ಕೆ.ಪಿ.ಓ.ದಲ್ಲಿ ಸಂಧಿ.

ಕೆ.ಪಿ.ಓ.ದಲ್ಲಿ ಸಂಧಿ.
ಇಂದು ಜಾಗತೀಕರಣದಿಂದಾಗಿ ಜಗತ್ತು ಚಿಕ್ಕದಾಗಿ ಪರಿಣಮಿಸಿದೆ. ನಿಮಿಷಾರ್ಧದಲ್ಲೇ ಜಗತ್ತಿನ ಯಾವುದೇ ಮೂಲೆಯಿಂದಲೂ ನಾವು ಪರಿಭಾಷಿಸಬಹುದು. ವ್ಯಾಪಾರ ವಹಿವಾಟು ಮಾಡಬಹುದು ಹಾಗೂ ಲಾಭ ನಷ್ಟಗಳನ್ನೂ ಕೂಡ ಪಡೆಯಬಹುದು. ಇದೆಲ್ಲವೂ ತಂತ್ರಜ್ಞಾನದ ಮಹಿಮೆಯಿಂದ ಸಾಧ್ಯ.
ಇಂದು ಜಗತ್ತಿನ ಯಾವುದೇ ಮೂಲೆಗೂ ತೆರಳದೇ ಇಲ್ಲೇ ನಾಲ್ಕು ಗೋಡೆಗಳ ಮಧ್ಯದಲ್ಲೇ ಕುಳಿತು ಕಂಪ್ಯೂಟರಿನ ಮೇಲೆ ಇಂಟರ್ ನೆಟ್ಟಿನ ಮುಖಾಂತರ ಕೆಲಸ ಮಾಡಿಕೊಡಬಹುದು. ಹಾಗೇ ಇಲ್ಲೇ ಕುಳಿತೇ ಸಂಬಳವನ್ನೂ ಪಡೆಯಬಹುದು. ಅಂದರೆ ಸೇವೆಯಾಧಾರಿತ ಕೆಲಸ ಇಂದು ಹೆಚ್ಚಾಗುತ್ತಿದೆ. ಇದರಿಂದ ಸಾಕಷ್ಟು ಅನುಕೂಲಗಳೂ ಇವೆ. ಅನಾನುಕೂಲಗಳೂ ಇವೆ. ಆಫೀಸಿಗೆ ಹೋಗಿ ಬರುವ ಸಮಯದ ಉಳಿಕೆ, ಪೆಟ್ರೋಲ್, ಡಿಸೈಲ್ ಗಳ ಉಳಿತಾಯ, ಟ್ರಾಫಿಕ್ ಜನಸಂದಣಿಯಿಂದ ತೊಂದರೆಯಾಗುವುದನ್ನು ತಪ್ಪಿಸಬಹುದು. ಕೆಲಸಕ್ಕಾಗಿ ಯಾವುದೇ ಅಡೆತಡೆ ಇಲ್ಲದೇ ಶಾಂತ ಮನಸ್ಥಿತಿಯಿಂದ ಒಂದೇ ಕಡೆಗೆ ಕುಳಿತು ಕೆಲಸ ನಿರ್ವಹಿಸಬಹುದು. ಹಾಗೂ ಹೆಣ್ಣು ಮಕ್ಕಳಾದರೆ ಮನೆಯನ್ನೂ ಸಂಭಾಳಿಸಬಹುದು, ಮಗುವನ್ನೂ ನೋಡಿಕೊಳ್ಳಬಹುದು. ಆದರೆ ಇದರಲ್ಲೂ ಕೆಲವಾರು ಅನಾನುಕೂಲಗಳೂ ಇವೆ. ಒಂದೇ ಸಮನೆ ಕಂಪ್ಯೂಟರಿನ ಮುಂದೆ ಕೆಲಸ ನಿರ್ವಹಿಸುವುದರಿಂದ ಕೈಗಳಲ್ಲಿ ಸೆಳೆತ ಉಂಟಾಗಿ ನರದೌರ್ಬಲ್ಯ ಉಂಟಾಗಬಹುದು. ಕಣ್ಣು ನೋವು ಬರಬಹುದು. ವಿದೇಶೀ ಕಂಪನಿಯಲ್ಲಿ ಕೆಲಸ ಅಂದರೆ ಅವರ ಅನುಕೂಲದ ವೇಳೆಯಲ್ಲಿ ಇಲ್ಲಿಯವರು ಕೆಲಸ ಮಾಡಿಕೊಡಬೇಕಾಗಬಹುದು. ಅಲ್ಲಿ ಬೆಳಗಾದರೆ ಇಲ್ಲಿ ರಾತ್ರಿಯಾಗಿರುತ್ತದೆ. ಹೀಗಾಗಿ ಕೆಲವಾರು ಇಲ್ಲಿಯ ಕಂಪನಿಗಳು ರಾತ್ರಿ ಪಾಳಿಯಲ್ಲಿ ಕೆಲಸಗಳನ್ನು ತೆಗೆದುಕೊಳ್ಳುತ್ತವೆ. ದುಡ್ಡನ್ನು ದಂಡು ದಂಡಿಯಾಗಿ ಕೊಡುತ್ತಾರೆ. ಅಂದ ಮಾತ್ರಕ್ಕೆ ನಮ್ಮ ನಿದ್ದೆ ಆಹಾರ, ಸಂಸ್ಕಾರ ಪದ್ಧತಿಗಳೆಲ್ಲ ಬದಲಾಗಬೇಕೆ? ಸಹಜವಾಗಿ ಇರಲಾಗದೇ ಅಸಹಜತೆಯಿಂದ ನರಳಬೇಕಾಗುತ್ತದೆ. ಮುಂದೆ ನಾಲ್ವತ್ತರ ಆಸುಪಾಸಿನಲ್ಲೇ ಇಲ್ಲದ ಎಲ್ಲ ರೋಗಗಳನ್ನೂ ಮೈಮೇಲೆ ಎಳೆದುಕೊಂಡಂತಾಗುತ್ತದೆ. ಇಂಥ ಎಲ್ಲ ಅನಾನುಕೂಲಗಳ ಮಧ್ಯದಲ್ಲೂ ನಮ್ಮ ದೇಶದ ಜಿ.ಡಿ.ಪಿ. ಹೆಚ್ಚುತ್ತಿದೆ ಇಂಥ ಸೇವೆಯಾಧಾರಿತ ಹೊರ ಗುತ್ತಿಗೆಯ ಮೂಲಕ. ಹೀಗಾಗಿ ಇಂದಿನ ಯುವಜನಾಂಗಕ್ಕೆ ನಮ್ಮ ದೇಶದ ಅಭಿವೃದ್ಧಿಗೆ ಕೈಜೋಡಿಸುತ್ತಿರುವುದಕ್ಕೆ ಅಭಿನಂದಿಸಲೇಬೇಕು. ಅದಕ್ಕಾಗೇ ಇಂದು ಹೊರ ಗುತ್ತಿಗೆ ವ್ಯವಸಾಯ ದಿನದಿನಕ್ಕೂ ಹೆಚ್ಚುತ್ತಲೇ ಇದೆ. ಕೆ.ಪಿ.ಓ. ಅಂದರೆ ನಮ್ಮಲ್ಲಿ ಪರಿಣಿತ ಕೆಲಸಗಾರರ ಸಂಖ್ಯೆ ಸಾಕಷ್ಟಿದ್ದು ಬೇರೆ ದೇಶದಲ್ಲಿ ನುರಿತ ಕೆಲಸಗಾರರಿಲ್ಲದಾಗ ಅಂಥ ಕಂಪನಿಗಳು ನಮ್ಮಲ್ಲಿಯ ಪ್ರಾವೀಣ್ಯತೆ ಪಡೆದವರನ್ನು ತಮ್ಮ ಕಂಪನಿಗಳಿಗೆ ಒದಗಿಸುವಂತೆ ಇಲ್ಲಿಯ ಕಂಪನಿಗಳಿಗೆ ರಿಕ್ವೆಸ್ಟ್ ಮಾಡಿಕೊಳ್ಳುತ್ತವೆ. ಹೀಗಾಗಿ ಮಧ್ಯವರ್ತಿಯಾಗಿ ಇಲ್ಲಿಯ ಇನ್ ಫೋಸಿಸ್ ಆಗಲಿ, ವಿಪ್ರೋ ಅಥವಾ ಟಿ.ಸಿ.ಎಸ್. ಅಥವಾ ಮತ್ತ್ಯಾವುದೋ ಕಂಪನಿಗಳು ವಿದೇಶೀ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತವೆ. ಆ ಪ್ರಕಾರವಾಗಿ ಇಲ್ಲಿಯ ಉದ್ಯೋಗ ಸಮಸ್ಯೆಯೂ ಬಗೆಹರಿದಂತಾಗುತ್ತದೆ ಹಾಗೂ ದೇಶದ ಆರ್ಥಿಕತೆಗೆ ಕೊಡುಗೆಯೂ ನೀಡಿದಂತಾಗುತ್ತದೆ.
