ಗೆಲವು ಸಾಧಿಸಲು ಬದ್ಧತೆ ಅವಶ್ಯಕ

ಗೆಲುವು ಸಾಧಿಸಲು ಬದ್ಧತೆ ಅವಶ್ಯಕ
ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಕೆಲವು ವ್ಯಕ್ತಿಗಳ ಜೀವನ ಪರಿಚಯವಾಗುತ್ತದೆ. ಸಮಾಜ ಅವರನ್ನು ಸ್ಮರಿಸುತ್ತದೆ. ಅವರು ಕೆಲವು ತತ್ವಗಳಿಗೆ ಬದ್ಧರಾಗಿದ್ದರು ಎಂಬುದು ತಿಳಿಯುತ್ತದೆ. ಅವರ ಜೀವನ ಕ್ರಮ ಹೇಗಿರುತ್ತದೆ ಎಂದರೆ ಪ್ರತಿಯೊಂದು ಮಾತು ಒಂದೊಂದು ಅನುಭವ, “ನಡೆದಂತೆ ನುಡಿ, ನುಡಿದಂತೆ ನಡೆ” ಇದೇ ಅವರ ಸಿದ್ಧಾಂತ, ಅದ್ದರಿಂದಲೆ ಅವರು ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಿದ್ದಾರೆ.
ಬದ್ಧತೆ (Commitment) ಒಂದು ರಕ್ಷಾ ಕವಚವಿದ್ದಂತೆ. ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ, ಆತ್ಮಗೌರವ, ಅಪಾರವಾದ ತಾಳ್ಮೆಯನ್ನು ಕಲಿಸುತ್ತದೆ, ಎಲ್ಲಿ ಬದ್ಧತೆ ಇರುತ್ತದೆಯೋ ಅಲ್ಲಿ ನಿರ್ದಿಷ್ಟ ಗುರಿ ಹಾಗೂ ನಿರ್ದಿಷ್ಟ ಕರ್ತವ್ಯಗಳು ಇರುತ್ತವೆ. ಆಗ ನಿರ್ಧಾರಗಳು ಸುಲಭವಾಗುತ್ತವೆ.
ಸ್ವಾಮಿ ವಿವೇಕಾನಂದರು ‘ಎಂದಿನವರೆಗೂ ವ್ಯಕ್ತಿ ತಾನು ಮಾತನಾಡಿದ ಮಾತಿಗೂ ಮತ್ತು ಮಾಡಿದ ಕೆಲಸಕ್ಕೂ ತಾನು ಜವಾಬ್ದಾರನಾಗಿರುವುದಿಲ್ಲವೋ ಅಂದಿನವರೆಗು ಅವನ ಉದ್ಧಾರವಿಲ್ಲ’ ಎಂದಿದ್ದಾರೆ.
ಇದೊಂದು ಅದ್ಭುತ ಸಂದೇಶ ಅನೇಕ ವ್ಯಕ್ತಿಗಳು ತಮಗೆ ಸಂಬಂಧವಿಲ್ಲದ ವಿಷಯವನ್ನು ಮಾತನಾಡಿ ಬಾಯಿ ನೋಯಿಸಿಕೊಳ್ಳುತ್ತಾರೆ ಮತ್ತು ಸಮಯ ವ್ಯರ್ಥ ಮಾಡಿಕೊಳ್ಳುತ್ತಾರೆ. ತಮ್ಮ ಜವಾಬ್ದಾರಿಗಳ ಬಗ್ಗೆ ಅರಿವೇ ಇರುವುದಿಲ್ಲ.
ಬದ್ಧತೆ ಎಂದರೆ ಇನ್ನೊಬ್ಬರ ಅವಶ್ಯಕತೆಗಾಗಿ ನಮ್ಮ ವೈಯಕ್ತಿಕ ಬಯಕೆಗಳನ್ನು ತ್ಯಾಗ ಮಾಡುವುದು. ಬದ್ಧತೆ ವಿವಿಧ ಸಂಬಂಧಗಳನ್ನು ಬಂಧಿಸುವ ಅಂಟಿನಂತೆ ಕೆಲಸ ಮಾಡುತ್ತದೆ.
