ನೈವೇದ್ಯ

ನೈವೇದ್ಯ

ಹಚ್ಚಲು ಬೇಸರಿಸುತೆ ಸುಣ್ಣಬಣ್ಣಗಳ
ಗೋಡೆಗೆ ಫಲವೇನು?
ಮಿಂದು ಮಿಂದು ಮಡಿಯುಟ್ಟು
ಹಳಿದು ಪರರ ಫಲವೇನು?
ಮುಟ್ಟದಿರೆನ್ನ ಮಡಿ ಮಡಿ ಎಂದು
ಅಡಿಗಡಿಗೆ ಕೆಟ್ಟ ಯೋಚನೆ ಮಾಡಿ
ಫಲವೇನು?
ಸ್ವಾರ್ಥದಿಂದಲಿ ಮೂರ್ತಿಯ
ಪುಷ್ಪ ಗಂಧದಿಂದಲಿ ಅರ್ಚನೆ
ಮಾಡಿ ಫಲವೇನು?
ಉಣ್ಣದ ದೇವನಿಗೆ ಮೃಷ್ಟಾನ್ನವನೇ
ಮಾಡಿ ನೈವೇದ್ಯ ಮಾಡಲು
ಫಲವೇನು?
ಹಚ್ಚು ಬಣ್ಣವನು ನಿನ್ನಂತರಾತ್ಮನಿಗೆ
ಶುಭ್ರ ನಿಶ್ಚಲವಾಗಿಸು ಮನವನು
ತೊಡಿಸು ನುಡಿಗಳ ಆಭರಣ
ಅಪಶಬ್ದವಿರದಂತೆ
ಮಡಿ ಇರಲಿ ಮಾತುಗಳಲಿ
ಸಕಲರಲಿ ದಯೆ ಅನುಕಂಪಗಳೇ
ಪುಷ್ಪ ಗಂಧಗಳ ಅರ್ಚನೆಯಾಗಿರಲಿ
ಉಣ್ಣುವ ದೇವನು
ಮೃಷ್ಟಾನ್ನಗಳನೆಂದೂ ಬೇಡನು
ನಿಜ ದೇವನು ಅವನೇ
ಹಸಿದು ಉಸಿರುಸಿರ ಬಿಡುತಿರುವವನು
ನೀಡವಗೆ ಮುಷ್ಠಿ ಅನ್ನವನು
ಅಂದಾಗುವೆ ಸ್ವತಃಕ್ಕೆ ದೈವನು.

Leave a Reply