ನಮ್ಮವರು

ನಮ್ಮವರು

ನಮ್ಮವರು ನಮ್ಮನರಿತವರು
ನಮ್ಮ ನಗುವಲ್ಲಿ ನಗುವವರು
ದುಃಖದಲಿ ದುಃಖಿಸಿ
ಕಣ್ಣಂಚಿನ ಕಂಬನಿಯನೊರೆಸುವರು
ನಮ್ಮವರು

ಮನಕಲುಕಿ ಕದಡಿರಲು
ಹಿತನುಡಿಯಲಿ ಮನ ಹಗುರಾಗಿಸುವರು
ಕರುಣೆ, ಮಮತೆ, ವಾತ್ಸಲ್ಯವರಿತು
ಉದಾರತೆಯ ಮೆರೆದವರು
ನಮ್ಮವರು

ಎಡರು ತೊಡರುಗಳ ಹಾದಿಯಲಿ
ಬಿದ್ದ ಮುಳ್ಳುಗಳ ಅರಿಗೊಡಸದೆ
ಮೆತ್ತಗೆ ಸರಿಸುವರು
ತಾಪದಲಿ ಬೆಯ್ವವರ ಹೆಗಲಿಗಿರಿಸಿ ಹಸ್ತ
ಇರುವಿಕೆಯ ಭರವಸೆಯನಿಟ್ಟವರು
ನಮ್ಮವರು

ಒಂಟಿತನದಲಿ ಕಂಟಿಗಳ ಸರಿಸುವಲ್ಲಿ
ಜೊತೆಗೂಡಿ ತೋಟ ಮಾಡಿದವರು
ಹಮ್ಮು ಬಿಮ್ಮುಗಳ ಮತ್ತಲಿ ತೇಲದೆ
ಇರುವುದನೆ ಹಂಚಿಕೊಳುತಲೆ
ಮಾನವೀಯತೆಯ ಮೆರೆದವರು
ನಮ್ಮವರು

ಜಗಶೂನ್ಯ ಕಂಡಿರಲು
ಬರಿದೆ ಭೂಮಿಗೆ ಭಾರವೆನುತೆ
ಜಡಕುಳಿತವರಲ್ಲಿ
ವಿಶಾಲ ಜಗದ ನೋಟವ ತೋರುತಲಿ
ಜೀವನೋತ್ಸಾಹ ತುಂಬುವವರು
ನಮ್ಮವರು

ನೇರ ನುಡಿಗಳಲಿ ಚಿತ್ತದ
ಕತ್ತಲೆಯ ನೋಡಿಸಲು
ಚೆಂಬೆಳಕಿನ ಕಿರಣಗಳ ಹರಿಸಿ
ದಿವ್ಯವಾಣಿಯ ದುಂದುಭಿ ಬಾರಿಸುವರು
ನಮ್ಮವರು

ಸ್ವಾರ್ಥ ಜಗದೊಳೆಂಬುದು ಸಲ್ಲದ ನುಡಿ
ಮನ ಶುದ್ಧ ಕನ್ನಡಿಯಾಗಿಸಿ
ಕಾಣು ಎಲ್ಲರನು ನಮ್ಮವರಂತೆ
ಎಲ್ಲರೂ ನಮ್ಮವರಾಗುವಂತೆ.

Leave a Reply