ಇಂದಿನ ದಿನಗಳಲ್ಲಿ ಸಮಾಜದ ವ್ಯವಸ್ಥೆ, ಕುಟುಂಬಗಳು, ಸಂಘ ಸಂಸ್ಥೆಗಳು, ವ್ಯಾಪಾರ ವಹಿವಾಟುಗಳು, ಮಠಮಂದಿರಗಳ ಸಂಬಂಧಗಳು ಮುರಿದು ಬೀಳುತ್ತಿವೆ. ಇವರು ಯಾವುದಕ್ಕೂ ಬದ್ಧರಾಗಿರುವುದಿಲ್ಲ. ಎಲ್ಲಿ ಸ್ವಾರ್ಥ, ಮೋಸ, ವಂಚನೆಗಳು ತುಂಬಿರುತ್ತವೋ ಅಲ್ಲಿ ಬದ್ಧತೆ ಎನ್ನುವುದಕ್ಕೆ ಸ್ಥಾನವೇ ಇರುವುದಿಲ್ಲ.
ಉದಾಹರಣೆಗೆ ಒಂದು ಕಂಪನಿಯಲ್ಲಿ ಸಾವಿರಾರು ನೌಕರರು ಕೆಲಸ ಮಾಡುತ್ತಾರೆ ಎಂದರೆ ಕಂಪನಿಯು ಅವರೆಲ್ಲರ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಅದರ ಜವಾಬ್ದಾರಿ. ಹೀಗೆ ಯಥಾವತ್ ನಡೆದುಕೊಳ್ಳುವುದು ಕಂಪನಿಯ ಬದ್ಧತೆ. ಹಾಗೆಯೇ ನೌಕರರು ಕಂಪನಿಗೆ ಅನ್ಯಾಯವಾಗದಂತೆ ದುಡಿಯುವುದು ಅವರ ಬದ್ಧತೆ.
ಜನರು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅದ್ಭುತವಾದ ಸಾಧನೆಗೈದು ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡಿದ್ದಾರೆ. ಉದ್ಯೋಗ, ಹಣ, ಅಧಿಕಾರ, ಎಲ್ಲಾ ಇದ್ದರೂ ಯಾರಿಗೂ ಸಮಾಧಾನವಿಲ್ಲ, ಕಾರಣ ತಮ್ಮ ಆಲೋಚನೆಗಳಲ್ಲಿ ದೃಢತೆ ವೈಶಾಲ್ಯತೆ ಮತ್ತು ಬದ್ಧತೆ ಎನ್ನುವುದು ಇಲ್ಲ. ಯಾವ ವ್ಯಕ್ತಿಯಲ್ಲಿ ಬದ್ಧತೆ ಇರುತ್ತದೆಯೋ ಅವನ ಮಾತು, ನಡತೆ, ಆಲೋಚನೆಗಳ ಲಹರಿ ಉಳಿದವರಿಗಿಂತ ಭಿನ್ನವಾಗಿರುತ್ತವೆ.
ಬಲಿಷ್ಠ ಸಮಾಜ ನಿರ್ಮಾಣವಾಗುವುದು ಬದ್ಧತೆಯ ವ್ಯಕ್ತಿಗಳಿಂದ ಮಾತ್ರ. ಬದ್ಧತೆ ಪ್ರಬುದ್ಧತೆಯ ಸಂಕೇತ. ಪ್ರಬುದ್ಧತೆ ಇದ್ದಲ್ಲಿ ತೋರಾಣಿಕೆಯ ಬದುಕಿಗೆ ಅವಕಾಶವಿರುವುದಿಲ್ಲ.
