ಮಹಿಳೆಯರ ಮೇಲಿನ ದೌರ್ಜನ್ಯ

ಮಹಿಳೆಯರ ಮೇಲಿನ ದೌರ್ಜನ್ಯ
“ಯತ್ರ ನಾರ್ಯಾಃ ಪೂಜ್ಯಂತೇ
ರಮಂತೇ ತತ್ರ ದೇವತಾಃ”
ಎಲ್ಲಿ ನಾರಿಯರನ್ನು ಪೂಜಿಸಲಾಗುತ್ತದೇಯೋ, ಸುಖಿಯಾಗಿ ಇಟ್ಟಿರಲಾಗುತ್ತದೆಯೋ ಅಲ್ಲಿ ದೇವತೆಗಳು ವಾಸಿಸುತ್ತಾರೆ ಎಂದರ್ಥ.
ಸ್ತ್ರೀಯರಿಗೆ ಉನ್ನತವಾದ ದೇವತೆಯ ಸ್ಥಾನಮಾಡಿಕೊಟ್ಟದ್ದು, ನಮ್ಮ ಪ್ರಾಚೀನ ಸಂಸ್ಕೃತಿ, ಎಲ್ಲಿ ಅವಳಿಗೆ ಆದರ ಪೂಜ್ಯತೆ ಇರುತ್ತದೋ ಅಲ್ಲಿ ದೇವತೆಗಳ ವಾಸ ಎನ್ನುವುದು ನಮ್ಮ ಋಷಿ ಪರಂಪರೆ, ಗಾರ್ಗೇಯಿ ಮೈತ್ರೇಯಿ ಮುಂತಾದ ಋಷಿ ಪತ್ನಿಯರು ಪ್ರಕಾಂಡ ಪಂಡಿತರಾಗಿದ್ದಷ್ಟೇ ಅಲ್ಲದೇ ಯಜ್ಞಯಾಗಾದಿಗಳಲ್ಲಿ ಭಾಗವಹಿಸುವವರಾಗಿದ್ದರು, ಅವರು ತಮ್ಮಷ್ಟೇ ಪಂಡಿತರ ಸಮಕ್ಷಮ ಕುಳಿತು ವೇದಶಾಸ್ತ್ರಗಳಲ್ಲಿ ವಾದ ವಿವಾದ ಮಾಡಿ ಜಯಶಾಲಿಯಾಗುತ್ತಿದ್ದರು.
ಆದರೆ ಬರಬರುತ್ತ ಸ್ತ್ರೀಯರ ವೇದಾಧ್ಯಯನ ಕಡಿಮೆಯಾಯಿತೋ ಅಥವಾ ಕಡಿಮೆಗೊಳಿಸಲ್ಪಟ್ಟಿತೋ ತಿಳಿಯದು. ಮನುವಿನ ‘ನ ಸ್ತ್ರೀ ಸ್ವಾತಂತ್ರ್ಯಂ ಅರ್ಹಸಿ’ ಎನ್ನುವ ವಾಕ್ಯ ಸ್ತ್ರೀಯರಿಗೆ ಬೇಡಿಯಾಗಿ ಪರಿಣಮಿಸಿ ಆತ್ಮೋದ್ಧಾರದ ಕನಸು ಸೀಮಿತಗೊಳಿಸಲ್ಪಟ್ಟಿತು ಎಂದು ಹೇಳಬಹುದು. ನಂತರ ಪತಿಯ ನೆರಳಾಗಿ, ಸಹಾಯಹಸ್ತಳಾಗಿ ಉಳಿದಳು. ಹಿಂದೆ ಸರಿದಂತೆಲ್ಲ ಆಕೆ ಅಡುಗೆ ಮನೆಗೆ ಸೀಮಿತಳಾದಳೇನೋ.
