ನಮ್ಮ ಕಾಲದಾಗ ಹಿಂಗಿತ್ತು ಕಾಲೇಜು

ಮೂರು ವರ್ಷ ನೂರು ಹರ್ಷ ಅಂಕಣ ಆರಂಭಿಸಿ ಸುಮಾರು ಎಂಟು ವಾರಗಳಾದವು. ಸಿಕ್ಕ ಅನೇಕರು ಲೇಖನಗಳ ಬಗ್ಗೆ ಪ್ರಶಂಸಿದರು. ನನ್ನ ಜೀವನದ ಅದೃಷ್ಟಾನೊ? ವಿಚಿತ್ರವೊ ಇರಬಹುದೇನೊ…? ನನಗ ನನ್ನ ವಾರ್ಗಿಯವರಿಗಿಂತ ನನಗಿಂತ ನಲವತ್ತು-ಐವತ್ತು ವರ್ಷದ ಹಿರಿಯರ ಜೊತೆನ ಒಡನಾಟ ಭಾಳ ಅದ. ನನ್ನ ಫೋನ್ ಕಾಂಟ್ಯಾಕ್ಟ್ ಲಿಸ್ಟ್ ತಗದ್ರ ಅಂಥವರ ಹೆಸರು ಭಾಳ ಸಿಗ್ತದ. ಅವರು ನನ್ನ ಜೊತೆ ಮಾತು ಹಂಚಿಕೊಂಡ್ರು. ಲೇಖನ ಓದ್ತಾ ಓದ್ತಾ ಅವರ ಕಾಲೇಜು ದಿನಗಳು ನೆನಪು ಆದ್ವಂತ.