ಇಂದಿನ ಜನರಲ್ಲಿ ಹೆಚ್ಚು ಮಾನಸಿಕ ಖಿನ್ನತೆ ಮತ್ತು ಅಸ್ಥಿರತೆ ಎದ್ದು ಕಾಣುತ್ತದೆ. ಅವರಿಂದ ಯಾವ ಕೆಲಸವನ್ನು ಪೂರ್ಣಗೊಳಿಸಲು ಆಗುತ್ತಿಲ್ಲ. ಅಂಥವರಿಗೆ ಎನಾದರೂ ಸಲಹೆ ಸೂಚನೆ ಕೊಟ್ಟರೆ ಅದನ್ನು ಅನುಸರಿಸಲು ಸಿದ್ಧರಿರುವುದಿಲ್ಲ. ಅವರಿಂದ ಬರುವ ಉತ್ತರ ಟ್ರೈ ಮಾಡುತ್ತೇನೆ, ಸಾಧ್ಯವಾದರೆ ಬರುತ್ತೇನೆ, ಎಂದು ಜಾರಿಕೊಳ್ಳುವ ಮಾತುಗಳನ್ನಾಡುತ್ತಾರೆ. ಯಾವುದಕ್ಕೂ ಅವರು ಬದ್ಧರಾಗುವುದಿಲ್ಲ. ಅವರು ಹೇಗೆ ತಮ್ಮ ಮುಂದಿನ ಜೀವನ ಮತ್ತು ಇತರ ಸಂಬಂಧಗಳನ್ನು ನಿರ್ವಹಿಸುತ್ತಾರೆ ಎಂಬುದೇ ಸೋಜಿಗವಾಗಿದೆ.
ಒಬ್ಬ ವ್ಯಕ್ತಿಯಲ್ಲಿ ಬದ್ಧತೆ ಇದ್ದರೆ ಅವನ ಶ್ರದ್ಧೆ ಮತ್ತು ಚಿಂತನೆ ಇತರರಿಗಿಂತ ಹೇಗೆ ಭಿನ್ನವಾಗಿರುತ್ತದೆ ಎನ್ನುವುದಕ್ಕೆ ಒಂದು ಉದಾಹರಣೆ ನೋಡೋಣ.
ಒಂದು ದಿನ ಒಬ್ಬ ಮಹಾರಾಜ ತನ್ನ ಕಿಸೆಯಿಂದ ಒಂದು ವಜ್ರವನ್ನು ತೆಗೆದು ಪ್ರಧಾನ ಮಂತ್ರಿಗೆ, “ಹೇಗಿದೆ ವಜ್ರ? ಇದರ ಬೆಲೆಯು ಎಷ್ಟಾಗಬಹುದು?’ ಎಂದು ಕೇಳಿದನು, ಬೆಲೆಯಿರಬೇಕು” ಎಂದನು. ಅಡ್ಡಿಯಿಲ್ಲ ಹಾಗಾದರೆ ಇದನ್ನು ಒಡೆದು ಪುಡಿಮಾಡು (ಚೂರು ಮಾಡು) ಎಂದನು ರಾಜ. ಆಗ ಮಂತ್ರಿ “ಮಹಾರಾಜರೆ ನಾನು ಇದನ್ನು ಹೇಗೆ ಒಡೆಯಲಿ ನಾನು ಈ ರಾಜ್ಯದ ಸಂಪತ್ತಿನ ರಕ್ಷಕ” ಎಂದನು. ರಾಜನು ಮಂತ್ರಿಯನ್ನು ಸನ್ಮಾನಿಸಿ ಕಳುಹಿಸಿದನು ಅವನ ಪಕ್ಕದಲ್ಲಿ ಉಪಪ್ರಧಾನಿ ಇದ್ದನು. ರಾಜ ಅವನನ್ನು ಕರೆದು “ಈ ವಜ್ರವನ್ನು ಎಷ್ಟಕ್ಕೆ ಮಾರಬಹುದು”? ಎಂದನು ಅವನು “ಸ್ವಾಮಿನ್ ಇದರ ಬೆಲೆ ತಮ್ಮ ಅರ್ಧ ರಾಜ್ಯದಷ್ಟಿದೆ, ಇದನ್ನು ಕೊಳ್ಳಲು ಯಾರಿಗೂ ಸಾಧ್ಯವಿಲ್ಲ” ಎಂದನು. ರಾಜ ಹಾಗಾದರೆ ಇದನ್ನು ಒಡೆದು ಪುಡಿಮಾಡು ಎಂದು ಆಜ್ಞೆಮಾಡಿದನು. ಉಪಪ್ರಧಾನಿ, “ರಾಜನ್ ಇದನ್ನು ಒಡೆಯುವುದು ಅವಿಚಾರವಾದಿತು, ನಾನೇನು ಸರ್ಕಾರದ ಶತ್ರುವೇ?” ಎಂದನು. ಮಹಾರಾಜನು ಅವನನ್ನು ಸನ್ಮಾನಿಸಿ ಬಡ್ತಿ ನೀಡಿಕಳುಹಿಸಿದನು. ಅಂದು ಸಭೆಯಲ್ಲಿದ್ದ ಎಲ್ಲರು ಹೀಗೆ ಹೇಳಿ ರಾಜನಿಂದ ಬಹುಮಾನಗಳನ್ನು ಪಡೆದರು. ಕೊನೆಗೆ ಒಬ್ಬ ವ್ಯಕ್ತಿ ಉಳಿದನು. ಅವನು ರಾಜನ ಸೇವಕ ಬಹಳ ಪ್ರಾಮಾಣಿಕನಿದ್ದನು. ರಾಜನು ಅವನಿಗೂ ಒಂದು ಅವಕಾಶ ಯಾಕೆ ನೀಡಬಾರದೆಂದು ಕರೆದು ವಜ್ರವನ್ನು ಅವನ ಕೈಗಿಟ್ಟು “ಹೇಳು ಈ ವಜ್ರದ ಬೆಲೆ ಎಷ್ಟಾಗಬಹುದು?” ಅವನು “ನನ್ನ ಎಲ್ಲಾ ಅಂದಾಜಿಗಿಂತಲೂ ಇದರ ಬೆಲೆ ಮೀರಿದ್ದು ಎಂದನು. ರಾಜ “ಹಾಗಾದರೆ ಇದನ್ನು ಒಡೆದು ಪುಡಿ ಮಾಡಿಬಿಡು” ಎಂದನು ಸೇವಕನಿಗೆ ಮಹಾರಾಜರ ಮಾತು ಎಂದರೆ ‘ದೈವವಾಣಿಯ ಸಮಾನ’, ಒಂದು ಸುತ್ತಿಗೆಯಿಂದ ಕುಟ್ಟಿ ಪುಡಿ ಪುಡಿ ಮಾಡಿಬಿಟ್ಟನು ನೋಡುತ್ತಿದ್ದ ಸನ್ಮಾನಿತರಾದ ಮಂತ್ರಿ ಮಹೋದಯರು’ ಅವನೊಬ್ಬ ಬುದ್ಧಿ ಹೀನ ತಲೆಕೆಟ್ಟಿದೆ ಅವನಿಗೆ ಅದರ ಮಹತ್ವ ಗೊತ್ತಿಲ್ಲ’ ಎಂದು ಜರಿದರು.
ಸೇವಕ ತಲೆಯೆತ್ತಿ ‘ಎಲೈ ಸಭ್ಯಗ್ರಹಸ್ಥರೇ ನಮ್ಮ ಮಹಾರಾಜರ ಆಜ್ಞೆಯ ಬೆಲೆಯು ಹೆಚ್ಚಿನದೋ ಅಥವಾ ಆ ವಜ್ರದ ಬೆಲೆಯೋ? ನಿಮ್ಮ ದೃಷ್ಟಿ ವಜ್ರದ ಮೇಲೆಯೇ ಹೊರತು ರಾಜನ ಮೇಲಲ್ಲ’ ರಾಜನ ಮಾತನ್ನು ಅಲಕ್ಷಿಸಿದ ನೀವು ಚಾರಿತ್ರ್ಯಹೀನರೆಂದೇ ಭಾವಿಸುತ್ತೇನೆ ಎಂದನು.