ಸೀತೆ ಜನಕರಾಜನ ಪುತ್ರಿ. ದಶರಥರಾಜನ ಸೊಸೆ, ರಾಮಚಂದ್ರನ ಪತ್ನಿಯಾಗಿದ್ದು ಕೂಡ ಅವಹೇಳನ, ಅಪಮಾನಗಳನ್ನು ಭರಿಸಿದಳು. ತನ್ನ ಸಹನೆಯಿಂದಲೇ ಸೈರಿಸಿದಳು. ವಿರೋಧಿಸಲು ಅವಳಿಗೆ ಎಲ್ಲಿತ್ತು ಅಧಿಕಾರ? ಹಿರಿಯರ ಆದರ್ಶಗಳನ್ನು ಮುಂದೆ ತೋರಿಸಿ ನಡೆಸಿದರು. ಹದಿನಾಲ್ಕು ವರ್ಷದ ವನವಾಸಕ್ಕೆ ಕಾಡಿಗೆ ಹೊರಟುನಿಂತ ಶ್ರೀರಾಮನ ಬೆಂಗಾವಲಾಗಿ ತಾನೂ ಮಡಿಯುಟ್ಟು ಕಾಡಿಗೆ ನಡೆದಳು. ಅಲ್ಲಿ ರಾವಣನಿಂದ ಅಪಹೃತಳಾಗಿ ನಾನಾ ಕ್ಷೋಭೆಗೆ ಒಳಗಾದಳು. ಯುದ್ಧ ಮಾಡಿ ಆಕೆಯನ್ನು ಅರಮನೆಗೆ ತರುವಾಗಲೂ ಆಕೆ ಅಗ್ನಿಪರೀಕ್ಷೆಗೆ ಒಳಗಾಗಬೇಕಾಯಿತು. ಇನ್ನು ಆರಾಮದಿಂದ ಇರಬಹುದು ಎಂಬ ಊಹೆ ಸುಳ್ಳಾಯಿತು. ತುಂಬು ಗರ್ಭಿಣಿಯಾದ ಆಕೆಯನ್ನು ಜನಾಪವಾದಕ್ಕೆ ಹೆದರಿ ಅದೇ ಶ್ರೀರಾಮ ಕಾಡಿಗಟ್ಟಿದ. ಹೆಜ್ಜೆಹೆಜ್ಜೆಗೂ ಅಪಮಾನದಿಂದ ಜರ್ಜರಿತಳಾದ ಸೀತೆಯನ್ನು ಕೊನೆಗೆ ಭೂತಾಯಿ ತನ್ನ ತೆಕ್ಕೆಯಲ್ಲಿ ತೆಗೆದುಕೊಂಡಳು. ಇನ್ನು ದ್ರೌಪದಿ ಕೂಡ ರಾಜಕುಮಾರಿ, ಅಗ್ನಿಪುತ್ರಿ, ಪಾಂಡವರೈವರ ವಧು, ಹಸ್ತಿನಾಪುರದ ಸೊಸೆ, ಆದರೂ ಕೂಡ ದ್ಯೂತದಲ್ಲಿ ಆಕೆಯನ್ನು ಕಳೆದುಕೊಂಡರು ಪತಿಗಳೈವರು. ಆಕೆಗೆ ಒಂದು ಮಾತು ಕೇಳುವ ವ್ಯವಧಾನವೂ ಅವರಿಗಿಲ್ಲ……. ತುಂಬಿದ ಸಭೆಯಲ್ಲಿ ಮಾನಭಂಗಕ್ಕೆ ತುತ್ತಾದಳು. ದೊಡ್ಡ ದೊಡ್ಡ ಮಹನೀಯರೇ ಅಲ್ಲಿದ್ದರೂ ಯಾರೂ ಆಕೆಗೆ ದುರ್ಯೋಧನಾದಿಗಳಿಂದ ನಡೆದ ಅನಾಚಾರವನ್ನು ತಪ್ಪಿಸಲಿಕ್ಕೆ ಮುಂದೆ ಬರಲಿಲ್ಲ. ಸೀತೆ ದ್ರೌಪದಿಯರ ಅವಹೇಳನ, ಅಪಮಾನ ಯುದ್ಧಕ್ಕೂ ನಾಂದಿಯಾಯಿತು. ಪುರಾಣದ ಸ್ತ್ರೀಯರ ಶಕ್ತಿ ಸಾಮರ್ಥ್ಯ ಮತ್ತೊಮ್ಮೆ ರುಜುವಾತಾಯಿತು.