ಬರ್ರಿ ಒಂದು ರೌಂಡು ಫ್ಲ್ಯಾಶಬ್ಯಾಕ್‍ಗೆ ಹೋಗಿಬರೋಣು. ಸರಿಸುಮಾರು ಎಪ್ಪತ್ತು-ಎಂಬತ್ತರ ದಶಕ. ಕಲರ್ ಕಲರ್ ಅಂಗಿ, ಬೆಲ್ ಬಾಟಮ್ ಪ್ಯಾಂಟ್, ಲಂಗಾ ದಾವಣಿ, ರಿಬ್ಬನ್ ಕಟ್ಟಿದ ಎರಡು ಜಡೆ, ಒಬ್ಬರೊ ಇಬ್ಬರೊ ಮಲ್ಲಿಗೆ ಹೂ ಮುಡಿಕೊಂಡು ಬರ್ತಿದ್ರು, ಕೈಯಾಗೊಂದು ನಾಲ್ಕು ಪುಸ್ತಕ, ಅದರೊಳಗ ಎರಡು ಲೈಬ್ರರಿವು, ಪುಸ್ತಕ ಮ್ಯಾಲೆ ಒಂದು ಊಟದ ಡಬ್ಬಿ, ಕಾಲೇಜು ಹೊರಗೊಂದು ಸೈಕಲ್ ಸ್ಟ್ಯಾಂಡ್ ಇವಿಷ್ಟು ಹಿಂದಿನ ಕಾಲದಾಗ ಕಾಲೇಜು ಅಂದ್ರ ಕಂಡು ಬರುವ ದೃಶ್ಯ. ಕಾಲೇಜು ಆವರಣ ಅಂದ್ರ ಈಗಿನಂಗ ಜಾಸ್ತಿ ಗದ್ದಲ ಇರ್ತಿದಿಲ್ಲ. ಅವಾಗಿನ ಕಾಲಕ್ಕ ಕಾಲೇಜು ಕಲಿಯೊರು ಕಮ್ಮಿ ಇದ್ರು. ಅಷ್ಟೊ ಇಷ್ಟೊ ಕಲಿತು ಸಿಕ್ಕದ ನೌಕರಿ ಇರಲಿ ಅಂತ ಹೋಗಿಬಿಡ್ತಿದ್ರು. ಇನ್ನು ಹುಡಿಗಿಯರಿಗೆ ಏಳನೇತ್ತ ಮುಗಿಯೋದ ತಡ ಮೆಟ್ರಿಕ್ ಮುಖ ನೋಡಲಾರದಂಗ ಮದುವಿ ಮಾಡಿ ಕೈ ತೊಳಕೊತ್ತಿದ್ರು. ಆಗಿನ ಕಾಲಕ್ಕ ಹೆಚ್ಚಾನೆಚ್ಚು ಮನೆಗಳ ಆರ್ಥಿಕ ಪರಿಸ್ಥಿತಿ ಹಂತಾ ಚೊಲೊ ಏನು ಇರಲಿಲ್ಲ ಅಂತ ಅನಬಹುದು. ಆದರೂ ಕಾಲೇಜು ಕಲಿಲಿಕ್ಕೆ ಭಾಳ ಮಂದಿ ಬರ್ತಿದ್ರು.
ಆಗಿನ ಕಾಲಕ್ಕ ಬಹಳ ಮಂದಿ ಕಲಾ (ಬಿ.ಎ) ವಿಭಾಗದೊಳಗ ಉನ್ನತ ವ್ಯಾಸಂಗ ಮಾಡ್ತಿದ್ರು. ಬಿ.ಎಸ್‍ಸಿ, ಬಿ.ಕಾಮ್ ಆಮೇಲೆ ಆಮೇಲೆ ಚಾಲ್ತಿಯೊಳಗ ಬಂದ್ವು. ವಿಶಾಲವಾದ ಕಾಲೇಜು, ದೊಡ್ಡ ದೊಡ್ಡ ಕ್ಲಾಸ್‍ರೂಂಗಳು ಲೆಕ್ಚರರ್ ಕ್ಲಾಸ್ ಒಳಗ ಹೆಜ್ಜೆ ಇಟ್ರ ಸಾಕು ಸೂಜಿ ನೆಲಕ್ಕ ಬಿದ್ರು ಶಬ್ದ ಆಗ್ತಿತ್ತು. ಅಷ್ಟ ಶಾಂತ ಆಗಿಬಿಡ್ತಿದ್ರು ಎಲ್ಲರೂ. ‘ಆಗಿನ ಕಾಲದ ಮಾಸ್ತರ ವಾಹ್! ಈಗೂ ನೆನಪಿದಾರ. ಅವರ ಕ್ಲಾಸ್ ಅಂದ್ರ ಓಡಿ ಹೋಗಿ ಕೂಡ್ತಿದ್ವಿ. ಅವರು ಪಾಠ ಮಾಡಿದ್ರ ಹಂಗ ಮನಸ್ಸಿಗೆ ನಾಟತಿತ್ತು.’ ಇದು ದೊಡ್ಡವರ ಹೇಳೊ ಮಾತು. ಅದ ಈಗಿನ ಹುಡುಗರಿಗೆ ಕೇಳ್ರಿ ನಿಮಗ ಕಲಿಸೊ ಎಲ್ಲ ಮಾಸ್ತರಗಳ ಹೆಸರು ಹೇಳು ಅಂದ್ರ ಬ್ಯಾ ಬ್ಯಾ ಮಾಡಕೋತ ತಲಿ ಕೆರಕೊತಾರ. ಅವಾಗಿನ ಕಾಲಕ್ಕ ಗುರು-ಶಿಷ್ಯರ ಸಂಬಂಧನೂ ಅಷ್ಟ ಚೊಲೊ ಇತ್ತು.