ಕೆ.ಪಿ.ಓ. ಎಂದರೆ Knowledge process out sourcing ಎಂದರೆ ಅವರ ಜ್ಞಾನವನ್ನಾಧರಿಸಿದ ಕೆಲಸವನ್ನು ಪಡೆದು ದುಡ್ಡು ಕೊಡುವುದು. ಈಗ ನಮ್ಮ ದೇಶದಲ್ಲಿ ಅಸಂಖ್ಯಾತ ದಕ್ಷ ಇಂಜಿನೀಯರಿರುತ್ತಾರೆ, ಡಾಕ್ಟರುಗಳಿರುತ್ತಾರೆ, ವಕೀಲರಿರುತ್ತಾರೆ. ಅಥವಾ ಮೆಡಿಕಲ್ ಟ್ರಾನ್ಸ್ ಸ್ಕ್ರಿಪ್ಶನ್ನಿನವರಿರುತ್ತಾರೆ. ಅಮೇರಿಕಾ ಅಥವಾ ಯುರೋಪಗಳಲ್ಲಿ ಇಂಥ ಸುಶಿಕ್ಷಿತ ಕೆಲಸಗಾರರು ಸಿಗುವುದು ವಿರಳ. ಆ ದೇಶಗಳು ಎಷ್ಟೇ ಅಭಿವೃದ್ಧಿಶೀಲ ರಾಷ್ಟ್ರಗಳಾದರೂ ಕೂಡ ಅಲ್ಲಿಯ ಮಕ್ಕಳ ಶಿಕ್ಷಣ ಹೇಳಿಕೊಳ್ಳುವಂಥದ್ದಿರುವುದಿಲ್ಲ. ಹದಿನೆಂಟು ವರ್ಷಗಳ ನಂತರ ಮೆಚ್ಯುರಿಟಿಗೆ ಬಂದ ಬಾಲಕ ಅಥವಾ ಬಾಲಕಿ ಅಮೇರಿಕೆಯಂಥ ದೇಶದಲ್ಲಿ ತನ್ನ ತಾನೇ ದುಡಿದು ಸ್ವಾವಲಂಬಿಯಾಗಬೇಕಾಗುತ್ತದೆ. ತಂದೆತಾಯಿಗಳ ಜವಾಬ್ದಾರಿ ಮಕ್ಕಳನ್ನು ಹದಿನೆಂಟು ವರ್ಷಗಳವರೆಗೆ ಮಾತ್ರ ನೋಡಿಕೊಳ್ಳುವುದಾಗಿರುತ್ತದೆ. ಅದಕ್ಕೆ ಅಲ್ಲಿಯ ಕೌಟುಂಬಿಕ ವ್ಯವಸ್ಥೆಯೂ ಕಾರಣ. ಹೀಗಾಗಿ ಆ ಮಕ್ಕಳು ಹೊಟ್ಟೆಬಟ್ಟೆಗಾಗಿ ಶಿಕ್ಷಣಕ್ಕೆ ತಿಲಾಂಜಲಿಯನ್ನಿತ್ತು ದುಡಿಯಲು ಪ್ರಾರಂಭಿಸುತ್ತಾರೆ. ಹೀಗಾಗಿ ಅಲ್ಲಿ ಸುಶಿಕ್ಷಿತ ಕೆಲಸಗಾರರ ಕೊರತೆ ಎದ್ದು ಕಾಣುತ್ತದೆ. ಆದರೆ ತಮ್ಮ ಕಂಪನಿಗಳನ್ನು ನಡೆಸಲು ಅವರಿಗೆ ಸುಶಿಕ್ಷಿತ, ದಕ್ಷ, ವಿಶೇಷ ಪರಿಣಿತ ಕೆಲಸಗಾರರ ಅವಶ್ಯಕತೆ ಇದ್ದಾಗ ನಮ್ಮ ದೇಶದಲ್ಲಿರುವ ಸುಶಿಕ್ಷಿತರಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸವನ್ನು ನೀಡಿ ದುಡ್ಡು ಕೊಡುತ್ತಾರೆ. ಅದೆ ಕೆಲಸವನ್ನು ಅಮೇರಿಕೆಯಲ್ಲಿ ಮಾಡಿಸಿಕೊಳ್ಳಬೇಕಾದರೆ ಅಲ್ಲಿಯ ಸ್ಟ್ಯಾಂಡರ್ಡ್ ಆಫ್ ಲಿವಿಂಗ್ ಅಧಿಕವಾಗಿರುವುದರಿಂದ ಅಮೇರಿಕೆಯಲ್ಲಿಯ ಅಥವಾ ಇನ್ನಾವುದೇ ವಿದೇಶೀ ಕಂಪನಿಗಳು ಹೆಚ್ಚಿಗೇ ಸಂಬಳ ನೀಡಬೇಕಾಗುತ್ತದೆ. ಹೀಗಾಗಿ ಆ ಕಂಪನಿಗಳ ಖರ್ಚು ವೆಚ್ಚ ಹೆಚ್ಚಾಗಿ ಲಾಭದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಆದರೆ ಭಾರತದ ಸ್ಟ್ಯಾಂಡರ್ಡ್ ಆಫ್ ಲಿವಿಂಗ್ ಕಡಿಮೆ ಇದೆ. ಬೆಲೆಗಳು ಅಲ್ಲಿಯದನ್ನು ಹೋಲಿಸಿದಾಗ ತುಂಬಾ ಕಡಿಮೆ ಇರುತ್ತದೆ. ಹೀಗಾಗಿ ವಿದೇಶೀ ಕಂಪನಿಗಳು ಕಡಿಮೆ ದುಡ್ಡು ಕೊಟ್ಟು ಹೆಚ್ಚಿಗೆ ಕೆಲಸ ಮಾಡಿಸಿಕೊಳ್ಳುತ್ತವೆ. ಆದರೆ ಅವರು ಡಾಲರ್ ಮೂಲಕ ದುಡ್ಡನ್ನು ನೀಡುತ್ತಿರುವುದರಿಂದ ಅದು ರೂಪಾಯಿಗಳಲ್ಲಿ ಬದಲಾದಾಗ ಅದು ದೊಡ್ಡ ಮೊತ್ತವಾಗುತ್ತದೆ. ಹೀಗಾಗಿ ಅದರಿಂದ ಇಬ್ಬರಿಗೂ ಲಾಭವೇ. ಹೀಗಾಗಿ ಇಂಥ ಸೇವಾಧಾರಿತ ಕೆಲಸಗಳನ್ನು ವಿದೇಶಕ್ಕೆ ಹೋಗಿಯೇ ಮಾಡಬೇಕೆಂದಿಲ್ಲ. ನಮ್ಮ ದೇಶದಲ್ಲೇ ಉಳಿದು ಕಂಪ್ಯೂಟರಿನಿಂದ, ಇಂಟರ್ ನೆಟ್ ಮುಖಾಂತರ ಕೆಲಸ ನಿರ್ವಹಿಸಬಹುದು. ಸೇವಾಧಾರಿತ ಕೆಲಸವೆಂದರೆ ಎಂಥದ್ದು ಇರಬಹುದು ಎಂಬ ಶಂಕೆ ಮನಸ್ಸಿನಲ್ಲಿ ಮೂಡಬಹುದು. ಈಗ ಇಲ್ಲಿ ಸಾಕಷ್ಟು ನುರಿತ ವಕೀಲರಿರುತ್ತಾರೆ. ಅವರು ಬೇರೆ ದೇಶದ ಎಂದರೆ ಯಾವ ದೇಶದ ಕಂಪನಿಗಳಲ್ಲಿ ಅವರು ಸೇವೆಯಾಧಾರಿತ ಕೆಲಸವನ್ನು ಮಾಡುತ್ತಿರುತ್ತಾರೋ ಆ ದೇಶದ ಕಾನೂನುಗಳನ್ನು ಅಭ್ಯಸಿಸಬೇಕಿರುವುದು ಅವಶ್ಯಕ. ಅವರ ಭಾಷಾ ಉಚ್ಛಾರಣೆ, ಇಂಗ್ಲೀಷ್ ಭಾಷೆಯ ಮೇಲೆ ಪ್ರಭುತ್ವ ಇತ್ಯಾದಿಗಳ ತರಬೇತಿ ಮುಖ್ಯವಾದದ್ದು. ನಂತರ ಅಲ್ಲಿಯ ವಕೀಲರು ಕಾನೂನು ಸಲಹೆಗಳನ್ನು ಇಲ್ಲಿಯವರ ಹತ್ತಿರ ಪಡೆಯುತ್ತಾರೆ. ಅಂದರೆ ವಿಶೇಷ ನುರಿತ ಪ್ರಾವಿಣ್ಯತೆಯನ್ನು ಹೊಂದುವುದು ಅವಶ್ಯಕ. ಹಾಗೇ ಡಾಕ್ಟರುಗಳು ಇಂಟರ್ ನೆಟ್ ನ ಮೂಲಕವೇ ಯಾವ ರೀತಿಯ ಆಪರೇಶನ್ ನ್ನು ಮಾಡಬಹುದು ಎಂಬುದನ್ನೆಲ್ಲ ತಿಳಿಸಿಕೊಡುತ್ತಾರೆ. ಇತ್ತೀಚೆಗೆ ಪಾಕಿಸ್ತಾನದ ಚಿಕ್ಕ ಮಗುವಿನ ಹೃದಯದ ಆಪರೇಷನ್ ನ್ನು ಇಲ್ಲಿ ಕುಳಿತೇ ನಾರಾಯಣ ಹೃದಯಾಲಯದ ನುರಿತ ವೈದ್ಯರು ಯಶಸ್ವಿಯಾಗಿ ನಿರ್ವಹಿಸಿದ್ದನ್ನು ನಾವೆಲ್ಲ ಟಿ.