ಇನ್ನು ಹನ್ನೆರಡನೆಯ ಶತಮಾನದ ಶರಣೆಯರು ಪುರುಷರ ದೌರ್ಜನ್ಯವನ್ನು ಸಾರಾಸಗಟಾಗಿಯೇ ತಿರಸ್ಕರಿಸಿದರು. ಅದಕ್ಕೆ ಉತ್ತಮ ಉದಾಹರಣೆಯೆಂದರೆ ಅಕ್ಕಮಹಾದೇವಿ ರಾಜಾಕೌಶಿಕನ ಕಾಮದ ಕಣ್ಣಿಗೆ ಪೂರಕವಾಗುವಂತೆ ವೈರಾಗ್ಯಪೂರಿತಳಾಗಿ ತನ್ನ ಮೈಮೇಲಿನ ವಸ್ತ್ರವನ್ನೇ ಕಿತ್ತೆಸೆದಳು.
ಮಹಿಳೆಯರ ಮೇಲಿನ ದೌರ್ಜನ್ಯ ಇಂದು ನಿನ್ನೆಯದಲ್ಲ. ದೌರ್ಜನ್ಯವನ್ನು ಒಳಗೊಳಗೇ ನುಂಗಿಕೊಳ್ಳುತ್ತಾ ನಲುಗುತ್ತಿರುವ ಇಂದಿನ ಮಹಿಳೆ ಅದಕ್ಕಾಗಿ ತನ್ನ ಸುಪ್ತಶಕ್ತಿಯನ್ನು ಕ್ರೋಢೀಕರಿಸಿ ಮುನ್ನುಗ್ಗಬೇಕಾಗಿರುವುದು ಇಂದು ಅವಶ್ಯಕವಾಗಿದೆ.
ದೌರ್ಜನ್ಯದ ಅರ್ಥ ಅಪಮಾನ, ಹೀಯಾಳಿಕೆ, ಶಾರೀರಿಕ, ಮಾನಸಿಕ ಯಾತನೆಯನ್ನು ಒದಗಿಸುವುದು ಎಂದರ್ಥ. ವರದಕ್ಷಿಣೆ ಕಿರುಕುಳ, ಅದರಿಂದುಂಟಾಗುವ ಸಾವು ಸಮಾಜಕ್ಕೆ ಒಂದು ಕಳಂಕ ಎಂದು ಹೇಳಬಹುದು. ನೌಕರಿಯಲ್ಲಿರುವ ಸ್ತ್ರೀಗೆ ಬಾಸ್ ನ ಕಿರುಕುಳ, ಚಲನಚಿತ್ರದಲ್ಲಿ ಸ್ತ್ರೀಯ ಅಂಗಾಂಗ ಚೇಷ್ಟೆಯಿಂದ ಒದಗುವ ಮಾನಸಿಕ ಕ್ಷೋಭೆ. ದುಡ್ಡಿನ ಆಮಿಷ ಒಡ್ಡಿ ಅಂಗ ಪ್ರದರ್ಶನಕ್ಕೀಡು ಮಾಡುವ ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ, ಒಂದೇ ಎರಡೇ, ನಿತ್ಯ ಜೀವನದಲ್ಲಿ ಆಕೆಗೆ ಮುಜುಗರವನ್ನುಂಟುಮಾಡುವ ಪರಿಸ್ಥಿತಿ.
