ಪುಟ್ಟನ ಪರಿಸರ ಪ್ರೇಮ

ಪುಟ್ಟನ ಪರಿಸರ ಪ್ರೇಮ

ಹಿತ್ತಲಲೊಂದು ಪುಟ್ಟನೆಯ ಜಾಗ
ಬಿತ್ತು ಕಣ್ಣವನ ಮಣ್ಣಿನ ನೆಲದಾಗ
ಹಿಡಿದ ಚಿಕ್ಕದೊಂದು ಗುದ್ದಲಿ ಕೈಯಾಗ

ಕೆತ್ತಿ ಹುಡಿಮಾಡಿ ಹದಗೊಳಿಸಿದನೆಲ್ಲ
ನೀರ ಹಾಯಿಸಿ ರಾಡಿಮಾಡಿದ ನೆಲವನೆಲ್ಲ
ಕೆಸರಾಗಿಸಿದ ಅಂಗಿ, ಚಡ್ಡಿಯನೆಲ್ಲ

ಒಳಹೊಕ್ಕು ಹಿಡಿದ ಅಮ್ಮಳ ಸೆರಗು
ಕೊಡೆನಗೊಂದು ಕಾಳೆಂದು ಹಾಕಿದನೊಂದು ಕೂಗು
ಕೊಟ್ಟು ಸಾಗುತಳಮ್ಮ ಎಂದಳು ಸಾಕು ಹೋಗು

ಜಿಗಿಜಿಗಿದು ಪುಟ್ಟ ನಡೆದ ಹಿತ್ತಲಿಗೆ
ಗುಂಡಿ ತೆಗೆದ ಹಿಡಿದು ಗುದ್ದಲಿ ಸಲಿಕೆ
ಇಟ್ಟ ಬೀಜವನು ನಡು ಮಧ್ಯದೊಳಗೆ

ದಿನಗಳುರುಳಿದವು ನಿದ್ದೆ ಮಾಡದಾದ
ಘಳಿಗೆಗೊಮ್ಮೆ ನೋಡುವುದ ಬಿಡದಾದ
ಕಡೆಗೂ ಬಂತು ಚಿಕ್ಕ ಮೊಳಕೆ ಆಶ್ಚರ್ಯಚಕಿತನಾದ

ಅಮ್ಮ ಬೆಳೆಸಿದಂತೆ ತನಗೆ ಬಿಡದೆ ನಿತ್ಯ
ನೀರನುಣಿಸಿ ಸಸಿಯ ಗಿಡವಾಗಿಸಿ ನಕ್ಕ
ಜೊತೆಯಲಿ ಬೆಳೆದು ತಾನು ದೊಡ್ಡವನಾದ ಗಿಡವೂ ಮರವಾಯ್ತು

ತಂಪನೀಡುವುದ ಕಂಡು ಹರ್ಷಿತನಾದ
ಹಸಿರ ಆಶ್ರಯದಲಿ ಕುಳಿತು ಲೇಖನಿ ಹಿಡಿದ
ಪುಟ್ಟನಿಂದು ಪರಿಸರಪ್ರೇಮಿಯಾಗಿ ಕವಿಯಾದ.

1 Comment

Leave a Reply