ಮಾನಸಿಕ ಶಕ್ತಿ

ಮಾನಸಿಕ ಶಕ್ತಿ

ಉಪನಿಷತ್ತುಗಳು ಮಹಾನ್ ಗ್ರಂಥಗಳು. ಬೇರೆ ಜನಾಂಗಗಳಿಗೆ ಹೋಲಿಸಿದರೆ, ನಮ್ಮದು ಹೆಮ್ಮೆಪಟ್ಟುಕೊಳ್ಳಬೇಕಾದ ಋಷಿಪರಂಪರೆ. ಹೀಗಿದ್ದಾಗ್ಯೂ, ನಾವು ದುರ್ಬಲರು, ತುಂಬಾ ದುರ್ಬಲರು ಎನ್ನುವುದನ್ನು ನಾನು ನಿಮಗೆ ಹೇಳಲೇಬೇಕಾಗಿದೆ. ಎಲ್ಲಕ್ಕಿಂತ ಮೊದಲು ನಮ್ಮ ದೈಹಿಕ ದೌರ್ಬಲ್ಯ. ಈ ದೈಹಿಕ ದೌರ್ಬಲ್ಯವೇ ನಮ್ಮೆಲ್ಲ ದುಃಖದುಮ್ಮಾನಗಳ ಮೂರನೆಯ ಒಂದು ಭಾಗಕ್ಕೆ ಕಾರಣವಾಗಿದೆ.
ನಾವು ಗಿಣಿಯಂತೆ ಹಲವಾರು ಸಂಗತಿಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಏನನ್ನೂ ಮಾಡುವುದಿಲ್ಲ. ಬರಿ ಮಾತನಾಡುವುದು ಮತ್ತು ಏನನ್ನೂ ಮಾಡದಿರುವುದೇ ನಮಗೆ ಒಂದು ಹವ್ಯಾಸವಾಗಿಬಿಟ್ಟಿದೆ. ಈ ಬಗೆಯ ದುರ್ಬಲ ಮನಸ್ಸನ್ನು ಇಟ್ಟುಕೊಂಡು ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಾವು ಅದನ್ನು ಬಲಗೊಳಿಸಬೇಕು.
ನೀವು ಸಿಂಹಗಳು; ನೀವು ಪರಿಶುದ್ಧವೂ, ಅನಂತವೂ, ಪರಿಪೂರ್ಣವೂ ಆದ ಆತ್ಮಸ್ವರೂಪರು. ಇಡೀ ವಿಶ್ವಶಕ್ತಿಯೇ ನಿಮ್ಮಲ್ಲಿ ಅಡಗಿದೆ. ಆದ್ದರಿಂದ, ಓ ಸ್ನೇಹಿತನೇ ಏಕೆ ತಾನೇ ಅಳುತ್ತೀಯೆ?
ಮಿದುಳು ಮತ್ತು ಮಾಂಸಖಂಡಗಳು ಒಟ್ಟಿಗೇ ಬೆಳವಣಿಗೆ ಹೊಂದಬೇಕು. ಕಬ್ಬಿಣದ ನರಗಳು ಮತ್ತು ಬುದ್ಧಿಶಾಲಿ ಮಿದುಳು-ಇವನ್ನು ಹೊಂದಿದ್ದರೆ, ಇಡೀ ಪ್ರಪಂಚವೇ ನಿಮ್ಮ ಕಾಲಡಿಗೆ ಬಂದು ಬೀಳುವುದು.
ನಿನ್ನ ಶರೀರವನ್ನು ಅತ್ಯಂತ ಬಲಶಾಲಿಯಾಗಿ ಮಾಡಿಕೊಳ್ಳುವುದನ್ನು ನೀನು ಕಲಿತುಕೊಳ್ಳಬೇಕು. ಅದನ್ನು ಇತರರಿಗೂ ಹೇಳಿಕೊಡಬೇಕು. ದೇಹ ಮತ್ತು ಮನಸ್ಸುಗಳು ಜೊತೆಜೊತೆಯಾಗಿಯೇ ಸಾಗಬೇಕು. ದೇಹವನ್ನು ಶಕ್ತಿಶಾಲಿಯಾಗಿ ಇಟ್ಟುಕೊಳ್ಳುವ ಅವಶ್ಯಕತೆಯ ಬಗ್ಗೆ ಜನರಿಗೆ ಅರಿವು ಮೂಡಿಸಿದಾಗ, ಅವರು ತಾವೇ ತಾವಾಗಿ ಪರಿಶ್ರಮಪಡುವರು.
