ದೇವರಿಗೊಂದು ಪತ್ರ (19)

ದೇವರಿಗೊಂದು ಪತ್ರ (19)

ಸೌಖ್ಯವೆಂದು ಹೇಳಲಿ ಹೇಗೆ?

ಅಳಿವೋ ಉಳಿವೋ ತಿಳಿಯಲಿ ಹೇಗೆ?

ಕವಿದ ಕಪ್ಪು ಕಾರ್ಮೋಡ ವರ್ಣಿಸಲಿ ಹೇಗೆ?

ನಿನ್ನ ದರುಶನವೂ ಇಲ್ಲದೆ ಹೊತ್ತಿದೆ ಬೇಗೆ!

ಮೃತ್ಯು ಬಾಗಿಲಲಿ ಕೈಬೀಸಿ ಕರೆಯುತ್ತಿದೆ ಮನುಜನ ಅರುಹಲಿ ಹೇಗೆ?

 

ಹೇ..ಪದ್ಮನಾಭ, ಹೇ..ವೆಂಕಟಗಿರಿವಾಸ..

ಆಡಂಬರದ ಭಕುತಿ ಬೇಡೆಂದು ಆಲಯವ ಬಿಗಿದೆ

ಸಂಕಟದಿ ವೆಂಕಟ ಎನ್ನುವವರ ಕೂಗು ಕೇಳದೆ ಹೋದೆ!

ಇಂದು ಭದ್ರವಾಗಿ ಬಾಗಿಲ ಜಡೆದು ಯಾರನ್ನೂ ನೊಡದಾದೆ!

ಸ್ವಾರ್ಥ  ಮನುಜನ ಭಕ್ತಿ ಬೇಡೆಂದು ಎಲ್ಲಿ ಮರೆಯಾದೆ?

 

ಒಂದಂತೂ ನಾಬಲ್ಲೆ ಅರಿವೊಂದು ನೀ ಮೂಡಿಸುತಿಹೆ

ಗುಡಿ ಗುಂಡಾರಕ್ಕಿಂತ ಮಾನವನ ಅಂತರಂಗದಲ್ಲೆ ಇರುವಿಯೆಂದು ತೋರಿಸುತಿಹೆ

ಅರಿತವರು ನಿನ್ನ ಹುಡುಕದೆ ಮನದಲ್ಲೇ ಕಾಣುತಿಹರು

ಕಂಗೆಟ್ಟವರು ಇನ್ನೂ ಕಾಣಲು ನಿನ್ನ ಹುಡುಕುತಿಹರು

ಕಾಣದ ನಿನ್ನ ಒಂದು ಅಧ್ಭುತ ಶಕ್ತಿಯ ನಂಬದೆ ಕೆಲವರು ಮೂರ್ಖರಾಗಿಹರು

 

ಸೃಷ್ಟಿ ನಿಯಮ ಪಾಲನೆ ನೀನಂತು ಪಾಲಿಸಬೇಕು

ನಿನ್ನಂತೆ ನಡೆಯದೇ ವಂಚಿಸಿದಾಗ ಮತ್ತೆ ಹೊಸ ರೂಪ ತಾಳಲೇಬೇಕು

ಅದಕಾಗಿ ಆಗಾಗ ಹೊಸ ಕಾನೂನು ನೀ ತರಲೇ ಬೇಕು

ತಾನೂ ಬದುಕಿ ಪರರ ಬದುಕಲು ಬಿಟ್ಟವರ ಸಲಹಬೇಕು

ತಾ ಒಬ್ಬನೇ ಶ್ರೇಷ್ಟ ಎಂದು ಮೇರೆದಾಗ ಮೆಟ್ಟಿ ನಿಲ್ಲಲೇ ಬೇಕು

 

ನೀ ಕಳಿಸಿದ ಪಾತ್ರಧಾರಿಗಳು ನಾವು ನಾ ಬಲ್ಲೆ

ಕಳಿಸಿದವಗೆ ಕರೆಸಿಕೊಳ್ಳುವ ಹಕ್ಕು ನಿನ್ನದೇ ನಾ ಬಲ್ಲೆ

ಸಜ್ಜನಿಕೆಯ ಪಾತ್ರ ನಿರ್ವಹಿಸದಿದ್ದಲ್ಲಿ ನಾಟಕ ಮುಗಿಸುವೆ ಬಲ್ಲೆ

ದೇಹವಿದು ಕ್ಷಣಿಕ ಆತ್ಮವೂ ಶಾಶ್ವತ ಅರಿತವರಿಂದ ಬಲ್ಲೆ

ಕರ್ಮವೆಸಗಿದ ಮೇಲೆ ತಕ್ಕಂತೆ ಧರ್ಮದಿ ನೀ ಕಾಯುವೆ, ದಂಡಿಸುವೆ ಅದೂ ನಾ ಬಲ್ಲೆ.

 

ನಿನ್ನಿಚ್ಚೆಯಂತೆ ನಡೆವ

ಇಂತಿ ನಿನ್ನ

ಉಮಾ ಭಾತಖಂಡೆ.

Leave a Reply