ಮರೆಯಲಾಗದ ಮಾತುಗಳು

ಮರೆಯಲಾಗದ ಮಾತುಗಳು

ಜಗತ್ತಿನಲ್ಲಿ ಬೆಲೆಕಟ್ಟುವುದಕ್ಕೆ ಸಾಧ್ಯವಿಲ್ಲದಿರುವ ಯಾವುದಾದರೂ ಒಂದು ವಸ್ತು ಇದ್ದರೆ ಅದು ‘ಮಾತು’. ಮನುಷ್ಯನು ಆಡಿದ ಒಂದು ‘ಮಾತು’ ಜಗತ್ತನ್ನೇ ಅಲ್ಲೋಲಕಲ್ಲೋಲ ಮಾಡಿಬಿಡಬಹುದು. ಅದಕ್ಕೆ ಅಷ್ಟು ಶಕ್ತಿಯಿದೆ. ಮಾತು ತನ್ನ ಶಕ್ತಿಯನ್ನು ಉಳಿಸಿಕೊಳ್ಳಬೇಕಾದರೆ ಬಹಳ ಎಚ್ಚರದಿಂದಿರಬೇಕು. ಅದಕ್ಕಾಗಿ ಬಸವಣ್ಣನವರು ಒಂದು ಸುಂದರ ವಚನ ರಚಿಸಿದ್ದಾರೆ. “ನುಡಿದರೆ ಮುತ್ತಿನ ಹಾರದಂತಿರಬೇಕು, ಮಾಣಿಕ್ಯದ ದೀಪ್ತಿಯಂತಿರಬೇಕು. ಸ್ಫಟಿಕದ ಸಲಾಕೆಯಂತಿರಬೇಕು ಮತ್ತು ಮಾತನ್ನು ಕೇಳಿದ ಲಿಂಗವು ಅಹುದಹುದೆನಬೇಕು” ಎಂದಿದ್ದಾರೆ. ಈ ಒಂದು ವಚನ ನಮಗೆ ಕರಗತವಾದರೆ ಸಾಕು ನಮ್ಮ ಜೀವನ ಉದ್ಧಾರವಾಗುತ್ತದೆ.
ಇಂದು ಮಾತನಾಡುವ ಕಲೆಯನ್ನು (Communication Skill) ಕಲಿಸುವಂಥ ಕೋರ್ಸ್ ಗಳು ಬಂದಿವೆ. ಅಲ್ಲಿ ಕಲಿಸುವಂತಹ ಕಲೆಯಿಂದ ಒಂದಿಷ್ಟು ಹಣಗಳಿಸಬಹುದೇ ಹೊರತು, ಎರಡು ಹೃದಯಗಳನ್ನು ಸಂಗಮಗೊಳಿಸುವಂಥ ಮಾತುಗಳಿರುವುದಿಲ್ಲ.
ಭಾರತದಲ್ಲಿ ಸಂತ-ಮಹಾಂತರನ್ನು ಯಾಕೆ ನೆನೆಯುತ್ತೇವೆ ಎಂದರೆ, ಅವರು ಆಡಿದ ಮಾತುಗಳು ಜನರಲ್ಲಿ ಪರಿವರ್ತನೆ ತರುತ್ತವೆ. ಉತ್ತಮ ಸಮಾಜವನ್ನು ನಿರ್ಮಿಸುತ್ತವೆ. ಒಂದೊಂದು ಮಾತು ಸಾಮಾನ್ಯ ಮನುಷ್ಯನನ್ನು ಕೂಡ ಅಸಾಮಾನ್ಯನನ್ನಾಗಿ ಮಾಡಿವೆ. ಕಿಂಗ್ ಮಾರ್ಟಿನ್ ಲೂಥರ್ ನಿಂದ ಹಿಡಿದು ದಿವಂಗತ ಎ.ಪಿ.ಜೆ. ಅಬ್ದುಲ್ ಕಲಾಂ ವರೆಗಿನ ಅನೇಕ ಶ್ರೇಷ್ಠ ವ್ಯಕ್ತಿಗಳ ಜೀವನ ಬದಲಾವಣೆಯಾಗಿದ್ದು ಪ್ರೀತಿಯ ಮಾತುಗಳಿಂದ. ಅಂಥ ಮಾತುಗಳೇ ಮರೆಯಲಾಗದ ಮಾತುಗಳು.
ಶ್ರೀ ರಾಮಕೃಷ್ಣರು ನರೇಂದ್ರನಿಗೆ ‘ನರೇನ್ ಇನ್ನು ಮುಂದೆ ಕಣ್ಣು ಮುಚ್ಚಿ, ಕೊಠಡಿಯ ಬಾಗಿಲು – ಕಿಟಕಿಗಳನ್ನು ಮುಚ್ಚಿ ಧ್ಯಾನ ಮಾಡುವುದಕ್ಕಿಂತ, ಎಲ್ಲವನ್ನು ತೆರೆದು ಧ್ಯಾನ ಮಾಡು. ನಿನ್ನ ಕಣ್ಣಿಗೆ ಅಸಹಾಯಕರು ಕಂಡರೆ ಅವರ ಸೇವೆ ಮಾಡು. ಅದು ನೇರವಾಗಿ ದೇವರಿಗೆ ಮುಟ್ಟುತ್ತದೆ. ಜೀವರಲ್ಲಿ ಶಿವನನ್ನು ಕಂಡು ಆರಾಧಿಸು’ ಎಂದು ಆದೇಶಿಸಿದರು.
ಈ ವಾಕ್ಯ ಸ್ವಾಮಿ ವಿವೇಕಾನಂದರ ಧ್ಯೇಯವಾಗಿತ್ತು. ಮತ್ತು ಅವರ ಆಲೋಚನೆಯ ದಿಕ್ಕನ್ನೇ ಬದಲಿಸಿತು. ಅದರಿಂತ ಈ ರಾಷ್ಟ್ರಕ್ಕೆ ಹಾಗೂ ಜಗತ್ತಿಗೆ ಆದ ಪ್ರಯೋಜನೆ ಅಷ್ಟಿಷ್ಟಲ್ಲ.
ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಇಂಥ ಪರಿವರ್ತನೆಗೊಳಿಸುವಂಥ ಮಾತುಗಳನ್ನು ಕೇಳುವ ಅಥವಾ ಕೇಳಿರುವ ಪ್ರಸಂಗಗಳು ಹಲವಾರು ಬಂದಿಲ್ಲ ಎಂದಲ್ಲ. ಆದರೆ ಜನರು ಅವುಗಳನ್ನು ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ಯಾರು ಮಹಾತ್ಮರ ಕೆಲವು ಮಾತುಗಳನ್ನಾದರೂ ಪರಿಗಣಿಸುವರೋ (ಗೌರವಿಸಿದರೆ) ಅವನು ಮಹಾತ್ಮನಾಗಿಬಿಡುತ್ತಾನೆ. ಡಿ. ವಿ. ಗುಂಡಪ್ಪನವರು ‘ಸಾಮಾನ್ಯ ರೂಪದಲಿ ಸಂಸಾರಿ ವೇಷದಲಿ ಸ್ವಾಮಿ ನಿನ್ನೆಡೆಗೆ ಬರಬಹುದು ವರನೀಡಿ. ಮಹಿಮೆ ಕಾಂಬೊಡೆ ನಿನಗೆ ಸಂಸ್ಕಾರವಿರಬೇಕು. ತಾಮಸಿಗೆ ವರವೆಲ್ಲಿ ಮಂಕುತಿಮ್ಮ’ ಎಂದಿದ್ದಾರೆ.
ಮನುಷ್ಯ ಮೊದಲು ಮಾಡಬೇಕಾದುದು ಈ ನಾಲ್ಕು ಕಾರ್ಯಗಳನ್ನು :
ಒಂದನೆಯದು Learning to learn (ಕಲಿಯುವ ಕಲೆಯನ್ನು ಮೈಗೂಡಿಸಿ ಕೊಳ್ಳುವುದು). ಒಳ್ಳೆಯ ಜ್ಞಾನವನ್ನು ಸಂಪಾದಿಸಲು ಪ್ರಯತ್ನಿಸಬೇಕು. ಸದ್ಗ್ರಂಥಗಳನ್ನು ಓದುವುದು. ಸಜ್ಜನರ, ಜ್ಞಾನಿಗಳ ಸಂಪರ್ಕಹೊಂದಿ ಅವರ ಅನುಭವಗಳನ್ನು ತಿಳಿಯುವುದು, ಹಿರಿಯರಿಂದ ಮಾರ್ಗದರ್ಶನ ಪಡೆಯುವುದು.
