ಇಂದಿನ ಯುವಜನರಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚಳ ಏಕೆ?

ಇಂದಿನ ಯುವಜನರಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚಳ ಏಕೆ?
ಇಂದಿನ ಯುವಪೀಳಿಗೆಯ ಜನರಲ್ಲಿ ಆತ್ಮಹತ್ಯೆ ಹೆಚ್ಚಲು ಅತಿಯಾದ ಭೀತಿ, ಆಸೆ, ಅಪೇಕ್ಷೆ, ಒತ್ತಡ , ಮಾನಸಿಕ ಅಪರಿಪಕ್ವತೆಗಳೇ ಕಾರಣ, ರೈತ, ಬಿಲ್ಡರ್, ಸಾಫ್ಟವೇರ್ ಇಂಜನಿಯರ್, ವಿದ್ಯಾರ್ಥಿಗಳು ಮುಂತಾದವರನ್ನು ಸೂಚಿಸಬಹುದು.
ರೈತನು ಬೆಳೆಯಲ್ಲಿ ನಷ್ಟವಾದರೆ ಅದಕ್ಕೆ ಕಾರಣವನ್ನು ಹುಡುಕಿ ಮತ್ತೆ ಹೀಗಾಗದಂತೆ ಮುಂಜಾಗರೂಕತೆ ವಹಿಸದೆ ಆತ್ಮಹತ್ಯೆ ಮಾಡಿಕೊಂಡರೆ ಆತನನ್ನು ಅವಲಂಬಿಸಿದವರ ಪಾಡೇನು? ಎಂದು ವಿವೇಚಿಸುವುದಿಲ್ಲ. ಬಿಲ್ಡರ್ ಗಳು ಲಾಭಕ್ಕಾಗಿ ಸಿಕ್ಕಾಪಟ್ಟೆ ಸಾಲಮಾಡಿ ತೀರಿಸಲಾಗದೇ ಹೀಗೆ ಆತ್ಮಹತ್ಯೆಗೆ ಶರಣಾಗುತ್ತಾರೆ. ತಮಗೊಪ್ಪಿಸಿದ ಪ್ರೊಜೆಕ್ಟ್ ವರ್ಕ್  ನ್ನು ವೇಳೆಯಲ್ಲಿ ಮುಗಿಯದಾಗ ಸಾಫ್ಟ್ ವೇರ್ ಇಂಜನಿಯರ್ ಗಳು ಹತಾಷರಾಗಿ ಖಿನ್ನತೆಗೆ ಒಳಗಾಗಿ ಈ ಕೃತ್ಯ ಕೈಕೊಳ್ಳುತ್ತಾರೆ.
ಇಂದು ಅವಿಭಕ್ತ ಕುಟುಂಬಗಳು ಕಡಿಮೆಯಾಗುತ್ತಾ ನ್ಯೂಕ್ಲಿಯರ್ ಕುಟುಂಬಗಳು ಹೆಚ್ಚಿವೆ. ಎಷ್ಟೋ ಕುಟುಂಬಗಳು ತಂದೆ ತಾಯಿ ಇಬ್ಬರೂ ದುಡಿಯುತ್ತಿರುವುದರಿಂದ ಮಕ್ಕಳ ಬೇಕು ಬೇಡಗಳಿಗೆ ತಮ್ಮ ಗಿಲ್ಟ್ ಕಡಿಮೆ ಮಾಡಲೋಸುಗ ತಾಯ್ತಂದೆಯರು ಬೇಗನೆ ಸ್ಪಂದಿಸುತ್ತಾರೆ. ಇದರಿಂದ ಮಕ್ಕಳಿಗೆ ಸ್ಟ್ರಗಲ್ ಮಾಡುವ ರೂಢಿಯಿಲ್ಲದೇ ತಮಗೇನು ಬೇಕಾಗುತ್ತದೋ ಅದನ್ನು ಸುಲಭವಾಗಿ ತಮ್ಮ ಹಠದಿಂದ ದೊರಕಿಸಿಕೊಳ್ಳುತ್ತಿರುತ್ತಾರೆ. ಒಂದು ವೇಳೆ ಹಠ ಮಾಡಿಯೂ ತಮಗೆ ಬೇಕಾಗಿದ್ದು ದೊರಕದೇ ಹೋದರೆ ಮಕ್ಕಳು ಹತಾಷರಾಗುತ್ತಾರೆ. ಯಾವುದೇ ಸ್ಟ್ರಗಲ್ ಇಲ್ಲದೇ ಆತ್ಮಶಕ್ತಿ ವಿಕಸಿತಗೊಳ್ಳುವುದಾದರೂ ಹೇಗೆ?
