ತಾಯಿಯ ಸಿರಿತನ

ತಾಯಿಯ ಸಿರಿತನ

ಸಿರಿವಂತಳು ನಾ ಕುಡಿಯದು
ಚಿಗುರೊಡೆಯಲು ಗರ್ಭದೊಳಗೆ
ಸಿರಿವಂತಳು ಕಂದನ ಪಡೆದಿರೆ ಮಡಿಲೊಳಗೆ
ಸಿರಿವಂತಳು ನಾ ಪ್ರೀತಿ, ಕರುಣೆ, ವಾತ್ಸಲ್ಯವ
ಧಾರೆ ಎರೆದಿರೆ ಕಂದನೊಳಗೆ
ಸಿರಿವಂತಳಾದಿನ ಕಂದನು ಅಮ್ಮಾ ಎಂದ ಕ್ಷಣಕೆ
ಸಿರಿತನದಲಿ ತೇಲಿದೆ ಕಂದನ
ಬಾಲ್ಯವ ಕಂಡ ದಿನಕೆ
ಸಿರಿತನದಲಿ ಹಿಗ್ಗಿದೆ ಕಂದನು
ಶಾಲೆಯ ಮೆಟ್ಟಿಲೇರಿದ ದಿನಕೆ
ಸಿರಿವಂತಳು ಕಂದನ ತೊದಲು ನುಡಿ ಕೇಳಿದ ದಿನಕೆ
ಸಿರಿವಂತಳು ಕಂದನು ನಿಂತಿರೆ ನನ್ನೆತ್ತರಕೆ
ಸಿರಿವಂತಳಂದು ಮಗ ಗುರಿ ಮುಟ್ಟಿರೆ
ಸಿರಿವಂತಳು ಮಗ ಕಾಯಕದಲಿ ನಿಷ್ಠೆಯ ತೋರಿರೆ
ಸಿರಿವಂತಳು ಕಂದನ ಪ್ರಶಸ್ತಿಗಳ ಗರಿ ಕಂಡಿರೆ
ಸಿರಿವಂತಳು ಮಗನಿಗೆ ವಿದೇಶದ ಕರೆ ಬಂದಿರೆ
ನಾನಿಂದು ಬಡವಿ ಸಿರಿತನದಿ ದೂರವಿರೆ
ನಾನಿಂದು ಬಡವಿ ಒಬ್ಬೊಂಟಿಯಾಗಿರೆ.

Leave a Reply