ಹಿಂದಿನ ಕಾಲದ ಸ್ತ್ರೀಯರಿಗಿಂತ ಇಂದಿನ ಮಹಿಳೆ ಆರ್ಥಿಕವಾಗಿ ಸ್ವಾವಲಂಬಿ, ಛಲದಿಂದ ಮುನ್ನಡೆ ಇಡುತ್ತಾ ತನ್ನ ಛಾಪನ್ನು ಒತ್ತಿ ಉನ್ನತ ವ್ಯಕ್ತಿತ್ವಕ್ಕೆ ನಾಂದಿ ಹಾಡುತ್ತಿದ್ದಾಳೆ. ಯಾವುದೇ ಫೀಲ್ಡ್ ನಲ್ಲೂ ಸ್ತ್ರೀಯು ಮುಂಚೂಣಿಯಲ್ಲಿದ್ದಾಳೆ. ಪುರುಷರನ್ನು ಹಿಂದಿಕ್ಕಿದ್ದಾಳೆ. ಆದರೆ ಆಕೆಯ ಮೇಲೆಸಗುವ ದೌರ್ಜನ್ಯವಿದೆಯಲ್ಲ ಅದು ಹಿಂದಿಗಿಂತಲೂ ಹೆಚ್ಚಾಗಿದೆ ಎಂದು ಹೇಳಬಹುದು. ಯಾಕೆಂದರೆ ಹಿಂದಿನ ಮಹಿಳೆ ಮನೆಯ ಗಂಡ-ಮಕ್ಕಳಾದಿ ಸಮಾಚಾರಕ್ಕೆ ಮಾತ್ರ ಸೀಮಿತಳಾಗಿದ್ದಳು. ಆದರೆ ಇಂದಿನ ಸ್ತ್ರೀ ಮನೆಯಾಚೆಗೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡು ಅಲ್ಲಿಯೂ ತನ್ನಲ್ಲಿಯ ಮಹತ್ವಾಕಾಂಕ್ಷೆಯನ್ನು ತಣಿಸುತ್ತಿದ್ದಾಳೆ. ಹಾಗಾಗಿ ಆಕೆ ಪುರುಷನ ಸರಿಸಮನಾಗಿ ಅಥವಾ ಅದಕ್ಕಿಂತ ಹೆಚ್ಚೇ ದುಡಿಯುತ್ತಿರುವುದರಿಂದ ಪುರುಷರಿಂದ ಬಂದೆರಗುವ ಆಪತ್ತು, ಅವಹೇಳನ ಆಕೆಗೆ ಸಹಿಸಲಾಗುತ್ತಿಲ್ಲ. ಅದರಿಂದ ಸ್ತ್ರೀಯು ಎಷ್ಟೇ ಮುಂದುವರೆದರೂ ಪುರುಷ ಪ್ರಧಾನ ಸಮಾಜ ಅವಳ ಕಾಲಲ್ಲಿ ಬೇಡಿ ತೊಡಿಸಲು ತನ್ನ ಕಪಿಮುಷ್ಠಿಯಲ್ಲಿ ಆಕೆ ನಲುಗುವಂತೆ ಮಾಡುತ್ತದೆ. ಈ ತರಹದ ದೌರ್ಜನ್ಯವು ಸ್ತ್ರೀಯ ವ್ಯಕ್ತಿತ್ವವನ್ನು ಚೂರು ಚೂರು ಮಾಡಬಲ್ಲದು.
ಸಿನೇಮಾ ಹಾಗೂ ಇನ್ನತರ ದೃಶ್ಯ ಮಾಧ್ಯಮದಲ್ಲಿ ಆಕೆಯನ್ನು ಅಶ್ಲೀಲವಾಗಿ ತೋರುತ್ತಿರುವ ಆಕೆಯ ಅಂಗ ಪ್ರದರ್ಶನ ಅಕ್ಷಮ್ಯ ಅಪರಾಧವೇ ಸೈ. ದುಡ್ಡಿನ ಆಮಿಷವೊಡ್ಡಿ ಆಕೆಯನ್ನು ತನ್ನ ಬಲೆಯಲ್ಲಿ ಹಾಕಿಕೊಳ್ಳುತ್ತಾ ಆಕೆಯನ್ನು ಉಪಯೋಗಿಸಿ ಎಸೆವ ಬಾಳೆಲೆಯಂತೆ ಪುರುಷ ತನ್ನ ಪರಾಕ್ರಮ ಮೆರೆಯಬಹುದು. ಆದರೆ ಇದರಿಂದ ಆಕೆಯ ಮಾನಸಿಕ ಕ್ಷೋಭೆ ಅರಿಯಲಾರದೇ ಆಕೆಯನ್ನು ಇನ್ನೂ ನಲುಗಿಸುತ್ತಿರುವುದು ದೌರ್ಜನ್ಯವಲ್ಲದೇ ಮತ್ತೇನು?
