ಮಾಯ್ದ ಗಾಯವನ್ನು ಹೆರೆಯುವವರು

ಮಾಯ್ದ ಗಾಯವನ್ನು ಹೆರೆಯುವವರು

ಅಯೋಧ್ಯಯ ಬಿಸಿ ತುಪ್ಪ ಗಂಟಲಲ್ಲಿದೆ. ಸರಳವಾಗಿ ಬಗೆಹರಿದರೂ ಎಲ್ಲವೂ ತಮ್ಮದೇ ಆಗಬೇಕೆಂಬ ಸ್ವಾರ್ಥದ ಎಳೆಯೊಂದು ಮೂಡಿ ಎಲ್ಲವೂ ಗೋಜಲಾಗುತ್ತದೆ. ಗೆದ್ದು ಸೋಲುವುದಕ್ಕಿಂತಲೂ ಸೋತು ಗೆಲ್ಲುವಾಗಿನ ಸವಿಯು ಅವರಾರಿಗೂ ಮುದ ನೀಡುತ್ತಿಲ್ಲ.

ಒಂದೇ ಭವ್ಯವಾದ ಕಟ್ಟಡವನ್ನು ನಿರ್ಮಿಸಿ ಅದರಲ್ಲಿಯೇ “ಮಂದಿರದ ಘಂಟಾನಾದ”, ಮಸೀದಿಯ “ಅಲ್ಲಾಹೋ ಅಕ್ಬರ್” ಎಂಬ ನಸುಕಿನ ಕೂಗು, ಚರ್ಚಿನ, ಗುರುದ್ವಾರದ ಮಂತ್ರ ಪಠಣ ಆಗುವಂತಿದ್ದರೆ ಎಷ್ಟು ಚಂದ ಎನ್ನಿಸುತ್ತದೆಯಲ್ಲವೇ, ಬರುವ ಸಾಲು ಹಬ್ಬಗಳಲ್ಲಿ ಪೂಜೆಗೆಂದು ಅಲ್ಲಿ ತೆರಳಿದಾಗ ಅನ್ಯಧರ್ಮದವರೂ ಅಲ್ಲಿಯೇ ನೆರೆದು ಪರಸ್ಪರ ಆಲಿಂಗಿಸಿ ಶುಭ ಹಾರೈಸಿದರೆ ಎಷ್ಟು ಕಣ್ಣಿಗೆ ಮನೋಹರವಾಗಿ ಕಾಣುವುದಿಲ್ಲವೇ? ಇಂಥ ಒಂದು ವಿಚಾರ ಹೊಳೆದಾಗಲೇ ಮನದಲ್ಲಿ ಉದಾರತೆಯ ಭಾವವೊಂದು ತೇಲಿ ಮರೆಯಾಗುತ್ತದೆ, ಇವೆಲ್ಲ ಆಗುವಂತಿದ್ದರೆ…… ಪರಸ್ಪರರು ಸಂಕುಚಿತತೆಯ ಹರಿದೊಗೆಯುವಂತಿದ್ದರೆ…. ದೇಶದಲ್ಲಿ ಶಾಂತಿಯನ್ನು ಪಸರಿಸಲು ನಾ ಮುಂದು ತಾ ಮುಂದು ಎನ್ನುವಂತಿದ್ದರೆ…. ಅಂಥ ಒಂದು ತಿಳುವಳಿಕೆ ಸಮಾಜದಲ್ಲಿ ಮೊಳೆತಾದರೆ…. ಆಹಾ ಆ ಕಾಲವೊಂದು ಯಾವಾಗ ಬರುತ್ತದೋ, ಇಂಥ ತಿಳುವಳಿಕೆಯ ಕಾಲ ಬರಲು ಈ ರಾಜಕಾರಣಿಗಳ ಗುಂಪು ಬಿಡಬೇಕಲ್ಲ. ಎಲ್ಲೆಡೆ ಶಾಂತಿ ಪಸರಿಸಿದಾಗ ಅವರಿಗಾಗುವ ಲಾಭವೇನು? ದೊಡ್ಡಣ್ಣನಂಥ ದೇಶದವರು ತಮ್ಮ ಶಸ್ತ್ರಾಸ್ತ್ರಗಳನ್ನು ವ್ಯಾಪಾರ ಮಾಡಲು ನಮ್ಮ ಮಂತ್ರಿಗಳನ್ನೇ ಆಮಿಷಕೊಟ್ಟು ಕೊಂಡಿದ್ದರೆ, ಇವರುಗಳು ಅವರು ಕುಣಿಸಿದಂತೆ ಕುಣಿಯುತ್ತಿದ್ದರೆ ನಮ್ಮ ದೇಶಕ್ಕೆ ಎಲ್ಲಿಯ ಶಾಂತಿ ಮೂಡುವುದು? ಎಲ್ಲಿ ಬೆಂಕಿ ಇರುತ್ತದೋ ಅಲ್ಲಿ ಅರಳು ಹುರಿದು ಮುಕ್ಕುವವರಲ್ಲವೇ ಅವರು? ಯಾರಿಗೆ ಏನೆಂದು ಪ್ರಯೋಜನ? ನಮ್ಮ ನೆಲವೇ ಗಟ್ಟಿ ಇಲ್ಲದಾಗ….