ಮೊದಲನೇ ಕ್ಲಾಸಿನಿಂದಲೂ ಇಂಗ್ಲೀಷ್ ಮೀಡಿಯಂ ಓದುವ ಮಕ್ಕಳಿಗೆ ಹೋಂವರ್ಕ್ ಎನ್ನುವುದು ಹೊರೆಯಾಗಿ ಪರಿಣಮಿಸುತ್ತದೆ. ಹೀಗಾಗಿ ಬಾಯಿಪಾಠ ಸಂಸ್ಕೃತಿಯನ್ನು ತಮ್ಮದನ್ನಾಗಿಸಿದ ಮಕ್ಕಳು ಎಳವೆಯಲ್ಲಿಯೇ ಸ್ವಂತ ವಿವೇಚನೆಯಿಲ್ಲದೇ ಕಾರಕೂನಿಕೆಯಂತೆ ಹೇಳಿದ್ದಷ್ಟನ್ನೇ ಮಾಡುವ ರೂಢಿ ಬೆಳೆಸಿಕೊಂಡಿರುತ್ತಾರೆ. ಇದರಿಂದಾಗಿ ಪೂರ್ಣಪ್ರಮಾಣದ ಅರಿವು ಇಲ್ಲದೇ ಸಾಧಿಸಬೇಕಾದ ಗುರಿ ಹಾಗೂ ಅದಕ್ಕೆ ಬೇಕಾಗುವ ಪರಿಶ್ರಮದ ಮಧ್ಯ ಅಂತರ ಹೆಚ್ಚಾದಾಗ ಸ್ವಾಭಾವಿಕವಾಗಿ ನಿರಾಶೆಯಾಗುತ್ತದೆ. ಅದಕ್ಕೆ ಕೊಡಲಿಪೆಟ್ಟಿನಂತೆ ಮನೆಮಂದಿಯ, ನೆಂಟರ ಅವಹೇಳನದಿಂದ ಮತ್ತೂ ಕುಗ್ಗಿಹೋಗುತ್ತಾರೆ. ನಿರಾಶೆ ಹೊಂದಿದ ಮನಸ್ಸಿಗೆ ಸಾಂತ್ವನ ದೊರೆಯದೇ ಸಾವೇ ಗತಿ ಎಂಬ ನಿಲುವು ತಾಳುತ್ತಾರೆ.
ಮನುಷ್ಯನಿಗೆ ಗೆಲುವೇ ಮುಖ್ಯವಲ್ಲ. ಸೋಲೇ ಗೆಲುವಿನ ಸೋಪಾನ. ಸೋಲಿನ ಕಹಿ ಹತ್ತದೇ ಗೆಲುವಿನ ಸವಿ ಸವಿಸುವುದಿಲ್ಲ. ಮಕ್ಕಳಿಗೆ ತಂದೆ-ತಾಯಿಗಳು ಮೊದಲನೇ ನಂಬರು ಬರಬೇಕೆಂದು ಹುರಿದುಂಬಿಸುತ್ತಾರೆಯೇ ಹೊರತು ಹೊರಗಿನ ಪ್ರಪಂಚಕ್ಕೆ ಅಡಿ ಇಟ್ಟಾಗ ಸೋಲು ಎದುರಾದಾಗ ಅದನ್ನು ಮೆಟ್ಟಿ ಛಲದಿಂದ ಮುನ್ನಡೆಯುವುದು ಹೇಗೆ ಎನ್ನುವುದನ್ನು ಕಲಿಸಿರುವುದಿಲ್ಲ. ಮಕ್ಕಳಿಗೆ ಸೋಲಲಿಕ್ಕೂ ಕಲಿಸಬೇಕು. ಇಲ್ಲಾದರೆ ಮಕ್ಕಳು ಗೆದ್ದು ಗೆದ್ದು ಕೊನೆಗೊಮ್ಮೆ ಸೋಲಾದಾಗ ಹತಾಷರಾಗಿ ಸಾವಿಗೆ ಶರಣಾಗುತ್ತಾರೆ. ಸೋತು ಗೆದ್ದಾಗ ಅದರ ಸವಿ ಹೆಚ್ಚು. ಸೋತಾಗ ಹೆಚ್ಚಿನ ಛಲದಿಂದ ಗೆಲುವು ಸಾಧಿಸಬೇಕೇ ಹೊರತು ಜೀವನವನ್ನೇ ಕೊನೆಗಾಣಿಸುವುದಲ್ಲ.
ಮಗು ಪುಟ್ಟ ಪುಟ್ಟ ಹೆಜ್ಜೆ ಮೂಡಿಸಲು ಕಲಿಯುವಾಗ ಎಡವಿ ಬೀಳುತ್ತದೆ. ಅದರಿಂದ ಅದು ಹತಾಷವಾಗುವುದಿಲ್ಲ. ಮತ್ತೆ ಎದ್ದು ನಿಂತು ಜೋಲಾಡುತ್ತ ತಪ್ಪು ಹೆಜ್ಜೆಗಳನ್ನಾದರೂ ಸರಿ ಮೂಡಿಸಲು ಮಗ್ನನಾಗುತ್ತವೆ. ಆಗ ತಾಯಿಯ ಪ್ರೋತ್ಸಾಹವಿರುತ್ತದೆ. ಆದರೆ ಮಗು ಬೆಳೆದಾಗ ತಪ್ಪಿದಲ್ಲಿ ಅವಹೇಳನಕ್ಕೆ ಗುರಿ ಮಾಡದೇ ಪ್ರೋತ್ಸಾಹಿಸಿದಲ್ಲಿ ಮಗು ಖಂಡಿತವಾಗಿಯೂ ಚೈತನ್ಯ ತುಂಬಿಕೊಳ್ಳುತ್ತದೆ.
ಅಗಾಧ ವಿಶ್ವದಲ್ಲಿ ವಿಪುಲ ಅವಕಾಶಗಳಿವೆ. ಸಾಧಿಸಬೇಕಾದ ಗುರಿ ಛಲ ಮತ್ತು ಹೋರಾಟ ತಮ್ಮದಾಗಿಸಿಕೊಂಡಾಗ ಯುವಜನತೆ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಬಲ್ಲರು. ಹತಾಷೆ ಸೋಲಿಗೆ ಅಲ್ಲಿ ಅವಕಾಶವಿಲ್ಲ.

 

Leave a Reply