ದೇವರಿಗೊಂದು ಪತ್ರ- (11)

ದೇವರಿಗೊಂದು ಪತ್ರ (11)

ಹೇಳುವುದಿದೆ ಬಹಳ ನೀ ತಿಳಿ ಓದುತಲಿ
ನಾನಂತು ಸೌಖ್ಯ ನಿನ್ನ ಧ್ಯಾನದಲಿ
ನೀನಂತು ಧನ್ಯ ಬರೆ ಕಣ್ಣಾಡಿಸುತಲಿ
ಉತ್ತರವಂತು ಬರಲಿಲ್ಲ ಇರಲಿ
ನಾ ಬರೆವೆ ನಿತ್ಯ ಇದಿರು ನೋಡುತಲಿ

ಹೇಗೆ ಹೇಳಲಿ ನೀನಿಲ್ಲದೆ ಕಳೆದ ಕ್ಷಣಗಳ
ಮರುಕವಿಲ್ಲವೇ ಅಲ್ಪವಾದರು ಎನ್ನಲಿ
ನಿನ್ನ ಪಡೆಯಲು ನಾ ಏನು ಮಾಡಲಿ ಹೇಳು?
ದಾರಿ ತೋರುವ ಗುರುವನ್ನಾದರು ಕಳುಹು
ಮುಟ್ಟುವುದಾದರೂ ಹೇಗೆ ನಿನ್ನ ತನಕ!

ಆ ತಿಮ್ಮ ಧನಕನಕ ತೊರೆದು ಕನಕದಾಸನಾದ
ಆ ಪುರಂದರ ಸಿರಿತನ ಮಡದಿ ಮಕ್ಕಳ ತೊಲಗಿಸಿ ಭಕುತನಾದ
ಆ ಮೀರಾ ತಂದೆತಾಯಿ ಪತಿ ಮೋಹ ತೊರೆದು ಅತ್ಮಸಖಿ ಎನಿಸಿದಳು
ಆ ಪರಮಹಂಸ ನಿನ್ನ ಧ್ಯಾನದಲಿ ಲೀನನಾಗಿ ತೇಲಾಡಿದ
ನಾನೇನ ಮಾಡಲಿ ಹೇಳು ಬರಲು ನಿನ್ನ ತನಕ

ಕನಕ ಧನ ತೊರೆದಾಗ ಮಂಕು ಬಡಿದಿದೆ ಎಂದರು ಹಲವರು
ಸಿರಿತನವ ದಾನ ಮಾಡಿಬಿಟ್ಟ ಪೆದ್ದ ಎಂದರು ಪುರಂಧರಗೆ ಕೆಲವರು
ಹಳಿದರು ಮೀರಾಳ ಮುರುಳಿ ಸಖನೆಂದು ಹಾಡಿದಕೆ
ಕಲ್ಲು ಬಿಸುಟಿದರು ಹುಚ್ಚನೆಂದು ಪರಮಹಂಸ ದೇವರಲ್ಲಿ ಧ್ಯಾನಿಸಿದಕೆ
ಸಹಿಸುವೆ ಬಂದದ್ದು ಬರಲಿ ನಾ ಏನ ಮಾಡಲಿ ಹೇಳು? ನಿನ್ನ ಕಾಣುವುದಕೆ

ಭಕುತರಿಗೇನೋ ನೀನೇ ಅರಿಸುವಿಯಂತೆ ಕೇಳಿ ನಾ ಬಲ್ಲೆ
ನಾನಂತು ತೃಣ ಮಾತ್ರ ಜೀವಿ ನಿನ್ನಡಿಯ ಪಾದ ದಲಿ ಧೂಳಾಗಲೂ ಸಮವಿಲ್ಲ
ಹಾಗೆಂದು ನಾನಂತು ನಿನ್ನಡಿಯ ಸುಲಭ ಬಿಡುವುದೂ ಇಲ್ಲಾ
ಭವ ಬಂಧನದಿಂದೆದ್ದು ಮೋಹ ಜಾಲವ ತೊರೆದು ಏಳಬೇಕಿದೆ
ನಿನ್ನಗೆಲ್ಲಲು ನನ್ನಂತರಂಗದಲಿ ನಿನ್ನ ತುಂಬಿಕೊಳಲು ನಾ ಏನ ಮಾಡಲಿ ಹೇಳು?

ಅದಾವ ಹೊಸ ಪಾತ್ರ ನನಗಾಗಿ ಕಾದಿದೆ ಒಮ್ಮೆ ಹೇಳಿಬಿಡು!
ನಿನ್ನುತ್ತರಕೆ ಕಾಯುವೆ ಪತ್ರ ಕಳಿಸಿ ಬಿಡು.

ಇಂತಿ
ಉಮಾ ಭಾತಖಂಡೆ.

Leave a Reply