭಾರತಭವನ’ದಲ್ಲಿ ಒಂದು ಸಭೆಯನ್ನುದ್ದೇಶಿಸಿ ಮಾತನಾಡಿ ದೇಶದ ಯುವಕರಿಗೆ ಸಂದೇಶ ನೀಡುತ್ತಾ ‘ಬ್ರಿಟಿಷರು ಎಷ್ಟೇ ದೊಡ್ಡ ಹುದ್ದೆ ಕೊಟ್ಟರೂ ಅದನ್ನು ನಿರಾಕರಿಸಿ. ಅವರನ್ನು ಓಲೈಸಬೇಕಾಗಿಲ್ಲ. ಭಾರತ ನಮ್ಮದು. ಸ್ವತಂತ್ರ ಜೀವನವನ್ನು ರೂಢಿಸಿಕೊಳ್ಳಿ’ ಎಂದು ಕರೆ ಇತ್ತಳು. ಬ್ರಿಟಿಷ್ ಸರ್ಕಾರ ಇವಳ ಕರೆಯಿಂದ ಕೆರಳಿ ಅವಳನ್ನು ದೇಶಬಿಟ್ಟು ಹೋಗುವಂತೆ ಸೂಚಿಸಿತು. ಭಾರತಕ್ಕೂ ಆಕೆ ಬರಬಾರದೆಂಬ ಕಟ್ಟಪ್ಪಣೆಯನ್ನು ಮಾಡಲಾಯಿತು. ಕಾಮಾ ಪ್ಯಾರಿಸ್ನಲ್ಲಿ ನೆಲೆ ಕಂಡುಕೊಂಡಳು. ಅಲ್ಲಿಯೂ ಹಲವು ಕ್ರಾಂತಿಕಾರಿಗಳು ಬಂದು ಸೇರಿದರು. ಎಲ್ಲರೂ ಸೇರಿ ‘ವಂದೇ ಮಾತರಂ’ ಎಂಬ ಪತ್ರಿಕೆ ಹೊರಡಿಸಿದರು. ಸ್ವಾತಂತ್ರ್ಯವೀರ ಸಾವರ್ಕರರು ಲಂಡನ್ ಗೆ ಬಂದಾಗ ಮೇಡಂ ಕಾಮಾ ದೇಶಭಕ್ತರನ್ನು ಸಂಘಟಿಸುವಲ್ಲಿ ಅವರ ನೆರವಿಗೆ ನಿಂತರು. ಮೇಡಂ ಕಾಮಾ ವಿದೇಶದಲ್ಲಿ ಇದ್ದರೂ ಭಾರತದ ಜನರ ಮೇಲೆ ಆಕೆಯ ಪ್ರಭಾವ ಕಡಿಮೆಯಾಗಿರಲಿಲ್ಲ. ಚೀನಾ, ಈಜಿಪ್ಟ್, ತುರ್ಕಿ ಮೊದಲಾದ ದೇಶಗಳಿಂದಲೂ ಕಾಮಾ ಮೆಚ್ಚುಗೆ ಪಡೆದಳು. ಕ್ರಾಂತಿಕಾರರಿಗೆ ಆಕೆಯೆಂದರೆ ಗೌರವವಿತ್ತು. ಪ್ರಪಂಚದ ವಿವಿಧೆಡೆಯ ಕ್ರಾಂತಿಕಾರಿ ಗಳಿಗೆಲ್ಲಾ ಮೇಡಂ ಕಾಮಾ ಪ್ರೀತಿಯ ತಾಯಿ , ನಲ್ಮೆಯ ಸೋದರಿಯಾಗಿದ್ದಳು. ಕೊನೆಯಲ್ಲಿ ತನ್ನಾಸೆಯಂತೆ ಭಾರತಕ್ಕೆ ಮರಳಿ 1936 ಆಗಸ್ಟ್13ರಂದು ಮೇಡಂ ಕಾಮಾ ತೀರಿಕೊಂಡಳು. ೩೪ ವರ್ಷಗಳ ಕಾಲ ಭಾರತದಿಂದ ಹೊರಗಿದ್ದರೂ ಕಾಮಾ ಭಾರತವನ್ನೇ ಪ್ರೀತಿಸಿದಳು, ಭಾರತದ ಸ್ವಾತಂತ್ರ್ಯಕ್ಕಾಗಿಯೇ ಹಗಲಿರುಳು ದುಡಿದಳು. ತನ್ನ ರಕ್ತದ ಪ್ರತಿ ಕಣದಲ್ಲಿರುವ ಶಕ್ತಿಯನ್ನೂ ಭಾರತಾಂಬೆಗಾಗಿ ಮೀಸಲಿಟ್ಟಿದ್ದಳು. ಅಂತಹ ವೀರಮಾತೆಯ ಸ್ಮರಣೆ ಪಾವನವಾದುದು.

Leave a Reply