ಮಿದುಳು ಎಂಬ ಕೌತುಕ

ಮಿದುಳು ಎಂಬ ಕೌತುಕ
ಮಿದುಳು ಎಂಬ ಕೌತುಕ

ಅವರಿಗೆ ತಲೆಯಲ್ಲಿ ಮಿದುಳಿಲ್ಲ ಮಾರಾಯ್ರೆ..! ಹಲವೊಂದು ಸಲ ನಾವು ಮಾನವನ ತಲೆಯಲ್ಲಿರುವ ಮಿದುಳನ್ನು ಅದು ಅವನನ್ನು ಬುದ್ಧಿವಂತನನ್ನಾಗಿಸುವ ಅಂಗವೆಂದು ಮಾತ್ರ ತಿಳಿದಿದ್ದೇವೆ. ಅದು ತಪ್ಪು..ತಪ್ಪು..ತಪ್ಪು. ಜಗತ್ತಿನಲ್ಲಿ ಅದ್ಭುತವೆಂದು ಬಣ್ಣಿಸುವ ಯಾವದೇ ವಸ್ತುಗಳೊಡನೆ ತುಲನೆ ಮಾಡಿದಾಗ ನಮ್ಮ ಶರೀರದಲ್ಲಿರುವ ಮಿದುಳೆಂಬ ಅಂಗ ಅತ್ಯದ್ಭುತ, ಅದೊಂದು ಕೌತುಕ!. ಇವತ್ತು ನಾವು ಏನನ್ನು ಸೂಪರ್ ಕಂಪ್ಯೂಟರ್ ಎಂದು ಕರೆಯುತ್ತೇವೆಯೊ ಅದರ ರಚನೆಯನ್ನು ಮಾನವ ಮಿದುಳು ತಾನೇ ಮಾಡಿದ್ದು?
ಮನುಷ್ಯನ ತೂಕದ 2% ಮಾತ್ರವಿರುವ ಬೂದು ಮಿಶ್ರಿತ ಬಿಳಿ ಬಣ್ಣದ ಅಣಬೆಯಂತೆ ಕಾಣುವ ಮಿದುಳು ಮೂವತ್ತು ಲಕ್ಷಕ್ಕೂ ಮೀರಿ ನರಕಣಗಳಿಂದೊಡಗೂಡಿ ಮೃದು ಊತ ( Nerves Tissues)ಗಳಿಂದ ಕೂಡಿದ್ದು ಅರ್ಧ ಸೆ.ಮೀ.ನಷ್ಟು ದಪ್ಪವಿರುವ ನಮ್ಮ ತಲೆಬುರುಡೆಯೊಳಗೆ ಸುರಕ್ಷಿತವಾಗಿದೆ. ಈ ಮಿದುಳಿನ ಸುತ್ತಲೂ ನೀರಿನಂತಹ ದ್ರವವೊಂದಿದ್ದು ಅದು ಕುಶನ್ನಿನಂತೆ ಮಿದುಳಿಗೆ ರಕ್ಷಣೆಯನ್ನು ನೀಡುವ ಆಘಾತ ನಿರೋಧಕವು ಹೌದು. ನಮ್ಮ ಉಸಿರಾಟದ ಪ್ರಕ್ರಿಯೆಯಲ್ಲಿ ನಾವು ಒಳಗೆ ತೆಗೆದುಕೊಳ್ಳುವ ಆಮ್ಲಜನಕದ 20%ರಷ್ಟನ್ನು, ನಮ್ಮ ದೇಹದಲ್ಲಿರುವ ರಕ್ತದ 20%ರಷ್ಟನ್ನು ನಿತ್ಯವು ತನ್ನ ಕಾರ್ಯನಿರ್ವಹಣೆಗೆ ಬಳಸಿಕೊಳ್ಳುತ್ತದೆ ನಮ್ಮೀ ಮಿದುಳು. ಹೀಗೆ ಮನುಷ್ಯನ ದೇಹದಿಂದ ಆಮ್ಲಜನಕ ಮತ್ತು ರಕ್ತವನ್ನು ಬಳಸಿಕೊಳ್ಳುವ ಮಿದುಳಿನ ಕ್ರಿಯೆ ತಾತ್ಪೂರ್ತಿಕವಾಗಿ ನಿಂತಾಗ ಮನುಷ್ಯ ಮೂರ್ಛೆ ತಪ್ಪಬಹುದು ಅಥವಾ ಈ ಬಳಕೆ ಕೆಲವು ನಿಮಿಷಗಳು ನಿಂತಾಗ ಶರೀರದ ಅರ್ಧ ಭಾಗವೇ ನಿಷ್ಕ್ರಿಯವಾಗಬಹುದು ಅಥವಾ ಮರಣವೂ ಸಂಭವಿಸೀತು ಎಂಬುದನ್ನು ವೈದ್ಯಕೀಯ ವಿಜ್ಞಾನ ನಮಗೆ ತಿಳಿಸುತ್ತದೆ. ನಾವು ನಡೆಯುವ, ನುಡಿಯುವ, ಯೋಚಿಸುವ, ಕೇಳುವ, ನೋಡುವ, ಹೆಚ್ಚೇಕೆ ನಮ್ಮ ಹಾವ-ಭಾವ, ಬುದ್ಧಿಶಕ್ತಿಗಳ ನಿಯಂತ್ರಕ -ನಿರ್ದೇಶಕ ಈ ಮಿದುಳೇ ಆಗಿದೆ.

ಜಗತ್ತಿನ ಸರ್ವ ಶ್ರೇಷ್ಠ ಟೆಲಿ ಎಕ್ಸ್ಚೇಂಜ್ ಗಳಿಗಿಂತ ಹೆಚ್ಚು ದಕ್ಷತೆಯಿಂದ ಕಾರ್ಯನಿರ್ವಹಿಸುವ ಮಿದುಳು ಶರೀರದ ಉಸ್ತುವಾರಿ ಕೆಲಸವನ್ನು ಸಮರ್ಪಕವಾಗಿ ಮಾಡುತ್ತದೆ.ಉದಾ. ನಾವು ನಡೆಯುವ ದಾರಿಯಲ್ಲಿ ಒಂದು ಕಲ್ಲನ್ನು ಎಡವಿದೆವು ಎಂದಿಟ್ಟುಕೊಳ್ಳೋಣ. ಎಡವಿದ ಕೂಡಲೇ ಮಿದುಳು ನಮ್ಮ ಶರೀರಕ್ಕೆ ಸಮತೋಲನವನ್ನು ಕಾಯ್ದುಕೊಳ್ಳುವ ನಿರ್ದೇಶನವನ್ನು ನೀಡುತ್ತದೆ.ನಾವು ಬೀಳದಂತೆ ನೋಡಲು ನಮ್ಮ ಕೈಕಾಲುಗಳಿಗೆ ಆದೇಶ ನೀಡುತ್ತದೆ. ಆದರೂ ತಪ್ಪಿ ನೆಲಕ್ಕೆ ಬಿದ್ದೆವೆಂದಿಟ್ಟುಕೊಳ್ಳಿ, ಆಗ ಎಲ್ಲೆಲ್ಲಿ ನೋವಾಗಿದೆಯೊ ಎಂದು ನೋಡಿಕೊಂಡು ಅಲ್ಲೆಲ್ಲ ಸವರಿಕೊಳ್ಳಲು ನಮ್ಮ ಕೈಗಳಿಗೆ ತಿಳಿಸುತ್ತದೆ! ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ ನಮ್ಮ ಶರೀರ ಅನುಭವಿಸುವ ಎಲ್ಲ ನೋವುಗಳು ಮಿದುಳಿನ ಅರಿವಿಗೆ ಬರುತ್ತವಾದರೂ ಮಿದುಳು ಯಾವುದೇ ನೋವನ್ನು ಅನುಭವಿಸುವುದಿಲ್ಲ! ಇದೇ ಕಾರಣಕ್ಕಾಗಿ ಮಿದುಳಿನ ಶಸ್ತ್ರಕ್ರಿಯೆ ಮಾಡುವಾಗ ಯಾವುದೆ ರೀತಿಯ ಅರವಳಿಕೆಯನ್ನು ನೀಡಲಾಗುವುದಿಲ್ಲವೆಂಬುದು ಅಚ್ಚರಿಯ ಸಂಗತಿಯಲ್ಲವೇ? ಇಂತಹ ಮಿದುಳನ್ನು ರಕ್ಷಿಸಲು blood brain barrior ಎಂಬುದೊಂದು ದ್ವಾರಪಾಲಕನಂತೆ ಕೆಲಸ ಮಾಡುತ್ತದೆ. ಅದು ಮಿದುಳಿಗೆ ಬೇಕಾಗುವ ಗ್ಲುಕೋಸ್ ಅನ್ನು ಒಳಗೆ ಕಳುಹಿಸುತ್ತ ಬ್ಯಾಕ್ಟಿರಿಯಾ ಹಾಗೂ ವಿಷಕಾರಿ ವಸ್ತುಗಳ ಪ್ರವೇಶವನ್ನು