ಸರ್ವೇಜನಾ: ಸುಖಿನೋ ಭವಂತು

ಬಿರುಸಾದ ಮಳೆ ಹೊಡೆದು ಹೋದ ಮೇಲೆ ಆಕಾಶ ನಿರಭ್ರವಾಗಿದೆ. ಚಂದ್ರ ಹೊಳಪಿನಿಂದ ಕಂಗೊಳಿಸುತ್ತಿದ್ದಾನೆ. ಚುಕ್ಕೆಗಳೆಲ್ಲ ಮನೋಹರವಾಗಿ ಚಿಮುಕಿಸುತ್ತಾ ಪುಟ್ಟ ಮಗುವಿನ ನಕ್ಷತ್ರದಂಥ ಕಣ್ಣುಗಳನ್ನೇ ಅಣಕಿಸುವಂತಿವೆ.

ಎಲ್ಲೆಲ್ಲೂ ಶಾಂತತೆ ಪಸರಿಸಿದೆ. ಅಯೋಧ್ಯೆಯ ಕಲಹದ ಕುರಿತಾದ ಫಲಿತಾಂಶ ಹೊರಬಿದ್ದಿದೆ. ಎಲ್ಲೆಲ್ಲೂ ಮೌನವು ಆವರಿಸಿದೆ. ಎಲ್ಲರಿಗೊಪ್ಪುವ ತೀರ್ಪು ಬಂದಿದೆ.

ನಮ್ಮ ದೇಶ ವಿವಿಧ ಜಾತಿ, ಧರ್ಮ, ವೇಷ, ಭಾಷೆಗಳನ್ನು ಒಳಗೊಂಡಿರುವಂಥದ್ದು. ಇಲ್ಲಿ ಎಲ್ಲರಿಗೂ ಸಮಾನ ಅವಕಾಶಗಳುಂಟು. ನಾ ಹೆಚ್ಚು ನೀ ಹೆಚ್ಚು ಎಂಬ ಕದನವನ್ನು ಹುಟ್ಟುಹಾಕುವ ಮನೋಭಾವ ಸಲ್ಲದು. ಇಂದಿನ ರಾಜಕಾರಣಿಗಳ ಮರ್ಕಟ ಮನಸ್ಸಿನ, ವೋಟು ಬ್ಯಾಂಕಿನ ಮೇಲಿನ ಆಮಿಷದಿಂದ ಸಮಾಜದ ಧರ್ಮಗಳ ನಡುವೆ ಬಿರುಕು ಮೂಡಿಸಿ ತಾವು ಲಾಭ ಪಡೆಯುತ್ತಿದ್ದಾರೆ. ಅವರಿಗೆ ದೂರಾಲೋಚನೆ ಕಮ್ಮಿ. ದುರಾಲೋಚನೆ ಜಾಸ್ತಿ. ಯಾಕೆ ಹೀಗಾಗುತ್ತಿದೆ? ತಮ್ಮದೇ ಜಯಭೇರಿ ಯಾವತ್ತಿಗೂ ಇರಲಿ ಎಂಬ ಸ್ವಾರ್ಥತೆಯು ಅವರನ್ನು ಹೀಗಾಗಿಸಿದೆ. ಸಮಾಜ ಸೇವೆಯ ನೆಪದಲ್ಲಿ ಹುರಿದು ಮುಕ್ಕಿ ತಿನ್ನುತ್ತಿದ್ದಾರೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಒಂದು ತಪ್ಪನ್ನು ಮುಚ್ಚಲು ಇನ್ನೊಂದು ತಪ್ಪನ್ನು ಎಸಗುತ್ತಾ ಇಡೀ ಆಡಳಿತ ವ್ಯವಸ್ಥೆಯನ್ನೇ ಭ್ರಷ್ಟಗೊಳಿಸಿದ್ದಾರೆ.

‘ಸರ್ವೇಜನಾಃ ಸುಖೀನೋ ಭವಂತು’ ಎಂಬುದು ನಮ್ಮ ಸಂಸ್ಕೃತಿಯ ಅರಿವು. ಅದು ಹಾಕಿಕೊಟ್ಟ ವಿಶಾಲತೆಯ ಪಥ. ಆದರೆ ಇಂದೇನಾಗುತ್ತಿದೆ? ಕೇವಲ ತಾನೊಂದಿಷ್ಟು ಸುಖಿಯಾಗಿದ್ದರೆ ಮುಗಿಯಿತು ಎಂಬ ಸ್ವಕೇಂದ್ರೀಕೃತತೆ, ಮನುಷ್ಯನ ಬಾಳನ್ನು ಜಾಳು ಜಾಳಾಗಿಸಿದೆ. ಪ್ರತಿಯೊಬ್ಬನೂ ತನ್ನದೇ ಸ್ವಾರ್ಥತೆಯ ಪರಿಧಿಯಲ್ಲಿ ಮೆರೆದಾಗ ಆಗುವುದೇನು? ಇಂಥವೇ ಅಪಸವ್ಯಗಳು ಹುಟ್ಟುಹಾಕುವುವು.

