ಒಂದ ಕಪ್ಪ್ ಚಹಾ!

ಒಂದ ಕಪ್ಪ್ ಚಹಾ!

ಕೆಲಸ ಬಾಳ ಆಗ್ಯಾವ, ಸುಸ್ತ ಬಾಳ ಆಗ್ಯಾದ
ಅದಕಾ ಹೀರೋಣ ಬರ್ರೀ ಒಂದು ಕಪ್ ಚಹಾ
ಮನ್ಯಾಗ ಒಬ್ಬರ ಇದ್ದರೂ ನಾಕ ಮಂದಿ ಬಂದರೂ
ಹೀರೋಹಂಗ ಆಗತದ ಚಹಾ

ತಲಿ ನೋವಿಗೆ ಗುಳಿಗಿ ಕೆಲಸಾ ಮಾಡತದೋ ಇಲ್ಲೋ ತಿಳಿದಿಲ್ರೀ
ಒಂದ ಕಪ್ ಚಹಾ ಮಾತ್ರ ಮದ್ದು ಹೌದ ನೋಡ್ರೀ
ಗದ್ದಲ ಭಾಳ ಆದ್ರೂ ಬೇಕ್ರೀ, ಶಾಂತ ಕುಂತ್ರೂ ಬೇಕ್ರೀ
ಮಂದಿ ಬಂದಾಗೋಮ್ಮೆ, ಮಂದಿ ಹೋದಾಗೊಮ್ಮೆ ಚಹಾ ಮಾತ್ರ ಬೇಕ್ರೀ

ಹೊರಗ ಹೊಂಟಾಗ, ತಿರುಗಿ ಬಂದಾಗ ಬೇಕ್ರೀ
ಹಿರಿಯರಂತೂ ಬಿಟ್ಟಾ ಬಿಡ್ರೀ ಆಶೀರ್ವಾದ ಮಾಡತಾರ್ರೀ
ಒಂದು ಕಪ್ ಚಹಾ ಕೊಟ್ಟು ಪುಣ್ಯಾ ಕಟಗೋ ಅಂತಾರ್ರೀ
ಏನ ಮಹಿಮಾರೀ ಈ ಚಹಾದ ಸ್ವಲ್ಪೂ ಬ್ಯಾಸರಿಕಿ ಇಲ್ರೀ

ನೆಪ ಬಾಳ ಅದಾವು ನೋಡ್ರೀ ಚಹಾ ಕುಡಿಯಾಕ
ತಾಸ ತಾಸಗೂ ಕೊಟ್ಟ್ರ ಸಾಲೋದಿಲ್ರೀ ತೃಪ್ತಿ ಪಡಾಕ
ಈ ಚಹಾನ ಹಂಗ ನೋಡ್ರೀ ಕೊಡಾವ್ರೀಗೂ ಇಲ್ಲ
ಇಸಗೊಳೋರಿಗೂ ಇಲ್ಲ ನಾಚಿಕಿ ಅನ್ನೋದ

ಏನಾರ ಆಗಲಿ ಓದಿದ ಕೂಡ್ಲಾ ನೆನಪಾತಿಲ್ರಿ
ನಡಿರ್ರಿ ಕುಡದಾ ಬಿಡೋಣ ಒಂದೇ ಕಪ್
ಚಹಾ , ಆಹಾ ಆತಿಲ್ರಿ ಮನಸಿಗ ಹಗುರ
ಕುಡದ ಮ್ಯಾಲ ನನ್ನ ಕವನ ಮತ್ತಷ್ಟು ಮಧುರ.

Leave a Reply