ಹೊಸದಿಕ್ಕು

ಹೊಸದಿಕ್ಕು

ಅನಂತ ಪ್ರೀತಿಯ ಹುದುಗಿಸಿ ಅಂತರಾಳದೊಳು
ಹೊತ್ತು ತಂದೆ ನೂರು ಕನಸುಗಳ ಹೃದಯದೊಳು
ಮನ ಬಯಸಿತ್ತು ನಿನ್ನೊಲುಮೆಯನಂದು
ಜೀವನ ನೌಕೆಯ ತಿರುವು ಬದಲಾಗಿತ್ತು
ವಿಧಿ ಬೇರೆ ಬರೆದಿತ್ತು.
ಕಾಲವೂ ಪರೀಕ್ಷೆಗಳನೆಸಗಿತ್ತು.
ನಂಬುಗೆಯ ಗೊಡೆಯಲಿ ಬಿರುಕು ಕಂಡೆ
ಶುಭ್ರ ಹೃದಯದೊಳು ಕಪ್ಪು ಚುಕ್ಕೆ ಕಂಡೆ
ನನ್ನಾಸೆಗಳ ಅಂತ್ಯವರಿತಾಗ
ಹೃದಯವಿಂದು ಕದಡಿರಲಾಗಿ
ಕಾಲ ಸರಿದು ಕೂದಲಿಗೆ ನೆರೆ ಬರಲಾಗಿ
ನಯನವಿಂದು ಮಂಜಾಗಿರಲು
ರಸ ತೆಗೆದ ಸಿಪ್ಪೆಯಂದದಿ ಮನವಾಗಿರಲು
ನಿರೀಕ್ಷೆಗಳಂದಿನ ಹೊಸ ಮಗ್ಗಲು ಪಡೆದಿರಲು
ಸಂತಸದಿ ನೀನಿಂದು ಬಂದೆ ಗೆಳೆಯ
ಕೈಯಲ್ಲಿ ಹಿಡಿದು ಹೂವಿನುಡುಗೊರೆಯ
ನೀ ತಂದ ಹೂವಿಂದೆನಗೆ ಹಾವಾಗಿ ಕಂಡಿತ್ತು.
ಮೂಗುತಿಯು ಉಸಿರುಕಟ್ಟಿಸಿತ್ತು.
ಜರತಾರಿ ಸೀರೆಯಿಂದು ಭಾರದ ಸರಪಳಿಯಾಗಿದೆ
ಮುತ್ತಿನುಂಗುರ ಮುಳ್ಳಾಗಿ ಕಂಡಿದೆ.
ಕಾಲ್ಗೆಜ್ಜೆ ಕಬ್ಬಿಣದ ಬಂದಿಯಂತಾಯ್ತು
ನಾನೊಲ್ಲೆ ನಾನೊಲ್ಲೆ ನಿನ್ನುಡುಗೊರೆ ಇಂದು
ನೀ ತೋರಿದ ದಿಕ್ಕು ಹೊಸತಿಂದು
ಆದರೂ ನೀನಿರುವ ಹೃದಯದೊಳೆಂದೆಂದು.

Leave a Reply