ನಂತರ ಮಹಾರಾಜನು ಸೇವಕನಿಗೆ ಶಹಭಾಶ್‍ಗಿರಿ ಕೊಟ್ಟು ಅಪ್ಪಿಕೊಂಡು ಉನ್ನತ ಸ್ಥಾನಕ್ಕೆ ಬಡ್ತಿ ನೀಡಿದನು. ಉಳಿದವರಿಗೆ ಛಿಮಾರಿ ಹಾಕಿ ಹೊರಗೆ ಕಳುಹಿಸಿದನು. ಎಲ್ಲರು ತಲೆ ಬಗ್ಗಿಸಿದವರು ತಲೆ ಎತ್ತಲೇ ಇಲ್ಲ. ಮಹಾರಾಜನ ಆಜ್ಞೆಯಂತೆ ವಜ್ರವನ್ನು ಒಡೆದು ಪುಡಿಮಾಡಿದ ಆ ಸೇವಕನು ತನ್ನ ದೊರೆಯ ಆಜ್ಞೆಯನ್ನು ಪಾಲಿಸಲು ಬದ್ಧನಾಗಿದ್ದನಲ್ಲವೇ.!
ಯಾವದೇ ಕ್ಷೇತ್ರದಲ್ಲಾಗಲಿ ಮಾನವರು ಹೀಗೆ ಜೀವಿಸಿದರೆ ಯಶಸ್ಸು ಎಂಬುದು ಅವರ ಪಾದದಡಿಯಲ್ಲಿ ಬಂದು ಬೀಳುತ್ತದೆ ಎನ್ನುವದರಲ್ಲಿ ಸಂಶಯವಿಲ್ಲ.
ನೀವು ಯಶಸ್ಸು ಗಳಿಸಲು ಈ ಕೆಳಗಿನ ಅಂಶಗಳನ್ನು ಅನುಸರಿಸುವುದು ಅವಶ್ಯಕ.
1. ನಿರ್ಧರಿಸಿ ಪ್ರಾರಂಭಿಸಿದ ಕೆಲಸ ಪೂರ್ಣವಾಗುವವರೆಗೂ ಬಿಟ್ಟು ಬರಬೇಡಿ.
2. ಕೊಟ್ಟ ಮಾತಿಗೆ ಯಾವ ಕಾರಣಕ್ಕೂ ತಪ್ಪಬಾರದು.
3. ನಿಮ್ಮನ್ನು ನಂಬಿದವರಿಗೆ ಯಾವತ್ತೂ ಮೋಸ ಮಾಡಬೇಡಿ.
4. ನಿಮ್ಮ ತಾಯಿನಾಡನ್ನು ಗೌರವಿಸಿ ಹಾಗೂ ತಾಯಿನಾಡಿನ ಮಕ್ಕಳನ್ನು ಸಮಾನವಾಗಿ ಪ್ರೀತಿಸಿ.
ಹೆತ್ತವರು-ಮಗು, ಗಂಡ-ಹೆಂಡತಿ, ಶಿಕ್ಷಕ –ವಿದ್ಯಾರ್ಥಿ, ಮಾಲಿಕ-ನೌಕರ, ವ್ಯಾಪಾರಿ-ಗ್ರಾಹಕ ಮತ್ತು ಸ್ನೇಹಿತ-ಸ್ನೇಹಿತೆ, ಇವರುಗಳೊಂದಿಗೆ ಸಂಬಂಧಗಳು ಚೆನ್ನಾಗಿ ಬೆಳೆಸಿಕೊಂಡರೆ ಸಮಾಜಕ್ಕೆ ಅಂಥವರ ಕೊಡುಗೆ ಅಪಾರ, ಬದುಕು ಸಾರ್ಥಕ.

Leave a Reply