ಶ್ರೀರಾಮನಿದ್ದುದು ತ್ರೇತಾಯುಗದಲ್ಲಿ. ಆಗಿನಿಂದಲೂ ಅಯೋಧ್ಯ ಆತನ ಜನ್ಮಸ್ಥಾನ. ಆತನ ನಂತರವೂ ಅಲ್ಲಿ ಶ್ರೀರಾಮನ ಮಂದಿರ ಕಟ್ಟಲಾಗಿದೆ. ಹಾಗೂ ನಿತ್ಯವೂ ಪೂಜೆ ಯುಗಯುಗಗಳಿಂದಲೂ ನಡೆದುಕೊಂಡು ಬಂದಿದೆ. ಆದರೆ ಯಾವುದೋ ದೇಶದಿಂದ ನಮ್ಮಲ್ಲಿಗೆ ಬಂದ ತುರ್ಕರು ಅಲ್ಲಿಯ ಭವ್ಯಮಂದಿರವನ್ನು ಬೀಳಿಸಿ ಅಲ್ಲಿ ತಮ್ಮ ಧರ್ಮದ ಮಸೀದಿಯನ್ನು ಕಟ್ಟಿ ಮೆರೆದರೆ ಸುಮ್ಮನಿರಲಾದೀತೆ? ಇಂಥ ಎಷ್ಟು ಮಂದಿರಗಳನ್ನು ಬೀಳಿಸಿ ಅಲ್ಲಿ ತಮ್ಮ ಧರ್ಮದ ಮಸೀದಿಗಳನ್ನು ಕಟ್ಟಿದರೆ ಸುಮ್ಮನಿರಲಾದೀತೆ? ಇಂಥ ಎಷ್ಟು ಮಂದಿರಗಳನ್ನು ಕೆಡವಿಸಿ ಕಟ್ಟಲಾಗಿದೆಯೋ? ಮಂದಿರ ಜಾಗದಲ್ಲಿ ಮಸೀದಿಗಳನ್ನು ಸ್ಥಾಪಿಸಿದರೆ ಜನರ ಭಾವನೆಗಳನ್ನು ಅಳಿಸಲಾದೀತೇ? ಭಕ್ತಿಯನ್ನು ತೊಡೆದು ಹಾಕಲಾಗುತ್ತದೆಯೇ? ಇದನ್ನೆಲ್ಲ ಅವರು ಎಷ್ಟು ಬೇಗ ಅರಿತರೆ ಅಷ್ಟು ದೇಶಕ್ಕೂ ಒಳಿತು. ಅವರಿಗೂ ಕೂಡ, ಕೇವಲ ಅಲ್ಪಸಂಖ್ಯಾತರು ಎಂಬ ಹಣೆಗೆ ಪಟ್ಟಿ ಹಚ್ಚಿಕೊಂಡು ಏನುಬೇಕಾದರೂ ಮಾಡಬಹುದು ಎಂಬ ತರ್ಕದಲ್ಲಿದ್ದರೆ ಅದು ಖಂಡಿತವಾಗಿಯೂ ಖಂಡನೀಯವೇ. ಆಗ ಸುಮ್ಮನಿರಲಾಗದು. ಯಾರೂ ಕೂಡ ಸುಮ್ಮನಿರಕೂಡದು. ಕೇವಲ ಕೆಲವರ ಭಾವನೆಗಳನ್ನು ಕೆರಳಿಸುತ್ತಾ ಇನ್ನೊಬ್ಬರ ಭಾವನೆಗಳನ್ನು ತುಳಿಯುತ್ತಾ ಜಾತಿ ಧರ್ಮಗಳ ಮಧ್ಯ ತಡೆಗೋಡೆಗಳನ್ನು ನಿರ್ಮಿಸುತ್ತಾ ದೇಶವನ್ನು ಹರಿದು ಹಂಚುತ್ತಿರುವವರು ರಾಜಕಾರಣಿಗಳು. ಇದು ಎಲ್ಲರಿಗೂ ಗೊತ್ತು. ಆದರೂ ಯಾರೂ ಏನೂ ಮಾಡುತ್ತಿಲ್ಲ. ಕಲಿತವರೇ ಕೈಕಟ್ಟಿ ಕೂತರೆ ಉಳಿದವರ ಪಾಡೇನು? ದೇಶವನ್ನು ಛಿದ್ರಗೊಳಿಸುತ್ತಿರುವ ಶಕ್ತಿ ಬಾಹ್ಯದಿಂದ ಪ್ರಚೋದನೆಗೊಂಡು ಆಂತರಿಕವಾಗಿ ವಿನಾಶಕಾರ್ಯಕ್ಕೆ ಸಕ್ರಿಯವಾದರೆ ಅದು ಯಾವ ಜಾತಿಯದಾದರೂ ಅದನ್ನು ಕೊನೆಗಾಣಿಸಲೇ ಬೇಕಲ್ಲವೇ? ಇದಕ್ಕೆ ನೀವೇನಂತೀರಿ?

 

Leave a Reply