ವಿ.ಯಲ್ಲಿ ನೋಡಿದ್ದೇವಷ್ಟೇ. ಮೆಡಿಕಲ್ ಟ್ರಾನ್ಸ್ ಸ್ಕ್ರಿಪ್ಟಿನಲ್ಲಿ ಅಲ್ಲಿಯ ವೈದ್ಯರಿಗೆ ವೇಳೆಯೇ ಇರುವುದಿಲ್ಲ. ಅವರು ಔಷಧಿಗಳನ್ನು ಬರೆಯಲೂ ಸಾಧ್ಯವಾಗುವುದಿಲ್ಲ. ಅಂಥ ಸಂದರ್ಭದಲ್ಲಿ ಮೆಡಿಕಲ್ ಟ್ರಾನ್ಸ್ ಸ್ಕ್ರಿಪ್ಶನ್ನಿನವರು ಅವರ ದೇಶದ ಭಾಷೆಯ ಉಚ್ಛಾರಣೆ ಇತ್ಯಾದಿಗಳಲ್ಲಿ ತರಬೇತಿ ಪಡೆದಿರುತ್ತಾರೆ. ಅವರು ರಿಪೋರ್ಟನ್ನು ತಯಾರಿಸುತ್ತಾರೆ. ಅಲ್ಲಿಯ ಡಾಕ್ಟರರ ಮುಕ್ಕಾಲು ಪಾಲು ಕೆಲಸವನ್ನು ಇಲ್ಲಿಯವರೇ ಮಾಡಿಕೊಡುತ್ತಾರೆ. ಹೀಗಾಗಿ ಅವರ ಕೆಲಸ ಹಗುರವಾಗುತ್ತದೆ. ಮೊಟ್ಟ ಮೊದಲಿಗೆ ಇಂಥ ಒಂದು ಸೇವಾಧಾರಿತ ಕೆಲಸವನ್ನು ನಮ್ಮ ದೇಶಕ್ಕೆ ಪರಿಚಯಿಸಿದವರೆಂದರೆ ನಾರಾಯಣ ಮೂರ್ತಿಯವರು. ೮೦ರ ದಶಕದಲ್ಲಿ ಇನ್ ಫೋಸಿಸ್ ಎಂಬ ಕಂಪನಿಯೊಂದನ್ನು ಹುಟ್ಟು ಹಾಕಿ ಅದರಲ್ಲಿ ಸುಶಿಕ್ಷಿತ ಇಂಜನಿಯರುಗಳಿಗೆ ತಾಂತ್ರಿಕ, ಭಾಷಾ ಉಚ್ಛಾರದ ತರಬೇತಿಗಳನ್ನು ನೀಡಿ ಹೊರದೇಶದಿಂದ ಕೆಲಸಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲಾರಂಭಿಸಿದರು. ವಿದೇಶೀ ಕಂಪನಿಗಳು ನೀಡುವ ಸಂಬಳದಲ್ಲಿ ಕಂಪನಿಗಷ್ಟು ಇಟ್ಟುಕೊಂಡು ಉಳಿದಿದ್ದನ್ನು ಕೆಲಸಗಾರರಿಗೆ ನೀಡತೊಡಗಿದರು. ಇದರಿಂದಾಗಿ ಕಂಪನಿಗಳೂ ಕೂಡ ಲಾಭವನ್ನು ಹೊಂದಿ ದೈತ್ಯ ಕಂಪನಿಗಳಾಗಿ ಮಾರ್ಪಾಟಾದವು. ಇಂದು ಇನ್ ಫೋಸಿಸ್, ಟಿ.ಸಿ.ಎಸ್. ವಿಪ್ರೋ, ರಿಲಾಯನ್ಸ್, ಮಹೀಂದ್ರಾ ಟೆಕ್, ಇನ್ನೂ ಅನೇಕ ಕಂಪನಿಗಳು ದೇಶದ ಆರ್ಥಿಕಕ್ಕೆ ಬೆನ್ನೆಲುಬಾಗಿ ನಿಂತಿವೆ ಎಂದರೆ ತಪ್ಪಲ್ಲ.
ಔಟ್ ಸೋರ್ಸಿಂಗ್ ಅಥವಾ ಹೊರ ಗುತ್ತಿಗೆ ಒಂದು ಭಾಗವಾಗಿ ಕೆ.ಪಿ.ಓ. ಎಂದರೆ (Knowledge process out sourcing ) ಅಂದರೆ ಜ್ಞಾನವನ್ನಾಧರಿಸಿದ ಹೊರ ಗುತ್ತಿಗೆ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಈಗ ಭಾರತವು ಈ ಕೆ.ಪಿ.ಓ. ದಲ್ಲಿ ಗಟ್ಟಿಯಾದ ಪಾದವನ್ನೂರುತ್ತಿದೆ ಎಂದು ಹೇಳಬಹುದು. ಬಿ.ಪಿ.ಓ. ದಲ್ಲಿ ಒಂದು ಸಾಮಾನ್ಯವಾದ ಸ್ತರದಲ್ಲಿ ನೌಕರಿ ದೊರೆಯಬಹುದಾದರೂ ಈ ಕೆ.ಪಿ.ಓ.ದಲ್ಲಿ ವಿಶಿಷ್ಟದರದ ನೌಕರಿ ದೊರೆಯುವುದು. ಅಂದರೆ ಇಲ್ಲಿ ವಿಶೇಷ ಪರಿಣತಿಯಾದವರ ಅವಶ್ಯಕತೆ ಇದೆ ಎಂದು ಹೇಳಬಹುದು.
ಕೆ.ಪಿ.ಓ. ದ ವಿಶೇಷತೆ ಏನೆಂದರೆ ಸಂಶೋಧನೆ ಹಾಗೂ ಅಭಿವೃದ್ಧಿ, ವ್ಯಾಪಾರ ಹಾಗೂ ತಾಂತ್ರಿಕ ಅನ್ಯಾಲಿಸಿಸ್, ಕಾನೂನು ಸಲಹೆಗಳು, ಇಂಟಲೆಕ್ಚುವಲ್ ಪ್ರಾಪರ್ಟಿಸ್ ಮತ್ತು ಸಂಶೋಧನೆ, ತರಬೇತಿ ಹಾಗೂ ಸಲಹೆಗಳು, ಫಾರ್ಮಾ ಹಾಗೂ ಬಯೋಟೆಕ್ ಅಡ್ವಾನ್ಸ್ ಮೆಂಟ್ ಅಪ್ಲಿಕೇಶನ್ ಮುಂತಾದ ಭಾಗಗಳಲ್ಲಿ ಪರಿಣಿತರನ್ನು ಭರ್ತಿ ಮಾಡಲಾಗುತ್ತದೆ. ಈ ಕ್ಷೇತ್ರದಲ್ಲಿ ಸಂಬಳವೂ ಮೇಲ್ದರ್ಜೆಯಲ್ಲಿರುತ್ತದೆ ಎಂಬುದೇ ಆಕರ್ಷಣೆ. ನಾಸ್ಕಾಮ್ ಕಂಪನಿ ನಡೆಸಿದ ಸಮೀಕ್ಷೆಯಲ್ಲಿ ಮುಂದಿನ ದಿನಮಾನಗಳಲ್ಲಿ ಈ ಕೆ.ಪಿ.ಓ.ದಲ್ಲಿ ಮಹತ್ತರ ಸಂಧಿ ಬರುತ್ತದೆ ಎಂದು ಗೊತ್ತಾಗುತ್ತದೆ.
ಕೆ.ಪಿ.ಓ.ದಲ್ಲಿ ಯಾವುದೇ ಒಂದು ವಿಷಯದಲ್ಲಿ ಪ್ರಾವೀಣ್ಯತೆ ಹೊಂದಿರುವುದು ಅವಶ್ಯವಾಗಿದೆ. ಮತ್ತು ವೇತನವೂ ದುಪ್ಪಟ್ಟಾಗಿರುತ್ತದೆ. ಮುಖ್ಯವಾಗಿ ಸಕಾರಾತ್ಮಕ ಭಾವನೆಯು ಇರಬೇಕಾದದ್ದು ಅವಶ್ಯಕ. ಯಾವುದೇ ಒಂದು ಕೆಲಸವನ್ನು ಮಾಡಲು ಕೈಗೆತ್ತಿಕೊಂಡರೆ ಅದನ್ನು ಪೂರ್ಣಗೊಳಿಸಬೇಕೆನ್ನುವ ಹಠ, ಜಿದ್ದು ಅವಶ್ಯಕ. ಸಂವಹನ ಕಲೆ, ಉತ್ತಮ ನಡಾವಳಿ, ಇನ್ನೊಬ್ಬರನ್ನು ಚೆನ್ನಾಗಿ ಕನ್ವೀನ್ಸ್ ಮಾಡುವ ಸಾಮರ್ಥ್ಯ, ಕಂಪ್ಯೂಟರಿನ ಉತ್ತಮ ಅರಿವು. ಹಾಗೇ ಆನ್ ಲೈನ್ ರಿಸರ್ಚ್ ಅಥವಾ ಸಂಶೋಧನೆ ಮಾಡುವ ಕ್ಷಮತೆ, ಇಂಗ್ಲೀಷ್ ಭಾಷೆಯ ಮೇಲಿನ ಹಿಡಿತ, ರಿಪೋರ್ಟ್ ತಯಾರಿಸುವಲ್ಲಿ ಪ್ರಾವೀಣ್ಯತೆ ಹಾಗೂ ಲೆಕ್ಕಾಚಾರದ ವಿಶ್ಲೇಷಣೆ ಮಾಡುವಲ್ಲಿ ಸಾಮರ್ಥ್ಯವಿರಬೇಕು.
