ಕವಿ

ಕವಿ

ತಂಪಕಾನನದಲಿ ಮನ ಚಲಿಸಿ
ತನುಮನ ಚಲಿಸಿ
ಹೆಜ್ಜೆ ಹೆಜ್ಜೆಗೂ ಮೈಮನಪುಳಕ!
ಭಾವ ಭಾವನೆಗಳ ನಿಗೂಢ ಕೈಚಳಕ,
ವ್ಯಕ್ತ, ಅವ್ಯಕ್ತ ಶಾಂತಚಿತ್ತ
ಕಾವ್ಯ ಕವನದಲಿ ಅಭಿವ್ಯಕ್ತ.

ಟೊಂಗೆ ಟೊಂಗೆಯ ಘರ್ಷ
ಇಂದ್ರಿಯಕೆ ಇಬ್ಬನಿಯ ತುಂತುರು ಸ್ಪರ್ಷ
ಹಕ್ಕಿ ಪಕ್ಷಿಗಳ ಇಂಚರದ ಸೋಗು
ಕರಣಗಳಿಗೆ ತಾನನದ ಕೂಗು!

ಅಂತರಾಳದಲಿ ನಿಶ್ಯಬ್ದ
ಬಾಹ್ಯದೇಹವು ಅಲುಗದೆ ಸ್ತಬ್ಧ
ಅಂಕುರಿಸಿ ಚಿತ್ತದಲಿ ನೂರಾರು ಶಬ್ದ
ಪದ, ಪದಗಳ ಜೋಡಣೆಯ (ವ್ಯಕ್ತ) ಅರ್ಥಬದ್ಧ

ಗಿಡಮರಗಳ ಆಸರೆಯಲಿ ತರುಲತೆ ತೂಗುತಿರೆ
ಅಂತರ್ಯದ ಮಾತು ಭೇದಿಸಿ ಬರುತಿರೆ
ಮನ ಆಗಸದೆತ್ತರಕೆ ಪುಟಿದು ಅನುಭಾವದಲಿ ತೇಲುತಿರೆ
ಮನವೊಂದು ಪ್ರಕೃತಿಯಲಿ ಸಮಾಗಮ
ಭಾವ ಪ್ರಕೃತಿ ಸಂಗಮ
ಕಾರಣ, ಕವಿಯೊಬ್ಬ ಉಗಮ

Leave a Reply