ಮಳೆ ನಿಂತು ಹೋದ ಮೇಲೆ

೧. ಮಳೆ ನಿಂತು ಹೋದ ಮೇಲೆ
ಮಾವಿನ ಮರದ ಎಲೆ ರೆಂಬೆಕೊಂಬೆಗಳ ಮೇಲೆ ಕುಳಿತ ಮಳೆಯ ಬಿಂದುಗಳೂ ಟಿಪಕ್ ಟಿಪಕ್ನೆ ಕೆಳಗೆ ಮುತ್ತಿನ ಹನಿಯಾಗಿ ಉದುರುತ್ತಿದ್ದವು. ಈ ಭೂಮಿಯೂ ಎಂಥದೋ ಚುಂಬಕ ಶೀಲವಾಗಿರುವಂಥದ್ದು. ಬಿದ್ದ ಒಂದೊಂದು ಹನಿಗಳನ್ನು ತನ್ನೊಡಲ ಒಳಗೆ ಇಂಗಿಸುತ್ತಾ ಆಹ್ಲಾದತೆಯ ಸುವಾಸನೆ ಹೊರಸೂಸುವಂಥದ್ದು, ಈ ಮೊದಲ ಮಳೆ ಬಿದ್ದಾಗ ಹೊರಸೂಸುವ ಮಣ್ಣಿನ ವಾಸನೆ, ಬೇಗ ಹೊರಗೋಡಿ ಒಂದಿಷ್ಟು ಮಣ್ಣನ್ನು ಸವಿಯಬೇಕೆಂಬಾಸೆ ಹುಟ್ಟುಹಾಕುವಂಥದ್ದು.
ಮಳೆನಿಂತರೂ ಬಿಡದೇ ಹನಿಗಳನ್ನು ಉದರಿಸುತ್ತಾ ಮಾವಿನ ಮರವು ನಿರ್ಲಿಪ್ತತೆಯಿಂದ ಮಿನುಗುತ್ತಿದೆ. ಸೂರ್ಯರಶ್ಮಿಯ ಕಿರಣವೊಂದು ಅದರ ಮೇಲೆ ಬಿದ್ದಾಗ ಇನ್ನಿಲ್ಲದಂತೆ ಎಲೆಗಳೆಲ್ಲಾ ಹೊಳೆಯುತ್ತವೆ. ಆಗ ತಾನೇ ಸ್ವಚ್ಛ ಸ್ನಾನ ಮಾಡಿದಂತೆ ಮರವು ನಿಚ್ಚಳವಾಗಿ ನಿಂತಿದೆ. ಮಾವಿನ ಮರದಲ್ಲಿ ಅವಿತ ಹಕ್ಕಿಯೊಂದು ಹಾಡ ಗುನುಗುನಿಸುತ್ತಾ ಎತ್ತರದ ದಿಗಂತಕ್ಕೆ ಚುಮ್ಮಿ ಮಳೆ ಹನಿಯ ಹಿಡಿಯಲು ವ್ಯರ್ಥ ಪ್ರಯಾಸ ಪಡುವಂತೆ ಹಾರುತ್ತಿದೆ. ಮುಗಿಲ ಮೋಡಗಳೋ ಕಪ್ಪಾಗಿ ಮಿನುಗಿ ತನ್ನ ಒಡಲ ನೀರು ಬಸಿದು ಭೂತಾಯಿ ಮಡಿಲನ್ನು ತಂಪಾಗಿಸಿ ಮಲ್ಲಿಗೆ ಹೂವಿನ ತೆರದಿ ಅರಳಿ ಅತ್ತಿತ್ತ ಸಾಗುತ್ತಿವೆ. ಎಲ್ಲೆಲ್ಲೂ ಹಸಿರು ಉಸಿರಾಗಿಸಿದ ಹೊತ್ತು ಮುಸ್ಸಂಜೆಯಾಗಿತ್ತು. ಪಡುವಲದ ಸೂರ್ಯ ಕೆಂಪಾಗಿ ಇನ್ನೊಂದು ಮಗ್ಗುಲಕೆ ಹೊರಳಿದ ಆ ಹೊತ್ತು, ಹಕ್ಕಿಪಕ್ಷಿಗಳೂ ತನ್ನ ಒಡಲಕುಡಿಯ ತಿಂಡಿಗಾಗಿ ಮತ್ತೆ ತಮ್ಮ ಗೂಡಿನತ್ತ ಹೊರಳಿದ್ದವು. ಚಿಲಿಪಿಲಿಯ ನಾದದಿಂದ ಮತ್ತೆ ಮರವು ಜೀವ ತಳೆದಾಗಿತ್ತು.
ಮಳೆ ನಿಂತಾದರೂ ತಂಪೆರೆವ ಮರ ಬೆಚ್ಚಗಿನ ಗೂಡಲ್ಲಿ ರೆಕ್ಕೆಗಳಿಗಾಶ್ರಯ ನೀಡಿ ತಾ ಧನ್ಯತೆಯನ್ನು ಮರೆದಿತ್ತು. ಮಳೆಯ ಅಲೌಕಿಕ ನಾದದ ಹಿನ್ನಲೆಯಲ್ಲಿ ಹಕ್ಕಿಪಕ್ಷಿಗಳು ಒಂದಕ್ಕೊಂದು ಅಂಟಿ ಬಿಸಿಯಾಗಿದ್ದವು. ಕಾವ ತಣಿದ ಭೂತಾಯಿ ಎಲ್ಲೆಲ್ಲೂ ಹಸಿರಾಗಿಸಲು ಅಣಿಯಾಗಿದ್ದಳು.