ತಡೆಯುತ್ತದೆ. ಆದರೆ ನೋವು ನಿವಾರಕಗಳು, ಮಾದಕ ಔಷಧಗಳು ಮತ್ತು ಮಾದಕ ಪೇಯಗಳು ಈ ದ್ವಾರಪಾಲಕನನ್ನು ಲೆಕ್ಕಿಸದೆ ಮಿದುಳಿನ ಮೇಲೆ ಧಾಳಿಯಿಡುತ್ತವೆ! ಮಿದುಳಿನ ವಿವೇಚನಾ ಶಕ್ತಿಯನ್ನು ಕುಂಠಿತಗೊಳಿಸುತ್ತವೆ.
ದೇಹ ಮತ್ತು ಮನಸ್ಸಿನ ಮೇಲಾಗುವ ನೋವು, ಸಂತೋಷ, ದುಃಖ ಮುಂತಾದುವುಗಳ ಸೂಚನೆಗಳು ಮಿದುಳಿಗೆ ತಲುಪಲು 1/2000 ಸೆಕೆಂಡಿನಷ್ಟು ಅವಧಿ ಸಾಕು. ವಿಸ್ಮಯದ ಸಂಗತಿಯೆಂದರೆ ನಮ್ಮ ಶರೀರದ ಎಡ ಬಾಗವನ್ನು ಮಿದುಳಿನ ಬಲಭಾಗವೂ, ಶರೀರದ ಬಲಭಾಗವನ್ನು ಮಿದುಳಿನ ಎಡ ಬಾಗವೂ ನಿಯಂತ್ರಿಸುತ್ತದೆ. ಮಿದುಳಿನ ಎಡ ಭಾಗವು ವ್ಯಕ್ತಿಯ ದೈಹಿಕ ಕ್ರಿಯೆಗಳನ್ನು ನಿಯಂತ್ರಿಸಿದರೆ, ಬಲಭಾಗವು ಮನುಷ್ಯ ಕೈಗೊಳ್ಳುವ ನಿರ್ಧಾರ, ತೀರ್ಪು, ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ನೆರವು ನೀಡುತ್ತದೆ. ನಾವು ಕಂಡುದನ್ನು, ಕೇಳಿದುದನ್ನು, ಅನುಭವಿಸಿದುದನ್ನು ಯಥಾವತ್ ಕಲ್ಪಿಸಿಕೊಳ್ಳುವ ಶಕ್ತಿ ನಮ್ಮ ಮಿದುಳಿಗಿದೆ. ಇದೇ ನಮ್ಮ ‘ನೆನಪಿನ ಶಕ್ತಿ. ನಮ್ಮ ಮಿದುಳು ಇಷ್ಟುಗಟ್ಟಿಮುಟ್ಟಾಗಿದ್ದರು ಇದನ್ನೂ ಬಲಿ ತೆಗೆದುಕೊಳ್ಳುವ ರಾಕ್ಷಸನೊಬ್ಬನಿದ್ದಾನೆ. ಅವನೇ ಟ್ಯೂಮರ್ ಅಥವಾ ಟ್ಯೂಮರಾಸುರ. ಇವ ನೊಮ್ಮೆ ಮಿದುಳಿನ ಭದ್ರಕೋಟೆಯನ್ನು ಕೆಡವಿ ಒಳಗೆ ಪ್ರವೇಶಿಸಿದನೆಂದರೆ ಮಿದುಳಿನ ರಕ್ತನಾಳಗಳಲ್ಲಿ ರಕ್ತವು ಹೆಪ್ಪುಗಟ್ಟಿ ನಮ್ಮ ಶರೀರ ಸಂಪೂರ್ಣ ನಿಶ್ಚಲವಾಗಬಹುದು, ಪುನಶ್ಚೇತನಗೊಳ್ಳದೆ ಮರಣವು ಸಂಭವಿಸಬಹುದು. ಈ ರಕ್ತಹೆಪ್ಪುಗಟ್ಟುವಿಕೆಯನ್ನು Stroke ಅನ್ನುತ್ತಾರೆ. ವ್ಯಕ್ತಿಗೆ ಸಂಭವಿಸಬಹುದಾದ ತೀವ್ರತರ ಅಪಘಾತಗಳು ಕೂಡ ಮಿದುಳಿಗೆ ಹಾನಿಯನ್ನುಂಟು ಮಾಡಿ ಮರಣವನ್ನು ತಂದೊಡ್ಡಬಹುದು.