ಸಂತೋಷದಲ್ಲಿಯೂ ಅಳುವ ಹೊತ್ತು ಇದಲ್ಲ. ನಾವೀಗಾಗಲೇ ಬೇಕಾದಷ್ಟು ಅತ್ತಿದ್ದೇವೆ. ಮೃದುಧೋರಣೆಯನ್ನು ಹೊಂದುವ ಕಾಲವಲ್ಲ ಇದು. ಹತ್ತಿಯ ಹೊರೆಯಂತೆ ಆಗಿ ನಿರ್ಜೀವಿವಾಗುವ ತನಕ ಈ ಮೃದುತ್ವವನ್ನು ನಾವು ಇಟ್ಟುಕೊಂಡೇ ಇದ್ದೇವೆ. ಕಬ್ಬಿಣದ ಮಾಂಸಖಂಡಗಳು, ಉಕ್ಕಿನ ನರಗಳು, ಯಾವುದೂ ತಡೆಯಲಾಗದ, ವಿಶ್ವದ ಎಲ್ಲಾ ರಹಸ್ಯಗಳನ್ನೂ, ಗುಟ್ಟುಗಳನ್ನೂ ಭೇದಿಸುವ, ಸಾಗರದ ಆಳಕ್ಕಾದರೂ ಕೆಳಕ್ಕೆ ಹೋಗಿ ಸಾವಿನ ಮುಖಾಮುಖಿಯಾಗಿಯೂ ಯಾವುದಾದರೂ ರೀತಿಯಿಂದ ಕೆಲಸವನ್ನು ಸಾಧಿಸಿಯೇ ತೀರುವ ಬೃಹದ್ ಇಚ್ಛಾಶಕ್ತಿ-ಇವೇ ಇಂದು ನಮ್ಮ ದೇಶಕ್ಕೆ ಬೇಕಾಗಿರುವುದು.
ನನ್ನ ಮಕ್ಕಳೇ, “ಓ ಪಾರ್ಥ! ಕ್ಲೈಬ್ಯವನ್ನು ಹೊಂದಬೇಡ. ಇದು ನಿನಗೆ ತಕ್ಕುದಲ್ಲ’ ಎಂಬ (ಶ್ರೀಕೃಷ್ಣನ) ಸಂದೇಶವನ್ನು ಇಡೀ ಪ್ರಪಂಚಕ್ಕೆ ನೀವು ಸಾರಬಲ್ಲಿರಾದರೆ- ಆಗ ಈ ಎಲ್ಲ ವ್ಯಾಧಿ, ದುಃಖ, ಪಾಪ ಮತ್ತು ಸಂಕಟಗಳು ಮೂರೇ ದಿನಗಳಲ್ಲಿ ಭೂಮಿಯ ಮೇಲಿಂದ ಮರೆಯಾಗಿ ಹೋಗುತ್ತೇವೆ.
ಜಗತ್ತಿಗೆ ನಾನು ಹೇಳಬಯಸುವುದು ಇದನ್ನೇ- ಶಕ್ತಿವಂತರಾಗಿರಿ! ಜೀವಿಸಿರುವ ಲಕ್ಷಣವೆಂದರೆ, ಶಕ್ತಿ ಮತ್ತು ಬೆಳವಣಿಗೆ. ದುರ್ಬಲತೆಯೆಂಬುದು ಸಾವಿನ ಲಕ್ಷಣ. ದುರ್ಬಲವಾಗಿರುವ ಎಲ್ಲದರಿಂದಲೂ ದೂರವಿರಿ. ಅದು ಮರಣವೇ ಸರಿ! ಯಾವುದಾದರೂ ಶಕ್ತಿಸಂಪನ್ನವಾಗಿದ್ದರೆ, ನರಕಕ್ಕಾದರೂ ಇಳಿದುಹೋಗಿ ಅದನ್ನು ಹಿಡಿದುಕೊಳ್ಳಿ!
ಬಲಾನ್ವಿತರಾಗಿರಿ, ಪೌರುಷವನ್ನು ಮೆರೆಯಿರಿ. ಒಬ್ಬ ಮನುಷ್ಯ ಶಕ್ತಿಶಾಲಿಯೂ ಧೀರನೂ ಆಗಿರುವ ತನಕ, ಅವನು ದುಷ್ಟನಾಗಿದ್ದರೂ ಕೂಡ, ಅವನನ್ನು ನಾನು ಗೌರವಿಸುತ್ತೇನೆ. ಏಕೆಂದರೆ, ಅವನ ಬಲವೇ ಯಾವುದಾದರೂ ಒಂದು ದಿನ, ಅವನು ದುಷ್ಟತನವನ್ನು ತ್ಯಜಿಸುವಂತೆ ಮಾಡುತ್ತದೆ. ಸ್ವಾರ್ಥ ಫಲಕ್ಕಾಗಿನ ಎಲ್ಲ ಕಾರ್ಯಗಳನ್ನು ಬಿಟ್ಟುಬಿಡುವಂತೆ ಕೂಡ ಅದು ಪ್ರೇರೇಪಿಸುತ್ತದೆ. ಈ ಶಕ್ತಿಯೇ ಕಟ್ಟಕಡೆಯದಾಗಿ, ಅವನನ್ನು ಸತ್ಯದೆಡೆಗೆ ಕರೆದುಕೊಂಡುಹೋಗುತ್ತದೆ.