ಎರಡನೆಯದು Learning to do (ಕಲಿತ ಜ್ಞಾನವನ್ನು ಜೀವನದಲ್ಲಿ ಬಳಸುವುದು) ಈಗ ನಾವು ಪುಸ್ತಕದಲ್ಲಿ ಒಂದು ಒಳ್ಳೆಯ ವಿಷಯವನ್ನು ಓದಿದೆವು ಅಥವಾ ಒಬ್ಬರಿಂದ ಒಂದು ಉಪದೇಶ ಕೇಳಿದೆವು ಎಂದಿಟ್ಟುಕೊಳ್ಳಿ, ಅದನ್ನು ಅಷ್ಟಕ್ಕೇ ಬಿಟ್ಟರೆ ಏನೂ ಪ್ರಯೋಜನ ಇಲ್ಲ. ಅದನ್ನು ಜೀವನದಲ್ಲಿ ಅನುಷ್ಠಾನಕ್ಕೆ ತಂದುಕೊಳ್ಳಬೇಕು.
ಮೂರನೆಯದು Learning to be (ತನ್ನನ್ನು ತಾನು ಅರಿತುಕೊಳ್ಳುವುದು). ಪ್ರತಿಯೊಬ್ಬರು ತನ್ನನ್ನು ತಾನು ಅರಿತುಕೊಳ್ಳಲು ಪ್ರಯತ್ನಿಸಬೇಕು. ಎಲ್ಲಿಯವರೆಗೂ ಒಬ್ಬನಿಗೆ ತನ್ನ ಅರಿವು (ಸಾಮರ್ಥ್ಯ) ತಿಳಿದಿರುವುದಿಲ್ಲವೋ ಅಲ್ಲಿಯವರೆಗೂ ಅವನೊಬ್ಬ ಮೂರ್ಖನಾಗಿ ಉಳಿಯುತ್ತಾನೆ. ಮಹಾತ್ಮರಿಗೂ ಹಾಗೂ ಸಾಮಾನ್ಯರಿಗೂ ಇರುವ ವ್ಯತ್ಯಾಸವೆಂದರೆ ಮಹಾತ್ಮರಿಗೆ ತಾವ್ಯಾರು ತಮ್ಮ ಗುರಿ ಎಂಬುದು ತಿಳಿದಿರುತ್ತದೆ. ಸಾಮಾನ್ಯರಿಗೆ ತಿಳಿದಿರುವುದಿಲ್ಲ. ಆದ್ದರಿಂದ ಸಾಮಾನ್ಯ ಜನರು ಹೆಚ್ಚು ಕಷ್ಟಪಡುತ್ತಾರೆ. ಮನುಷ್ಯ ಪ್ರಪಂಚವನ್ನು ಅರಿಯುವ ಮುನ್ನ ತನ್ನನ್ನು ತಾನು ಅರಿಯಬೇಕು.
ನಾಲ್ಕನೆಯದು Learning to live and let others live (ತಾನೂ ಬದುಕಿ ಇತರರಿಗೆ ಬದುಕಲು ಅನುವು ಮಾಡಿಕೊಡುವುದು) ಈ ಮಾತು ಮಾನವ ಕುಲಕ್ಕೆ ಉನ್ನತ ಆದರ್ಶವನ್ನು ಬೋಧಿಸಿದೆ. ಒಂದು ಜೀವಿ ಪಶುತ್ವದಿಂದ ಮನುಷ್ಯತ್ವಕ್ಕೆ ಬರಬೇಕಾದರೆ ಈ ಸಂದೇಶವನ್ನು ಪಾಲಿಸಲೇಬೇಕು. ಇಲ್ಲದಿದ್ದರೆ ಇಡೀ ಸಮಾಜದ ವ್ಯವಸ್ಥೆ ಅಭದ್ರವಾಗುತ್ತದೆ. ಮನುಷ್ಯ ಎಂದ ಮೇಲೆ ಸ್ವಲ್ಪವಾದರೂ ಪರೋಪಕಾರಿಯಾಗಿ ಬದುಕಬೇಕು. ಅದರಿಂದ ಅವನು ಶಾಂತಿ, ಸಮಾಧಾನ ಹೊಂದುತ್ತಾನೆ.
