ವನಜೆಯ ಸೇವೆ

ಓ ಮಾವು ಓ ಬೇವು
ಓ ಆಲ, ಓ ನೀಲ
ಓ ಹುಣಸೆ, ಓ ಶ್ರೀಗಂಧ
ಓ ಹಚ್ಚ ಹಸುರಿನ ಒಡಲೆ
ನೂರು ಕಾಲ ನೆರಳನೀವ
ನಿಮ್ಮೊಡನಿಂದು ಮಾತನಾಡುವ
ಬಯಕೆ ಎನಗೆ
ಸ್ಪಂದಿಸುವೆಯಾ ಹೃದಯದೊಳಗೆ
ಹೇಳು ಬಾ ಓ ಹಸಿರೆ
ಉಸಿರು ಉಸಿರಿಗೂ ನಿನ್ನ ಸೇವೆ
ಸಾಟಿಯಿಲ್ಲ ಇದಕೆ ಯಾರೂ ಬೇರೆ
ಕೊಟ್ಟ ಪಡೆವ ಇಚ್ಚೆ ನಿನ್ನದಲ್ಲ
ಕೊಡುವುದಷ್ಠೆ ಧರ್ಮವೆಲ್ಲಾ
ಕೊಟ್ಟು ಪಡೆವ ಎನ್ನ ಗುಣವ
ಕ್ಷಮಿಸುವೆಯಾ? ಹೇಳು ನನ್ನ ಕ್ಷಮಿಸೆಯಾ?
ಹಲವು ನೆಪಗಳೊಡ್ಡಿ ನಿನ್ನಯ
ಒಡಲಿಗೆ ನಿರ್ದಯದಿ ಕೊಡಲಿ ಇಟ್ಟು
ಕಂಬನಿ ನೀ ಉರುಳಿಸುವಾಗ
ಸುರಿವ ನಿನ್ನ ನೆತ್ತರೂ ಕಾಣದಿರುವ
ನನ್ನ ಕ್ಷಮಿಸುವೆಯಾ? ಹೇಳು ನನ್ನ ಕ್ಷಮಿಸೆಯಾ?
ತಾಯಿಯೊಬ್ಬಳೊಂದು ಮಗುವ
ಜನ್ಮ ನೀಡಿ ಕರುಣೆ, ವಾತ್ಸಲ್ಯ ಮಮತೆಯ
ನೀಡಿ ದೇವರೆನಿಸಿಕೊಂಡಳಿಂದು
ನಿನ್ನ ಸೇವೆ ಅದಕು ಮಿಗಿಲು
ನೂರು ಕಾಲ ಬಾಳಿ ನೀನು
ಕೋಟಿ ಮನುಜಗುಸಿರನಿತ್ತು
ಬಿದ್ದ ನಿನ್ನ ದೇಹ ಕೂಡ
ಮನೆಯ ಮೇಲ್ಛಾವಣಿಯಾಗಿ
ನೆರಳ ಕೊಡುತ
ಒಣಗಿ ಸೌದೆ, ಉರಿದು ಇದ್ದಿಲು
ಶಾಂತವಾಗಿ ಬೂದಿಯಾದೆ
ಹುಟ್ಟಿನಿಂದ ಮರಣವಾಗ್ಯೂ
ನಮ್ಮ ಪೊರೆವ ನಿಸ್ವಾರ್ಥ ಸೇವೆ
ಅನಂತವೂ, ಅವರವು
ಸ್ವಾರ್ಥದಲ್ಲೆ ಹುಟ್ಟಿ ಬೆಳೆವ
ನನ್ನ ಮೂಢತನದ ಹೋಲಿಕೆಗೆ
ಕ್ಷಮೆ ನೀಡು ಬಾ, ಹೇಳು ನನ್ನ ಕ್ಷಮಿಸೆಯಾ?
ಹೇಳು ನನ್ನ ಕ್ಷಮಿಸೆಯಾ?

– ಉಮಾ ಭಾತಖಂಡೆ

Leave a Reply