ಕೆ.ಪಿ.ಓ.ದಲ್ಲಿ ಜ್ಞಾನಕ್ಕೇ ಮಹತ್ವ. ಅಂದರೆ ಇಲ್ಲಿ ಕೆಲಸ ಮಾಡಲು ಶೈಕ್ಷಣಿಕ ಪಾತ್ರ ಮುಖ್ಯವಾದದ್ದು. ವಿಜ್ಞಾನ ಹಾಗೂ ಸಂಶೋಧನೆಯ ಪಾರ್ಶ್ವಭೂಮಿಯಲ್ಲಿರುವವರಿಗೇ ಇದು ಹೆಚ್ಚು ಇಷ್ಟವಾಗುತ್ತದೆ. ಪ್ರತಿಯೊಂದು ವಿಷಯದಲ್ಲೂ ಮಾಹಿತಿ ಇರಬೇಕಾದದ್ದು ಅವಶ್ಯಕ. ಮ್ಯಾನೇಜ್ ಮೆಂಟ್ ಪ್ರೊಫೇಶನಲ್, ವಕೀಲ, ಇಂಜನೀಯರ್, ಅರ್ಥಶಾಸ್ತ್ರಜ್ಞ, ಟೀಚರ್, ಆರ್ಕಿಟೆಕ್ಟ್, ಫಿಜಿಯೋ ಥೆರಪಿಸ್ಟ್, ಸಂಶೋಧಕ ಮುಂತಾದವರಿಗೆ ಈ ಕ್ಷೇತ್ರದಲ್ಲಿ ಸಾಕಷ್ಟು ಸ್ಕೋಪ್ ಇದೆ.
ಇತ್ತೀಚೆಗೆ ಮಕ್ಕಳು ದೊಡ್ಡವರಾಗಿ ತಮ್ಮ ವಿದ್ಯಾಭ್ಯಾಸದಲ್ಲಿ ತಲ್ಲೀನರಾದರೋ ಅಥವಾ ವೃತ್ತಿಯಲ್ಲಿ ನಿರತರಾದರೋ ಕಲಿತ ಮಹಿಳೆಯರು ಮೆಡಿಕಲ್ ಟ್ರಾನ್ಸ್ ಸ್ಕ್ರಿಪ್ಟಿನ ತರಬೇತಿ ಪಡೆದು ಮನೆಯಲ್ಲಿ ಕುಳಿತೇ ಮೂವತ್ತು ಸಾವಿರದವರೆಗೂ (ಇನ್ನೂ ಹೆಚ್ಚೂ ಆಗಬಹುದು) ಗಳಿಸುತ್ತಿದ್ದಾರೆ. ನನ್ನ ಗೆಳತಿ ಅನುಂಧರಾ ಕೂಡ ಅಂಥವರಲ್ಲಿ ಒಬ್ಬಳು. ಮಗ ಇಂಜಿನೀಯರಾಗಿ ಉಚ್ಛ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿದ. ಪತಿ ತಮ್ಮ ಉದ್ಯೋಗದಲ್ಲಿ ಮಗ್ನ, ಒಬ್ಬಳೇ ಮನೆಯಲ್ಲಿ ಆಕೆ ಏಕಾಂಗಿಯಂತಾದಾಗ ಮೊದಲೇ ಇದರ ಟ್ರೇನಿಂಗ್ ನ್ನು ಪಡೆದವಳಾದ್ದರಿಂದ ಆಕೆ ಮೆಡಿಕಲ್ ಟ್ರಾನ್ಸ್ ಸ್ಕ್ರಿಪ್ಟಿನ ಉದ್ಯೋಗವನ್ನು ಮನೆಯಲ್ಲೇ ಕುಳಿತು ಬೆಳಗ್ಗೆ ೬ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ಕಂಪ್ಯೂಟರಿನ ಮೂಲಕ ಕೆಲಸ ಮಾಡುತ್ತಾಳೆ. ಸುಮಾರು ನಾಲ್ವತ್ತು ಸಾವಿರದವರೆಗೂ ಗಳಿಸುತ್ತಾಳೆ. ಮಧ್ಯಾಹ್ನ ಊಟ ವಿಶ್ರಾಂತಿ ಪಡೆದು ಮತ್ತೆ ನಮ್ಮೊಂದಿಗೆ ಸಾಯಂಕಾಲ ಮಂಡಳದಲ್ಲಿ ನಾಟಕ ಪ್ರ್ಯಾಕ್ಟೀಸಿಗೆ ಹಾಜರಾಗುತ್ತಾಳೆ. ನೃತ್ಯ ಮಾಡುತ್ತಾಳೆ, ವಾಕಿಂಗ್ ಬರುತ್ತಾಳೆ. ತನ್ನ ಎಂದಿನ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾಳೆ. ಅಂದರೆ ಆರ್ಥಿಕವಾಗಿಯೂ ತನ್ನನ್ನು ತೊಡಗಿಸಿಕೊಂಡೂ ತನ್ನ ಹಾಬಿಗಳಿಗೂ ಆಕೆ ಮಹತ್ವ ಕೊಡುತ್ತಾಳೆ. ಇಂಥವರ ಸಂಖ್ಯೆ ಬೆಂಗಳೂರಿನಂಥ ಊರಿನಲ್ಲಿ ಇನ್ನೂ ಹೆಚ್ಚು.