ಇನ್ನ ಸ್ನೇಹ ಅಂತ ಬಂದಾಗ ಅಲ್ಲೂ ಒಂದು ದೊಡ್ಡ ಬಳಗ ಇರ್ತಿತ್ತು. ಹುಡುಗರದ್ದು ಒಂದು, ಹೆಣ್ಣಮಕ್ಕಳದು ಒಂದು. ಇವರಿಗೆ ಹುಡಗಿಯರು ಅಂತ ಅನಲಿಕ್ಕೆ ತ್ರಾಸ ಆಗ್ತದ. ಯಾಕಂದ್ರ ಅರ್ಧಕ್ಕ ಅರ್ಧ ಮಂದಿ ಮದುವಿ ಆದವರ ಇರ್ತಾರ. ಕೊ-ಎಜ್ಯುಕೇಶನ್ ಕಾಲೇಜು ಇದ್ರೂ ಹುಡುಗ-ಹುಡುಗಿ ಮಾತಾಡಲಿಕ್ಕೆ ನಾಚಿಕೆ ಭಾಳ ಪಟ್ಟಿಕೊತಿದ್ರು. ನಾಚಿಕೆಗಿಂತಲೂ ಭಯ. ಯಾಕಂದ್ರ ಸಂಸ್ಕøತಿ-ಸಂಸ್ಕಾರ ಎಲ್ಲರೊಳಗು ಹೆಚ್ಚು ಇರ್ತಿತ್ತು. ಹುಡುಗರಿಗೆ ನೌಕರಿ ಚಿಂತಿ, ಹುಡಗಿಯರಿಗೆ ಮದುವಿ ಚಿಂತಿ. ಆದರೂ ಅವಾಗಿನ ಕಾಲದ ಮಜಾನ ಬ್ಯಾರೆ ಇತ್ತು. ಯಾರ ಕಡೆನೂ ಮೊಬೈಲ್ ಇಲ್ಲ, ರಾತ್ರಿ ಹಗಲು ಚ್ಯಾಟ್ ಮಾಡಲಿಕ್ಕೆ ವಾಟ್ಸಪ್ ಇದ್ದಿದ್ದಿಲ್ಲ, ಟೆಲಿಫೋನ್ ಇದ್ರೂ ಅಷ್ಟ ಉಪಯೋಗ ಇದ್ದಿದ್ದಿಲ್ಲ, ಪತ್ರ ಬರೆಯೊ ಹುಚ್ಚು ಮಾತ್ರ ಎಲ್ಲರಿಗೂ ಇತ್ತು. ಅದರೊಳಗು ಪ್ರೇಮ ಪತ್ರಗಳ ರವಾನೆ ಬಹಳ ಆಗ್ತಿದ್ವು. ಈಗಿನ ಕಾಲದಾಗ ‘ಒಲಗಿನ ಉಡುಗೊರೆ ಕೊಡಲೆ ರಕುತದಿ ಬರೆದೆನು ಇದನ’ ಅಂತ ಲವ್ ಲೆಟರ್ ಕೊಟ್ಟು ಪ್ರೇಮ ನಿವೇದನೆ ಮಾಡಿದವರನ್ನ ಕಂಡಿಲ್ಲ. ಏನಿದ್ರು ಎಲ್ಲ ವಾಟ್ಸಪ್ ಒಳಗ ಮೂರು ಡಾಟ್ ಒಂದು ಗೀಟು ಮುಂದ ಎರಡು ಸ್ಮೈಲಿ ಜೊತೆಗೊಂದು ಹಾರ್ಟ ಇಮೋಜಿ. ರಾಜಕುಮಾರ ಚಿತ್ರ ರಿಲೀಸ್ ಆದ್ರ ಸಾಕು. ಎದ್ನೋ ಬಿದ್ನೊ ಅಂತ ಓಡಿ ಹೋಗಿ ನೋಡ್ತಿದ್ರು. ಪಿಚ್ಚರ್ ನೋಡಿದ ಮ್ಯಾಲೆ ಆ ಹಿರೋ ಸ್ಟೈಲ್‍ನ ಕಾಲೆಜೊಳಗ ಕಾಪಿ ಮಾಡೊದು, ಕಾಲೇಜು ಕಾರ್ಯಕ್ರಮದೊಳಗ ಅವರ ಹಾಡಿಗೆ ಡ್ಯಾನ್ಸ್ ಮಾಡೋದು, ಹಾಡು ಹೇಳೊದು, ಇನ್ನೂ ನಾಟಕಗಳ ಪ್ರದರ್ಶನನೂ ಜೋರ ಇರ್ತಿತ್ತು.

ಕಾಲೇಜು ಮುಗಿದ ಮ್ಯಾಲೆ ಪಾರ್ಕಗೆ ಹೋಗೊದು, ಬಸ್ ಸ್ಟಾಪ್‍ನ್ಯಾಗ ಬಸ್‍ಗೆ ಕಾಯಕೊತ ಹರಟಿ ಹೊಡೆಯೊದು, ಸೈಕಲ್ ತಗೊಂಡು ಊರೆಲ್ಲ ಸವಾರಿ ಮಾಡೊದು ಖಾಯಂ ಕೆಲಸ. ವರ್ಷಕ್ಕ ಒಮ್ಮೆ ಸ್ಟಡಿ ಟೂರ್ ಹೆಸರಿನ್ಯಾಗ ಟ್ರಿಪ್ ಹೊಡದು ಮಜಾ ಮಾಡೊದು. ಅವಾಗಿನ ಗೆಳೆಯರ ಬಳಗ ಖರೆಗೂ ಒಂದು ಕುಟುಂಬದಂತಿತ್ತು. ಈಗಿನಂಗ ರೊಕ್ಕ ನೋಡಿ ಯಾರೂ ದೋಸ್ತಿ ಮಾಡವರು ಇದ್ದಿದ್ದಿಲ್ಲ. ಹಂಗೊ ಹಿಂಗೊ ಕಷ್ಟ ಪಟ್ಟು ಪರೀಕ್ಷೆ ಬರದು ಪಾಸ್ ಮಾಡಿದ್ರು ಅಂದ್ರ ಕರೆ ಬಣ್ಣದ ಗೌನ್, ಹ್ಯಾಟ್ ಹಾಕಿಕೊಂಡು ಕನ್ವೊಕೇಶನ್ ಫೋಟೊ ತಗಸಿ ಅದಕ್ಕ ಚಂದನಿ ಫ್ರೇಮ್ ಹಾಕಿಸಿ ಮನಿ ಗೋಡೆಗೆ ತೂಗು ಹಾಕಿ, ನಾಲ್ಕು ಮಂದಿ ನೋಡಿದ ಮ್ಯಾಲೆನ ಸಮಾಧಾನ. ಮೂರು ವರ್ಷದ ಶ್ರಮ ಆ ಒಂದು ಫೋಟೊದಾಗ ಕಾಣಬಹುದು. ಈಗಲೂ ಅಂಥಃ ಫೋಟೊ ನೋಡಬಹುದು ಆದರ ಗೋಡೆಗೆ ನೇತು ಹಾಕಿರುದಿಲ್ಲ. ಶೋಕೆಸ್‍ನ್ಯಾಗೊ ಇಲ್ಲ ಹಳೇ ಸಾಮಾನಿನ ಟ್ರಂಕ್ ಒಳಗ ಧೂಳು ತುಂಬಿ ಮೂಲಿ ಕಂಡಿರ್ತಾವ.