ಮನುಷ್ಯ ಹಂತಹಂತವಾಗಿ ಬೆಳೆಯಬೇಕು. ಆಗ ಮಹಾತ್ಮರು, ಅನುಭವಿಗಳ ಪ್ರತಿಯೊಂದು ಮಾತು ಅರ್ಥವಾಗುತ್ತದೆ. ಜೀವನ ಬದಲಾಗುತ್ತದೆ. ಮುಂಬೈಯಲ್ಲಿ ಒಂದು ದಿನ ಒಬ್ಬ ಶ್ರೀಮಂತನ ಅಂಗಡಿಗೆ ಒಬ್ಬ ಜ್ಯೋತಿಷಿ ಆಕಸ್ಮಿಕವಾಗಿ ಹೋದನು. ಮಾಲಿಕನೇ ಗಲ್ಲೆಯ ಮೇಲೆ ಕುಳಿತಿದ್ದಾನೆ ಎಂದು ತಿಳಿಯಿತು. ಅವನ ಮುಖ ನೋಡಿ “ನಿನ್ನ ಜಾತಕದಲ್ಲಿ ಗುರುವು ಉಚ್ಛ ಸ್ಥಾನದಲ್ಲಿದ್ದಾನೆ. ಆದ್ದರಿಂದ ನಿನ್ನ ಜೀವನ ಸುಖಮಯವಾಗಿರುತ್ತದೆ. ನೀನು ಪ್ರತಿದಿನ ಸಾಧು ಸಜ್ಜನರಿಗೆ, ದೀನ-ದರಿದ್ರರಿಗೆ ಅನ್ನದಾನ ಮಾಡಿದರೆ ನಿನ್ನ ಐದು ತಲೆಮಾರಿನವರೂ ಸುಖವಾಗಿ ಜೀವಿಸುತ್ತಾರೆ,” ಎಂದನು.
ಅಂದಿನಿಂದಲೇ ವ್ಯಾಪಾರಿ ಅನ್ನದಾನ ಪ್ರಾರಂಭಿಸಿದನು. ಆದರೆ ಒಂದು ಚಿಂತೆ ಹತ್ತಿಕೊಂಡಿತು. ನನ್ನ ಆರನೇ ತಲೆಮಾರಿನವರ ಅವಸ್ಥೆ ಏನಾಗಬಹುದು? ಎಂದು. ಅವರ ಚಿಂತೆಯನ್ನು ಅರಿತ ಒಬ್ಬ ಆಪ್ತಸಹಾಯಕ ಒಂದು ಸಲಹೆಯನ್ನು ಹೊಟ್ಟ. ನಿಮ್ಮ ಐದನೆಯ ತಲೆಮಾರಿನವರೆಗೂ ಏನೂ ಯೋಜಿಸಬೇಡಿ, ಆಮೇಲೆ ಯಾರೋ ಒಬ್ಬರು ಸಮರ್ಥರು ಹುಟ್ಟುತ್ತಾರೆ, ಎಂದನು. ಆದರೆ ವ್ಯಾಪಾರಿಗೆ ಸಮಾಧಾನವಾಗಲಿಲ್ಲ. ಇಂದಿನ ಸಮಾಜದಲ್ಲಿ ಇಂಥವರೇ ಹೆಚ್ಚಾಗಿದ್ದಾರೆ. ಅಕ್ಕ-ಪಕ್ಕದಲ್ಲಿ ಜನ ಒಂದು ಹೊತ್ತು ಊಟಕ್ಕೆ ಇಲ್ಲದೆ ಸಾಯುತ್ತಿದ್ದರೂ ಅವರಕಡೆ ಗಮನ ಹೋಗುವುದಿಲ್ಲ. ಐದು, ಆರನೇ ತಲೆಮಾರುಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ.