ನವೆಂಬರ್ ತಿಂಗಳು ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುವ ತಿಂಗಳು, ಭಾಷಾವಾರು ಪ್ರಾಂತ್ಯಗಳಾಗಿ ರಾಜ್ಯಗಳಾಗಿ ಪರಿವರ್ತಿತವಾದಾಗ ಅಲ್ಲಿ ಭಾಷೆಗೇ ಪ್ರಾಮುಖ್ಯತೆ ಇತ್ತು. ಹಾಗೂ ಆಯಾ ಪ್ರದೇಶಗಳನ್ನು ಒಟ್ಟುಗೂಡಿಸಿ ರಾಜ್ಯಗಳನ್ನಾಗಿಸಲಾಗಿತ್ತು. ಹೀಗಾಗಿ ಕರ್ನಾಟಕ, ಕೇರಳ, ಮಹಾರಾಷ್ಟ್ರ ಆಂಧ್ರ… ಇತ್ಯಾದಿಗಳು ರೂಪುಗೊಂಡವು. ಹಿರಿಯರು ಮಾಡಿದ ಮೇಲೆ ಮುಗಿಯಿತು. ಕೆಲ ರಾಜಕೀಯದವರು (ಬೂದಿಯನ್ನು ಊದಿ ಬೆಂಕಿ ಎಬ್ಬಿಸಿ ಅರಳು ಹುರಿದು ತಿನ್ನುವವರು) ತೆಪ್ಪಗೇ ಕೂಡಬೇಕಲ್ಲ. ಆವಾಗೀವಾಗ ಮಾಯ್ದ ಗಾಯವನ್ನು ಹೆರೆದು ತೆಗೆದಾಗಲೇ ಅವರಿಗೆ ಸಮಾಧಾನ. ಅಲ್ಲಿ ತಿಂಡಿ ಬಿಟ್ಟಾಗಲೆ ಅವರಿಗೆ ಆನಂದ! ಮಹದಾನಂದ! ಹೀಗಾಗಿ ಪ್ರಬಲ ಇಚ್ಛಾಶಕ್ತಿ ಇಲ್ಲದೇ ಕೇವಲ ತಾವು ಲೈಮ್ ಲೈಟ್ ನಲ್ಲಿ ಮೆರೆಯಲೋಸುಗ ಮಾಯ್ದ ಗಾಯವನ್ನು ಆವಾಗಾವಾಗ ಹೆರೆಯುತ್ತಿರುತ್ತಾರೆ. ಹೀಗಾಗಿ ಅಲ್ಲಿ ನವೆಯೆಂಬ ಅಶಾಂತಿ ಸುತ್ತಲೂ ಪಸರಿಸಿ ಶಾಂತಿಯೇ ಇಲ್ಲದಂತಾಗುತ್ತದೆ. ದೇಶದ ಪ್ರಗತಿಗೆ ಇಂಥ ಸಣ್ಣಪುಟ್ಟ ಅಡೆತಡೆಗಳೇ ದೊಡ್ಡದಾಗಿ ಪರಿಣಮಿಸುತ್ತವೆ. ಇಂಥ ಸೂಕ್ಷ್ಮತೆಗಳೇ ಭಾವಗಳ ಗೋಡೆಗಳನ್ನು ನಿರ್ಮಿಸುತ್ತವೆ. ಅವುಗಳೇ ಸಂಕುಚಿತತೆಯ ಪರಿಧಿಯಲ್ಲಿ ಮೆರೆಯುತ್ತವೆ. ಹೊಸ ಕಿರಣಗಳು ಉದಯಿಸದೇ ಮಲೆತ ನೀರಿನಲ್ಲಿ ತೇಲಾಡುವಂತೆ ತಾನು ತನ್ನದು ಶ್ರೇಷ್ಠ ಎಂಬ ಸ್ವಾರ್ಥತೆಯಂಗಳದಲ್ಲಿ ಹೊರಳಾಡುತ್ತ ಬಾವಿಯ ಕಪ್ಪೆಯಂತೆ ಹಾರಾಡುತ್ತವೆ. ಹಾಗಾಗದಿರಲು ಏನು ಮಾಡಬೇಕು? ಜನಗಳೇ ಎಚ್ಚೆತ್ತು ಇಂಥ ಗಾಯವನ್ನು ಹೆರೆಯುವವರನ್ನು ನಿರ್ಲಕ್ಷಿಸಿ ಯಾವ ಪ್ರದೇಶಗಳನ್ನು ಯಾವ ರಾಜ್ಯಕ್ಕೆ ಸೇರಿದೆಯೋ ಅವನ್ನೆಲ್ಲ ತೆಪ್ಪಗೆ ಒಪ್ಪಿಕೊಂಡು ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಸಂಕುಚಿತತೆಯ ಗೋಡೆಗಳನ್ನು ಬೀಳಿಸಿದಾಗ ಅಗಾಧತೆಯ ಪರಿಕಲ್ಪನೆ ಮೂಡುತ್ತದೆ. ಎಲ್ಲ ರಾಜ್ಯಗಳ ಮಧ್ಯ ಉತ್ತಮ ಬಾಂಧವ್ಯ ಏರ್ಪಟ್ಟಾಗಲೇ ದೇಶಕ್ಕೆ ಉತ್ತಮ ಅಡಿಪಾಯ ಸಿಗುವುದು. ಹಾಗೂ ದೇಶವು ಪ್ರಗತಿ ಪಥದತ್ತ ಮುನ್ನಡೆಯುವುದು. ನಮ್ಮ ದೇಶದ ಒಳಿತಿಗಾದರೂ, ಉನ್ನತಿಗಾದರೂ ನಾವೆಲ್ಲ ಪರಸ್ಪರರ ಆಸ್ತಿಪಾಸ್ತಿಗಳಿಗೆ ಹಾನಿ ಉಂಟು ಮಾಡದೇ ಶಾಂತಿಯಿಂದ ಅವ ನಮ್ಮವ, ಇವ ನಮ್ಮವ….. ಎಂಬ ಬಸವಣ್ಣನವರ ವಚನವನ್ನು ಮೆಲುಕು ಹಾಕಿ ಅದರಂತೆ ನಡೆದರೆ ಒಳಿತಲ್ಲವೇ? ಆವಾಗಲೇ ನೀಲಾಕಾಶದಿಂದ ದೇವತೆಗಳ ಪುಷ್ಪವೃಷ್ಟಿಯಾಗಬಹುದಲ್ಲವೆ? ರಾಮ ರಾಜ್ಯದ ಪರಿಕಲ್ಪನೆ ಮೂಡಬಹುದಲ್ಲವೆ? ಹೀಗಾಗುತ್ತದೆಯೇ? ಕಾದು ನೋಡೋಣ. ಮುಂದಿನ ಪೀಳಿಗೆಯಾದರೂ ಈ ನಿಟ್ಟಿನಲ್ಲಿ ಹೆಜ್ಜೆ ಮೂಡಿಸುತ್ತಾರೇನೋ ಎಂದು ಆಶಾಭಾವದಿಂದ ಚಲಿಸೋಣ.

 

Leave a Reply