ಕಾವ್ಯಕನ್ನಿಕೆಯು ಮನ ಮೆತ್ತಿಹಳು

ಕಾವ್ಯಕನ್ನಿಕೆಯು ಮನ ಮೆತ್ತಿಹಳು

ಕಾವ್ಯ ಕನ್ನಿಕೆಯು ಮನ ಮೆತ್ತಿಹಳು
ಶ್ರಾವಣದ ಐಸಿರಿಯ ಕಂಡು

ಚಿಗುರು ಹೂವ ಹಸಿರ ಅರಳಿಸಿ
ಹೂವ ಗಂಧ ಸುಗಂಧ ಪಸರಿಸಿ
ಭುವಿಯ ಚೆಲುವು ಇಮ್ಮಡಿಸಿ
ಬಂದಿತಿದೋ ಶ್ರಾವಣಾ

ಶ್ರಾವಣವು ಹೆಬ್ಬಾಗಿಲು
ಹಬ್ಬಹರಿದಿನಗಳ ಸಾಲು ಸಾಲು
ಬಿಟ್ಟೊಬಿಡದೇ ರಚ್ಚೆ ಹಿಡಿವಂತೆ ಮಗು
ಸುರಿಯುತಿದೆ ಮಳೆಯ ಗುನುಗು

ಗಿರಿಕಂದರ ಶಿಖರಗಳಿಗೆಲ್ಲ
ಹಚ್ಚನೆಯ ಮೇಲ್ಹೊದಿಕೆ
ಮೈಮೆತ್ತಿ ಸೌಂದರ್ಯದ ಖನಿಯಾದಂತೆ
ಪ್ರಕೃತಿಮಾತೆಯ ಚೆಲುವು ನೂರ್ಮಡಿಸಿದಂತೆ
ಇಬ್ಬನಿಯ ಹನಿಗಳಿಲ್ಲ ಇಂದು
ಅಂಬರದ ತುಂಬೆಲ್ಲ ಕಪ್ಪನೆಯ ಮೇಘಗಳು
ಒಂದನ್ನೊಂದು ಹಿಂದಿಕ್ಕಿ
ಸುರಿಯುತಿಹವು ಧೂಮ್ಮಕ್ಕಿ

ಶುಭ್ರಜಲಧಾರೆ ಆಗಸದಿ ಸುರಿವಂತೆ
ಭೋರ್ಗರೆಯುತಿಹವು ನದಿನಾಲೆಗಳು
ನಭದ ಮಾಳಿಗೆಯಲಿ
ಜಲಪಾತ ಉಕ್ಕೇರಿದಂತೆ

ಕಡಲಕಿನಾರೆಗೆ ತೆರೆಗಳ ದಂಡು ಬಂದಂತೆ
ಶ್ರಾವಣವು ಬರುವುದು ಕಾಡಿಗೆ ನಾಡಿಗೆ
ಎಂದಿನಂತೆಯೇ ಇಂದೂ
ಅನಾದಿಕಾಲದಿಂದಲೂ ಒಂದೇ ಎಂದು.

ಆಗಸದಿ ಕಪ್ಪು ಮೋಡ
ಮುಸುಕಿದಾ ಹೊತ್ತಿನಲಿ
ಚಂದ್ರಮನ ಕಿರುನಗೆ ಮರೆಯಲಿ
ಚುಕ್ಕೆಗಳ ಕಣ್ಮುಚ್ಚಾಲೆಯಾಟದಲಿ

ಸುರಿಯುತಿಹ ಮಳೆಯ ನಿನಾದ
ಮನದಲ್ಲೇನೋ ಆಹ್ಲಾದ
ಕಾವ್ಯಕನ್ನಿಕೆಯು ಮನ ಮೆತ್ತಿಹಳು
ಶ್ರಾವಣದ ಐಸಿರಿಯ ಕಂಡು

Leave a Reply