ಮನದೊಡತಿ

ಮನದೊಡತಿ

ಸರಿಸಿ ಪರದೆಯ ಇಣುಕಿ
ನೆನಪಿನಂಗಳದಲಿ ಈಜುವ
ಇಚ್ಛೆ ಇಂದೆನಗೆ ಗೆಳತಿ
ಮರುಕಳಿಸುವ ಚೇತನ ನೀನಾಗಿ
ಚಿತ್ರಗಳೊಂದೊಂದೆ ಪರದೆಗಿಳಿದಿದೆ ಬೆಡಗಿ
ಪರದೆ ತುಂಬ ನೀನೇ ನಿಂತೆ ಸೊಬಗಿ

ಕಪ್ಪು ಕಾರ್ಮೋಡಗಳುರುಳಿ
ಸಾಗುತಿರೆ ಸಾಲಾಗಿ ಬೆಂಬತ್ತಿ
ತಂಪು ಮಾರುತದ ಸೋಂಕು
ಮುಸ್ಸಂಜೆಯಲಂದು
ಮೈ ನಡುಗಿಸಿತ್ತು ಬೆಡಗಿ.

ಹನಿಗಳೊಂದೊಂದಾಗಿ ಬೀಳುವ ಸದ್ದು
ಕ್ಷಣದಿ ಧರೆಗೆ ವರುಣನ ಆರ್ಭಟ ಆ ಘಳಿಗೆಯಲಿ
ತಂಪು ಗಾಳಿಯಲಿ ಮೈನವಿರುವ ಚಳಿಯಲಿ
ಒಂಟಿ ನಾನಿರಲಿಲ್ಲ ಗೆಳತಿ.

ವರುಷದ ಹರೆಯದಲಿ ದಾಂಪತ್ಯ
ಸೀರೆಯುಟ್ಟು ನಿರಿಗೆ ಚಿಮ್ಮುತ
ರಿಂಘಣದಿ ನೂಪುರದ ಬಿನ್ನಾಣದಲಿ
ಶೃಂಗಾರ ಲತೆಯಂತೆ ನೀನಿಂತೆ
ಹೃದಯದೊಡತಿ.

ಹುಣ್ಣಿಮೆಯ ಚಂದಿರನು
ತಂಪ ಶಶಿಯೂ ನಾಚುತಿಹ ನಿನ್ನಂದಕೆ
ನಿನ್ನ ಪ್ರೇಮ ತುಂಬಿದ ಆ ಒಂದು ನುಡಿ
ಆ ನಿನ್ನ ಸ್ಪರ್ಶ
ಆ ಹೊತ್ತು ನೀ ಕೊಟ್ಟ ಒಂದು ಮುತ್ತು
ಬೆಚ್ಚಗಾಗಿ, ಸುತ್ತ ಬಿಸಿಗಾಳಿ ಪಸರಿಸಿತ್ತು ಗೆಳತಿ.

ಸಂಗಾತಿ ನೀನೆಂದು
ನೆಲೆಸಿಹೆ ನನ್ನೆದೆಯ ಪರದೆಯೊಳು
ತೋರುತ ಪ್ರೀತಿಯಲಿ ಅಕ್ಕರೆಯ
ಸಿಹಿ-ಕಹಿಗಳೊಳು ಒಟ್ಟಾಗಿ ನಡೆದು
ಕ್ರಮಿಸಿಹೆ ಹೃದಯದಾ ಒಡೆತನವ
ನೀನೆನ್ನ ನಿಜ ಗೆಳತಿ ನನ್ನ ಮನದೊಡತಿ.

Leave a Reply