ಈಗಿಗ ತಂತ್ರಜ್ಞಾನ ಬೆಳೆದ ಮ್ಯಾಲೆ ಫೆಸಬುಕ್, ವಾಟ್ಸಪ್ ಕೃಪೆಯಿಂದ ಹಳೇ ದೊಸ್ತರೆಲ್ಲ ಒಂದಾಗಲಿಕತ್ತಾರ. ಗೆಟ್ ಟು ಗೆದರ್ ಅಂತ ಮತ್ತ ತಮ್ಮ ಕಾಲೇಜಿಗೆ ಮರಳಿ ತಮ್ಮ ಅಮರ ಹಳೇ ನೆನಪುಗಳನ್ನ ಮೆಲುಕು ಹಾಕಲಿಕತ್ತಾರ. ತಮಗ ಕಲಸಿದ್ದ ಗುರುಗಳು ಇದ್ರ ಹುಡುಕಿ ಸನ್ಮಾನ ಮಾಡಲಿಕತ್ತಾರ. ಹೊಸ ಹೊಸ ಸಂಘ ಕಟ್ಟಲಿಕತ್ತಾರ. ಒಂದ ಉದ್ದೇಶಕ್ಕ ಮತ್ತ ಎಲ್ಲಾರು ಒಂದಾಗಿರೋಣ ಅಂತ. ತಮ್ಮ ಮಕ್ಕಳು, ಮೊಮ್ಮಕ್ಕಳನ್ನ ತಾವು ಕಲತಿದ್ದ ಕಾಲೇಜಿಗೆ ಕರಕೊಂಡು ಹೋಗಿ, ‘ನೋಡು ನಾ ಇದ ಕಾಲೇಜಿನ್ಯಾಗ ಕಲಿತದ್ದು. ಇದ ಬೆಂಚ್‍ನ್ಯಾಗ ಕೂಡ್ತಿದ್ದೆ. ಇಲ್ಲೆ ನಾವು ಸ್ನೇಹಿತರೆಲ್ಲ ಕೂತು ಹರಟಿ ಹೋಡಿತಿದ್ವಿ. ಇಲ್ಲೊಂದು ಸಣ್ಣ ಚಹದ ಅಂಗಡಿ ಇತ್ತು. ಈಗಿಲ್ಲ. ಇಲ್ಲೆ ದಿವಸ ಸಂಜಿಕೆ ಚಹ ಕುಡಿತಿದ್ವಿ’ ಇಷ್ಟು ಚಂದ ವರ್ಣನೆ ಮಾಡ್ತಾರ.. ಒಮ್ಮೊಮ್ಮೆ ಮಾತು ಬರಲಾರದ ಆನಂದ ಭಾಷ್ಪ ಕಣ್ಣಿನ ರೆಪ್ಪೆಯೊಳಗ ತೇಲತಿರ್ತಾವ.

ಅಂದಹಂಗ ನಿಮ್ಮ ಕಾಲದೊಳಗ ಹೆಂಗಿತ್ತು ಕಾಲೇಜು?

-ನಿತೀಶ ಡಂಬಳ

Leave a Reply