ದೇವರಿಗೊಂದು ಪತ್ರ (20)

ದೇವರಿಗೊಂದು ಪತ್ರ (20)

ಓ… ಭಲೆ ಭಲೆ ರೌದ್ರ ಗುರುವಯ್ಯ ನೀನು ತಂದೆ

ಮಾತಿಗಂಜದವನ ನೀ ದಂಡದಿಂದಲಿ ಬುಧ್ಧಿ ಕಲಿಸಿದೆ

ಯುಕ್ತಿಯಿಂದಲಿ ಶಕ್ತಿತೋರಿ ಎಂಥಾ ಕಲ್ಕಿರೂಪ ತಾಳಿದೆ

ಚಿತ್ತಶುದ್ಧಿಯ ವಿನೂತನ ಮಾರ್ಗವಿಂದು ನೀ ಸೃಷ್ಟಿಸಿದೆ

ಮಾನವೀಯತೆಯಲಿ ನಡೆಯಲು ಸರಿ ದಾರಿ ತೋರಿಸಿದೆ

ಹುಟ್ಟಿದೂರು ಮೆಟ್ಟಿದ ಮಣ್ಣಿನ ಋಣ ವೆಂದರೇನೆಂದು ತಿಳಿಸಿದೆ

ಎಂಥಾ ಗುರುವಯ್ಯಾ ನೀನು!

 

ಜಗವ ಮೂಕವಾಗಿಸಿ ಜಗದೋದ್ಧಾರ ನೀನಿಂದು ಮೌನಿಯದೆ

ಕಲಿಕೆಗೆ ಹೊಸ ಪಠ್ಯ ಪುಸ್ತಕ ರೂಪಿಸಿ ಹೊಸ ಅಧ್ಯಾ ಯಕೆ ಗುರುವಾದೆ

ಮೌಲ್ಯಾಧಾರಿತ ರೂಢಿಗಳ ಅಳವಡಿಕೆಗೆ ಬೆಳಕಾಗುವ ತರಬೇತುದಾರನಾದೆ

ನೀನಿಂದು ಸ್ತಾಭ್ಧನಾಗಿ ಕ್ರಿಯಾತ್ಮಕ ಚಟುವಟಿಕೆ ತಂದೆ

ಉರುಹಿ ಉರುಹೀ ಬೇಸರಿಸಿ ಪ್ರಯೋಗಿಕತೆಯ ನೀ ಮೆರೆದೆ

ಯಾಂತ್ರಿಕ ಜೀವನದ ಮಾಂತ್ರಿಕತೆ ಬದುಕಿಗೆ ಅಂತ್ಯ ತಂದೆ

ಎಂಥಾ ಗುರುವಯ್ಯಾ ನೀನು?

 

ಐಶಾರಾಮ, ಭೋಗ ಲಾಲಸೆ ಅಶಾಶ್ವತವೆಂದು ತೋರಿದೆ

ಚರಿತ್ರೆಯ ಗುರು ಹಿರಿಯರ ಆದರ್ಶ ಪರಂಪರೆ ಮತ್ತೆ ಜಾಗೃತಗೊಳಿಸಿದೆ

ವರ್ತಮಾನದಲ್ಲಿ ಸಂಭಂದ ಕಳಚಿ ಬೀಳುತ್ತಿರಲು ಮತ್ತೆ ಬೆಸುಗೆ ತಂದೆ

ನಿಜ, ಇಂದು ಜಗದೊಳು ಅಂಧಕಾರವೇ ಎಲ್ಲೆಲ್ಲೂ ಆವರಿಸಿದೆ

ಈ ಕಪ್ಪು ಕಾರ್ಮೊಡದ ನಡುವೆಯೂ ಇಂದು ಮಿಂಚೊಂದು ಕಾಣುತಿದೆ

ಸೃಷ್ಟಿ ಅಧ್ಬುತದ ಹಕ್ಕಿ ಪಿಕ್ಕಿಗಳ ಕುಜನ ಕಿವಿಗೆ ಕೇಳುತಿದೆ

ಎಂಥಾ ಗುರುವಯ್ಯಾ ನೀನು?

 

ಸಪರಿವಾರ ಕುಟುಂಬದವರೊಡಗೂಡಿ ಉಣ್ಣುತಿಹ ತಿಂದು ನಿನ್ನ ಕೃಪಾ ಕಟಾಕ್ಷದಿಂದೆ

ಕೂಡಿ ಆಡಿ ನಲಿದು ಆಡುತಿಹರು ನಿನ್ನ ಜಾಣ್ಮೆ ಯಿಂದೆ

ಬಸವಳಿದು ಬೇಸರದ ಬದುಕಿಗೆ ಹೊಸ ನಗೆಯು ಚಿಮ್ಮಿದೆ ನಿನ್ನಿಂದೆ

ಆಸ್ತಿ ಪಾಸ್ತಿ ಧನ ಕನಕಗಿಂತಲೂ ಮಿಗಿಲು ಪ್ರೀತಿ ಪ್ರೇಮ ಕರುಣೆ ಮೇಲೆಂದು ತಿಳಿಸಿದೆ

ಜೀವಿಸುವ ಅಧಿಕಾರ ನಿನ್ನಷ್ಟೇ ಇದೆ ಎಲ್ಲಾ ಜೀವಿಗೆಂದು ಸಾರಿದೆ

ಮುಖ್ಯ ಅಮುಖ್ಯ ಯೋಚನೆಯು ಮನುಜನ ಮನದಲ್ಲಿಂದು ಸುಳಿಯುತ್ತಿದೆ

ಎಂಥಾ ಗುರುವಯ್ಯಾ ನೀನು!

 

ದೇಗುಲದ ಬಾಗಿಲು ಮುಚ್ಚಿ ಮನವಿ ಕೇಳಲೂ ಇಲ್ಲದಾದೆ

ದರುಶನಕೋರಿ ಬರುವುದನ್ನು ತಡೆದು ನಿಲ್ಲಿಸಿದೆ

ಕೊಡು ಕೊಡು ಎಂದು ಬೇಡಿದವರ ಕೊಟ್ಟು ಕೊಟ್ಟು ಬರಿದಾದೆ

ಮತಿಹೀನ ಮಾನವ ನಿನ್ನ ಪಡೆಯದೆ ಉಳಿದೆಲ್ಲ ಪಡೆದನೆಂದೆ

ಆದರೂ ನೀನು ಈ ಮೃತ್ಯು ಭಯದಲ್ಲಿಯೂ ಹೊಸ ಕಲಿಕೆಗೆ ಪ್ರೋತ್ಸಾಹಿಸಿದೆ

ತನ್ನೊಳಗೇ ಇರುವ ನಿನ್ನ ಹುಡುಕುವ ಪರಿಯ ನೀ ತಿಳಿಸ ಬಂದೆ

ಎಂಥಾ ಗುರುವಯ್ಯಾ ನೀನು!

 

ನನ್ನ ಮನದಲ್ಲಿ ಸದಾ ನೆಲೆಸೆಂದು ಕೋರುವ ನಿನ್ನ

ಇಂತಿ

ಉಮಾ ಭಾತಖಂಡೆ.

Leave a Reply