ಈ ಕ್ಷೇತ್ರದಲ್ಲಿ ತಮ್ಮ ವ್ಯವಸಾಯವನ್ನು ಪಡೆಯಲು ಭಾರತದೊಂದಿಗೆ ಶ್ರೀಲಂಕಾ, ಚೈನಾ, ಫಿಲಿಫೈನ್ಸ್ ನಂಥ ದೇಶಗಳೂ ಸ್ಪರ್ಧೆಯನ್ನೊಡುತ್ತವೆ. ಹೋದ ನವೆಂಬರ್ ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಎಲ್ಲ ದೇಶಗಳಿಗೂ ಪ್ರಬಲ ಸ್ಪರ್ಧೆಯನ್ನೊಡ್ಡುತ್ತಿರುವುದು ಭಾರತವೊಂದೇ. ಈಗ ಸದ್ಯಕ್ಕೆ ಭಾರತದಲ್ಲಿ ನೂರಕ್ಕೂ ಅಧಿಕ ಕೆ.ಪಿ.ಓ. ಫರ್ಮಗಳಲ್ಲಿ ಇಪ್ಪತ್ತು ಸಾವಿರಕ್ಕೂ ಅಧಿಕ ಜನರು ಸೇವೆಗೈಯುತ್ತಿದ್ದಾರೆ. ೨೦೧೫ರವರೆಗೆ ಕೆ.ಪಿ.ಓ. ಮಾರ್ಕೆಟ್ಟಿನಲ್ಲಿ ೫-೬ ಮಿಲಿಯನ್ ಡಾಲರ್ ನಷ್ಟು ವೃದ್ಧಿಯಾಗುತ್ತದೆ ಎಂಬ ಅಂದಾಜು ಮಾಡಲಾಗಿದೆ. ಬಿಜಿನೆಸ್ ರಿಸರ್ಚ್ ಇಂಡಸ್ಟ್ರಿ ಮತ್ತು ಡಾಟಾ ಅನಾಲಿಟಿಕ್ಸ್ ಸೆಗ್ ಮೆಂಟ್ ವೃದ್ಧಿಯ ಶಕ್ಯತೆಯನ್ನು ಹೇಳಿದೆ. ಕಾಯಿದೆಯ ಕ್ಷೇತ್ರದಲ್ಲೂ ಸಂಶೋಧನೆಯ ಅನೇಕ ಸಂಧಿಗಳು ಬರುತ್ತಿವೆ. ಈ ಕ್ಷೇತ್ರದಲ್ಲಿ ೨೦೧೫ರವರೆಗೆ ೧.೩ ಅಬ್ಜ ಡಾಲರ್ ವರೆಗೆ ವೃದ್ಧಿಯಾಗುವ ಶಕ್ಯತೆ ಇದೆ. ಫಾರ್ಮಾ ಹಾಗೂ ಬಯೋಟೆಕ್ ಹಾಗೇ ಶೈಕ್ಷಣಿಕ ಹಾಗೂ ಸಂಶೋಧನೆ ಕ್ಷೇತ್ರದಲ್ಲೂ ಅವಕಾಶಗಳೂ ವಿಪುಲವಾಗಿವೆ.
ಕೆ.ಪಿ.ಓ.ದಲ್ಲಿ ಮೊದಮೊದಲು ವೇತನವು ಕಡಿಮೆಯಾಗಿದ್ದರೂ ಅನುಭವವನ್ನಾಧರಿಸಿ ನಾಲ್ಕೈದು ಲಕ್ಷ ವಾರ್ಷಿಕವಾಗಿ ನಿಶ್ಚಿತವಾಗಿಯೂ ದೊರೆಯಬಹುದು. ಈ ಕಂಪನಿಯಲ್ಲಿ ನೌಕರಿ ಮಾಡುವಂತಿದ್ದರೆ ವೇತನದ ಜೊತೆಗೆ ಇತರ ಅನುಕೂಲತೆಗಳೂ ದೊರೆಯುತ್ತವೆ.

Leave a Reply