ಒಂದು ದಿನ ಅನ್ನದಾನ ಮಾಡುತ್ತಿದ್ದ ಸಮಯದಲ್ಲಿ ಹರಕು ಬಟ್ಟೆ ಹಾಕಿದ್ದ ಒಬ್ಬ ಭಿಕ್ಷುಕ ಆ ದಾರಿಯಲ್ಲಿ ಹೊರಟಿದ್ದನು. ವ್ಯಾಪಾರಿ ಅವನನ್ನು ಭಿಕ್ಷೆ ತೆಗೆದುಕೊಂಡು ಹೋಗುವಂತೆ ಕರೆದ. ಭಿಕ್ಷುಕ ‘ನನ್ನದು ಊಟ ಆಗಿದೆ. ನಿಮ್ಮ ಭಿಕ್ಷೆಬೇಡ’ ಎಂದನು. ಮಾಲೀಕ, ‘ಹಾಗಾದರೆ ಸಾಯಂಕಾಲಕ್ಕೆ ತೆಗೆದುಕೊಂಡು ಹೋಗು.’ ಎಂದನು. ‘ಸಾಯಂಕಾಲಕ್ಕೆ ಬಿಸಿ ಅನ್ನ ಮಾಡಿಕೊಳ್ಳುವುದಕ್ಕೆ ಸ್ವಲ್ಪ ಅಕ್ಕಿ ಇದೆ. ಆದ್ದರಿಂದ ನನಗೆ ಅವಶ್ಯಕತೆ ಇಲ್ಲ’ ಎಂದನು ಭಿಕ್ಷುಕ. ವ್ಯಾಪಾರಿ ‘ನಿನ್ನಂತಹ ಜನರು ಲೋಕದಲ್ಲಿ ಬಹಳ ವಿರಳ. ನಿನ್ನ ಮನೆಗೆ ಧಾನ್ಯಗಳನ್ನು ಕಳುಹಿಸುತ್ತೇನೆ. ಕೆಲವು ದಿನಗಳಾದರೂ ನಿಶ್ಚಿಂತೆಯಿಂದಿರು’ ಎಂದ.

ಭಿಕ್ಷುಕ ‘ಧಣಿಯರೇ! ಈ ದಿನದ ಆಹಾರವನ್ನು ಭಗವಂತ ಕೊಟ್ಟಿದ್ದಾನೆ. ನಾಳೆಯ ಆಹಾರದ ವ್ಯವಸ್ಥೆಯನ್ನು ಅವನೇ ಮಾಡುತ್ತಾನೆ. ಆದುದರಿಂದ ನಿಮ್ಮಿಂದ ಏನನ್ನೂ ತೆಗೆದುಕೊಳ್ಳಲು ನನಗೆ ಇಷ್ಟವಾಗುವುದಿಲ್ಲ. ಹೆಚ್ಚಾಗಿ ತೆಗೆದುಕೊಳ್ಳುವುದು ಮಹಾಪಾಪ’ ಎಂದು ಹೇಳಿ ಹೊರಟುಹೋದ.
ಭಿಕ್ಷುಕ ಹೇಳಿದ ಮಾತುಗಳು ವ್ಯಾಪಾರಿಯ ತಲೆಗೆ ಗುಂಡು ಹೊಡೆದಂತೆ ಆಯಿತು. ಅವನು ಯೋಚಿಸಿದ ‘ಭಿಕ್ಷುಕ ಈ ಹೊತ್ತಿನ ಆಹಾರ ಅವನೇ ಕೊಟ್ಟಿದ್ದಾನೆ. ನಾಳೆಯೂ ಅವನೇ ಕೊಡುತ್ತಾನೆ ಎನ್ನುತ್ತಿದ್ದಾನೆ. ನಾನು ನೋಡಿದರೆ ಆರನೇ ತಲೆಮಾರಿನ ಬಗ್ಗೆ ಯೋಚಿಸುತ್ತಿದ್ದೇನೆ. ಇದೆಂಥಾ ಅಜ್ಞಾನ’ ಎಂದು ನಾಚಿಕೆಯಾಯಿತು. ಅಂದಿನಿಂದ ತನ್ನನ್ನು ತಾನು ಸಂಪೂರ್ಣ ಪರಿವರ್ತಿಸಿಕೊಂಡು ದಾನ-ಧರ್ಮಗಳಲ್ಲಿ ತೊಡಗಿಸಿಕೊಂಡನು. ಅಂದಿನಿಂದ ನಿಶ್ಚಿಂತನಾದ.
