ಸಹಜತೆಯಿಂದ ಅಸಹಜತೆಯೆಡೆಗೆ

ಸಹಜತೆಯಿಂದ ಅಸಹಜತೆಯೆಡೆಗೆ

ಪ್ರತಿ ಬೆಳಗೂ ಒಂದು ಸುಂದರವಾದ ಮುಂಜಾನೆಯನ್ನು ಹುಟ್ಟು ಹಾಕುತ್ತದೆ. ಪ್ರತಿ ದಿನವೂ ಹೊಚ್ಚ ಹೊಸದಾಗಿಯೇ ಹೊರ ಹೊಮ್ಮುತ್ತದೆ. ಅವೇ ಗಿಡಮರಗಳು, ಅವೇ ಪಕ್ಷಿಗಳ ಇಂಚರ, ಅದೇ ಸೂರ್ಯ, ಸುರಿವ ಮಂಜು, ಜುಳು ಜುಳು ನದಿಯ ಇಬ್ಬನಿ ಹನಿಗಳು ಗುಲಾಬಿ ಪಕಳೆಗಳ ಮೇಲೆ ಮುತ್ತುಗಳಾಗಿ ಪವಡಿಸಿದಂತೆ ಸುತ್ತಲ ಹಸಿರು ಇನ್ನೂ ಹಸಿರಾಗಿ ಕಾಣಿಸುತ್ತದೆ. ಈ ಪ್ರಕೃತಿಯ ಮಡಿಲಲ್ಲಿ ಎಷ್ಟೊಂದು ಸುಂದರತೆ ಅವಿತು ಹೊರಹೊಮ್ಮುತ್ತಿರುತ್ತದೆ. ಇಂಥ ಸುಂದರತೆಯ ಪ್ರಕೃತಿ ಕಂದಮ್ಮಗಳನ್ನೇ ಮುಗುಚಿಹಾಕುತ್ತದೆ. ಒಮ್ಮೆ ಭೂಕಂಪವಾಗಿ ಸಿಡಿದರೆ ಇನ್ನೊಮ್ಮೆ ಅನಾವೃಷ್ಟಿ…… ಯಾಕೆ ಹೀಗಾಗುತ್ತದೆ? ಇದಕ್ಕೆಲ್ಲ ಉತ್ತರಗಳು ಸರಳ. ಇವೆಲ್ಲವೂ ಪ್ರಕೃತಿಯಲ್ಲಿ ಸಹಜಕ್ರಿಯೆ. ಈ ರೀತಿಯಾಗಿ ಉಂಟು ಮಾಡಿದಾಗಲೇ ಪ್ರಕೃತಿಯಲ್ಲಿ ಸಮತೋಲನ ಉಂಟುಮಾಡಬಹುದೇನೋ?

ಮನುಜನಲ್ಲೂ ಕೋಪ, ತಾಪ, ನಗು, ಅಳು, ಎಲ್ಲವೂ, ಸಹಜ ಪ್ರಕ್ರಿಯೆಗಳು, ಅವುಗಳೆಲ್ಲವೂ ಸಮ್ಮಿಳಿತಗೊಂಡಾಗಲೇ ಮನುಜ ಸಹಜವ್ಯಕ್ತಿಯಾಗಿರುತ್ತಾನೆ. ಒಂದು ವೇಳೆ ಆತ ಯಾವುದಕ್ಕೂ ಕೋಪವನ್ನು ವ್ಯಕ್ತಪಡಿಸದೇ ನಗಬೇಕಾದಾಗ ನಗದೆ, ಅಳಬೇಕಾದಾಗ ಅಳದೇ ಇದ್ದಾಗ ಆತನಲ್ಲಿ ಒಂದು ಥರದ ಭಾವನೆಗಳ ಜಡತ್ವ ಉಂಟಾಗಬಹುದೇನೋ, ಸಮಾಜದಲ್ಲಿ ಅಂಥವರು ಬೇರೆಯಾಗಿಯೇ ಕಂಡು ಬರುತ್ತಾರೆ. ಯಾವ ವೇಳೆಯಲ್ಲಿ ಹ್ಯಾಗೆ ಇರಬೇಕೋ ಹಾಗಿರಬೇಕು. ತಾನೇ ಶ್ರೇಷ್ಠ ಎಂಬ ಮನಸ್ಥತ್ವದಿಂದ ನಡೆದಾಗ ಸಮಾಜ ಅಂಥವರನ್ನು ಸ್ವೀಕರಿಸುವುದಿಲ್ಲ.“When you are in Rome, you should be like a Roman,”ಅಂತ ಒಂದು ಹೇಳಿಕೆಯಿದೆ. ಆಯಾ ಪರಿಸ್ಥಿತಿ, ಪರಿಸರಕ್ಕೆ ತಕ್ಕ ಹಾಗೆ ನಾವಿರಬೇಕೆಂಬುದೇ ಈ ಹೇಳಿಕೆಯ ಆಶಯ.