ಇಂಥ ರಮ್ಯ ಚಿತ್ರ ಸೃಷ್ಟಿಯ ಸೊಬಗಲಿ ನಾವೆಲ್ಲ ಮಿಂದಾಗಲೇ ಭಾವನೆಗಳಿಗೆ ಮೂರ್ತರೂಪ ಒದಗುವುದು. ಭಾವನೆಗಳು ಅರಳಿ ನಿಂತಾಗಲೇ ಮನದಾಚೆಗಿನ ಕದವು ಸರಿದು ಅಂತರ್ ಮನದ ದರ್ಶನವಾಗುವುದು.
“ಕಾಯಕದಿಂದ ಕೈಲಾಸ”ವೆಂದರು ಬಸವಣ್ಣನವರು. “ಮನುಜ ತಾ ಮಾಡುವುದು ಹೊಟ್ಟೆಗಾಗಿ, ಗೇಣುಬಟ್ಟೆಗಾಗಿ” ಎಂದರು ದಾಸಶ್ರೇಷ್ಠರು. ಆದರೆ ಯಾವೊಂದು ಹೇಳಿಕೆಗಳ ಆಳ ಅರಿವಿರದ ಪ್ರಕೃತಿ ತನ್ನ ಅಗಾಧ ಕಾರ್ಯ ಸಾಮರ್ಥ್ಯವನ್ನು ತೋರ್ಪಡಿಸಿ ಅದರಲ್ಲಿಯೇ ಲೀನಳಾಗಿಹಳು. ವೇಳೆ ವೇಳೆಗೆ ಮಳೆ, ಬೆಳೆ, ಬಿಸಿಲು, ಗಾಳಿ, ತಂಗಾಳಿಗಳನ್ನು ನೀಡುತ್ತಾ ಯಾರ ಆದೇಶ ಅನುಮತಿಗಳಿಗೂ ಕಾಯದೇ, ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ಅಹೋರಾತ್ರಿ ದುಡಿಯುತ್ತಿರುವವಳು ಪ್ರಕೃತಿ ಮಾತೆ. ಒಂದು ಪರ್ಸೆಂಟ್ ನಷ್ಟಾದರೂ ಮನುಜ ಪ್ರಕೃತಿ ಮಾತೆಯ ಪದ್ಧತಿಯನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಇಲ್ಲಿ ಯಾಕೆ ಆಗುತ್ತವೆ ಕಲಹಗಳು, ನಾ ಹೆಚ್ಚು ನೀ ಹೆಚ್ಚು ಎಂಬ ವಾಗ್ವಾದ, ಕೋಮುಗಲಭೆ, ಶ್ರೇಷ್ಠ ನೀಚನೆಂಬ ಅಹವಾಲು? ಎಲ್ಲೆಡೆಗೂ ಕಾಯಕವೇ ಮೆರೆದಾಗ ಅಲ್ಲಿ ಅಪೇಕ್ಷೆಯ ಗುಣಗುಣಿತವೂ ಇಲ್ಲದಾಗ ಎಲ್ಲೆಡೆಯೂ ವಿಶ್ವಶಾಂತಿ, ವಿಶ್ವಭ್ರಾತೃತ್ವ ಮೆರೆಯುವುದಿಲ್ಲವೇ?
ಈಗಿನ ಭೂಮಿತಾಯಿ ಬಿಸಿಯಾಗಿ ತಳಮಳಿಸಿ ಕಂಗೆಟ್ಟಿರುವಳು. ಈಗ ಆಕೆಗೆ ಬೇಕಿರುವುದು ಶಾಂತಿಯ ಪ್ರೀತಿಯ ಸಿಂಚನವಲ್ಲದೇ ಮತ್ತೇನು? ಭ್ರಾತೃತ್ವದ ಅನುಬಂಧದ ಬಂಧನವಲ್ಲದೇ ಇನ್ನೇನು? ತಾರತಮ್ಯದ ಗತಿ ಬದಲಾಯಿಸಿ ನಾವೆಲ್ಲರೂ ಒಂದೇ ಎಂಬ ಭಾವ ಮೆರೆಯಬೇಕಾಗಿದ್ದು ಒಳಿತಲ್ಲವೇ? ನನ್ನ ಭಾವ ನಿನ್ನ ಭಾವವೆಂಬುದೆಲ್ಲ ಮರೆಮಾಚಿ ನಮ್ಮೆಲ್ಲರ ಭಾವ ಎಂಬುದು ಮೆರೆದಾಗಲಲ್ಲವೇ ಶಾಂತಿ ಒಳಗಡಿ ಇಡುವಳು. ಮಳೆ ನಿಂತು ಹೋದಾಗಲೂ ಹೊರಸೂಸುವ ಮಣ್ಣಿನ ಸುವಾಸನೆ ಎಲ್ಲೆಡೆಯೂ ಮೂಡಿದ ಉಲ್ಲಾಸದ ಹಸಿರು ಬಾಳಿಗೆ ಬೆಳಕಾಗುವುದಲ್ಲವೇ?

Leave a Reply