ದೇವರಿಗೊಂದು ಪತ್ರ (10)

ದೇವರಿಗೊಂದು ಪತ್ರ (10)
ನೀ ಸೌಖ್ಯ ನಾ ಬಲ್ಲೆ
ಭಲೇ…ನಾಟಕಕಾರನಯ್ಯ ನೀನು
ಅದ್ಭುತ ಸಾಹಿತ್ಯ ರಚನಾಕಾರನಯ್ಯ ನೀನು
ನಿರ್ದೇಶಕನೆನ್ನಲೇ! ಚತುರ ಅಚ್ಯುತರಾಯ
ನಿರ್ಮಾಪಕನೆನ್ನಲೇ!ನಿನ್ನ ದೇವರ ದೇವ
ಏನೆನ್ನಲಿ ನಿನ್ನ ಸೃಷ್ಟಿ ಅದ್ಭುತಕೆ ಪರಭ್ರಮ್ಮ

ಬಂಡವಾಳ ಹೂಡಿ ವೇದಿಕೆಯ ಮಾಡಿದ ಕೇಶವ
ಪಾತ್ರಧಾರಿಗಳ ತಂದು ತರಬೇತಿ ನೀಡಿದ ವಿಠಲ
ನಿತ್ಯ ಹೊಸಪಾಠ ಕಲಿಸುವ ಸೃಜನಶೀಲ ಗುರುವು
ಅನುಭವಿಸಿದವಗೆ ಅನುಭಾವ ನೀಡುವ ಸದ್ಗುರು
ಭಲೆ ಭಲೇ…ಮುಂದಾಲೋಚನನಯ್ಯ ನೀನು

ಕಥೆಯ ಆದಿ ಅಂತ್ಯವೆಲ್ಲ ಆಗಲೇ ಗೀಚಿದ ಬ್ರಹ್ಮ ನೀನು
ಪುಟ ಪುಟಕೂ ಹೊಸ ಪಾಠ ಕಲಿಸಿದ ಅಚಲನು ನೀನು
ತಪ್ಪುಒಪ್ಪುಗಳಿಗೆಲ್ಲ ನರಕ ಸ್ವರ್ಗ ಇಲ್ಲೇ ಸೃಷ್ಟಿಸಿಹ ಕಲ್ಕಿ ನೀನು
ಪ್ರಾರ್ಥಿಸುವವರ ಕಂಡು ಮೌನಿಯಾಗಿ ಅಭಯ ನೀಡಿದ ಚೈತನ್ಯಮೂರ್ತಿನೀನು

ಹಠವ ಮಾಡಿ ಬೇಡಲು ನೀನೆಂದು ಕೊಡದ ಕೋದಂಡಪಾಣೀ
ಕೊಟ್ಟ ಎಲ್ಲವ ಅಪ್ಪಿ ತೃಪ್ತಿಯಿಂದಲಿ ಪಡೆದೆನಾದರೆ
ಮೆಚ್ಚಿ ಎಲ್ಲವ ಕೊಟ್ಟು ಸಲಹುವ ದಯಾಮಯಿ
ಅದೆಂಥಾ ಶಿಕ್ಷಕಸ್ವರೂಪಿ ಪಾರ್ಥಸಾರಥಿ ಯಯ್ಯಾ ನೀನು

ನಾನು ನಾನು ಎನ್ನುವರ ಗರ್ವವಳಿಸುವ ಕಾಳಿಯಮರ್ಧನ
ಜೀವನಾಮೃತ ಉಣಿಸಿ ಪೊರೆವ ಹೃಶಿಕೇಶ
ಎನ್ನ ಮೌಢ್ಯವಳಿಸು ಬೇಗನೆ ಶಿಷ್ಟ ರಕ್ಷಕ
ಬಂದು ಒಮ್ಮೆ ನೀಡು ದರುಶನ ಓ ಆಪತ್ ಬಾಂಧವ

ಕಾಯುತ್ತಿರುವೆ ದಿನವು ನಿನ್ನ ಉತ್ತರಕೆ ಓ…ಮುಕುಂದ.

ಇಂತಿ
ಉಮಾ ಭಾತಖಂಡೆ

Leave a Reply