ಆದರೆ ಕೆಲವರ ಅಭಿಪ್ರಾಯ ನಾವ್ಯಾಕೆ ಇತರರ ಹಾಗಿರಬೇಕು ಅಂತ ನಮ್ಮದೇ ಐಡೆಂಟಿಟಿ ನಮಗೆ ಬೇಕಲ್ಲವೇ? ನಮ್ಮತನವನ್ನು ಕೊಂದುಕೊಂಡು ಇತರರ ಹಾಗೆ ನಾವ್ಯಾಕೆ ಇರಬೇಕು ಎನ್ನುವುದು ಅವರ ವಾದ. ಒಂದು ರೀತಿಯಿಂದ ನೋಡಿದಾಗ ಇದು ಸರಿ ಎನ್ನಿಸಬಹುದು. ಆದರೆ ಸ್ವಂತ ಐಡೆಂಟಿಟಿಗೂ ಮನಸ್ಸಿನ ಭಾವನೆಗಳ ಹಂಚಿಕೆಗೂ ವ್ಯತ್ಯಾಸವಿದೆಯಲ್ಲವೇ. ಈಗ ಒಬ್ಬ ಬ್ರಾಹ್ಮಣ, ಗುಡಿಯ ಪೂಜಾರಿ, ಬಾರಿನಲ್ಲಿ ನಿಂತಾಗ ಎಂಥ ಅಭಾಸವನ್ನುಂಟು ಮಾಡುತ್ತದಲ್ಲವೇ. ಆತನ ಐಡೆಂಟಿಟಿ ಇರುವುದು ಮಂದಿರದಲ್ಲಿ ಪೂಜೆ ಪುನಸ್ಕಾರ ಮಾಡುವುದು, ಮಂದಿರದ ಘಂಟಾನಾದದ ಮಧ್ಯದಲ್ಲಿ ಆತನ ಇರುವಿಕೆ ಸಹ್ಯವೆನಿಸುತ್ತದೆ. ಅದರೆ ಆತ ಅಲ್ಲದ ಜಾಗದಲ್ಲಿ ಕಂಡಾಗ ನಾವು ವಿಚಿತ್ರವನ್ನು ಕಂಡಂತೆ ವರ್ತಿಸುತ್ತೇವೆ. ಆತನ ಸ್ವಂತ ಐಡೆಂಟಿಟಿಗೂ ಆತನ ಮನಸ್ಸಿನಲ್ಲಿರುವ ಭಾವನೆಗಳ ತಾಕಲಾಟಕ್ಕೂ ವ್ಯತ್ಯಾಸ ಕಂಡಾಗ ವಿಚಿತ್ರತೆ ಉದ್ಭವಿಸುವುದು.

