ದೇವರಿಗೊಂದು ಪತ್ರ-(5)

ದೇವರಿಗೊಂದು ಪತ್ರ(5)
ಅದೇಕೋ..ನಿನ್ನ ನೋಡುವ ತವಕ
ಉತ್ಕಟ ಇಚ್ಛೆಯಿಂದ ಮೈಮನ ಪುಳಕ
ತೊರೆಯ ಬೇಕೆನಿಸಿದೆ ಧನ ಕನಕ
ಬರುವೆ ಎಂದು? ತಿಳಿಸು ನನ್ನ ತನಕ

ಆತ್ಮಬಲವೆನ್ನ ಕಂಡು ನೀನು!
ಪರೀಕ್ಷೆಗಳ ಕೊಟ್ಟಿಹೆ ಏನು?
ಉತ್ತರಿಸಿ ಚಿತ್ತ ಶುದ್ಧವಾಯಿತಿನ್ನು
ಬರುವೆ ಎಂದೊಮ್ಮೆ ಎನ್ನು.

ನಿತ್ಯ ಪೂಜೆಯಿಂದ ನಿನ್ನ ಸ್ಮರಿಸಿ
ಭಕ್ತಿಯಿಂದ ನಿನ್ನ ಮೂರುತಿಗೆ ನಮಿಸಿ
ಸಾಲದೆಂದು ದರುಶನಕೆ ಧಾವಿಸಿ
ಬಂದೇ ಬರುವಿ ಎಂದರಸಿ ಅರಸಿ

ನನ್ನಲಿ ಅದೆಷ್ಟು ಒಲವು ನಿನಗೆ
ಕಳಿಸುವೆ ಸಲಹಲು ಅನ್ಯರನು ಬಳಿಗೆ
ಕೊಟ್ಟು ಪುನಹಃ ಕಸಿವುದೆಂತು ಘಳಿಗೆ
ನಿನ್ನ ಮರೆಯ ಬಾರದೆಂಬ ತಂತ್ರ ಅರೆಘಳಿಗೆ

ದೇಹ ನಶ್ವರವೆಂಬುದಂತು ಸತ್ಯ
ಅದಕೆ ಆತ್ಮ ತೊಳೆಯಲಿಚ್ಛಿಸುವೆ ನಿತ್ಯ
ಆಡಂಬರದ ಪೂಜೆ ಪುರಸ್ಕಾರವೆಲ್ಲ ಮಿಥ್ಯ
ಅಂತರಂಗದ ಒಳಿತಿನಲಿ ನೀನೆಲೆಸು ನಿತ್ಯ

ಶುದ್ಧಿಯಾಗಲು ಆತ್ಮ ನೀ ಬರುವೆ ಗೊತ್ತು
ಅದಕ್ಕೇ ಕೊಡುತಿಹೆ ಪರೀಕ್ಷೆಗಳ ಸೊತ್ತು
ಅನುಭವದಿ ಉರುಳಿದಾಗ ನಾನೆಂಬ ಗತ್ತು
ನಿನ್ನುತ್ತರ ಬಂದೇ ಬರುವುದು ನನಗ್ಗೊತ್ತು

ಕಾಯುವೆ ಪ್ರತ್ಯುತ್ತರಕ್ಕೆ ಯಾವತ್ತು.

ಉಮಾ ಭಾತಖಂಡೆ.

Leave a Reply