ಮಿದುಳಿನ ಹೊರತಾಗಿ ನಮ್ಮ ದೇಹದಲ್ಲಿಯ ಇತರ ಅಂಗಗಳು ತಮ್ಮ ಜೀವಕೋಶಗಳು ಹಳೆಯದಾದಂತೆಲ್ಲ ಹೊಸ ಚೈತನ್ಯಕಾರಕ ಜೀವಕೋಶಗಳನ್ನು ಹೊಂದುತ್ತವೆ. ಆದರೆ ಮಾನವನ ಮಿದುಳಿನಲ್ಲಿ ಈ ವ್ಯವಸ್ಥೆಯಿಲ್ಲ. ಕಳೆದುಕೊಂಡ ಜೀವಕೋಶಗಳ ಪುನರುತ್ಪತ್ತಿಯಿಲ್ಲ. ನಮ್ಮ 35ನೇ ವರ್ಷದಿಂದ ನಾವು ಪ್ರತಿದಿನ ನಮ್ಮ ಮಿದುಳಿನ 1,000 ಜೀವಕೋಶಗಳನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತೇವೆ. ನಮ್ಮ ಮಿದುಳಿನ ತೂಕ ಕ್ಷೀಣಿಸಲು ಪ್ರಾರಂಭಿಸುತ್ತದೆ. ಹೀಗಾದಾಗ ವಾಸನೆಯನ್ನು ಗ್ರಹಿಸುವ, ನಾಲಿಗೆಯ ಮೂಲಕ ರುಚಿಯನ್ನು ಆಸ್ವಾದಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತೇವೆ. ನಮ್ಮ ಗೆಳೆಯರ ಹೆಸರುಗಳನ್ನು, ಹುಟ್ಟು ಹಬ್ಬದ ತಾರೀಕುಗಳನ್ನು, ಟೆಲಿಫೊನ್ ನಂಬರುಗಳನ್ನು ನಾವು ನೆನಪಿಟ್ಟುಕೊಳ್ಳಲಾರೆವು. ಜೀವವಿಕಾಸದಲ್ಲಿ ಆದಿಮಾನವನಿಂದ ಆಧುನಿಕ ಮಾನವನವರೆಗೂ ಮಿದುಳಿನ ವಿಕಾಸವಾಗಿದೆ. ಅದರ ಶಕ್ತಿ ಸಾವಿರ ಸಾವಿರ ಪಟ್ಟು ಹೆಚ್ಚಿದೆ.ಮುಂದಿನ ಲಕ್ಷ ಲಕ್ಷ ವರ್ಷಗಳ ನಂತರ ಮಾನವನ ಮಿದುಳು ಹೇಗಿರುತ್ತದೋ ಯಾರು ಬಲ್ಲರು? ಯಾಕೆಂದರೆ ಮನುಷ್ಯನ ಜೀವಿತಾವಧಿ ಬರಿಯ ನೂರು ವರುಷಗಳು ಮಾತ್ರ.

Leave a Reply