ಇನ್ನೂ ಕೆಲವರು ಬಾಯಿಯಿಂದ ಹೇಳುವುದು ಒಂದು ಆದರೆ ಇರುವುದೇ ಬೇರೆ ರೀತಿ. ಆಗ ಕೂಡ ಅಲ್ಲಿ ನಮಗೆ ವೈರಾಗ್ಯ ಕಂಡು ಬರುತ್ತದೆ. ಮನುಷ್ಯ ಸಹಜವಾಗಿರಬೇಕು. ಆತ ಎಷ್ಟು ಸಹಜವಾಗಿರಬೇಕೆಂದರೆ ಗಾಳಿ ಬಂದಾಗ ಬಗ್ಗಬೇಕು, ನಗು ಬಂದಾಗ ನಗಬೇಕು, ಅಳು ಬಂದಾಗ ಅಳಬೇಕು. ಇವೆಲ್ಲ ಭಾವನೆಗಳ ಮಿಳಿತವಾದಾಗಲೇ ಮನುಜನ ಸಹಜಕ್ರಿಯೆಯು ಅನಾವರಣವಾಗಬಲ್ಲದು. ಆತನ ನಡಾವಳಿಯಲ್ಲಿ ಸಹಜತೆ ವ್ಯಕ್ತವಾಗಬಲ್ಲದು.

ಸಹಜತೆ ಎನ್ನುವುದು ಮನದಾಳದಿಂದ ಹೊರಹೊಮ್ಮಬೇಕು. ಅಲ್ಲಿ ನಾಟಕೀಯತೆ, ಕೃತ್ರಿಮತೆ ಕೂಡದು. ನನ್ನಿರುವಿಕೆ ನನಗೇ ಬೇರೆಯಾಗಿ ಕಾಣಬಾರದು. ಗುಲಾಬಿ ಹೂಗಳು ಸೂರ್ಯನ ಕಿರಣಗಳಿಗೆ ಅರಳುತ್ತವೆ. ಹಾಗೇ ಕಮಲದ ಹೂಗಳು ಚಂದಿರನ ತಂಪಿಗೆ ಅರಳಿ ನಗುತ್ತವೆ. ಇದು ಅವುಗಳಿಗೆ ಸಹಜತೆ.

ಮನುಜ ಸಹಜತೆಯನ್ನು ಮೀರಿ ಐಟಿಬಿಟಿ ಗದ್ದಲಕೆ ರಾತ್ರಿಯಿಡೀ ಜಾಗರಣೆ ಮಾಡಿ ಬೆಳಗಿನಲ್ಲಿ ನಿದ್ದೆ ಮಾಡುತ್ತಿರುವನು. ಯಾಕೆಂದರೆ ಅಮೆರಿಕೆಯಲ್ಲಿ ಬೆಳಗಾದರೆ ಇಲ್ಲಿ ರಾತ್ರಿ ಕವಿದಿರುತ್ತದೆ. ಅವರ ಕಂಪನಿಗಳಲ್ಲಿ ಕೆಲಸ ಮಾಡಬೇಕಾದರೆ ಅವರ ನಡಾವಳಿಗಳಿಗೆ ತಲೆಬಾಗಲೇಬೇಕು. ಯಾಕೆಂದರೆ ಅವರಿಂದ ಸಂಬಳ ಸಿಗುತ್ತಿರುತ್ತದೆ. ಇದೇ ರೀತಿ ಕೆಲವು ವರ್ಷಗಳವರೆಗೆ ಮುಂದುವರೆದರೆ ಇಲ್ಲಿಯ ನವಚೈತನ್ಯ ಹಿಂಡಿ ಹಿಪ್ಪೆಯಾಗುವುದು. ಬಂಜೆತನ ಹೆಚ್ಚಾಗಬಹುದು. ಮನುಷ್ಯರ ಮಧ್ಯ ಸಂಬಂಧಗಳಲ್ಲಿ ಬಿರುಕು ಮೂಡಬಹುದು. ಅಥವಾ ಹೆಚ್ಚಾಗಬಹುದು. ಇದಕ್ಕೆಲ್ಲ ಕಾರಣ ದುಡ್ಡು ಮತ್ತು ಅದಕ್ಕಾಗಿ ಅಸಹಜ ನಡಾವಳಿ. ಈ ಅಸಹಜತೆಯನ್ನು ಸರಿಸಿ ಸಹಜತೆಯಿಂದ ಇರಬೇಕಾದದ್ದು ಅವಶ್ಯಕವಾಗಿದೆ. ಅಂದರೆ ಯಾವ ದ್ವಂದ್ವತೆಯೂ ಮೂಡುವುದಿಲ್ಲ ಅಲ್ಲವೇ?

 

Leave a Reply