ದೇವರಿಗೊಂದು ಪತ್ರ (16)

ದೇವರಿಗೊಂದು ಪತ್ರ (16)
ನಾ ಹೇಗಿರುವೆ ಅದ ನಾ ಹೇಳ ಬೇಕಾಗಿಲ್ಲ!
ಸೃಷ್ಟಿಸಿದ ನೀನೆ ಬಲ್ಲೆ ಎಲ್ಲ.

ಹಾ.. ನೀ ಬಲು ಮೋಜುಗಾರನಯ್ಯಾ ಮುರುಳಿಧರ
ಬಲು ಸೊಗಸು ನಿನಗೆ ನನ್ನ ತಳಮಳ ಕಂಡು ಹೇ ವಲ್ಲಭ
ಹೇ…ಪದ್ಮನಾಭ…ಏನೆಂದು ವರ್ಣಿಸಲಿ ನಿನ್ನ ಪರೀಕ್ಷೆಗಳ!
ಬಲು ಕಠಿಣವಯ್ಯಾ ನಿನ್ನ ಪ್ರಶ್ನೆ ಪತ್ರಿಕೆ ಉತ್ತರಿಸಲು ಬಹು ಕಲಿಯ ಬೇಕು ನಾನಿನ್ನು!
ವಿಷಾದದ ಅಲೆಗಳಲ್ಲಿ ಸಿಕ್ಕಿಸಿ ವಿನೋದ ನೋಡುವವನು ನೀನು!
ಮುಳುಗದಂತೆ ದಡ ಸೇರಿಸುವ ಅಂಬಿಗನೂ ನೀನು
ದುಃಖಿಸಿ ಪರಿತಪಿಸಿ ಹಳಿಯಲೇ?.. ಈ ವಿನೋದಕೆ!
ನೀ ಹಿಡಿದೆತ್ತಿದಾಗ ಸಂತಸದಿ ಹಿಗ್ಗಿ ಹೊಗಳಲೇ? ನಿನ್ನಾಟಕೆ!
ಅಂತೂ ನಾನಾನಂತು ಗುರುತಿಸಿದೆ ನಿನ್ನೊಲವು ಎಂಥದ್ಡೆಂದು
ಆತ್ಮ ಶುದ್ಧಿ ಮಾಡುವ ನಿನ್ನ ಪರಿ ಇದುವೇ ಇರಬಹು ದೆಂದು
ಸಕಲವೂ ನೀನೆ ಎನ್ನುತ್ತಿದೆ ಇಂದು ನನ್ನ ಮನ
ನನ್ನದು ನನ್ನದೆಂದು ಬಡೆದಾಡುವ ಯಾವುದು ನನ್ನದಲ್ಲ
ಮೋಹದ ಕೂಪದಲ್ಲಿ ಮಿಂದುಮಿಂದು ಪಾಚಿಕಟ್ಟಿತ್ತು ಚಿತ್ತಕ್ಕೆ
ಸಿಂಗಾರ ಶೃಂಗಾರ ಎಲ್ಲವೂ ಮಿಥ್ಯ ಎಂದೆನಿಸಿದೆ ಕಾಣಯ್ಯಾ
ಆತ್ಮವ ಸಿಂಗರಿಸ ಬೇಕಿದೆ ನಿನ್ನ ಕಣ ಕಣದಲ್ಲಿ ತುಂಬಿ ನೋಡಯ್ಯಾ!
ಈ ಶುದ್ಧತೆಗಾಗಿ ನೀ ನನ್ನ ಆಯ್ದೆ ಇದಂತೂ ಸತ್ಯ
ಇನ್ನಾವ ಹೊಸ ಆಟ ರಚಿಸುವಿ ನೀ ನನಗಾಗಿ ಹೇಳು?
ನಾನಂತು ನಿನ್ನ ನನ್ನಂತರಂಗದಲಿ ತುಂಬಿಕೊಳ್ಳಲು ಸಜ್ಜಾಗಿರುವೆ
ನೀ ನೀಡುವ ಸವಾಲುಗಳ ಮೆಟ್ಟಿನಿಂತು ನಿನ್ನ ಪಡೆದೇತೀರುವೆ!
ಕೇವಲ ನಿನ್ನ ಕಾಣುವ ತವಕ, ಈ ಜಗವೇ ಶೂನ್ಯ ನಿನ್ನ ಕಾಣದೆ
ತೋರು ನೀ ದಾರಿ..ಯಾವುದಿದೆ ನಿನ್ನ ಸನಿಹ ಸಾಗಲು!
ಕಾಯುತಿರುವೆ ನಿತ್ಯ ದೇವ ನಿನ್ನ ಸೇರಲು!

ಇಂತಿ
ಉಮಾ ಭಾತಖಂಡೆ

Leave a Reply