ಎಂಥಾ ಸ್ವಾರಸ್ಯಕರ ಘಟನೆ ಇದು. ಒಬ್ಬ ಭಿಕ್ಷುಕನ ಎರಡು ಮಾತು ಒಬ್ಬ ಸ್ವಾರ್ಥಿ, ಜಿಪುಣ ಶ್ರೀಮಂತನನ್ನು ಬದಲಿಸಿಬಿಟ್ಟಿತಲ್ಲ! ಮುಖ್ಯವಾಗಿ ಸಂತರ, ಮಹಾತ್ಮರ ಮತ್ತು ಅನುಭಾವಿಗಳ ಯಾವುದೇ ಮಾತುಗಳನ್ನು ಉದಾಸೀನ ಮಾಡಬಾರದು. ಅವುಗಳಲ್ಲಿ ಅಡಗಿರುವ ತತ್ವವನ್ನು ಹುಡುಕಬೇಕು.
ಶಿವಾಜಿಯು ತನ್ನ ಗುರುಗಳಾದ ಸಮರ್ಥ ರಾಮದಾಸರಿಗೆ ನಮಸ್ಕರಿಸಿ ಆಶೀರ್ವಾದ ಬೇಡಿದನು. ಮೂರು ಚಿಕ್ಕ ಪೊಟ್ಟಣಗಳನ್ನು ಗುರುಗಳು ಅವನ ಕೈಗಿಟ್ಟು ಆಶೀರ್ವದಿಸಿದರು. ಶಿವಾಜಿ ಅದನ್ನು ಬಿಚ್ಚಿನೋಡಿ ಬೇಸರ ಪಟ್ಟುಕೊಂಡನು. ಕಾರಣ ಆ ಪೊಟ್ಟಣಗಳಲ್ಲಿ ಒಂದು ಕಲ್ಲಿನ ಚೂರು, ಮಣ್ಣು ಮತ್ತು ಕುದುರೆಯ ಒಣ ಲದ್ದಿ ಇದ್ದವು. ನೇರವಾಗಿ ತಾಯಿ ಜೀಜಾಬಾಯಿಯ ಹತ್ತಿರಹೋಗಿ ಕೊಟ್ಟನು.
ತಾಯಿ ಅದರ ಒಳ ಅರ್ಥವನ್ನು ಬಿಡಿಸಿ ಹೇಳಿದಳು. ‘ಮಗು ಕಲ್ಲಿನ ಚೂರಿನ ಸಂಕೇತ ನೀನು ಕೋಟೆಗಳ ಅಧಿಪತಿಯಾಗುತ್ತೀ ಎಂಬುದು. ಮಣ್ಣಿನ ಸಂಕೇತ ರಾಜ್ಯಗಳ ಒಡೆಯನಾಗುತ್ತೀಯೆ. ಕುದುರೆ ಲದ್ದಿಯ ಸಂಕೇತ ಅಶ್ವಸೇನೆಯ ಯಜಮಾನನಾಗುತ್ತೀಯೆ’ ಎಂಬ ಅರ್ಥ ಎಂದು ತಿಳಿಸಿದಳು. ಶಿವಾಜಿಗೆ ಸಮಾಧಾನವಾಯಿತು. ಹೀಗೆ ಸಂತರ ಪ್ರತಿಯೊಂದು ಮಾತಿನ ಹಿಂದೆ ಅದ್ಭುತ ಅರ್ಥಗಳೇ ಅಡಗಿರುತ್ತವೆ. ಅಂತಹ ಮಾತುಗಳನ್ನು ಮರೆಯಬೇಡಿ ಮತ್ತೆ ಮತ್ತೆ ಸ್ಮರಣೆ’ ಮಾಡಿ. ಬದುಕು ಸಾರ್ಥಕವಾಗುತ್ತದೆ.

– ಸ್ವಾಮಿ ವಿಜಯಾನಂದ ಸರಸ್ವತಿ

Leave a Reply