ಇಂದಿನ ಮಹಿಳೆ ಸುಶಿಕ್ಷಿತೆಯಾದರೂ, ಆರ್ಥಿಕವಾಗಿ ಸ್ವಾವಲಂಬಿಯಾದರೂ ಪುರುಷನಿಂದ ದೌರ್ಜನ್ಯಕ್ಕೊಳಗಾಗುತ್ತಿರುವುದು ನೂರಕ್ಕೆ ನೂರರಷ್ಟು ಸತ್ಯ. ಎಷ್ಟೇ ಕಾನೂನುಗಳಿದ್ದರೂ ಅವುಗಳ ಮಂದಗತಿಯಿಂದಾಗಿ ಆಕೆಗೆ ಆಗುವ ಅನ್ಯಾಯವೇ ಹೆಚ್ಚು. ಇದನ್ನು ಹೋಗಲಾಡಿಸುವುದು ಅಥವಾ ಮೂಲೋಚ್ಛಾಟನೆ ಹೇಗೆ? ಅಂದರೆ ಮಹಿಳೆಯರು ಸಂಘಟಿತರಾಗಿ ಸಶಕ್ತರಾಗಬೇಕಾದದ್ದು ಅವಶ್ಯಕ. ಮೂಲದಲ್ಲೇ ದೌರ್ಜನ್ಯವನ್ನು ತಡೆ ಹಿಡಿದರೆ ಮುಂದೆ ಘಟಿಸಬಹುದಾದ ಪ್ರಮಾದ ತಪ್ಪಿಸಬಹುದಲ್ಲವೇ? ಹ್ಯಾಗೆ? ಅಂದರೆ ಗಂಡು ಮಗು ಚಿಕ್ಕದಿದ್ದಾಗಲೇ ತಾಯಿಯಾದವಳು ಆತನ ತಲೆಯಲ್ಲಿ ಗಂಡು ಹಾಗೂ ಹೆಣ್ಣು ಇಬ್ಬರೂ ಸಮಾನರು ಎಂಬ ಬೀಜ ಬಿತ್ತಿದಾಗ ಆ ಮಗು ಬೆಳೆದಂತೆಲ್ಲ ಸಮಭಾವದಿಂದ ನೋಡಬಹುದು. ಅದು ಪ್ರತಿತಾಯಿಯೂ ಮಾಡಬೇಕಾದ ಕೆಲಸ. ಗಂಡುಮಕ್ಕಳನ್ನು ವೈಭವೀಕರಿಸದೆ ಹೆಣ್ಣುಮಕ್ಕಳನ್ನು ತುಚ್ಛವಾಗಿಸದೆ ನಡೆದುಕೊಳ್ಳುವುದು ಅವಶ್ಯಕ. ಪ್ರತಿಮನೆಯಿಂದಲೇ ಈ ಪಾಠ ಶುರುವಾಗಬೇಕು. ಮುಂದೆ ಸಮಾಜ ಅದನ್ನು ಪುಷ್ಟೀಕರಿಸಬೇಕು. ಹಾಗಾದಲ್ಲಿ ಹೆಣ್ಣು ದೌರ್ಜನ್ಯರಹಿತಳಾಗಿ ಪ್ರೀತಿ ವಿಶ್ವಾಸದಿಂದ ತನ್ನ ಕಂಪನ್ನು ಪಸರಿಸಬಲ್ಲಳಲ್ಲವೇ?

 

Leave a Reply