ಅಟ್ಟದಿರಿ.
ಭಿಕ್ಷೆಗೆ ಬಂದಿಹನು ದಾಸನಂದು
ನಲ್ಕಕ್ಕಿ ಜೋಳಿಗೆಗೆ ನೀಡಿರೆಂದು
ಹೋಗಿ ಬಾ ಮುಂದೆ ನಾಳೆ ನೀಡುವೆಯೆಂದು
ಅಟ್ಟುವ ಓ ಮನವೆ ಇಂತೆಂದು
ಮುನ್ನಾ ದಿನವೇ ದಾಸ ಮತ್ತೆ ಬಂದು
ಹಸಿವಾಗಿದೆ ತುತ್ತು ಅನ್ನ ನೀಡೆಂದು
ಗಟ್ಟಿ ದೇಹವು ನಿನದು ಬೇಡುವುದು ಇಂತೆಂದು
ದುಡಿದು ತಿನ್ನೆನುತ ಮುಷ್ಟಿ ಹಿಡಿವುದೆಂತು
ಬೇಸರಿಸದ ದಾಸ ಹೊಸಿಲ ಬಳಿನಿಂದು
ಬೇಡವಾದ ಹರಕು ಅಂಗಿಯ ಕೊಡಿರೆಂದು
ಇರುವಂಗಿಯ ಕೊಟ್ಟು ನಾ ಹೋಗಲೆಲ್ಲೆಂದು
ಹೋಗಿಬಾ ಮತ್ತೆಂದಾದರೂ
ಕೊಡುವೆನೆನ್ನುವುದೆಂತು
ಭೇದವರಿಯದ ದಾಸ ಮನೆಮನೆ ಸುತ್ತಿ ಬಂದು
ಇರುಳ ಕಳೆಯಲು ಜಗಲಿಯಲಿ ನಿದಿರೆ ತಂದು
ಆಕ್ರೋಶದಲಿ ತಣ್ಣೀರ ಎರಚಿ ಬಿಡುವೆ ಎಂದು
ನಿಮ್ಮಜ್ಜನ ನೆಲವೇನೆಂದೆನುವುದೆಂತು
ತಾರತಮ್ಯ ವಿರದ ತಿಳಿಮನದ ದಾಸಯ್ಯ
ದಾನಧರ್ಮದ ಪಾಠ ಕಲಿಸಲು ಬಂದಿಹನಯ್ಯಾ
ನಂಬಿಕೆಯಲಿ ಬಾಗಿಲಿಗೆ ಬಂದು ಬೇಡುತಿಹನಯ್ಯಾ
ಇದ್ದವರ ಮುಂದೆ ಆಡಂಬರ ತೋರದೆ ಕೊಟ್ಟು ಕಳಿಸಿ ಬಿಡಿರಯ್ಯ.
ಉಮಾ ಭಾತಖಂಡೆ.
You must log in to post a comment.