ವೀರ್ಯತೇಜರ, ಜೀವಂತವಾದುದರ ಆಕಾಂಕ್ಷೆಯ, ಆರೋಗ್ಯದ, ಒಳಿತಿನೆಲ್ಲದರ ಗುರುತು ಶಕ್ತಿಯೇ ಆಗಿದೆ.
ನನ್ನೆಲ್ಲ ಬೋಧನೆಯಲ್ಲೂ ಮೊಟ್ಟಮೊದಲು ಮುಖ್ಯಾಂಶವೆಂದು ನಾನು ನೀಡುವ ಉಪದೇಶ ಇದು: ಯಾವುದು ಆಧ್ಯಾತ್ಮಿಕ, ಮಾನಸಿಕ ಅಥವಾ ದೈಹಿಕ ದುರ್ಬಲತೆಯನ್ನು ಉಂಟುಮಾಡುವುದೋ ಅದನ್ನು ನಿಮ್ಮ ಕಾಲಿನ ಬೆರಳುಗಳಿಂದಲೂ ಮುಟ್ಟದಿರಿ.
ಈ ದೇಶದಲ್ಲಿ ಡಮರುಗಳನ್ನು ತಯಾರಿಸುವುದೇ ಇಲ್ಲವೇನು? ಭಾರತದಲ್ಲಿ ಭೇರಿ-ಡಮರುಗಳು ಸಿಕ್ಕುವುದೇ ಇಲ್ಲವೇನು? ಈ ವಾದ್ಯಗಳ ವೀರ್ಯವತ್ತಾದ ನಿನಾದವನ್ನು ಹುಡುಗರು ಕೇಳಿಸಿಕೊಳ್ಳುವಂತೆ ಮಾಡಿ. ಬಾಲ್ಯದಿಂದಲೂ ಮೃದುಮಧುರವಾದ ಸಂಗೀತದ ಶಬ್ದವನ್ನು ಕೇಳಿ, ಇಡೀ ರಾಷ್ಟ್ರವೇ ಹೆಂಗಸರ ದೇಶವಾಗಿಬಿಟ್ಟಿದೆ. ಇದಕ್ಕಿಂತ ಹೆಚ್ಚು ಅವನತಿಯನ್ನು ಹೇಗೆ ತಾನೇ ಎದುರುನೋಡುತ್ತೀರಿ? ಕವಿಯೊಬ್ಬನ ಕಲ್ಪನೆಯೂ ಈ ಬಗೆಯ ಚಿತ್ರಣವನ್ನು ನೀಡಲು ವಿಫಲವಾಗುತ್ತದೆ!
ಡಮರು ಮತ್ತು ಕೊಂಬುಗಳಿಂದ ನಿನಾದ ಹೊರಹೊಮ್ಮುವಂತೆ ಮಾಡಬೇಕು. ಗಂಭೀರವಾದ ರಣಧ್ವನಿಯು ಉದ್ಭವವಾಗುವಂತೆ ಡಮರುಗಳನ್ನು ಬಾರಿಸಬೇಕು. ಮನುಷ್ಯನ ಮೃದುಭಾವನೆಗಳನ್ನು ಮಾತ್ರವೇ ಕೆರಳಿಸುವ ಸಂಗೀತವನ್ನು ಸ್ವಲ್ಪಕಾಲ ನಿಲ್ಲಿಸಿಬಿಡಬೇಕು. ಸುಗಮ ಸ್ವರವನ್ನು ನಿಲ್ಲಿಸಿ, ದ್ರುಪದ ಸಂಗೀತವನ್ನು ಜನರು ಆಲಿಸುವಂತೆ ಮಾಡಬೇಕು. ಗೌರವಾನ್ವಿತವಾದ ವೈದಿಕ ಮಂತ್ರಗಳ ಘೋಷದ ಮೂಲಕ, ಈ ದೇಶಕ್ಕೆ ಜೀವವನ್ನು ಮತ್ತೆ ತುಂಬಬೇಕು. ಎಲ್ಲದರಲ್ಲೂ ವೀರವ್ಯಕ್ತಿತ್ವದ ತಪಸ್ಸಿನ ಭಾವನೆಯನ್ನು ಉತ್ತೇಜಿಸಬೇಕು. ಈ ಆದರ್ಶವನ್ನು ಪಾಲಿಸುವುದರಲ್ಲಿಯೇ, ಜನರ ಮತ್ತು ದೇಶದ ಕಲ್ಯಾಣ. ಅಡಗಿದೆ.

Leave a Reply