ನಿಸ್ವಾರ್ಥ ಪ್ರಕೃತಿಗೊಂದು ಪತ್ರ

ನಿಸ್ವಾರ್ಥ ಪ್ರಕೃತಿಗೊಂದು ಪತ್ರ

ಓ ಬಂಧು ಬಾಂಧವರೇ
ಓ ನೆತ್ತರ ಹಂಚಿಕೊಂಡ ಒಡನಾಡಿಗಳೇ
ಈ ಭವ ಬಂಧನದ ಜಾಲದಿಂದ
ಮುಕ್ತಿ ಪಡೆಯುವ ಇಚ್ಚೆಯಿಂದು
ಕಳಚ ಬೇಕಿದೆ ಈ ಸ್ವಾರ್ಥ ಸರಪಳಿಯಿಂದ
ಕ್ಷಮೆಯಾಚಿಸುತ ಬಯಕೆಯ ತೋಡಿಕೊಳುವೆ
ಸ್ವಾರ್ಥವಿಲ್ಲದ ಈ ಅನರ್ಘ್ಯ
ಪ್ರಕೃತಿಯಲಿ ಬೆಸೆಯಲೊಸುಗ
ವಿನಯದಿ ವಿನಂತಿಯು ಈ ಸೃಷ್ಠಿಗಿಂದು

ಓ ಮೇಘಮಂದಾರವೇ
ಓ ಘನ ಕಾರ್ಮೋಡಗಳೇ
ನಿನ್ನೊಡಲಲಿ ಒಂದು ಮೋಡವಾಗಿಸು
ಜಲಧಾರೆ ಸುರಿಸಿ ಧರೆ ತಂಪಾಗಿಸುವೆ

ಓ ದಟ್ಟ ಕಾನನವೆ
ಓ ಘಟ್ಟ ಸರಣಿ ಸಾಲುಗಳೇ
ನಿನ್ನಯ ಮಡಿಲಲ್ಲಿ ತೃಣ
ಮಾತ್ರವೆ ನೆಲೆನೀಡು
ಕಂಗೊಳಿಸುವೆ ಕಣ್ಮನಗಳಲಿ

ಓ ಹಿಮಗಿರಿಯ ಆಲಯವೆ
ಓ ಬೆಳ್ಳಿ ರಜತಗಿರಿಶಿಖರಗಳೇ
ಓ ಬಾನೆತ್ತರದ ಆಕರವೆ
ನಿನ್ನಯ ಶಿಖರದ ಒಂದೇ
ಕಣವಾಗಿಸು ಸ್ಪೂರ್ತಿಯ
ಸೆಲೆಯಾಗುವೆ ಸಾಹಸಿಗರಲ್ಲಿ

ಓ ವಿಶಾಲ ಅಂಬರವೆ
ಓ ಭುವನೆಯ ಛಾವಣಿಯೆ
ನಿನ್ನಲಿ ಎನ್ನನು ಬೆರೆಸು
ನೆರಳಾಗುವೆ ಭೂತಾಯಿಗೆ

ಓ ನಕ್ಷತ್ರವೆ, ಓ ಚುಕ್ಕಿ ಚಂದ್ರಮರೆ
ಪುಟ್ಟದೊಂದು ಚುಕ್ಕಿಯಾಗಿಸು
ಮುಗ್ಧರ ಮನವರಳಿಸಿ
ಮುಗುಳ್ನಗೆ ಹೊಮ್ಮಿಸುವೆ

ಓ ಭಾಸ್ಕರ, ಓ ನೇಸರ
ನಿನ್ನಯ ಹೊಂಗಿರಣದ ಒಂದೇ
ಬಿಂದುವಲಿ ಲೀನವಾಗಿಸು
ಬೆಳಕಾಗುವೆ ಈ ಜಗಕೆ

ಓ ಮಹಾಸಾಗರವೇ
ಓ ನದಿ, ಜಲಪಾತಗಳೇ
ನಿನ್ನ ಅಗಾಧ ಮಡಿಲಲ್ಲಿ
ಒಂದೇ ಒಂದು ಹನಿಯಾಗಿಸು
ಬಂಡೆಕಲ್ಲು, ಬೆಟ್ಟಗಳೇ ಎದುರಾಗಲಿ
ಬಡಿ ಬಡಿದು ಚಿಮ್ಮುವೆ
ಅಧೈರ್ಯಕೆ ಧೈರ್ಯ ತುಂಬುವೆ

ಓ ಸೃಷ್ಠಿಕರ್ತ, ಓ ಪ್ರಕೃತಿಮಾತೆ
ನಿನ್ನಯ ಸ್ವಾರ್ಥರಹಿತ ಕಾಯಕದಲಿ
ವಿನಯದ ವಿನಂತಿಯ ಕರುಣಿಸು
ಬೇಡಿಕೆಯ ಪತ್ರವು ನಿನಗಿಂದು

                       – ಉಮಾ ಭಾತಖಂಡೆ

Leave a Reply