ದೇವರಿಗೊಂದು ಪತ್ರ (9)

ದೇವರಿಗೊಂದು ಪತ್ರ (9)

ಇಂದೇಕೋ ಮನಕೆ ತುಂಬಾ ನೋವಾಗಿದೆ
ಕ್ಷೇಮ ನಾನಿಹೆನೆಂದು ಹೇಳಲಾಗದಾಗಿದೆ
ಅದೇಕೋ ಕಳೆದುಹೋದವುಳೆಲ್ಲಾ ನೆನಪಾಗಿದೆ
ಅಂತರಂಗ ತತ್ತರಿಸಿ ನಲುಗಿದೆ

ಅಂದು ನಾ ಬೇಡಿ ಬೇಡಿ ನಿನ್ನ ಕಾಡಿದೆ
ಬೇಡಿದ ಯಾವುದೂ ನೀ ಕೊಡದಾದೆ
ಪ್ರತಿಯಾಗಿ ಬೇಡದ ಎಲ್ಲವೂ ನೀಡಿದೆ
ಕಾರಣ ನಾ ನಿನ್ನ ಇಲ್ಲಸಲ್ಲದ ಮಾತಲಿ ಹಲುಬಿದೆ

ಆಗುವುದೆಲ್ಲ ಅಂತಿಮವಾಗಿ ನಿನ್ನಂತೆಯೇ ಆಗಿದೆ
ನೀನಾಗಲೇ ಅವರವರ ಪಾಲಿನದನ್ನು ಗೀಚಿಯಾಗಿದೆ
ಆದರೂ ಮನ ಅವರಿವರಂತೆ ನಾನೂ ಇರಬೇಕೆಂದಿದೆ
ಈಡೇರದ ಮೋಹದಿಂದ ದುಃಖದ ಹಾದಿಯಲಿ
ಮನವು ಸಾಗಿದೆ

ಇಂದು,ಅಂದು ಬೇಡಿದ ಒಂದೊಂದು ಎದುರಿದೆ
ಬಳಿಸಾಗಿ ಬರುತಿರಲು ಹೊಸ್ತಿಲಲ್ಲಿ ನಿಂತಿದೆ
ಬಾಚಿಕೊಳಲಾಗದೆ ಮುಚ್ಚಿರುವೆ ಬಾಗಿಲ ಎದೆ
ಸ್ವಾರ್ಥ ವರ್ತನೆಗೆ ನಾಚಿ ಅಂತರಾತ್ಮ ಬಾಗಿದೆ

ಬಯಸಿದ್ದೆಲ್ಲಾ ಸಿಗುವಂತಿದ್ದರೆ ನಿನ್ನ ನೆನಹು
ವವರಾರು? ಎಂದಿದೆ
ಈ ಅರಿವ ಮೂಡಿಸಲು ತಂತ್ರ ನೀ ಹೂಡಿದೆ
ಬೇಕು ಬೇಕೆಂದು ಹಲುಬುವ ಜೀವಕೆ ಶಿಕ್ಷಕ ನೀನಾದೆ
ಸಾಕು ಸಾಕೆನಿಸುವ ಸುಗುಣನು ನೀನೇ ತಂದೆ

ಇನ್ನೂ ಹೇಳುವುದಿದೆ ಮನದಾಳದ ನೋವು
ಅದೀಗ ಬೇಕು ಬೇಕೆಂಬ ಸ್ವಾರ್ಥದ ಅಳಲಲ್ಲ
ಕಷ್ಟಗಳ ಉದ್ಡ ಪಟ್ಟಿಯೂ ಅಲ್ಲ
ನಿನ್ನ ಕಾಣುವ ತವಕ ನಿನ್ನ ಪ್ರತ್ಯುತ್ತರದ ಇದಿರು

ಇಂತಿ ನಿನ್ನ
ಉಮಾ ಭಾತಖಂಡೆ.

Leave a Reply